ಬುಧವಾರ, ಅಕ್ಟೋಬರ್ 23, 2019
27 °C

ರಾಮನಗರ: ಸಂಕ್ರಾಂತಿ ಆಚರಣೆಗೆ ಸಂಭ್ರಮದ ಸಿದ್ಧತೆ

Published:
Updated:

ರಾಮನಗರ : ವರ್ಷದ ಪ್ರಥಮ ಹಬ್ಬವಾದ ಸಂಕ್ರಾಂತಿಯನ್ನು ಸಡಗರ ಮತ್ತು ಸಂಭ್ರಮದಿಂದ ಆಚರಿಸಲು ಜಿಲ್ಲೆಯ ಜನತೆ ಶನಿವಾರ ಸಿದ್ಧತೆಯಲ್ಲಿ ತೊಡಗಿದ್ದರು. ದಿನ ಬಳಕೆ ವಸ್ತುಗಳು, ಹಣ್ಣು, ಹೂವು, ತರಕಾರಿ, ದಿನಸಿ ಸಾಮಗ್ರಿಗಳ ಬೆಲೆ ಏರಿಕೆಯ ನಡುವೆಯೂ ಜನತೆ ಉತ್ಸಾಹದಿಂದಲೇ ಹಬ್ಬಕ್ಕೆ ಪದಾರ್ಥಗಳನ್ನು ಖರೀದಿಸುತ್ತಿದ್ದ ದೃಶ್ಯ ಕಂಡು ಬಂದಿತು.ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ ಪಟ್ಟಣಗಳಲ್ಲಿನ ಮಾರುಕಟ್ಟೆಗಳಲ್ಲಿ ಬೆಳಿಗ್ಗೆಯಿಂದಲೇ ಜನದಟ್ಟಣೆ ಹೆಚ್ಚಾಗಿತ್ತು. ಹಬ್ಬದ ಸಂದರ್ಭ ಎಂದು ಹೂವು, ಹಣ್ಣು, ತರಕಾರಿ ಮಾರುವವರು ಬೆಲೆಯನ್ನು ಹೆಚ್ಚಿಸುವ ಮೂಲಕ ತಮ್ಮ ಆದಾಯವನ್ನು ಹೆಚ್ಚಳ ಮಾಡಿಕೊಂಡರೆ, ಗ್ರಾಹಕರು ಬೆಲೆ ಹೆಚ್ಚಳವನ್ನು ಲೆಕ್ಕಿಸದೆ ಹಬ್ಬಕ್ಕೆ ಅಗತ್ಯ ವಸ್ತುಗಳನ್ನು ಖರೀದಿಸುವಲ್ಲಿ ತೊಡಗಿದ್ದರು. ಗ್ರಾಮೀಣ ಭಾಗಗಳ ರೈತರು ತಮ್ಮ ಜಾನುವಾರುಗಳನ್ನು ಸಿಂಗರಿಸಲು ಬೇಕಾಗುವ ಸಾಮಾಗ್ರಿಗಳನ್ನು ಕೊಳ್ಳಲು ನಗರ- ಪಟ್ಟಣಗಳಿಗೆ ಬಂದು ಹೋಗುತ್ತಿದ್ದರು.ಕೆಲವು ದಿನಗಳ ಹಿಂದೆ ಕೆಜಿಗೆ ರೂ 15 ಇದ್ದ ಅವರೆಕಾಯಿ ಹಬ್ಬದಿಂದ ಕೆ.ಜಿ.30ರೂಪಾಯಿಗೆ ಏರಿಕೆಯಾಗಿತ್ತು. ಕಡಲೆಕಾಯಿ ಸೇರಿಗೆ ರೂ 30 ಆಗಿದ್ದರೆ, ಜತೆ ಕಬ್ಬಿನ ಜಲ್ಲೆ 30ರಿಂದ 40 ರೂಪಾಯಿ ಆಗಿತ್ತು. `ರೆಡಿಮೆಡ್~ ಎಳ್ಳು ಬೆಲ್ಲದ ಒಂದು ಕೆಜಿ ಪ್ಯಾಕೆಟ್ 80ರಿಂದ100 ರೂಪಾಯಿ ಮಾರಾಟವಾಗುತ್ತಿತ್ತು. ರೈತರು ತಮ್ಮ ಜಾನುವಾರುಗಳನ್ನು ಸಿಂಗರಿಸಲು ಉಪಯೋಗಿಸುವ ಕರಿಹುರಿ, ಗೆಜ್ಜೆ, ಹಾರ, ಕುಚ್ಚು, ಗೆಡ್ಡೆನೀಲಿ, ಬಣ್ಣದ ಪೇಪರ್, ಮೂಗುದಾರ ಮತ್ತಿತರ ವಸ್ತುಗಳ ಬೆಲೆಗಳು ಕಳೆದ ಬಾರಿಗಿಂತ ಹೆಚ್ಚಾಗಿದ್ದರೂ ರೈತರು ಖರೀದಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.ಸೂರ್ಯ ತನ್ನ ಪಥ ಬದಲಿಸುವ ಕಾಲವನ್ನು ಸಂಕ್ರಾಂತಿ ಹಬ್ಬವಾಗಿ ಆಚರಿಸಲಾಗುತ್ತಿದೆ. ಮೊದಲಿಗೆ ಇದು ರೈತರ ಹಬ್ಬವಾಗಿತ್ತು. ನಂತರದ ದಿನಗಳಲ್ಲಿ ನಗರ ಪಟ್ಟಣಗಳ ಜನತೆಯೂ ಅದ್ಧೂರಿಯಿಂದ ಹಬ್ಬ ಆಚರಿಸುತ್ತಿದ್ದಾರೆ. ರೈತರು ತಾವು ಬೆಳೆದ ದವಸ ಧಾನ್ಯಗಳನ್ನು ಮನೆ ತುಂಬಿಸಿಕೊಳ್ಳುವ ಸಮಯವೆ ಈ ಸಂಕ್ರಾಂತಿಯಾಗಿದೆ.ಸಂಕ್ರಾಂತಿಯಂದು ಗ್ರಾಮೀಣ ಭಾಗಗಳಲ್ಲಿ ರೈತರು ವರ್ಷವಿಡೀ ತಮ್ಮ ಜೊತೆ ದುಡಿದ ಜಾನವಾರುಗಳ ಮೈ ತೊಳೆದು, ಅವುಗಳನ್ನು ಸಿಂಗರಿಸಿ ಪೂಜೆ ಮಾಡುತ್ತಾರೆ. ನಂತರ ಸಂಜೆ ಎಲ್ಲ ರೈತರು ಒಂದೆಡೆ ಸೇರಿ ಕಿಚ್ಚು ಹಾಯಿಸುತ್ತಾರೆ. ದವಸ ಧಾನ್ಯಗಳನ್ನು ಒಕ್ಕಲು ಮಾಡುವ ಸಂದರ್ಭದಲ್ಲಿ ಅದರ ಜೊತೆಗಿರುವ ಕಸ ಕಡ್ಡಿಗಳನ್ನು ಬೇರ್ಪಡಿಸಿ ಅವಕ್ಕೆ ಬೆಂಕಿ ಹಚ್ಚಿ, ಆ ಕಿಚ್ಚಿನಲ್ಲಿ ಜಾನುವಾರುಗಳನ್ನು ಹಾಯಿಸುವುದು ಸಂಪ್ರದಾಯವಾಗಿ ಬೆಳೆದು ಬಂದಿದೆ. `ವಸ್ತಗಳ ಬೆಲೆ ಎಷ್ಟೇ ಹೆಚ್ಚಾಗಿದ್ದರೂ ಅವುಗಳನ್ನು ಕೊಂಡು ಹಬ್ಬಗಳನ್ನು ಮಾಡಲೆಬೇಕು. ನಮ್ಮ ಪೂರ್ವಿಕರು ಆಚರಿಸುತ್ತಿದ್ದ ಹಬ್ಬಗಳನ್ನು ನಾವು ಮಂದುವರೆಸಿಕೊಂಡು ಹೋಗುವ ಮೂಲಕ ಮುಂದಿನ ಪೀಳಿಗೆಯವರಿಗೆ ಅದರ ಮಹತ್ವವನ್ನು ಸಾರಬೇಕು~ ಎಂದು ಗ್ರಾಹಕ ಜಿ.ಮುನಿಸ್ವಾಮಿರಾವ್‌ಬಾಂಭೋರೆ ಪ್ರತಿಕ್ರಿಯಿಸುತ್ತಾರೆ.`ಸಾಮಾನ್ಯ ದಿನಗಳಲ್ಲಿ ಕಡಿಮೆ ಬೆಲೆಗೆ ದೊರೆಯುವ ವಸ್ತುಗಳು ಹಬ್ಬಗಳಲ್ಲಿ ಜಾಸ್ತಿಯಾಗುತ್ತವೆ. ಹಾಗಂತ ಹಬ್ಬ ಮಾಡದೆ ಇರಲು ಸಾಧ್ಯವಿಲ್ಲ. ಕಾಲ ಬದಲಾವಣೆಯಾಗುವಂತೆ ಬೆಲೆಗಳು ಬದಲಾವಣೆಯಾಗುತ್ತವೆ~ ಎಂದು  ಗ್ರಾಹಕಿ ಸುಮಿತ್ರ ಹೇಳುತ್ತಾರೆ.ಕಳೆಕಟ್ಟಿದ ಸಂಕ್ರಾಂತಿ...

ಕನಕಪುರ: ತಾಲ್ಲೂಕಿನಲ್ಲಿ ಸಂಕ್ರಾತಿ ಹಬ್ಬ ಕಳೆಕಟ್ಟಿದೆ. ರೈತರು ಹಬ್ಬದ ಮುನ್ನಾ ದಿನವಾದ ಶನಿವಾರ ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದರು. ರಾಸುಗಳ ಅಲಂಕಾರಕ್ಕೆ ಅಗತ್ಯವಾದ ಬಣ್ಣ ಬಣ್ಣದ ಗುಲ್ಲಾಂಪಟ್ಟೆ, ಕೊರಳಿಗೆ ಗಂಟೆ, ಗೊಂಬಿಗೆ ಬಣ್ಣ ಮುಂತಾದ ವಸ್ತುಗಳ ಖರೀದಿ ಜೋರಾಗಿದೆ. ಮಹಿಳೆಯರು ವರ್ಷದ ಮೊದಲನೆ ಹಬ್ಬವಾದ ಸಂಕ್ರಾಂತಿಯಲ್ಲಿ ಎಳ್ಳು-ಬೆಲ್ಲ ಬೀರಲು ತಯಾರಿ ನಡೆಸಿ ಅದಕ್ಕೆ ಬೇಕಾದ ತಿನಿಸುಗಳನ್ನು ಖರೀದಿಸುತ್ತಿದ್ದರು.  ಕಬ್ಬು, ಗೆಣಸು, ಅವರೆಕಾಯಿಯನ್ನು ಬೆಳೆದ ರೈತರು ಮಾರುಕಟ್ಟೆಗೆ ತಂದು ಮಾರಾಟ ಮಾಡುತ್ತಿದ್ದುದು ಎಲ್ಲೆಡೆ ಸಾಮಾನ್ಯವಾಗಿದೆ.ಬೆಲೆ ಏರಿಕೆಯ ನಡುವೆ...

ಮಾಗಡಿ: ಬೆಲೆ ಏರಿಕೆಯ ನಡುವೆಯೂ ತಾಲ್ಲೂಕಿನ ಜನರು ಮಕರ ಸಂಕ್ರಾಂತಿ ಅಚರಿಸಲು ಸಿದ್ದವಾಗಿದ್ದಾರೆ. ಎಳ್ಳು ಬೆಲ್ಲ, ಕಬ್ಬು,ಕಡಲೆಕಾಯಿ, ಗೆಣಸು ಖರೀದಿ ಪಟ್ಟಣದ ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿದೆ. ರಸ್ತೆಯೇ ಮಾರುಕಟ್ಟೆಯಾಗಿದ್ದು ವ್ಯಾಪಾರ ಭರಾಟೆ ಜೋರಾಗಿದೆ. ಈ ಬಾರಿ ಅವರೆ ಕಾಯಿ ಇಳುವರಿ ಕಡಿಮೆ ಇದ್ದ ಕಾರಣ ಮಾಗಡಿಯ ಅವರೆ ಕಾಯಿ ಕೆ.ಜಿ ಯೊಂದಕ್ಕೆ ರೂ.75ರಂತೆ ಮಾರಾಟವಾಗುತ್ತಿದೆ.ಲೇಖಕ ಚಂದ್ರ ಮಾಗಡಿ, ಪ್ರೊ.ಎಂ.ಶಿವಲಿಂಗಯ್ಯ ಮತ್ತಿತರರು ತಾಲ್ಲೂಕಿನ ಜನರಿಗೆ ಸಂಕ್ರಾಂತಿ ಶುಭಾಶಯ ಕೋರಿದ್ದಾರೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)