ಮಂಗಳವಾರ, ನವೆಂಬರ್ 12, 2019
28 °C

ರಾಮದುರ್ಗದ ಶ್ರೀ ವೆಂಕಟೇಶ್ವರ ರಥೋತ್ಸವ 11ರಿಂದ

Published:
Updated:

ರಾಮದುರ್ಗ: ರಾಜ್ಯ ವಿಧಾನ ಸಭೆಯ ಚುನಾವಣೆಯ ಕಾವು ಒಂದೆಡೆ ಏರಿಕೆಯಾಗುತ್ತಿದೆ. ಅಂತೆಯೇ ಹಿಂದುಗಳ ವರ್ಷಾರಂಭವಾದ ಯುಗಾದಿ ಮತ್ತೆ ಮತ್ತೆ ಮರಳಿ ಬರುತ್ತಿದೆ. ಐತಿಹಾಸಿಕ ಹಿನ್ನೆಲೆಯ ರಾಮದುರ್ಗದ ಶ್ರೀ ವೆಂಕಟೇಶ್ವರ ರಥೋತ್ಸವವು ಪ್ರತಿವರ್ಷದಂತೆ ಈ ವರ್ಷವೂ ಇದೇ 20 ರಂದು ಬೆಳಿಗ್ಗೆ 9ಕ್ಕೆ ಅತಿ ವಿಜೃಂಭಣೆಯಿಂದ ಜರುಗಲಿದೆ.ಜಾತ್ರೆಯ ವಿಧಿವಿಧಾನಗಳು ಗುರುವಾರ ಪಾಡ್ಯದಿಂದ 11 ದಿನಗಳವರೆಗೆ ಆರಂಭಗೊಳ್ಳಲಿವೆ. ಅಂದಿನಿಂದ ಪ್ರತಿದಿನ ರಾತ್ರಿ ವೆಂಕಟೇಶ್ವರ ಜಾತ್ರೆಯ ವಾಹನೋತ್ಸವ ಭಕ್ತರ ಸೇರುವಿಕೆಯೊಂದಿಗೆ ಜರುಗುವುದು.ರಾಮದುರ್ಗದ ಆಡಳಿತವನ್ನು ಪುರಾತನ ಕಾಲದಿಂದಲೂ ರಾಮದುರ್ಗದ ಅರಸು ಮನೆತನವಾದ ಭಾವೆ ಕುಟುಂಬದವರು ನಡೆಸುತ್ತ ಬಂದಿದ್ದರು. ಈಗೀಗ ಇಲ್ಲಿನವರು ಜಾತ್ರಾ ಕಮಿಟಿ ರಚಿಸಿಕೊಂಡು ಆಚರಿಸುವ ಈ ಜಾತ್ರೆ ಈ ಭಾಗದಲ್ಲಿಯೇ ಅತ್ಯಂತ ಪ್ರಖ್ಯಾತಿ ಪಡೆದಿದೆ.ಮೂಲತಃ ಮರಾಠಿ ಸಂಸ್ಥಾನಿಕರಾದ ಪುಣೆಯ ಪೇಶ್ವೆ ಅರಸರು ರಾಮದುರ್ಗದ ಅರಸರಾಗಿದ್ದಾಗ ಇಲ್ಲಿನ ರಾಜ್ಯಭಾರ ನಡೆಸಿದ್ದರು. ಮರಾಠಿಗರ ಮನೆ ದೇವರಾದ ಶ್ರೀ ವೆಂಕಟೇಶ್ವರನಿಗೆ ಅತಿ ಪ್ರಾಮುಖ್ಯತೆ ನೀಡಿ ರಥೋತ್ಸವ ಆಚರಿಸುತ್ತ ಬಂದಿದ್ದಾರೆ.ನರಗುಂದ ಮತ್ತು ರಾಮದುರ್ಗ ಸಂಸ್ಥಾನಗಳು ಪೇಶ್ವೆ ಕುಟುಂಬಕ್ಕೆ ಸೇರಿದ್ದವು. ನರಗುಂದ ಬಾಬಾಸಾಹೇಬರು ಮತ್ತು ರಾಮದುರ್ಗದ ಅರಸು ನಾರಾಯಣರಾವ್ ಭಾವೆ ಅರಸರು ಸಂಸ್ಥಾನಿಕ ಕುಟುಂಬ ಇಬ್ಭಾಗವಾದ ನಂತರ ರಾಮದುರ್ಗದ ಆಸ್ಥಾನವನ್ನು ಹೊಂದಿದ ಅರಸ ರಾಮಭಾವ್ ಭಾವೆ ಅವರು ರಾಮದುರ್ಗದಲ್ಲಿಯೂ ಶ್ರೀ ವೆಂಕಟೇಶ್ವರನಿಗೆ ಹೆಚ್ಚಿನ ಆದ್ಯತೆ ನೀಡಿ ಪೂಜಿಸುತ್ತಿದ್ದರು.ಕುಟುಂಬದ ವಿಭಜನೆಯ ನಂತರ ರಾಮದುರ್ಗ ಸಂಸ್ಥಾನದ ಕೊನೆಯ ಅರಸು ನಾರಾಯಣರಾವ್ ಭಾವೆ ತನ್ನ ವ್ಯಾಪ್ತಿಯಲ್ಲಿಯೂ ಶ್ರೀ ವೆಂಕಟೇಶ್ವರ ಮೂರ್ತಿ ಸ್ಥಾಪನೆಗೆ ಮುಂದಾದರು. ನರಗುಂದದಲ್ಲಿಯೇ ಮೂರ್ತಿ ನಿರ್ಮಿಸಿ ರಾಮದುರ್ಗಕ್ಕೆ ಸಾಗಿಸುತ್ತಿದ್ದಾಗ ಮಧ್ಯದಲ್ಲಿ ಮೂರ್ತಿ ಭಗ್ನಗೊಂಡಿತು. ಭಗ್ನಗೊಂಡ ಮೂರ್ತಿಯನ್ನು ಹತ್ತಿರದ ಚಿಂಚಖಂಡಿಯ ಗುಡ್ಡದ ಮೇಲೆ ಸ್ಥಾಪಿಸಿದರು. ಅದು ಈಗ ಚಿಂಚಖಂಡಿ ಬೈಲಪ್ಪ ಎಂದು ಹೆಸರಿನಿಂದ ಖ್ಯಾತಿ ಹೊಂದಿದೆ.ಪ್ರತಿವರ್ಷದ ರಾಮನವಮಿಯ ಮರುದಿನ ಸಾವಿರಾರು ಜನರು ಶ್ರದ್ಧಾಭಕ್ತಿಯಿಂದ ಪಟ್ಟಣದ ವೆಂಕಟೇಶ್ವರ ಜಾತ್ರೆಯನ್ನು ವೈಭವದಿಂದ ನೆರವೇರಿಸಿಕೊಂಡು ಬಂದಿದ್ದಾರೆ.ಮಲಪ್ರಭಾ ನದಿ ತಟದಲ್ಲಿನ ಭವ್ಯ ವೆಂಕಟೇಶ್ವರ ದೇವಸ್ಥಾನದಿಂದ ಎಡಕ್ಕೆ ಏರುಮುಖವಾಗಿ ತೇರು ಬಜಾರದಲ್ಲಿ ಇದೇ 20 ರಂದು ಬೆಳಿಗ್ಗೆ 9ರ ಸಮಯದಲ್ಲಿ ಕಲ್ಲಿನ ತೇರನ್ನು ಭಕ್ತಿಭಾವ ದಿಂದ ಜನರು ಎಳೆದು ತರುತ್ತಾರೆ. ಉತ್ತರ ಭಾಗದ ಹನುಮಂತ ದೇವರ ಗುಡಿಯವರೆಗೆ ಬಂದು ರಥ ನಿಂತುಕೊಂಡಾಗ ರಾಮದುರ್ಗ ಪಟ್ಟಣ ಮಾತ್ರವಲ್ಲದೆ ಹತ್ತಿರದ ಗ್ರಾಮಗಳಿಂದ ಸುಮಾರು ಸಹಸ್ರಾರು ಜನ ಭಕ್ತರು ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ.

ಸುಮಾರು 30 ಡಿಗ್ರಿ ಏರಿನಲ್ಲಿ ವಾಲಿರುವ ರಥವನ್ನು ಒಂದೂವರೆ ಗಂಟೆಗಳ ಕಾಲ ಪಟ್ಟಣದ ವಡ್ಡರ ಕೋಮಿನ ಜನರು ರಥದ ಕಲ್ಲಿನ ಗಾಲಿಗಳಿಗೆ ಸನ್ನೆಗೋಲು ಹಾಕಿ ಸಂಪೂರ್ಣ ಹಿಮ್ಮುಖವಾಗಿ ವೆಂಕಟೇಶ್ವರ ಗುಡಿಯ ಕಡೆಗೆ ತಿರುಗಿ ನಿಲ್ಲಿಸುವ ಕಾರ್ಯ ಯಾತ್ರಿಕರಲ್ಲಿ ಅತ್ಯಂತ ರೋಮಾಂಚನ ಮೂಡಿಸುತ್ತದೆ. ಬಹುಶಃ ಇಷ್ಟು ರೋಮಾಂಚನಕಾರಿ ರೀತಿಯಲ್ಲಿ ಯಾವುದೇ ರಥವನ್ನು ತಿರುಗಿಸಿ ನಿಲ್ಲಿಸುವುದು ರಾಮದುರ್ಗ ಪಟ್ಟಣದಲ್ಲಿ ಮಾತ್ರ ನಡೆಯುತ್ತಿದೆ. ಸುಮಾರು 7 ದಶಕದಿಂದಲೂ ಈ ಪದ್ಧತಿ ನಡೆದುಕೊಂಡು ಬಂದಿದೆ.ಉಳಿದ ಕಡೆಗಳಲ್ಲಿ ರಥವನ್ನು ತಿರುಗಿಸದೆ ಮುಮ್ಮುಖವಾಗಿ ಇಟ್ಟಿದ್ದ ಉತ್ಸವ ಮೂರ್ತಿಯನ್ನೇ ತಿರುಗಿಸಿ ಇಟ್ಟು ರಥವನ್ನು ಎಳೆಯುವುದು ರೂಢಿ. ಈ ಜಾತ್ರೆ ಸಂಭ್ರಮ ಸಡಗರದೊಂದಿಗೆ ಅನೇಕ ಕಾರ್ಯಚಟುವಟಿಕೆಗಳಿಗೆ ಪೂರಕವಾಗಿದೆ ಎಂದರೆ ತಪ್ಪಾಗುವುದಿಲ್ಲ.

ಜಾತ್ರೆಯ ಸಿದ್ಧತೆಗಳು ಭರದಿಂದ ನಡೆದಿದ್ದು, ಭಕ್ತರು ಜಾತ್ರೆಗಾಗಿ ಸಿದ್ಧಗೊಳ್ಳುತ್ತಿದ್ದಾರೆ.ಬೀಗರು, ನೆಂಟರಿಷ್ಟರಿಗೆ ಜಾತ್ರೆಗೆ ಬರುವಂತೆ ಕೋರಿಕೆ ಸಲ್ಲಿಸಿ ಆಹ್ವಾನಿಸಿದ್ದಾರೆ. ಇನ್ನೇನು ಯುಗಾದಿ ಹಬ್ಬದ ವಾತಾವರಣ ಜನರ ಮನಸ್ಸಿನಲ್ಲಿ ಮೂಡುವತ್ತ ಸಾಗಿದೆ. ಅಷ್ಟಾಗಿಯೂ ವಿಧಾನಸಭೆಯ ಚುನಾವಣೆಯನ್ನೂ ಭರದಿಂದ ಎದುರು ನೋಡುತ್ತಿದ್ದಾರೆ. ಜಾತ್ರೆಯ ನಂತರ ಚುನಾವಣೆಯ ಕಾವು ತಾರಕಕ್ಕೆ ಏರಲಿದೆ.

 

ಪ್ರತಿಕ್ರಿಯಿಸಿ (+)