ಗುರುವಾರ , ಮೇ 19, 2022
21 °C
ಬಿಜೆಪಿಯೇತರ ಪಕ್ಷಗಳು, ಸಂಘ- ಸಂಸ್ಥೆಗಳ ಬೆಂಬಲ

ರಾಮಕ್ಕ ಭೂ ಹಗರಣ: ಕೆಜಿಎಫ್ ಇಂದು ಬಂದ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಜಿಎಫ್: ಅಕ್ರಮ ಭೂ ನೋಂದಣಿ ಆರೋಪ ಎದುರಿಸುತ್ತಿರುವ ಶಾಸಕಿ ವೈ.ರಾಮಕ್ಕ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬುಧವಾರ ಬಂದ್ ಕರೆಯನ್ನು ಯಶಸ್ವಿಗೊಳಿಸಲು ಬಿಜೆಪಿಯೇತರ ರಾಜಕೀಯ ಪಕ್ಷಗಳು ಸಕಲ ಸಿದ್ಧತೆ ನಡೆಸಿವೆ.ಸಿಪಿಎಂ, ಜೆಡಿಎಸ್, ಆರ್‌ಪಿಐ, ಬಿಎಸ್‌ಆರ್, ಎಐಎಡಿಎಂಕೆ ಮೊದಲಾದ ರಾಜಕೀಯ ಪಕ್ಷಗಳು ಮತ್ತು ಇತರ ಸಂಘಟನೆಗಳು ಬಂದ್ ಆಚರಿಸುವ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರಲು ನಿರ್ಧರಿಸಿವೆ. ಬಂದ್ ಪ್ರಯುಕ್ತ ಬೆಮಲ್ ಕಾರ್ಖಾನೆ ರಜಾ ಘೋಷಿಸಿದೆ. ಬೆಮಲ್ ಪ್ರೌಢಶಾಲೆಗೆ ಸಹ ರಜೆ ನೀಡಲಾಗಿದೆ.ಇದೇ ವೇಳೆ ಶಾಸಕರಿಗೆ ಬೆಂಬಲವಾಗಿ ನಿಂತಿರುವ ಡಿಎಚ್‌ಎಎಸ್ ಸಂಘಟನೆ ಕೆಜಿಎಫ್ ಬಂದ್‌ಗೆ ವಿರೋಧವನ್ನು ವ್ಯಕ್ತಪಡಿಸಿವೆ.ಹಿನ್ನೆಲೆ: ವೈ.ರಾಮಕ್ಕ ಶಾಸಕರಾಗುವ ಮೊದಲು ನಾಗಶೆಟ್ಟಿಹಳ್ಳಿಯಲ್ಲಿ 1.24 ಎಕರೆ ಜಮೀನನ್ನು ಖರೀದಿ ಮಾಡಿದ್ದರು. ಇದರೊಂದಿಗೆ ಸುತ್ತಮುತ್ತಲ ಜಮೀನನ್ನು ಖರೀದಿ ಮಾಡಿ ಕೋಳಿ ಫಾರಂ ಕಟ್ಟಲಾಗುತ್ತಿತ್ತು. ಬ್ಯಾಂಕ್‌ನಿಂದ ಸಾಲ ಕೂಡ ಪಡೆಯಲಾಗಿತ್ತು. ಅಂದಿನಿಂದಲೂ ಶಾಸಕ ವೈ.ಸಂಪಂಗಿಯವರು ತಮ್ಮ ತಾಯಿ ಹೆಸರಿನಲ್ಲಿ ಅಕ್ರಮವಾಗಿ ಜಮೀನು ಖರೀದಿ ಮಾಡಿದ್ದಾರೆ ಎಂಬ ಆರೋಪವನ್ನು ಪ್ರತಿಪಕ್ಷಗಳ ನಾಯಕರು ಸದಾ ಮಾಡುತ್ತಿದ್ದರು.ಚುನಾವಣೆ ಸಮುದಲ್ಲಿ ಸಂಪಂಗಿಯವರ ಜಮೀನಿನ ಪತ್ರಗಳನ್ನು ಸಾರ್ವಜನಿಕ ಸಭೆಯಲ್ಲಿ ಪ್ರದರ್ಶಿಸುತ್ತಿದ್ದ ಜೆಡಿಎಸ್ ಅಭ್ಯರ್ಥಿ ಎಂ.ಭಕ್ತವತ್ಸಲಂ, ಅಕ್ರಮಗಳ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸುತ್ತಿದ್ದರು.ಮೂಲ ಜಮೀನು ಮಾಲೀಕರಾಗಿರುವ ಬೀರಪ್ಪ ಶಾಸಕರ ವಿರುದ್ಧ ದೂರು ನೀಡಲು ಹೋದರೆ ಬೇತಮಂಗಲ ಪೊಲೀಸರು ಮತ್ತು ಹಿಂದಿನ ಡಿವೈಎಸ್ಪಿ ನಿರಾಕರಿಸಿದ್ದರು. ಆದ್ದರಿಂದ ನ್ಯಾಯಾಲಯದ ಮೂಲಕ ಪ್ರಕರಣ ದಾಖಲು ಮಾಡಬೇಕಾಯಿತು ಎಂದು ಬಂದ್ ನೇತೃತ್ವ ವಹಿಸಿರುವ ಜೆಡಿಎಸ್ ಮಾಜಿ ಶಾಸಕ ಎಂ.ಭಕ್ತವತ್ಸಲಂ ದೂರಿದ್ದಾರೆ.ಶಾಸಕರಾಗಿರುವ ಕಾರಣ ಅಧಿಕಾರಿಗಳು ಮೌನವಾಗಿದ್ದಾರೆ. ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿಲ್ಲ. ಮೇಲ್ನೋಟಕ್ಕೆ ಶಾಸಕಿ ಸೇರಿದಂತೆ ಆರು ಜನ ತಪ್ಪಿತಸ್ಥರು ಎಂದು ದಾಖಲೆಗಳು ನಿರೂಪಿಸಿದ್ದರೂ ಪೊಲೀಸರು ತಟಸ್ಥವಾಗಿದ್ದಾರೆ ಎಂಬುದು ವಿರೋಧಿಗಳ ದೂರಾಗಿದೆ.ಇದೇ ಸಂದರ್ಭದಲ್ಲಿ, ಮಾಜಿ ಶಾಸಕ ವೈ.ಸಂಪಂಗಿ ನಡೆಸಿದ ಮತ್ತಷ್ಟು ಅಕ್ರಮಗಳನ್ನು ಬಯಲಿಗೆಳೆಯಲಾಗುವುದು ಎಂದು ಪ್ರತಿಪಕ್ಷಗಳು ಹೇಳುತ್ತಿವೆ.ಒಂದಾದರು: ಶತ್ರುವಿನ ಶತ್ರು ತನ್ನ ಮಿತ್ರ ಎಂಬಂತೆ ಶಾಸಕಿ ವೈ.ರಾಮಕ್ಕ, ಮಾಜಿ ಶಾಸಕ ವೈ.ಸಂಪಂಗಿಯವರನ್ನು ಎದುರಿಸಲು ಇಷ್ಟು ದಿನಗಳ ಕಾಲ ಹಾವು ಮುಂಗಸಿಯಂತಿದ್ದ ಜೆಡಿಎಸ್ ಮಾಜಿ ಶಾಸಕ ಎಂ.ಭಕ್ತವತ್ಸಲಂ ಮತ್ತು ಆರ್‌ಪಿಐ ಮಾಜಿ ಶಾಸಕ ಎಸ್.ರಾಜೇಂದ್ರನ್ ಒಂದಾಗಿದ್ದಾರೆ.ಸುಮಾರು ಎರಡು ದಶಕಗಳಿಂದ ಬದ್ಧವೈರಿಗಳಾಗಿದ್ದ ಇಬ್ಬರೂ ಇತರ ಪಕ್ಷಗಳನ್ನು ಸಂಘಟಿಸಿ ಶಾಸಕಿ ಮೇಲೆ ವಾಗ್ದಾಳಿ ಶುರು ಮಾಡಿದ್ದಾರೆ.ಪ್ರಕರಣದ ತೀವ್ರತೆ ಗಮನಿಸಿರುವ ಬೇತಮಂಗಲ ಪೊಲೀಸರು ಪ್ರಾಥಮಿಕ ತನಿಖೆಯನ್ನು ಪ್ರಾರಂಭಿಸಿದ್ದಾರೆ. ಸಬ್ ಇನ್ಸ್‌ಪೆಕ್ಟರ್ ಜಗದೀಶ್ ಸೋಮವಾರದ ದಿನ ಬಂಗಾರಪೇಟೆಯ ಉಪನೋಂದಾಣಾಧಿಕಾರಿ ಕಚೇರಿಗೆ ಹೋಗಿ, ದಾಖಲೆಗಳನ್ನು ತಪಾಸಣೆ ಮಾಡಿದ್ದಾರೆ. ಅವುಗಳ ಅಧಿಕೃತ ಪ್ರತಿಗಳನ್ನು ಪಡೆದಿದ್ದಾರೆ.ಸಂಬಂಧವಿಲ್ಲ: ಆದರೆ, ಶಾಸಕಿಯವರ ಅಧಿಕೃತ ವಕ್ತಾರರಾಗಿರುವ ಮಾಜಿ ಶಾಸಕ ಮತ್ತು ಅವರ ಪುತ್ರ ವೈ.ಸಂಪಂಗಿ ಹಗರಣಕ್ಕೂ ತಮಗೂ ಸಂಬಂಧವಿಲ್ಲ ಎನ್ನುತ್ತಿದ್ದಾರೆ.ತಮ್ಮ ತಾಯಿ ಭೂಮಿ ಖರೀದಿ ಮಾಡುವಾಗ ಎಲ್ಲ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ನೋಂದಣಿಗೆ ಮುನ್ನ ಸರ್ವೆ ಅಧಿಕಾರಿಗಳು ಮತ್ತು ಕಂದಾಯ ನಿರೀಕ್ಷಕರು ಸ್ಥಳ ತನಿಖೆ ಮಾಡಿ ನಕ್ಷೆ ತಯಾರಿಸಿದ್ದಾರೆ. ಜಿಪಿಎ ಮೂಲಕ ಜಮೀನು ಖರೀದಿ ಮಾಡಿದ್ದೇವೆ. ಇದರಲ್ಲಿ ಮೋಸ ನಡೆದಿದ್ದರೆ ಜಮೀನು ನೀಡಿದವರ ವಿರುದ್ಧ ನಾವೂ ಕ್ರಮ ಕೈಗೊಳ್ಳುತ್ತೇವೆ ಎಂಬುದು ಅವರ ವಾದವಾಗಿದೆ.ಬಂದ್‌ಗೆ ವಿರೋಧ: ಶಾಸಕರಿಗೆ ಬೆಂಬಲವಾಗಿ ನಿಂತಿರುವ ಡಿಎಚ್‌ಎಎಸ್ ಸಂಘಟನೆ ಕೆಜಿಎಫ್ ಬಂದ್‌ಗೆ ವಿರೋಧವನ್ನು ವ್ಯಕ್ತಪಡಿಸಿವೆ.ಇತ್ತೀಚಿನ ವರ್ಷಗಳಲ್ಲಿ ಯಾವ ಶಾಸಕರೂ ಮಾಡದಷ್ಟು ಅಭಿವೃದ್ಧಿ ಕೆಲಸವನ್ನು ಸಂಪಂಗಿಯವರು ಶಾಸಕರಾಗಿದ್ದಾಗ ಮಾಡಲಾಗಿದೆ. ಬಂದ್‌ಗೆ ಕರೆ ನೀಡಿರುವ ಮಾಜಿ ಶಾಸಕರು ಸಹ ಹಲವು ಹಗರಣಗಳಲ್ಲಿ ಭಾಗಿಯಾಗಿದ್ದಾರೆ. ಅವರ ಇತಿಹಾಸವನ್ನು ನೋಡಿದ ಜನ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಅವರನ್ನು ತಿರಸ್ಕರಿಸಿದ್ದಾರೆ.ಅಭಿವೃದ್ಧಿಯನ್ನು ನೋಡಿ, ಸಂಪಂಗಿಯವರ ತಾಯಿಗೆ ಅತ್ಯಧಿಕ ಮತಗಳನ್ನು ನೀಡಿ ಆಶೀರ್ವದಿಸಿದ್ದಾರೆ. ಆದ್ದರಿಂದ ಬಂದ್‌ಗೆ ಸಾರ್ವಜನಿಕರು ಮನ್ನಣೆ ನೀಡಬಾರದು ಎಂದು ಸಂಘಟನೆ ಮನವಿ ಮಾಡಿದೆ. ವಿಧಾನಸಭೆ ಚುನಾವಣೆ ನಂತರ ಕ್ಷೇತ್ರದಲ್ಲಿ ತಣ್ಣಗಾಗಿದ್ದ ರಾಜಕೀಯ ಚಟುವಟಿಕೆ ಮತ್ತೆ ಗರಿಗೆದರುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.