ರಾತ್ರಿ ರೈಲು ಕಾರವಾರಕ್ಕೆ ವಿಸ್ತರಿಸಿ

7

ರಾತ್ರಿ ರೈಲು ಕಾರವಾರಕ್ಕೆ ವಿಸ್ತರಿಸಿ

Published:
Updated:

ಬೆಂಗಳೂರು: ಯಶವಂತಪುರ - ಮಂಗಳೂರು ರಾತ್ರಿ ರೈಲು ಸಂಚಾರವನ್ನು ಕಾರವಾರಕ್ಕೆ ನವೆಂಬರ್ 1ರೊಳಗೆ ವಿಸ್ತರಿಸುವಂತೆ ರೈಲ್ವೆ ಮಂಡಳಿಗೆ ಹೈಕೋರ್ಟ್ ಸೋಮವಾರ ಸೂಚಿಸಿದೆ.ಬೆಂಗಳೂರಿನಿಂದ ಮಂಗಳೂರು ಮಾರ್ಗವಾಗಿ ಕಣ್ಣೂರಿಗೆ ತೆರಳುವ ರಾತ್ರಿ ರೈಲನ್ನು ಕಾರವಾರಕ್ಕೂ ವಿಸ್ತರಿಸಬೇಕು ಎಂದು ಕೋರಿ ಶಂಕರ್ ಭಟ್ ಮತ್ತು ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ನೇತೃತ್ವದ ವಿಭಾಗೀಯ ಪೀಠ, `ಕಣ್ಣೂರಿಗೆ ತೆರಳುವ ರೈಲನ್ನು ಮಂಗಳೂರಿನಲ್ಲಿ ವಿಭಜನೆ ಮಾಡಿ, ಕಾರವಾರಕ್ಕೆ ವಿಸ್ತರಿಸುವ ಕಾರ್ಯ ನವೆಂಬರ್ 1ರೊಳಗೆ ಆಗುತ್ತದೆ ಎಂದು ನಿರೀಕ್ಷಿಸುತ್ತೇವೆ~ ಎಂದು ಹೇಳಿತು.ಕಣ್ಣೂರಿಗೆ ತೆರಳುವ ರೈಲನ್ನು ಮಂಗಳೂರಿನಲ್ಲಿ ವಿಭಜನೆ ಮಾಡಿ, ಒಂದನ್ನು ಕಾರವಾರಕ್ಕೆ ವಿಸ್ತರಿಸಲು ಒಪ್ಪಿರುವ ರೈಲ್ವೆ ಮಂಡಳಿಯ ನಿರ್ಧಾರ ಶ್ಲಾಘನೀಯ. ಈ ರೈಲು ಪ್ರಸ್ತುತ 17 ಬೋಗಿಗಳನ್ನು ಹೊಂದಿದೆ. ಇದನ್ನು 24 ಬೋಗಿಗಳಿಗೆ ಹೆಚ್ಚಿಸಬಹುದು ಎಂದೂ ಪೀಠ ಹೇಳಿತು.`ರಾತ್ರಿ ರೈಲನ್ನು ಕಾರವಾರಕ್ಕೆ ವಿಸ್ತರಿಸುತ್ತೇವೆ. ಆದರೆ ಇದಕ್ಕೆ ತುಸು ಕಾಲಾವಕಾಶ ಬೇಕು. ಕೆಲವೊಂದು ತಾಂತ್ರಿಕ ಸಮಸ್ಯೆಗಳಿರುವ ಕಾರಣ, ಇದು ಕಾರ್ಯರೂಪಕ್ಕೆ ಬರಲು ಒಂದೂವರೆ ತಿಂಗಳು ಬೇಕಾಗುತ್ತದೆ~ ಎಂದು ರೈಲ್ವೆ ಮಂಡಳಿ ಪರ ವಕೀಲರು ವಾದ ಮಂಡಿಸಿದರು. ಇದನ್ನೊಪ್ಪದ ಪೀಠ, ವಿಸ್ತರಣೆ ಕಾರ್ಯ ಆದಷ್ಟು ಬೇಗ ಆಗಬೇಕು ಎಂದು ಹೇಳಿತು.ಮಂಗಳೂರಿನಿಂದ ಕಣ್ಣೂರಿಗೆ ಸಂಪರ್ಕ ವ್ಯವಸ್ಥೆ ಚೆನ್ನಾಗಿದೆ. ಅಲ್ಲದೆ, ರೈಲಿನಲ್ಲಿ ಮಂಗಳೂರಿನಿಂದ ಕಣ್ಣೂರಿಗೆ ಪ್ರತಿದಿನ ಸರಾಸರಿ 28ರಿಂದ 30 ಮಂದಿ ಮಾತ್ರ ಪ್ರಯಾಣಿಸುತ್ತಾರೆ. ಇಷ್ಟು ಕಡಿಮೆ ಸಂಖ್ಯೆಯ ಪ್ರಯಾಣಿಕರಿಗೆ ಪ್ರತ್ಯೇಕ ರೈಲು ಏಕೆ? ಕಾರವಾರಕ್ಕೂ ಅದನ್ನು ವಿಸ್ತರಣೆ ಮಾಡಿ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.ಭಾಷಣದ ಪ್ರತಿ ಸಲ್ಲಿಸಲು ಸೂಚನೆ: ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ಜನವರಿ 22ರಂದು ಮಾಡಿದ್ದಾರೆ ಎನ್ನಲಾದ ಕೋಮು ಪ್ರಚೋದನಕಾರಿ ಭಾಷಣದ ಪ್ರತಿಯನ್ನು ಎರಡು ವಾರಗಳಲ್ಲಿ ಸಲ್ಲಿಸುವಂತೆ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ನೇತೃತ್ವದ ಹೈಕೋರ್ಟ್‌ನ ವಿಭಾಗೀಯ ಪೀಠ ಸೂಚಿಸಿತು. ಪ್ರಭಾಕರ ಭಟ್ ವಿರುದ್ಧ ಮಾಡಿರುವ ಆರೋಪಗಳಿಗೆ ಸೂಕ್ತ ಆಧಾರ ಇಲ್ಲ. ಅವರು ವೃತ್ತಿಯಿಂದ ವೈದ್ಯರು, ಶಿಕ್ಷಣ ಸಂಸ್ಥೆಯೊಂದರ ಮುಖ್ಯಸ್ಥರು.  ಅವರು ಕೋಮು ಭಾವನೆ ಕೆರಳಿಸುವ ಮಾತುಗಳನ್ನು ಆಡಿಲ್ಲ. ಆರೋಪ ಮಾಡಿರುವ `ಕೋಮು ಸೌಹಾರ್ದ ವೇದಿಕೆ~ ನೋಂದಾಯಿತ ಸಂಘಟನೆ ಅಲ್ಲ ಎಂದು ಭಟ್ ಪರ ವಕೀಲರು ವಾದಿಸಿದರು. ಉಪ್ಪಿನಂಗಡಿ ಠಾಣೆಯಲ್ಲಿ ದಾಖಲಾದ ದೂರಿನ ಅನ್ವಯ ತನಿಖೆ ನಡೆದಿದೆ. ಆದರೆ ಭಟ್ ಅವರ ವಿರುದ್ಧ ಪುರಾವೆ ಇಲ್ಲದ ಕಾರಣ, `ಬಿ~ ವರದಿ ಸಲ್ಲಿಸಲಾಗಿದೆ ಎಂದು ಸರ್ಕಾರದ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು.`ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವಂತೆ ಮಾತನಾಡುವುದು ತಪ್ಪು ಎಂದು ನಿಮಗೆ ಅನಿಸುತ್ತಿಲ್ಲವೇ? ಇಂಥ ವ್ಯಕ್ತಿಗಳಿಂದಾಗಿಯೇ ರಾಷ್ಟ್ರದ ಪ್ರತಿಷ್ಠೆಗೆ ಧಕ್ಕೆಯಾಗುತ್ತಿದೆ. ವಿವಿಧ ಧರ್ಮಗಳ ಸಾರವನ್ನು ಕಲಿಸುವ ನಾಡು ನಮ್ಮದು. ಇಲ್ಲಿ ಅಂತರ್ಯುದ್ಧ ನಡೆಯಬೇಕು ಎಂಬ ಇಚ್ಛೆ ನಿಮಗೆ ಇದೆಯೇ?~ ಎಂದು ಪೀಠ ಪ್ರಶ್ನಿಸಿತು.ಯಾವುದೇ ಧರ್ಮದ ವಿರುದ್ಧ ವೈಯಕ್ತಿಕ ನೆಲೆಯಲ್ಲಿ ವಾಗ್ದಾಳಿ ನಡೆಸುವ ಅಧಿಕಾರ ಯಾರಿಗೂ ಇಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಪೀಠ, ಭಟ್ ಅವರ ಭಾಷಣದ ಪ್ರತಿಯನ್ನು ಎರಡು ವಾರಗಳಲ್ಲಿ ಸಲ್ಲಿಸುವಂತೆ ದೂರುದಾರರ ಪರ ವಕೀಲರಿಗೆ ಸೂಚನೆ ನೀಡಿತು.ಸಚಿವರಿಗೆ ನೋಟಿಸ್: ಕೋಲಾರ, ಮುಳಬಾಗಿಲು, ಬಂಗಾರಪೇಟೆ ತಾಲ್ಲೂಕುಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿರುವ ಕಾರಣ ಅಂದಾಜು ನಾಲ್ಕು ಸಾವಿರ ಎಕರೆ ಕೃಷಿ ಭೂಮಿ ಬರಡಾಗುತ್ತಿದೆ ಎಂದು ಮುಸ್ತೂರು ಗ್ರಾಮ ಪಂಚಾಯಿತಿ ಸಲ್ಲಿಸಿರುವ ದೂರಿಗೆ ಸಂಬಂಧಿಸಿದಂತೆ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ವರ್ತೂರು ಪ್ರಕಾಶ್, ಮುಳಬಾಗಿಲು ಶಾಸಕ ಅಮರೇಶ್ ಸೇರಿದಂತೆ ಇತರರಿಗೆ ನೋಟಿಸ್ ಜಾರಿಗೆ ಹೈಕೋರ್ಟ್ ಆದೇಶಿಸಿದೆ.ಮೂರು ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಬರುವ ಮುಸ್ತೂರು, ನಾಗವಾರ, ಕರಡಿಗಾನಹಳ್ಳಿ, ಮುದುಗಿರಿ, ನಂಗಲಿ, ಪೆದ್ದೂರು, ಚಿಕ್ಕನಾಗವಾರ, ದೊಡ್ಡನಾಗವಾರ, ಬೈದಳ್ಳಿ, ಉಪ್ಪಾರಹಳ್ಳಿ, ಚೆನ್ನಾಪುರ ಮತ್ತು ಇತರ ಗ್ರಾಮಗಳ ಕೃಷಿ ಭೂಮಿ ಅಕ್ರಮ ಮರಳು ಗಣಿಗಾರಿಕೆಯ ಕಾರಣ ಬರಡಾಗುತ್ತಿದೆ. ಗಣಿಗಾರಿಕೆ ಆರಂಭ ಆಗುವುದಕ್ಕೆ ಮೊದಲು 50 ಅಡಿ ಆಳದಲ್ಲಿ ದೊರೆಯುತ್ತಿದ್ದ ಅಂತರ್ಜಲ ಈಗ ಸಾವಿರ ಅಡಿ ಆಳಕ್ಕೆ ಕುಸಿದಿದೆ. ಈ ಹಳ್ಳಿಗಳಿಂದ ಪ್ರತಿದಿನ ಅಂದಾಜು ಒಂದು ಸಾವಿರ ಟ್ರಕ್‌ಗಳಷ್ಟು ಮರಳು ಬೆಂಗಳೂರಿಗೆ ಅಕ್ರಮವಾಗಿ ಸಾಗಣೆ ಆಗುತ್ತಿದೆ ಎಂದು ದೂರಲಾಗಿದೆ.ಸುರೇಖಾ ಕೊಲೆ- ಕಾಯ್ದಿಟ್ಟ ಜಾಮೀನು ಆದೇಶ: ಖಾಸಗಿ ಕಂಪೆನಿಯೊಂದರ ಉದ್ಯೋಗಿ ಪಾಯಲ್ ಸುರೇಖಾ ಅವರ ಕೊಲೆ ಪ್ರಕರಣದ ಆರೋಪಿ ಜೇಮ್ಸ ಕುಮಾರ್ ಸಲ್ಲಿಸಿರುವ ಜಾಮೀನು ಅರ್ಜಿ ಕುರಿತ ಆದೇಶವನ್ನು ನ್ಯಾಯಮೂರ್ತಿ ನಾಗಮೋಹನದಾಸ ಅವರು ಕಾಯ್ದಿರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry