ರಾಮನಗರ ನಿವೇಶನಕ್ಕೂ `ಮೌಲ್ಯ'

7

ರಾಮನಗರ ನಿವೇಶನಕ್ಕೂ `ಮೌಲ್ಯ'

Published:
Updated:
ರಾಮನಗರ ನಿವೇಶನಕ್ಕೂ `ಮೌಲ್ಯ'

ರಾಜಧಾನಿ ಬೆಂಗಳೂರಿಗೆ ಅಂಟಿಕೊಂಡಿರುವ ರೇಷ್ಮೆ ಜಿಲ್ಲೆ ಖ್ಯಾತಿಯ ರಾಮನಗರದಲ್ಲಿ ದಿನೇ ದಿನೇ ರಿಯಲ್ ಎಸ್ಟೇಟ್ ವಹಿವಾಟು ಜೋರಾಗಿ ಸಾಗಿದೆ. ಬೆಂಗಳೂರಿಗೆ ಪೂರಕವಾಗಿ ಹೊಂದಿಕೊಂಡು ಬೆಳೆಯುತ್ತಿರುವ ಬಿಡದಿ, ರಾಮನಗರ, ಮಾಗಡಿ, ಹಾರೋಹಳ್ಳಿ, ಕನಕಪುರ ಮತ್ತು ಚನ್ನಪಟ್ಟಣದಲ್ಲಿ ಭೂಮಿಗೆ ಚಿನ್ನದ ಬೆಲೆಯಿದ್ದು, ಬೆಂಗಳೂರಿಗರು ಮತ್ತು ಹಣವಂತರ ಚಿತ್ತ ಇತ್ತ ಹರಿಯುತ್ತಿದೆ.ಉದ್ಯಾನ ನಗರಿಯಲ್ಲಿ ನಿವೇಶನಗಳು ಬಹಳ ದುಬಾರಿಯಾಗಿ ಕೈಗೆಟುಕದಂತಾಗಿರುವುದರಿಂದ ಚಿಂತಿತರಾಗಿರುವ `ಸ್ವಂತ ಮನೆ' ಕನಸಿನ ಜನರು, ಈಗ ಬೆಂಗಳೂರಿನ ಹೊರವಲಯಕ್ಕೆ ತಾಗಿಕೊಂಡಂತಿರುವ ರಾಮನಗರ ಜಿಲ್ಲೆಯ ವಿವಿಧ ಪ್ರದೇಶಗಳತ್ತ ಮುಖ ಮಾಡಿದ್ದಾರೆ.ಸಿಲಿಕಾನ್ ಸಿಟಿಯಲ್ಲಿನ ಸಂಚಾರ ದಟ್ಟಣೆ, ವಾಹನ ಚಾಲನೆಯ ಕಷ್ಟ ಮತ್ತು ದುಬಾರಿ ಬಾಡಿಗೆ ಸಮಸ್ಯೆಗಳಿಂದ ಬೇಸತ್ತ ಜನರು ಈಗ ಬೆಂಗಳೂರಿನ ಹೊರವಲಯದಾಚೆಗೂ  ಗಮನ ಹರಿಸುತ್ತಿದ್ದಾರೆ. ರಾಜಧಾನಿಯಲ್ಲಿನ ಬೆಲೆಗೆ ಹೋಲಿಸಿದರೆ ಈ ಭಾಗದಲ್ಲಿ ನಿವೇಶನ ಬಹಳಷ್ಟು ಕಡಿಮೆ ಬೆಲೆಗೆ ಲಭಿಸುತ್ತಿರುವುದರಿಂದ ಖರೀದಿಸಲು ಹೆಚ್ಚಿನ ಸಂಖ್ಯೆಯಲ್ಲಿ ಮುಂದಾಗುತ್ತಿದ್ದಾರೆ.ರಾಮನಗರ ಜಿಲ್ಲೆಯ ನಾಲ್ಕೂ ತಾಲ್ಲೂಕುಗಳಿಂದ ಬೆಂಗಳೂರು ನಗರಗೊಳಕ್ಕೆ ಒಂದು ಗಂಟೆಯೊಳಗೆ ಪ್ರವೇಶ ಪಡೆಯಬಹುದು. ಅಲ್ಲದೆ ಬಿಡದಿ ಮತ್ತು ಹಾರೋಹಳ್ಳಿಯಿಂದ 20ರಿಂದ 30 ನಿಮಿಷದಲ್ಲಿ ಬೆಂಗಳೂರು ತಲುಪಬಹುದು.ಜತೆಗೆ ಉತ್ತಮ ಸಾರಿಗೆ ಸಂಪರ್ಕದ ಸೌಲಭ್ಯವೂ ಇರುವ ಕಾರಣ ಬೆಂಗಳೂರಿನಲ್ಲಿ ವಿವಿಧ ಸಂಸ್ಥೆ, ಕಚೇರಿಗಳಲ್ಲಿ ಕೆಲಸ ಮಾಡುವವರು, ವ್ಯಾಪಾರ, ಏಜೆನ್ಸಿ ಮತ್ತು ಸೇವಾ ವಿಭಾಗದ ತೊಡಿಗಿಸಿಕೊಂಡವರು ಕಡಿಮೆ ಬಾಡಿಗೆ, ಕಡಿಮೆ ಬೆಲೆಗೆ ನಿವೇಶನ-ಮನೆ ಖರೀದಿಗೆ ಅವಕಾಶವಿರುವ ಕಾರಣ ಬೆಂಗಳೂರು ಹೊರವಲಯದಲ್ಲಿ ನೆಲೆಸಲಾರಂಭಿಸಿದ್ದಾರೆ. ಪರಿಣಾಮ ಈ ಭಾಗದ ರಿಯಲ್ ಎಸ್ಟೇಟ್ ವಹಿವಾಟು ಈಗ ಗರಿಗೆದರಿದೆ.ಅಲ್ಲದೆ ಬಿಡದಿ ಮತ್ತು ಹಾರೋಹಳ್ಳಿ ಕೈಗಾರಿಕಾ ಪ್ರದೇಶಗಳಾಗಿ ಅಭಿವೃದ್ಧಿ ಹೊಂದಿರುವುದರಿಂದ ಭೂಮಿಯ ಬೆಲೆ ನಿಧಾನವಾಗಿ ಏರುತ್ತಿದೆ. ಜತೆಗೆ ಬೆಂಗಳೂರು-ಮೈಸೂರು ರಾಜ್ಯ ಹೆದ್ದಾರಿ, ಕನಕಪುರ ಮತ್ತು ಮಾಗಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವ ಕಾರಣ ಹಾಗೂ ಉದ್ದೇಶಿತ ಬಿಡದಿ ಟೌನ್‌ಶಿಪ್, ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದಿಂದ ಭೂಮಿ ಬೆಲೆ ಮತ್ತಷ್ಟು ಹೆಚ್ಚಳವಾಗಿದೆ.ಇದಕ್ಕೆ ಪೂರಕವಾಗಿ 2011ರಲ್ಲಿ ಪ್ರಕಟವಾದ ನೂತನ ಮಾರ್ಗದರ್ಶಿ ದರದ ಪ್ರಕಾರ ಬೆಂಗಳೂರು-ಮೈಸೂರು ಹೆದ್ದಾರಿ ಬದಿಯಲ್ಲಿ ಬರುವ ಬಿಡದಿ ಮತ್ತು ರಾಮನಗರದಲ್ಲಿ ಎಕರೆಗೆ ಒಂದು ಕೋಟಿ ರೂಪಾಯಿಗೂ ಹೆಚ್ಚಿನ ಬೆಲೆ ನಿಗದಿಯಾಗಿದೆ. ಬೆಂಗಳೂರು-ಮೈಸೂರು ರಸ್ತೆ ಅಕ್ಕಪಕ್ಕದಲ್ಲಿ ಎಕರೆ ಭೂಮಿಗೆ ಮಾರುಕಟ್ಟೆಯಲ್ಲಿ ಈಗ ರೂ. 3 ಕೋಟಿ ಬೆಲೆ ಇದ್ದರೆ, ರಾಮನಗರದಲ್ಲಿ ರೂ.1.5ರಿಂದ ರೂ.2 ಕೋಟಿವರೆಗೂ ಮೌಲ್ಯವಿದೆ.ನಾಲ್ಕು-ಐದು ವರ್ಷಗಳಲ್ಲಿ ಈ ಭಾಗಕ್ಕೆ ಅಂತಹ ಹೊಸ ಮೆಗಾ ಯೋಜನೆಗಳೇನು ಬಾರದಿದ್ದರೂ, ಭೂಮಿಯ ಬೆಲೆಯಲ್ಲಿ ವ್ಯತ್ಯಾಸವೇನು ಆಗಿಲ್ಲ. ಆದರೆ ದಿನೇ ದಿನೇ ವಸತಿ ಬಡಾವಣೆಗಳ ಸಂಖ್ಯೆ ಹೆಚ್ಚುತ್ತಿದ್ದು, ಬೆಂಗಳೂರು, ಮಂಡ್ಯ, ಮೈಸೂರು ಭಾಗದ ನಿವಾಸಿಗಳು ಇಲ್ಲಿ ನಿವೇಶನಗಳನ್ನು ಖರೀದಿಸಲು ಹೆಚ್ಚಾಗಿ ಆಸಕ್ತಿ ತೋರುತ್ತಿದ್ದಾರೆ.ರಿಯಲ್ ಎಸ್ಟೇಟ್ ವ್ಯವಹಾರದಿಂದಾಗಿ ದಿನೇ ದಿನೇ ಜಿಲ್ಲೆಯಲ್ಲಿ ಕೃಷಿ ಭೂಮಿಯು ಕೃಷಿಯೇತರ ಭೂಮಿಯಾಗಿ ಪರಿವರ್ತನೆಗೊಳ್ಳುತ್ತಿದೆ. ರಾಮನಗರ ಜಿಲ್ಲಾಡಳಿತದ ಮಾಹಿತಿ ಪ್ರಕಾರ ಈವರೆಗೆ 3835 ಹೆಕ್ಟೇರ್ ಕೃಷಿ ಭೂಮಿ ಕೃಷಿಯೇತರ ಚಟುವಟಿಕೆಗೆ ಪರಿವರ್ತನೆಯಾಗಿದೆ. ಇದರಲ್ಲಿ ಕೈಗಾರಿಕಾ ಪ್ರದೇಶ ಮತ್ತು ವಸತಿ ಪ್ರದೇಶಕ್ಕಾಗಿಯೇ ಹೆಚ್ಚಾಗಿ ಪರಿವರ್ತನೆಯಾಗಿದೆ.

ಬಿಡದಿಯಲ್ಲಿ ಬೆಲೆ

ಬಿಡದಿ ಹೋಬಳಿ ಕೇಂದ್ರವಾಗಿದ್ದರೂ ಇಲ್ಲಿನ ಭೂಮಿಗೆ ಜಿಲ್ಲೆಯಲ್ಲಿಯೇ ಅತ್ಯಧಿಕ ಬೆಲೆಯಿದೆ. ಕೆಂಗೇರಿಯಿಂದ ಕೇವಲ 15 ಕಿ.ಮೀ ದೂರದಲ್ಲಿರುವ ಬಿಡದಿಯಲ್ಲಿ ಹತ್ತಾರು ಖಾಸಗಿ ಬಡಾವಣೆಗಳು ನಿರ್ಮಾಣಗೊಂಡಿವೆ. ಇಲ್ಲಿ 30x40 ಅಡಿ, 30x50 ಅಡಿ ಹಾಗೂ 40x60 ಅಡಿ ಉದ್ದ-ಅಗಲದ ನಿವೇಶನಗಳು ದೊರೆಯುತ್ತವೆ. ಬೆಂಗಳೂರು- ಮೈಸೂರು ರಸ್ತೆಗೆ ಹೊಂದಿಕೊಂಡಿರುವ ಬಡಾವಣೆಗಳಲ್ಲಿ ಚದರ ಅಡಿಗೆ ರೂ. 1200ರಿಂದ ರೂ.1600ವರೆಗೂ ಬೆಲೆ ಇದೆ. ಅಂದರೆ 30x40 ಅಡಿ ಉದ್ದಗಲದ ನಿವೇಶನಕ್ಕೆ ರೂ.14.40 ಲಕ್ಷದಿಂದ ರೂ.19.20 ಲಕ್ಷದವರೆಗೂ ಬೆಲೆ ಇದೆ. 40x60 ಅಡಿ ನಿವೇಶನಕ್ಕೆ ರೂ.28.80 ಲಕ್ಷದಿಂದ ರೂ.38.40 ಲಕ್ಷ ರೂಪಾಯಿವರೆಗೂ ಬೆಲೆ ಇದೆ.ಬಿಡದಿಯಿಂದ ಆರು- ಏಳು ಕಿ.ಮೀ ಅಂತರದಲ್ಲಿರುವ ಮುದ್ದಾಪುರ, ಎಂ.ಕರೇನಹಳ್ಳಿ, ಕಾಕರಾಮನ ಹಳ್ಳಿ, ಬೋರೆಹಳ್ಳಿ ವ್ಯಾಪ್ತಿಯ 499.21 ಎಕರೆ ಪ್ರದೇಶದಲ್ಲಿ ಅಂದಾಜು ರೂ.482 ಕೋಟಿ ವೆಚ್ಚದಲ್ಲಿ ಕರ್ನಾಟಕ ಗೃಹ ಮಂಡಳಿ(ಕೆಎಚ್‌ಬಿ)ಯು `ನೇತಾಜಿ ಸುಭಾಷ್ ಚಂದ್ರ ಬೋಸ್ ವಸತಿ ಬಡಾವಣೆ ಯೋಜನೆ'ಗೆ ಇತ್ತೀಚೆಗೆ ಶಂಕುಸ್ಥಾಪನೆ ನೆರವೇರಿಸಿದೆ.ಈ ಬಡಾವಣೆಯಲ್ಲಿ ವಿವಿಧ ಅಳತೆಯ ಒಟ್ಟು 5937 ನಿವೇಶನಗಳು ಮತ್ತು 16 ಮನೆಗಳು ನಿರ್ಮಾಣ ಆಗಲಿವೆ. ಅದರಲ್ಲಿ 1152 ಇಡಬ್ಲ್ಯೂಎಸ್ (ಬಡತನ ರೇಖೆ ಕೆಳಗಿರುವ-ಬಿಪಿಎಲ್ ಕಾರ್ಡ್‌ದಾರರಿಗೆ), 1791 ಎಲ್‌ಐಜಿ (ಕಡಿಮೆ ವರಮಾನ ವರ್ಗದವರಿಗೆ), 1714 ಎಂಐಜಿ(ಮಧ್ಯಮ ಪ್ರಮಾಣದ ಆದಾಯ ಇರುವವರಿಗೆ) , 922 ಎಚ್‌ಐಜಿ-1(ಅಧಿಕ ವರಮಾನದ ವ್ಯಕ್ತಿಗೆ), 358 ಎಚ್‌ಐಜಿ-2(ಅತ್ಯಧಿಕ ವರಮಾನ ಇರುವವರಿಗೆ) ಎಂಬ ವಿವಿಧ ಅಳತೆಯ ನಿವೇಶನಗಳನ್ನು `ಕೆಎಚ್‌ಬಿ' ಇಲ್ಲಿ ನಿರ್ಮಿಸಲಿದೆ. ಇಲ್ಲಿ ಚದರ ಅಡಿಗೆ ಅಂದಾಜು ರೂ.500ರಿಂದ ರೂ.600ವರೆಗೆ ಬೆಲೆ ನಿಗದಿಯಾಗುವ ನಿರೀಕ್ಷೆ ಇದೆ.ಬೊಂಬೆ ನಗರ

ಚನ್ನಪಟ್ಟಣದ ಸಾತನೂರು ರಸ್ತೆ ಹಾಗೂ ಹೊಡಿಕೆ ಹೊಸಹಳ್ಳಿ ರಸ್ತೆಯಲ್ಲಿ ಕೆಲ ನೂತನ ಬಡಾವಣೆಗಳು ನಿರ್ಮಾಣವಾಗಿದ್ದು ಇಲ್ಲಿ ಚದರ ಅಡಿಗೆ ರೂ.500ರಿಂದ ರೂ.700ವರೆಗೆ ಬೆಲೆ ಇದೆ. ಪಟ್ಟಣದಲ್ಲಿ ಬೆಂಗಳೂರು-ಮೈಸೂರು ರಸ್ತೆ ಬದಿಯಲ್ಲಿರುವ ಕೆಲ ನಿವೇಶನಗಳ ಬೆಲೆ ಮಾತ್ರ ಎರಡು ಪಟ್ಟಿಗೂ ಅಧಿಕವಾಗಿದೆ.ಇಲ್ಲಿ ಚದರ ಅಡಿಗೆ ರೂ.1200ರಿಂದ ರೂ.1500ವರೆಗೂ ಮೌಲ್ಯವಿದೆ. ಸಾತನೂರು ರಸ್ತೆಯಲ್ಲಿ `ಕೆಎಚ್‌ಬಿ' ಮತ್ತು ಪ್ರಾಧಿಕಾರ ನಿರ್ಮಿಸಿರುವ ಬಡಾವಣೆ ಬಳಿ ಚದರ ಅಡಿ ನಿವೇಶನ ರೂ.800ರಿಂದ ರೂ.1,000ರಷ್ಟು ಮೌಲ್ಯ ಪಡೆದುಕೊಂಡಿದೆ.

ಕನಕಪುರದ ವಿವರ

ಬೆಂಗಳೂರಿಗೆ ಕೂಗಳತೆ ದೂರದಲ್ಲಿರುವ ಹಾರೋಹಳ್ಳಿಯಲ್ಲಿ ಚದರ ಅಡಿ ನಿವೇಶನದ ಬೆಲೆ ರೂ.1000ಕ್ಕೂ ಅಧಿಕವಾಗಿದೆ. ಕನಕಪುರದಲ್ಲಿ ಮಹಾರಾಜರ ಕಟ್ಟೆ, ಬಸವೇಶ್ವರ ನಗರ, ಮಹದೇಶ್ವರ ಬಡಾವಣೆ ಸುತ್ತ ಹೊಸ ಬಡಾವಣೆಗಳು ನಿರ್ಮಾಣವಾಗುತ್ತಿದ್ದು, ಚದರ ಅಡಿಗೆ ರೂ.600ರಿಂದ ರೂ.1000ವರೆಗೂ ನಿವೇಶನಗಳು ಲಭ್ಯವಿವೆ.ಕೇಂದ್ರ ಸರ್ಕಾರ ಕನಕಪುರಕ್ಕೆ ಉಪನಗರ ಯೋಜನೆ ಜಾರಿಗೊಳಿಸಿದ್ದು, ಹಲವು ಅಭಿವೃದ್ಧಿ ಕಾರ್ಯಕ್ರಮಗಳು ಅನುಷ್ಠಾನಗೊಳ್ಳಲಿವೆ. ಹಾಗಾಗಿ ಇಲ್ಲಿ ನಿವೇಶನದ ಬೆಲೆ ಮತ್ತಷ್ಟು ಹೆಚ್ಚುವ ಸಂಭವವಿದೆ.ತಾಲ್ಲೂಕಿನ ರಾಯಸಂದ್ರ ಬಳಿ `ಕೆಎಚ್‌ಬಿ' ವಸತಿ ಯೋಜನೆಗೆ ಚಾಲನೆ ನೀಡಿದೆ. ಮೊದಲ ಹಂತದಲ್ಲಿ 249.33 ಎಕರೆ ಪ್ರದೇಶದಲ್ಲಿ(ಅಂದಾಜು ರೂ.310 ಕೋಟಿ) 3613 ನಿವೇಶನಗಳು ಮತ್ತು 90 ಮನೆಗಳನ್ನು ಅಭಿವೃದ್ಧಿಪಡಿಸಲಿದೆ. ಅಲ್ಲದೆ ಇಲ್ಲಿನ 146.12 ಎಕರೆ ಪ್ರದೇಶದಲ್ಲಿ 2ನೇ ಹಂತದಲ್ಲಿ ಕೈಗೆತ್ತಿಕೊಳ್ಳಲಿರುವ ಯೋಜನೆಯ ರೂಪುರೇಷೆಯನ್ನೂ `ಕೆಎಚ್‌ಬಿ' ಈಗಾಗಲೇ ಸಿದ್ಧಪಡಿಸಿದೆ. ಪರಿಣಾಮ ಈ ಭಾಗದಲ್ಲಿ ಜಮೀನು ಮತ್ತು ನಿವೇಶನಗಳ ಬೆಲೆ ದಿನಕಳೆದಂತೆ ಹೆಚ್ಚುತ್ತಾ ಇದೆ.

ಮಾಗಡಿಯಲ್ಲಿಯೂ ಬೇಡಿಕೆ

ಬೆಂಗಳೂರು ನಿರ್ಮಾತೃ, ನಾಡಪ್ರಭು ಕೆಂಪೇಗೌಡ ಅವರ ತವರು ನೆಲ `ಮಾಗಡಿ'ಯಲ್ಲಿಯೂ ವಸತಿ ಬಡಾವಣೆಗಳು ಅಲ್ಲಲ್ಲಿ ಬೆಳೆಯುತ್ತಾ ಇವೆ. ಇತಿಹಾಸ ಮತ್ತು ಪೌರಾಣಿಕ ಹಿನ್ನೆಲೆ ಹೊಂದಿರುವ ಮಾಗಡಿ ಪಟ್ಟಣ, ತರಕಾರಿ, ಸೊಪ್ಪು ಉತ್ಪಾದನೆಗೆ ಪ್ರಸಿದ್ಧಿಯಾಗಿದೆ. ಇಲ್ಲಿಯೂ ಬೈಚಾಪುರ, ಕಲ್ಯಾಗೇಟ್, ಹೊಸಪೇಟೆ ಬಳಿ ಕೆಲ ಖಾಸಗಿ ಬಡಾವಣೆಗಳು ನಿರ್ಮಾಣವಾಗಿದ್ದು ನಿವೇಶನಗಳ ಬೆಲೆ ಚದರ ಅಡಿಗೆ ರೂ.600ರಿಂದ ರೂ.900ವರೆಗೂ ಇದೆ.ರಾಜಧಾನಿ ಬೆಂಗಳೂರಿನಲ್ಲಿ ನಿವೇಶನ ಕೊಳ್ಳಲಾಗದ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದವರು ರಾಮನಗರ ಜಿಲ್ಲೆಯ ಸುತ್ತಮುತ್ತಲ ಪ್ರದೇಶಗಳಲ್ಲಿ ನಿವೇಶನ ಖರೀದಿಗೆ ಆಸಕ್ತಿ ತೋರುತ್ತಿದ್ದಾರೆ.ಕೆಲ ಶ್ರೀಮಂತರು ಈ ಹಣವನ್ನು ಬ್ಯಾಂಕಿನಲ್ಲಿ ಕಡಿಮೆ ಬಡ್ಡಿಗೆ ಠೇವಣಿ ಇಡುವ ಬದಲು `ಭೂಮಿ ಮೇಲೆ ಹೂಡಿಕೆ' ಮಾಡುವುದೇ ಸರಿ ಎಂದು ಈ ಭಾಗದಲ್ಲಿ ನಿವೇಶನ ಖರೀದಿ ಲೆಕ್ಕದಲ್ಲಿ ಬಂಡವಾಳ ಹೂಡುತ್ತಿದ್ದಾರೆ.ರಾಮನಗರದ ಚಿತ್ರಣ

2007ರಲ್ಲಿ ರಾಮನಗರ ಜಿಲ್ಲೆಯಾಗಿ ರಚನೆಯಾದ ನಂತರ ಇಲ್ಲಿನ ರಿಯಲ್ ಎಸ್ಟೇಟ್ ಉದ್ಯಮದ ಬೇಡಿಕೆ-ಬೆಲೆಗೆ ಸಂಬಂಧಿಸಿದ -ಪ್ರಗತಿಯ ರೇಖೆಗಳು ಗಗನಮುಖಿಯಾಗಿವೆ. ಉದ್ದೇಶಿತ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪನೆಯಾದ ನಂತರವಂತೂ ಇಲ್ಲಿ ನಿವೇಶನ ಖರೀದಿ ಎಂಬುದು ಗಗನ ಕುಸುಮವೇ ಆಗಲಿದೆ ಎಂಬುದು ಈ ಭಾಗದ ರಿಯಲ್ ಎಸ್ಟೇಟ್ ವಹಿವಾಟಿನಲ್ಲಿ ನುರಿತವರ ಮಾತು.ಈಗಾಗಲೇ ರಾಮನಗರದಲ್ಲಿ 15ಕ್ಕೂ ಹೆಚ್ಚು ಹೊಸ ಖಾಸಗಿ ಬಡಾವಣೆಗಳು ನಿರ್ಮಾಣಗೊಂಡಿವೆ. ಅರ್ಚಕರ ಹಳ್ಳಿ ಬಳಿ ಎರಡು ನೂತನ ಬಡಾವಣೆಗಳು ತಲೆಯೆತ್ತಿವೆ. ಇದರಲ್ಲಿ ಬೆಂಗಳೂರು-ಮೈಸೂರು ರಸ್ತೆಗೆ ಅಂಟಿಕೊಂಡಿರುವ ಬಡಾವಣೆಯಲ್ಲಿ ಚದರ ಅಡಿಗೆ ರೂ.1,000ರಿಂದ 1,200 ಬೆಲೆ ಇದ್ದರೆ, ಅದರ ಪಕ್ಕದಲ್ಲಿಯೇ 26 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಿರುವ ಬಡಾವಣೆಯಲ್ಲಿ ಚದರ ಅಡಿಗೆ ರೂ.750ರಿಂದ 900 ಮೌಲ್ಯ ನಿಗದಿಯಾಗಿದೆ.ಈ ಬಡಾವಣೆಗಳಲ್ಲಿ ಈಗಾಗಲೇ ಹಲವಾರು ನಿವೇಶನಗಳು ಬಿಕರಿಯಾಗಿವೆ. ಬಹುತೇಕ ಬೆಂಗಳೂರಿಗರೇ ಇಲ್ಲಿನ ನಿವೇಶನಗಳನ್ನು ಖರೀದಿಸಿದ್ದಾರೆ. ಕೆಲವರು ಸ್ವಂತಕ್ಕೆ ನಿವೇಶನ ಅಗತ್ಯವಿಲ್ಲದಿದ್ದರೂ `ಕೈಯಲ್ಲಿ ಹಣವಿದ್ದಾಗ ಭೂಮಿ ಮೇಲೆ ಹೂಡಿದರೆ ಮುಂದೆ ಬೆಲೆ ಹೆಚ್ಚಿದಾಗ ಮಾರಿ ಲಾಭ ಮಾಡಿಕೊಳ್ಳಬಹುದು' ಎಂದು ದೂರದ ಆಲೋಚನೆಯಿಂದಲೂ ನಿವೇಶನ ಖರೀದಿಸಿದ್ದಾರೆ.ಚಿಕ್ಕೇನಹಳ್ಳಿ ಬಳಿ ರಿಯಲ್ ಎಸ್ಟೇಟ್ ಕಂಪೆನಿಯೊಂದು 150 ಎಕರೆಯಲ್ಲಿ ವಿವಿಧ ಅಳತೆಯ 1000 ನಿವೇಶನಗಳನ್ನು ಸಿದ್ಧಪಡಿಸಿದೆ. ಇಲ್ಲಿ ಚದರ ಅಡಿಗೆ ರೂ.450ರಿಂದ 500 ಬೆಲೆ ನಿಗದಿಪಡಿಸಲಾಗಿದೆ. ಈಗಾಗಲೇ ಹಲವು ನಿವೇಶನಗಳು ಮಾರಾಟವಾಗಿವೆ. ರಾಮನಗರದಿಂದ ಕನಕಪುರ, ಮಾಗಡಿ ಮಾರ್ಗದಲ್ಲಿ ನಿರ್ಮಾಣವಾಗಿರುವ ಬಡಾವಣೆಯಲ್ಲಿ ಚದರ ಅಡಿಗೆ ರೂ.500ರಿಂದ 750ರಷ್ಟು ಮಾರುಕಟ್ಟೆ ಮೌಲ್ಯ ಇದೆ.ಅರ್ಚಕರ ಹಳ್ಳಿ ಬಳಿ ರಾಮನಗರ- ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರ ನಿರ್ಮಿಸಿರುವ `ಹೆಲ್ತ್ ಸಿಟಿ' ಬಡಾವಣೆಯಲ್ಲಿನ ಮೂಲೆ ನಿವೇಶನಗಳು ದೊಡ್ಡ ಬೆಲೆಗೆ ಹರಾಜಾಗಿವೆ. ಇಲ್ಲಿ 20x30 ಅಡಿ ನಿವೇಶನ ರೂ. 9 ಲಕ್ಷಕ್ಕೂ, 30x40 ಅಡಿ ನಿವೇಶನ ರೂ. 14 ಲಕ್ಷಕ್ಕೂ ಹಾಗೂ 40x60 ಅಡಿ ನಿವೇಶನ ರೂ. 24 ಲಕ್ಷಕ್ಕೂ ಮಾರಾಟವಾಗಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry