ಮಂಗಳವಾರ, ಮೇ 18, 2021
30 °C

ರಾಮನಗರ ಪೊಲೀಸರಿಗೆ ತಲೆನೋವಾದ ಬಿಬಿಎಂಪಿ ಪ್ರದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಜಿಲ್ಲಾ ಪೊಲೀಸರಿಗೆ ಬಿಬಿಎಂಪಿ ವ್ಯಾಪ್ತಿಯ ಪ್ರದೇಶಗಳು ತಲೆನೋವಾಗಿ ಪರಿಣಮಿಸಿದ್ದು, ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಲು ಕಾರಣವಾಗಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ತಿಳಿಸಿದರು.ಕಳೆದ ಮೂರು ತಿಂಗಳಲ್ಲಿ ದಾಖಲಾದ ವಿವಿಧ ಅಪರಾಧ ಪ್ರಕರಣಗಳ ಕುರಿತು ಗುರುವಾರ ಸುದ್ದಿಗೊಷ್ಠಿಯಲ್ಲಿ ವಿವರ ನೀಡಿದ ಅವರು, ರಾಮನಗರ ಜಿಲ್ಲೆ ಬೆಂಗಳೂರಿಗೆ ಹತ್ತಿರವಾಗಿರುವುದರಿಂದ, ಬೆಂಗಳೂರಿನಲ್ಲಿ ಕೊಲೆ ಮಾಡಿ ಇಲ್ಲಿ ತಂದು ಎಸೆದು ಹೋಗುತ್ತಿರುವ ಪ್ರಕರಣಗಳು ಹೆಚ್ಚಾಗಿವೆ ಎಂದು ಹೇಳಿದರು.ತಾವರೆಕೆರೆ, ಬಿಡದಿ ಮತ್ತು ತಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ `ಬಿಬಿಎಂಪಿ~ ಪ್ರದೇಶಗಳಿದ್ದು, ಇಲ್ಲಿ ಸರಗಳವು ಮತ್ತು ಮನೆಗಳ್ಳತನ ಪ್ರಕರಣ ಹೆಚ್ಚಾಗಿವೆ. ಹೀಗಾಗಿ ಬಿಬಿಎಂಪಿ ಪ್ರದೇಶಗಳನ್ನು ಬೆಂಗಳೂರು ಪೊಲೀಸ್ ವ್ಯಾಪ್ತಿಗೆ ಸೇರಿಸಲು ಮನವಿ ಮಾಡಲಾಗಿದೆ. ಆದರೂ ಈ ಬಗ್ಗೆ ಇನ್ನೂ ಗೆಜೆಟ್ ಪ್ರಕಟಣೆಯಾಗದೇ ಇರುವುದರಿಂದ ಈ ಪ್ರದೇಶಗಳು ರಾಮನಗರ ಪೊಲೀಸ್ ವ್ಯಾಪ್ತಿಯಲ್ಲೇ ಮುಂದುವರಿದಿವೆ. ಈ ಪ್ರದೇಶಗಳಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಿರುವುದರಿಂದ 8 ಕಡೆ ನಾಕಾಬಂದಿ ಹಾಕಲಾಗಿದೆ. `ಚೀತಾ~ ವಾಹನ ಗಸ್ತು ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದರು. ಅಪರಾಧ ಪ್ರಕರಣಗಳ ವಿವರ: 2012ರ ಜನವರಿಯಿಂದ ಮಾರ್ಚ್ ಅಂತ್ಯದವರೆಗೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 123 ಮಂದಿ ಕಾಣೆಯಾದ ಕುರಿತು ಪ್ರಕರಣ ದಾಖಲಾಗಿದ್ದು, ಅವುಗಳಲ್ಲಿ 58 ಪ್ರಕರಣಗಳು ಪತ್ತೆಯಾಗಿವೆ. ಇನ್ನೂ 65 ಪ್ರಕರಣಗಳು ಪತ್ತೆಯಾಗಬೇಕಿದೆ ಎಂದು ಅನುಪಮ್ ಅಗರ್‌ವಾಲ್ ಹೇಳಿದರು.264 ಪ್ರಕರಣಗಳಲ್ಲಿ ಕೊಲೆ, ದರೋಡೆ ಸೇರಿದಂತೆ ವಿವಿಧ 40 ಪ್ರಕರಣಗಳನ್ನು ಭೇದಿಸಿ, 87 ಮಂದಿಯನ್ನು ಬಂಧಿಸಲಾಗಿದೆ. ಈ ಪ್ರಕರಣಗಳಲ್ಲಿ ಬಂಧಿತರಿಂದ 34.15 ಲಕ್ಷ ರೂಪಾಯಿ ನಗದು, ವಾಹನ ಮತ್ತು ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ರೂ 30.82 ಲಕ್ಷ ಮೌಲ್ಯದ ವಸ್ತುಗಳನ್ನು ವಾರಸುದಾರರಿಗೆ ವಾಪಾಸ್ ನೀಡಲಾಗಿದೆ ಎಂದು ಅವರು ತಿಳಿಸಿದರು.2010 ಮತ್ತು 11ನೇ ಸಾಲಿನಲ್ಲಿ ನಡೆದ 18 ಪ್ರಕರಣಗಳನ್ನು ಕೂಡಾ ಪತ್ತೆ ಹಚ್ಚಲಾಗಿದೆ. 9.42 ಲಕ್ಷ ಮೊತ್ತದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪತ್ತೆಹಚ್ಚಲಾದ ಪ್ರಕರಣಗಳಲ್ಲಿ 6 ಕೊಲೆ, 5 ಡಕಾಯಿತಿ, 8 ದರೋಡೆ, 1 ಸರಗಳವು, 6 ಮನೆಗಳವು ಮತ್ತು 14 ಸಣ್ಣಪುಟ್ಟ ಪ್ರಕರಣಗಳಾಗಿವೆ ಎಂದು ವಿವರಿಸಿದರು.ಸುದ್ದಿಗೋಷ್ಠಿಯಲ್ಲಿ ಚನ್ನಪಟ್ಟಣ ಎಎಸ್ಪಿ ಶಂತನು ಸಿನ್ಹಾ, ಡಿವೈಎಸ್‌ಪಿ ಎಂ.ಜಿ.ರಾಮಕೃಷ್ಣ ಉಪಸ್ಥಿತರಿದ್ದರು.

3 ತಿಂಗಳಲ್ಲಿ 59 ಮಂದಿ ನಾಪತ್ತೆ

ಕಳೆದ ಮೂರು ತಿಂಗಳಲ್ಲಿ ಒಟ್ಟು 59 ಮಂದಿ ನಾಪತ್ತೆಯಾಗಿದ್ದಾರೆ. ಇವರಲ್ಲಿ ಮೊದಲ ಸ್ಥಾನವನ್ನು ಗೃಹಿಣಿಯರೇ ಪಡೆದ್ದ್ದಿದಾರೆ ಎಂದು ಅನುಪಮ ಅಗರ್‌ವಾಲ್ ಇದೇ ಸಂದರ್ಭದಲ್ಲಿ ತಿಳಿಸಿದರು.ಒಟ್ಟು 21 ತರುಣಿಯರು ಕಾಣೆಯಾಗ್ದ್ದಿದಾರೆ. ಜತೆಗೆ 24 ಹುಡುಗರೂ ಕಾಣೆಯಾಗಿದ್ದಾರೆ ಎಂದು ವಿವರ ನೀಡಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.