ಗುರುವಾರ , ಜೂನ್ 17, 2021
22 °C
ಬಾರ್‌–ರೆಸ್ಟೋರೆಂಟ್ ವಹಿವಾಟು ಅವಧಿ ವಿಸ್ತರಣೆ

ರಾತ್ರಿ ಗಸ್ತು ಹೆಚ್ಚಿಸಲಾಗುವುದು: ಕಮಿಷನರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಬಾರ್‌, ರೆಸ್ಟೋರೆಂಟ್‌ ಮತ್ತು ಹೋಟೆಲ್‌ಗಳ ವಹಿವಾಟಿನ ಅವಧಿ ವಿಸ್ತರಣೆ ಮಾಡಿ­ರುವುದಕ್ಕೆ ಅನು­ಗುಣ­ವಾಗಿ ನಗರದೆಲ್ಲೆಡೆ ರಾತ್ರಿ ಗಸ್ತು ಹೆಚ್ಚಿಸ­­­ಲಾಗುತ್ತದೆ’ ಎಂದು ನಗರ ಪೊಲೀಸ್‌ ಕಮಿ­ಷನರ್‌ ರಾಘವೇಂದ್ರ ಔರಾದಕರ್‌ ತಿಳಿಸಿದ್ದಾರೆ.ಸರ್ಕಾರ ಹೋಟೆಲ್‌, ಬಾರ್‌ ಹಾಗೂ ರೆಸ್ಟೋ­ರೆಂಟ್‌ಗಳ ವಹಿವಾಟಿನ ಅವಧಿ ವಿಸ್ತರಣೆ ಮಾಡಿ­­ರುವ ಸಂಬಂಧ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅವರು, ‘ಸರ್ಕಾರದ ಆದೇಶ ಪಾಲಿಸುವುದಷ್ಟೇ ನಮ್ಮ ಕರ್ತವ್ಯ’ ಎಂದರು.‘ನಗರದ ಜನಸಂಖ್ಯೆಗೆ ಹೋಲಿಸಿದರೆ ಸಿಬ್ಬಂದಿ ಕೊರತೆ ಇದೆ. ಈ ಕಾರಣಕ್ಕಾಗಿ ನಗರಕ್ಕೆ 2,500 ಮಂದಿ ಗೃಹರಕ್ಷಕರನ್ನು ಸರ್ಕಾರ ಮಂಜೂರು ಮಾಡಿದೆ. ಅಲ್ಲದೇ, ಹೊಸ ಗಸ್ತು ವಾಹನಗಳ ಖರೀ­ದಿಗೆ ₨ 5 ಕೋಟಿ ಬಿಡುಗಡೆ ಮಾಡಿದೆ’ ಎಂದು ಹೇಳಿದರು.‘ದೇಶದ ಇತರೆ ಮಹಾನಗರಗಳಿಗೆ ಹೋಲಿಸಿ­ದರೆ ನಗರದಲ್ಲಿ ಗಸ್ತಿನ ವಾಹನಗಳ ಸಂಖ್ಯೆ ಕಡಿಮೆ ಇದೆ. ಆದ್ದ­ರಿಂದ ಹೊಸದಾಗಿ 50 ಗಸ್ತು ವಾಹನ­ಗಳನ್ನು ಖರೀದಿ­ಸಲು ನಿರ್ಧರಿಸಲಾಗಿದೆ. ಜನತೆಗೆ ರಕ್ಷಣೆ ಒದ­ಗಿ­ಸಲು ನಾವು ಸಂಪೂರ್ಣ ಸಿದ್ಧರಿದ್ದೇವೆ’ ಎಂದರು.ಅನಾನುಕೂಲವೇ ಹೆಚ್ಚು: ‘ವಹಿವಾಟಿನ ಅವಧಿ ವಿಸ್ತರಣೆ ಮಾಡುವ ಅಗತ್ಯ­ವಿರ­ಲಿಲ್ಲ. ಈ ಸಂಬಂಧ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿ ಅವಧಿ ವಿಸ್ತರಿಸ­ದಂತೆ ಕೋರಿದ್ದೆವು. ಆದರೂ ಈ ವಿಷಯ­ದಲ್ಲಿ ಸರ್ಕಾರ ಏಕಪಕ್ಷೀಯ ನಿರ್ಧಾರ ಕೈಗೊಂಡಿದೆ. ಇದರಿಂದ ಅನು­ಕೂಲ­­ಕ್ಕಿಂತ ಅನಾನುಕೂಲವೇ ಹೆಚ್ಚು’ ಎಂದು ಬೆಂಗಳೂರು ಮದ್ಯ ಮಾರಾಟ­ಗಾರರ ಸಂಘದ ಅಧ್ಯಕ್ಷ ಹೊನ್ನಗಿರಿಗೌಡ ಅವರು  ಅಭಿಪ್ರಾಯಪಟ್ಟಿದ್ದಾರೆ.‘ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆಯಲ್ಲಿರುವ ಕೆಲವೇ ಕ್ಲಬ್‌­ಗಳು, ಹೋಟೆಲ್‌ಗಳು, ಬಾರ್‌ ಮತ್ತು ರೆಸ್ಟೋ­ರೆಂಟ್‌ಗಳ ಮಾಲೀಕರ ಒತ್ತಡಕ್ಕೆ ಮಣಿದು ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಸಾಮಾನ್ಯವಾಗಿ ರಾತ್ರಿ 11ರ ನಂತರ ಮದ್ಯದ ವಹಿವಾಟು ನಡೆಯುವುದು ಕಡಿಮೆ. ಪರಿಸ್ಥಿತಿ ಹೀಗಿರುವಾಗ ಅವಧಿ ವಿಸ್ತರಿಸಿರುವುದರಿಂದ ಯಾವುದೇ ಪ್ರಯೋಜನವಿಲ್ಲ. ಆದರೆ, ಸುರಕ್ಷತೆ ದೃಷ್ಟಿ­ಯಿಂದ ಮಾಲೀಕರು ಹಾಗೂ ಸಿಬ್ಬಂದಿಗೆ ತೊಂದರೆಯಾಗುತ್ತದೆ’ ಎಂದು ಹೇಳಿದ್ದಾರೆ.ಒಳ್ಳೆಯ ಕ್ರಮ: ‘ಗ್ರಾಹಕರ  ಅನುಕೂಲದ ದೃಷ್ಟಿಯಿಂದ ಅವಧಿ ವಿಸ್ತರಣೆ ಮಾಡಿರುವುದು ಒಳ್ಳೆ­ಯದು. ಇದರಿಂದ ವಹಿವಾಟಿಗೂ ಅನುಕೂಲ­ವಾಗುತ್ತದೆ’ ಎಂದು ಮಹಾ­ಲಕ್ಷ್ಮಿ­ಲೇಔಟ್‌ನ ವಿದ್ಯಾ ಬಾರ್‌ನ ಮಾಲೀಕ ಬೈಯಣ್ಣ ಹೇಳಿದ್ದಾರೆ.ಹೆಚ್ಚಿನ ವಹಿವಾಟು ನಿರೀಕ್ಷೆ: ‘ವಹಿವಾಟಿನ ಅವಧಿ ವಿಸ್ತರಿಸಿ­ರುವುದರಿಂದ ಅಪರಾಧ ಚಟು­ವಟಿಕೆ­ಗಳು ಹೆಚ್ಚಾಗುತ್ತವೆ ಎನ್ನುವುದು ಸರಿಯಲ್ಲ. ಅವಧಿ ವಿಸ್ತರಣೆ ಮಾಡಿ­ರುವುದು ನಿಜಕ್ಕೂ ಒಳ್ಳೆಯದು. ಇದ­ರಿಂದ ವಹಿವಾಟು ಹೆಚ್ಚುವ ನಿರೀಕ್ಷೆ ಇದೆ’ ಎಂದು ಬ್ರಿಗೇಡ್‌ ರಸ್ತೆಯ ಬ್ರಿಗೇಡ್‌ ಬ್ಲ್ಯೂಸ್‌ ಬಾರ್‌ ಮತ್ತು ರೆಸ್ಟೋ­ರೆಂಟ್‌ನ ಮಾಲೀಕ ಚಿಕ್ಕತಮ್ಮೇಗೌಡ ತಿಳಿಸಿದ್ದಾರೆ.ಸ್ವಾಗತಾರ್ಹ

ವಹಿವಾಟಿನ ಅವಧಿ ವಿಸ್ತರಣೆ ಮಾಡಿ­ರು­ವು­ದನ್ನು ಸ್ವಾಗತಿಸುತ್ತೇವೆ. ಸರ್ಕಾರದ ಈ ಕ್ರಮದಿಂದ ನಗರ­­ದಲ್ಲಿ ಮಧ್ಯರಾತ್ರಿವರೆಗೂ ಆಹಾರ ಸಿಗಲಿದೆ. ರಾತ್ರಿ ವೇಳೆ ಹೊರ ಭಾಗದಿಂದ ನಗರಕ್ಕೆ ಬರು­ವ­ವರು, ಉದ್ಯಮ ವರ್ಗ, ಕಾರ್ಮಿಕರು, ವ್ಯಾಪಾರಿ­­ಗಳು ಸೇರಿ ಎಲ್ಲಾ ವರ್ಗದ ಜನರಿಗೆ ಅನುಕೂಲ­ವಾಗುತ್ತದೆ

–ಬಿ.ಚಂದ್ರಶೇಖರ್‌ ಹೆಬ್ಬಾರ್‌, ಅಧ್ಯಕ್ಷರು, ಬೃಹತ್‌ ಬೆಂಗಳೂರು ಹೋಟೆಲ್‌ಗಳ ಸಂಘ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.