ಬುಧವಾರ, ಮೇ 12, 2021
18 °C

ರಾಮದುರ್ಗ: ಮನೆಗಳಿಗೆ ಮಲಪ್ರಭಾ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಮಲಪ್ರಭಾ ನದಿ ಉಕ್ಕಿ ಹರಿದ ಪರಿಣಾಮ ರಾಮದುರ್ಗ ಪಟ್ಟಣ ಸೇರಿದಂತೆ ತಾಲ್ಲೂಕಿನ 50ಕ್ಕೂ ಹೆಚ್ಚು ಮನೆಗಳಿಗೆ ಗುರುವಾರ ಮಧ್ಯರಾತ್ರಿ ವೇಳೆಗೆ ನೀರು ನುಗ್ಗಿದೆ.ಮಲಪ್ರಭೆಗೆ ನವಿಲುತೀರ್ಥ ಬಳಿ ನಿರ್ಮಿಸಿರುವ ಅಣೆಕಟ್ಟೆಯಿಂದ ಗುರುವಾರ ಸಂಜೆ 10 ಸಾವಿರ ಕ್ಯೂಸೆಕ್ ನೀರು ಬಿಟ್ಟ ಪರಿಣಾಮ ರಾಮದುರ್ಗದಿಂದ ಹುಬ್ಬಳ್ಳಿ, ಬೆಳಗಾವಿ ಹಾಗೂ ಗದಗ ಸಂಪರ್ಕಿಸುವ ರಸ್ತೆಗಳ ಮೇಲೆ ಶುಕ್ರವಾರ ಬೆಳಿಗ್ಗೆ ನೀರು ಹರಿಯತೊಡಗಿತು.ರಾಮದುರ್ಗ ಪಟ್ಟಣ ಸಂಪರ್ಕಿಸುವ ಪ್ರಮುಖ ರಸ್ತೆಗಳ ಸಂಚಾರ ಬಂದ್ ಆಗಿದ್ದರಿಂದ ಹೊರ ಊರುಗಳಿಗೆ ತರಳಬೇಕಾದ ಜನರು ಪರದಾಡಬೇಕಾಯಿತು. ರಾಮದುರ್ಗ-ಲೋಕಾಪುರ ರಸ್ತೆಯಲ್ಲಿ ಮಾತ್ರ ಸಂಚಾರ ಸುಗಮವಾಗಿತ್ತು.ಪಟ್ಟಣದ ಕಿಲಬನೂರ, ಬಣಕಾರ ಪೇಟೆ, ಕಾಗಿ ಓಣಿ, ಪಡಕೋಟಗಲ್ಲಿಯ 30ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿವೆ. ತಾಲ್ಲೂಕಿನ ಸುನ್ನಾಳ ಗ್ರಾಮದ 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ಅಲ್ಲಿನ ಜನರನ್ನು ಈಗಾಗಲೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಮಲಪ್ರಭಾ ಅಣೆಕಟ್ಟೆಯಿಂದ ಹೊರ ಬಿಡುವ ನೀರಿನ ಪ್ರಮಾಣವನ್ನು ಈಗ 3 ಸಾವಿರ ಕ್ಯೂಸೆಕ್‌ಗೆ ಇಳಿಸಲಾಗಿದ್ದು, ರಾತ್ರಿ ವೇಳೆಗೆ ಪ್ರವಾಹ ಕಡಿಮೆಯಾಗಲಿದೆ ಎಂದು ತಹಸೀಲ್ದಾರ ಗೀತಾ ಕೌಲಗಿ ~ಪ್ರಜಾವಾಣಿ~ಗೆ ತಿಳಿಸಿದರು.ಕೃಷ್ಣಾ ಹರಿವಿನಲ್ಲಿ ಮತ್ತಷ್ಟು ಇಳಿಕೆ: ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ಸತತ 2ನೇ ದಿನವೂ ಇಳಿಕೆಯಾಗಿದೆ.ಮಹಾರಾಷ್ಟ್ರದ ರಾಜಾಪುರ ಬ್ಯಾರೇಜಿನಿಂದ 1.45 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಆದರೆ, ಮಲಪ್ರಭಾ ನದಿ ಉಕ್ಕಿ ಹರಿಯುತ್ತಿರುವುದರಿಂದ ರಾಮದುರ್ಗ ತಾಲ್ಲೂಕಿನಲ್ಲಿ ನಾಲ್ಕು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 24 ಸೇತುವೆಗಳು ನೀರಿನಲ್ಲಿ ಮುಳುಗಿವೆ.ಸಂಚಾರಕ್ಕೆ ಅಡಚಣೆ

ಬಾಗಲಕೋಟೆ ವರದಿ:
  ಮಲಪ್ರಭಾ ನದಿಯ ಪ್ರವಾಹದಿಂದ ಬಾದಾಮಿ ತಾಲ್ಲೂಕಿನ ಗೋವನಕೊಪ್ಪ ಸೇತುವೆ ಮೇಲೆ ಮೂರರಿಂದ ನಾಲ್ಕು ಅಡಿ ನೀರು ರಭಸವಾಗಿ ಹರಿಯುತ್ತಿರುವುದರಿಂದ ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ 218ರ ಸಂಚಾರ ಎರಡನೇ ದಿನವೂ ಸ್ಥಗಿತಗೊಂಡಿದ್ದು, ಸಂಚಾರಕ್ಕೆ ತೀವ್ರ ಅಡಚಣೆಯಾಗಿದೆ.ಈ ಮಾರ್ಗವಾಗಿ ಹೊರ ರಾಜ್ಯ ಮತ್ತು ಜಿಲ್ಲೆಗೆ ತೆರಳಬೇಕಾಗಿದ್ದ ಗೂಡ್ಸ್ ಲಾರಿಗಳು ಕೆರೂರು ಮತ್ತು ಕುಳಗೇರಿ ಕ್ರಾಸ್‌ನಲ್ಲಿ ಮತ್ತು ನದಿ ಸಮೀಪದಲ್ಲಿ ಎರಡು ದಿನಗಳಿಂದ ರಸ್ತೆ ಪಕ್ಕದಲ್ಲೇ ಸಾಲುಗಟ್ಟಿ ನಿಂತಿದ್ದು, ನಿಗದಿತ ಸ್ಥಳಕ್ಕೆ ತಲುಪಲಾಗದೇ ಚಾಲಕರು ಮತ್ತು ನಿರ್ವಾಹಕರು ಪರದಾಡುತ್ತಿದ್ದಾರೆ. ಬಸ್ ಮತ್ತು ಇತರೆ ವಾಹನಗಳು ಹೆದ್ದಾರಿಯನ್ನು ಬಿಟ್ಟು ಸುತ್ತುಬಳಸಿಕೊಂಡು ಸಾಗುತ್ತಿವೆ.ನುಗ್ಗಿದ ನೀರು: ತಾಲ್ಲೂಕಿನ ಹಾಗನೂರು ಮತ್ತು ಆಲೂರು ಎಸ್.ಕೆ. ಗ್ರಾಮಗಳ ಹತ್ತಾರು ಮನೆಗಳ ಒಳಗೆ ನೀರು ಪ್ರವೇಶಿಸಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಪ್ರವಾಹ ಏರಿಕೆಯಾಗುವ ಭೀತಿಯಿಂದ ಜನತೆ ನಿದ್ದೆ ಇಲ್ಲದೇ ರಾತ್ರಿ ಕಳೆದಿದ್ದಾರೆ.ಇಳಿಮುಖ: ಇತ್ತ, ಕೃಷ್ಣಾ ಮತ್ತು ಘಟಪ್ರಭಾ ನದಿಗಳಲ್ಲಿ ಪ್ರವಾಹ ಇಳಿಮುಖವಾಗಿದೆ. ಮುಧೋಳ-ಯಾದವಾಡ ರಸ್ತೆ ಸಂಚಾರ ಪುನರ್ ಆರಂಭಗೊಂಡಿದೆ. ದ್ವೀಪದಂತಾಗಿದ್ದ ನಂದಗಾಂವ ಸಹಜಸ್ಥಿತಿಗೆ ಮರಳಿದೆ.ಒಳ ಹರಿವು ಇಳಿಮುಖ: ಆಲಮಟ್ಟಿ ಜಲಾಶಯದ ಒಳ ಹರಿವು ಕಡಿಮೆಯಾಗಿದೆ. ಜಲಾಶಯಕ್ಕೆ 2.40 ಲಕ್ಷ ಕ್ಯೂಸೆಕ್ ಒಳ ಹರಿವು ಇದ್ದು, ಕೇವಲ ಐದು ಕ್ರಸ್ಟ್ ಗೇಟ್‌ಗಳ ಮೂಲಕ 65 ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಜಲಾಶಯದಲ್ಲಿ 519 ಮೀಟರ್ ವರೆಗೆ ನೀರು ಸಂಗ್ರಹವಾಗಿದೆ. ಹೊರ ಹರಿವು ಕಡಿಮೆ ಮಾಡಿದ್ದರಿಂದ ಜಲಾಶಯದ ಮುಂಭಾಗದಲ್ಲಿ ಉಂಟಾಗಿದ್ದ ಪ್ರವಾಹ ಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಭೀಮಾ ನದಿಯಲ್ಲಿಯೂ ನೀರಿನ ಮಟ್ಟ ಕಡಿಮೆ ಇದೆ.ಹೆದ್ದಾರಿ ಪುನರಾರಂಭ (ಯಾದಗಿರಿ ವರದಿ):  ಜಿಲ್ಲೆಯ ನಾರಾಯಣಪುರ ಜಲಾಶಯದಿಂದ ಬಿಡುವ ನೀರಿನ ಪ್ರಮಾಣ ಕಡಿಮೆ ಆಗಿರುವ ಹಿನ್ನೆಲೆಯಲ್ಲಿ ಶಹಾಪುರ-ದೇವದುರ್ಗ ರಾಜ್ಯ ಹೆದ್ದಾರಿಯ ಕೊಳ್ಳೂರ ಎಂ. ಬಳಿಯ ಸೇತುವೆಯಿಂದ ನೀರು ಸರಿದಿದ್ದು, ಶುಕ್ರವಾರ ರಸ್ತೆ ಸಂಚಾರ ಆರಂಭವಾಗಿದೆ.ಜಲಾಶಯದಿಂದ 1.10 ಲಕ್ಷ ಕ್ಯೂಸೆಕ್ ನೀರನ್ನು ಬಿಡಲಾಗಿದೆ. ಒಳಹರಿವೂ ಅಷ್ಟೇ ಪ್ರಮಾಣದಲ್ಲಿದೆ. ಹೆಚ್ಚು ನೀರು ಬಿಡುತ್ತಿಲ್ಲ ಎಂದು ಕೃಷ್ಣಾ ಭಾಗ್ಯ ಜಲನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.ಮಹಿಳೆ ಶವ ಪತ್ತೆ: ಸೆ.6 ರಂದು ಬಟ್ಟೆ ತೊಳೆಯಲು ತೆರಳಿದ್ದಾಗ ಕೃಷ್ಣಾ ನದಿ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ಬಾಗಲಕೋಟೆ ಜಿಲ್ಲೆಯ ನಾಗಸಂಪಿಗೆ ಗ್ರಾಮದ ಚಂದ್ರವ್ವ ಶರಣಪ್ಪ ಅವರ ಮೃತದೇಹ ನಾರಾಯಣಪುರ ಜಲಾಶಯದಲ್ಲಿ ಶುಕ್ರವಾರ ಪತ್ತೆಯಾಗಿದೆ.

 

ಖಚಿತ ಮಾಹಿತಿ ಮೇರೆಗೆ ಪಿಎಸ್‌ಐ ಗುರುಲಿಂಗಪ್ಪ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಬಾಗಲಕೋಟೆ ಪೊಲೀಸರನ್ನು ಸಂಪರ್ಕಿಸಿದಾಗ ಅದು ಚಂದ್ರವ್ವಳ ಶವ ಎಂಬುದು ಗೊತ್ತಾಯಿತು. ನಾರಾಯಣಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.