ರಾತ್ರಿ ವೇಳೆ ಭೂಮಿಪೂಜೆಗೆ ಬಂದ ಶಾಸಕ!

7
ಸಾರ್ವಜನಿಕರಿಂದ ತರಾಟೆ

ರಾತ್ರಿ ವೇಳೆ ಭೂಮಿಪೂಜೆಗೆ ಬಂದ ಶಾಸಕ!

Published:
Updated:

ತಿ.ನರಸೀಪುರ: ಪಟ್ಟಣದ ಲಿಂಕ್ ರಸ್ತೆ ಅಭಿವೃದ್ಧಿ ಕಾಮಗಾರಿ ವಿಳಂಬ ಮಾಡಿದ್ದನ್ನು ಪ್ರಶ್ನಿಸಿ ಹಾಗೂ ರಾತ್ರಿ ವೇಳೆ ಕಾಮಗಾರಿಗಳಿಗೆ ಭೂಮಿ ಪೂಜೆ ಮಾಡಲು ಬಂದ ಶಾಸಕ ಡಾ.ಎಚ್.ಸಿ.ಮಹಾದೇವಪ್ಪ ಅವರನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡು ವಾಪಸ್ಸು ಕಳುಹಿಸಿದ ಘಟನೆ ಗುರುವಾರ ನಡೆದಿದೆ.ಪಟ್ಟಣದಲ್ಲಿ ಎಸ್.ಎಫ್.ಸಿ ಅನುದಾನದಲ್ಲಿ ರೂ.1.50 ಕೋಟಿ ವೆಚ್ಚದಲ್ಲಿ ನೂತನ ತರಕಾರಿ ಮಾರುಕಟ್ಟೆ ನಿರ್ಮಾಣ, ಲಿಂಕ್ ರಸ್ತೆಯ ಮರು ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಲು ಮಧ್ಯಾಹ್ನ 3 ಗಂಟೆಗೆ ಸಮಯ ನಿಗದಿಪಡಿಸಲಾಗಿತ್ತು. ಆದರೆ ರಾತ್ರಿ 7.30ರ ವೇಳೆಗೆ ಆಗಮಿಸಿದ ಶಾಸಕ ಡಾ.ಎಚ್.ಸಿ.ಮಹದೇವಪ್ಪ ಅವರನ್ನು ಸುತ್ತುವರಿದ ಸಾರ್ವಜನಿಕರು ಪಟ್ಟಣದ ಪ್ರಮುಖ ವಾಣಿಜ್ಯ ರಸ್ತೆ ಲಿಂಕ್ ರಸ್ತೆಯನ್ನು ಅಭಿವೃದ್ಧಿ ಮಾಡುವುದಾಗಿ ಹೇಳಿ ಪಟ್ಟಣ ಪಂಚಾಯಿತಿಯವರು ರಸ್ತೆಯನ್ನು ಕಿತ್ತು ಹಾಕಿ ಆರು ತಿಂಗಳಾಗಿದೆ. ನೆನೆಗುದಿಗೆ ಬಿದ್ದಿರುವ ಲಿಂಕ್ ರಸ್ತೆಯಲ್ಲಿ ವಿಪರೀತ ದೂಳು ಹಾಗೂ ಕಲ್ಲುಗಳಿಂದ ಸಂಚಾರವೇ ದುಸ್ತರವಾಗಿದೆ ಎಂದು ದೂರಿದರು.ನೆನೆಗುದಿಗೆ ಬಿದ್ದಿರುವ ರಸ್ತೆಯ ಅಭಿವೃದ್ಧಿ ಕಾರ್ಯ ಅವೈಜ್ಞಾನಿಕವಾಗಿ ನಡೆಯುತ್ತಿರುವ ಬಗ್ಗೆ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಅನೇಕ ಬಾರಿ ಮನವಿ ಮಾಡಿದರೂ ಸಹ ನೀವು ಅದರ ಬಗ್ಗೆ ಚಕಾರ ಎತ್ತಲಿಲ್ಲ. ಈಗ ಚುನಾವಣೆ ಹತ್ತಿರವಾಗುತ್ತಿರುವುದರಿಂದ ಪ್ರಚಾರಕ್ಕೆ ಬಂದಿದ್ದೀರಾ? ಎಂದು ಸಾರ್ವಜನಿಕರು ಶಾಸಕರ ಮೇಲೆ ಹರಿಹಾಯ್ದರು.ಪ್ರತಿನಿತ್ಯ ವಾಹನಗಳ ಓಡಾಟದಿಂದ ಉಂಟಾಗುತ್ತಿರುವ ದೂಳಿನಿಂದ ಬೇಸತ್ತು ಹೋಗಿದ್ದ ಜನತೆ ಲಿಂಕ್ ರಸ್ತೆಯಲ್ಲಿ ಪಟ್ಟಣ ಪಂಚಾಯಿತಿ ಅಧಿಕಾರಿಗಳ ಬೇಜವಾಬ್ದಾರಿಗೆ ಆಕ್ರೋಶ ವ್ಯಕ್ತಪಡಿಸಿದರು. ಲಿಂಕ್ ರಸ್ತೆ ಡಾಂಬರೀಕರಣ ಆಗುವವರೆಗೆ ಯಾವುದೇ ಭೂಮಿ ಪೂಜೆ ಮಾಡಬೇಡಿ ಎಂದರು. ಶಾಸಕರು ಭೂಮಿ ಪೂಜೆ ಮಾಡದೇ ವಾಪಸು ತೆರಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry