ರಾಮನಗರ: ಎಡಿಬಿ ಅಭಿವೃದ್ಧಿ ಕಾರ್ಯ ಶ್ಲಾಘನೀಯ

7

ರಾಮನಗರ: ಎಡಿಬಿ ಅಭಿವೃದ್ಧಿ ಕಾರ್ಯ ಶ್ಲಾಘನೀಯ

Published:
Updated:

ರಾಮನಗರ : ವಸತಿ ನಿವೇಶನಗಳನ್ನು ಅಭಿವೃದ್ಧಿ ಪಡಿಸಲು ಎಡಿಬಿ ಪಡೆದಿದ್ದ ಸಾಲವನ್ನು ಮರುಪಾವತಿಸಿ ಸ್ವತಂತ್ರವಾಗಿ ಅಭಿವೃದ್ಧಿ ಕಾರ್ಯ ಕೈಗೊಳ್ಳುತ್ತಿರುವ ರಾಜ್ಯದ ಏಕೈಕ ಅಭಿವೃದ್ಧಿ ಪ್ರಾಧಿಕಾರ ಎಂದು ರಾಮನಗರ-ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ನಾಗರಾಜು ತಿಳಿಸಿದರು.ನಗರದಲ್ಲಿರುವ ಪ್ರಾಧಿಕಾರದ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ನಗರದ ವಸತಿ ನಿವೇಶನಗಳನ್ನು ಅಭಿವೃದ್ಧಿಪಡಿಸಲು ಏಷ್ಯನ್ ಅಭಿವೃದ್ಧಿ ಬ್ಯಾಂಕಿನಿಂದ 9.02 ಕೋಟಿ ರೂ. ಸಾಲ ಪಡೆದ್ದು,  ಬಡ್ಡಿ ಸೇರಿಸಿ ಒಟ್ಟು 20.45 ಕೋಟಿ ರೂಗಳನ್ನು ಮರುಪಾವತಿ ಮಾಡಲಾಗಿದೆ.

 

ಪ್ರಾಧಿಕಾರವು ಎಡಿಬಿ ವತಿಯಿಂದ ಬಾಕಿ ರಹಿತ ಪ್ರಮಾಣ ಪತ್ರವನ್ನು ಪಡೆದಿದೆ. ಪ್ರಸ್ತುತ ರಾಜ್ಯದಲ್ಲಿ ಸಾಲವಿಲ್ಲದೇ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸುತ್ತಿರುವ ಪ್ರಾಧಿಕಾರ ಎಂಬ ಹೆಗ್ಗಳಿಕೆ ರಾಮನಗರ-ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಪ್ರಾಪ್ತವಾಗಿದೆ ಎಂದು ಅವರು ಬಣ್ಣಿಸಿದರು.ಕಳೆದ ಮೂರು ವರ್ಷಗಳಲ್ಲಿ ಪ್ರಾಧಿಕಾರವು ರಾಮನಗರ -ಚನ್ನಪಟ್ಟಣ ಅಭಿವೃದ್ಧಿಗೆ ಸಾಕಷ್ಟು ಪ್ರೋತ್ಸಾಹಗಳನ್ನು ನೀಡಿದೆ. ರಾಮನಗರದ ರಂಗರಾಯರದೊಡ್ಡಿ ಕೆರೆ ಮತ್ತು ಚನ್ನಪಟ್ಟಣದ ಕುನ್ನೀರು ಕಟ್ಟೆ ಕೆರೆಗಳನ್ನು ಅಭಿವೃದ್ಧಿಪಡಿಸಿ ವಿಹಾರ ತಾಣವನ್ನಾಗಿ ಮಾಡಿದೆ.

 

ಪ್ರವಾಸೋದ್ಯಮ ಇಲಾಖೆ ಸಹಭಾಗಿತ್ವದೊಡನೆ ರಂಗರಾಯರ ದೊಡ್ಡಿ ಕೆರೆ ಜಾಗವನ್ನು 15 ಕೋಟಿ ರೂಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ ಎಂದರು.ರಾಮನಗರದ ಬೆಂಗಳೂರು -ಮೈಸೂರು ಹೆದ್ದಾರಿಯ ಜಂಕ್ಷನ್‌ನಲ್ಲಿ ಅಂಡರ್‌ಪಾಸ್ ನಿರ್ಮಾಣ ಯೋಜನೆಯನ್ನು ರೂಪಿಸಲಾಗಿದೆ. ಈ ಯೋಜನೆಗೆ ಸರ್ಕಾರದಿಂದ ಅನುಮೋದನೆ ಪಡೆಯುವ ಕಾರ್ಯ ಪ್ರಗತಿಯಲ್ಲಿದೆ.ಚನ್ನಪಟ್ಟಣ ಟೌನಿನಲ್ಲಿರುವ ಖಾಸಗಿ ಬಸ್ ನಿಲ್ದಾಣದ ಜಾಗದಲ್ಲಿ ಸುಸಜ್ಜಿತ ಖಾಸಗಿ ಬಸ್ ನಿಲ್ದಾಣ ಹಾಗೂ ಬಹು ಮಹಡಿಗಳ ವಾಣಿಜ್ಯ ಸಂಕೀರ್ಣ ಕಟ್ಟಡವನ್ನು ನಗರಸಭೆ ಸಹಯೋಗದಲ್ಲಿ ನಿರ್ಮಿಸುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದರು.ರಾಮನಗರ ಟೌನಿನ ಛತ್ರದ ಬೀದಿಯಲ್ಲಿ ಸಭಾಗೃಹ ಮತ್ತು ಸಾಂಸ್ಕೃತಿಕ ಭವನ ನಿರ್ಮಿಸಲು ಉದ್ದೇಶಿಸಲಾಗಿದೆ. ಖಾಸಗಿ ಬಸ್ ನಿಲ್ದಾಣದ ಎದುರಿನಲ್ಲಿರುವ ಪಶುವೈದ್ಯ ಶಾಲೆ ಜಾಗದಲ್ಲಿ ಸಣ್ಣ ವ್ಯಾಪಾರಿಗಳಿಗೆ ಅನುಕೂಲ ಕಲ್ಪಿಸಲು ಮಾರುಕಟ್ಟೆ ಪ್ರಾಂಗಣ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.ಮಿನಿ ವಿಧಾನಸೌಧದ ಹತ್ತಿರವಿರುವ ವಾಣಿಜ್ಯ ನಿವೇಶನದಲ್ಲಿ ತಾಲ್ಲೂಕು ಪಂಚಾಯಿತಿ ಸಹಯೋಗದೊಂದಿಗೆ ಬಹುಮಹಡಿಗಳ ವಾಣಿಜ್ಯ ಕಟ್ಟಡವನ್ನು ನಿರ್ಮಿಸಲು ಟೆಂಡರ್ ಪ್ರಕ್ರಿಯೆ ಕೈಗೊಳ್ಳಲಾಗಿದೆ.ಚನ್ನಪಟ್ಟಣದ ಸುಣ್ಣಘಟ್ಟ, ಕಣ್ವ ವಸತಿ ಬಡಾವಣೆಯಲ್ಲಿ ಈಜು ಕೊಳ ನಿರ್ಮಿಸಲು ಸರ್ಕಾರದಿಂದ ಅನುಮೋದನೆ ಪಡೆಯಲಾಗಿದೆ. ರಾಮನಗರದ ವಡೇರಹಳ್ಳಿಯ ಬಳಿ 60 ಎಕರೆ ಜಮೀನಿನಲ್ಲಿ ವಸತಿ ಬಡಾವಣೆ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಪ್ರಾಧಿಕಾರದ ಅಧ್ಯಕ್ಷರಾದ ಎಸ್.ಆರ್.ನಾಗರಾಜು ವಿವಿಧ ಯೋಜನೆಗಳ ವಿವರ ನೀಡಿದರು. ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಚಿದಾನಂದ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry