ಭಾನುವಾರ, ಮೇ 16, 2021
28 °C

ರಾಮನವಮಿ ಗಾಯನ ಲಹರಿ

ಡಾ. ಎಂ. ಸೂರ್ಯ ಪ್ರಸಾದ್ Updated:

ಅಕ್ಷರ ಗಾತ್ರ : | |

ಶೇಷಾದ್ರಿಪುರಂ ರಾಮಸೇವಾ ಸಮಿತಿಯ 64ನೆ ರಾಮನವಮಿ ಸಂಗೀತೋತ್ಸವದಲ್ಲಿ ಗುರುವಾರ ಡಾ.ಸುಕನ್ಯಾ ಪ್ರಭಾಕರ್ ಗಾಯನ ಪ್ರಸ್ತುತ ಪಡಿಸಿದರು.

ಕರ್ನಾಟಕ ಸಂಗೀತದ ಅನುಪಮ ಸೌಂದರ್ಯದ ವೈಭವದ ದಿಗ್ದರ್ಶನವನ್ನು ಕೇಳುಗರಿಗೆ ಮಾಡಿದರು. ಅವರ ನುಡಿ-ಹಿಡಿಗಳ ನಿಶ್ಚಯ ಮತ್ತು ಸಮಂಜಸತೆ ಶ್ಲಾಘನೀಯ. ಸಂಗೀತ ವಿಷಯ, ರೀತಿ, ಭಾವ, ಭಣತಿಗಳು ಸಮಧಾತುವಾಗಿ ಸೇರಿದ್ದ ಅವರ ಕಛೇರಿ ಸುಮಧುರವೂ ಆಗಿತ್ತು. ತಾವು ಹಾಡಿದ ಕೃತಿಗಳ ಬಗೆಗೆ ಅವರ ಪರಿಚಯಾತ್ಮಕ ಮಾತುಗಳು ಗ್ರಹಿಕೆ ಮತ್ತು ಅನುಭವವನ್ನು ಸುಗಮಗೊಳಿಸಿದವು.

ಪಳಗಿದ ಪಕ್ಕವಾದ್ಯಗಾರರಾದ ಬಿ.ರಘುರಾಂ (ಪಿಟೀಲು),  ಸಿ.ಚೆಲುವರಾಜು (ಮೃದಂಗ) ಮತ್ತು ಬಿ.ಎನ್. ಚಂದ್ರಮೌಳಿ (ಖಂಜರಿ) ಅವರ ಮೇಳಗಳಿಂದ ಕಛೇರಿಯ ಕಾಂತಿ ಪ್ರಭಾವಗಳ ಅತಿಶಯತೆಯೂ ರಂಜನಾಶಕ್ತಿಯೂ ಹೆಚ್ಚಿತು. ಸುಕನ್ಯಾ ಅವರು ಸವಿಶೇಷ ಆಯ್ಕೆಗಳಿಂದ ತಮ್ಮ ಅಸಾಧಾರಣ ಪರಿಣತಿಯನ್ನು ತೋರಿದರು. ಮೈಸೂರು ಸದಾಶಿವರಾಯರ ಗಂಭೀರನಾಟ (ವನಜಾಕ್ಷ)ದ ಆರಂಭದಿಂದಲೇ ಗಮನ ಸೆಳೆದರು. ಪ್ರಬುದ್ಧ ವಾಗ್ಗೇಯಕಾರರಾಗಿದ್ದ ವೀಣಾ ಪದ್ಮನಾಭಯ್ಯ ಅವರ ಅದ್ವಿತೀಯ ಏಕಾಂಡ ಕೃತಿಯೊಂದನ್ನು ಹಾಡಿದುದು ಪುಳಕಗೊಳಿಸಿತು. ಮಾಮೂಲಿನಂತೆ ಪಲ್ಲವಿ, ಅನುಪಲ್ಲವಿ, ಚರಣ, ಆ ಕ್ರಮದಲ್ಲಿರದೆ ಅವರ ಮಲಯ ಮಾರುತ ರಾಗದ ದೀನ ದಯಾಕರ  ರಚನೆಯು ಪಲ್ಲವಿ, ಅನು ಪಲ್ಲವಿ, ಮತ್ತೆ ಪಲ್ಲವಿ, ಅನುಪಲ್ಲವಿಯ ಕ್ರಮದಲ್ಲಿ ಹಾಡಲಾಯಿತು.

ಆ ಕೀರ್ತನೆಯ  `ಸರಸಿಜ ಪದ ಸಾನ್ನಿಧ್ಯಂ ದೇಹಿಮೆ~ ಮತ್ತು `ನೀಪಾದಮೇ ನಮ್ಮಿತಿ ಸರಗುಣ~  ಪಂಕ್ತಿಗಳನ್ನು ವೈವಿಧ್ಯಮಯವಾಗಿ ಅಲಂಕರಿಸಲಾಯಿತು. `ನೀಪಾದಮೇ~ ಗೆ ಸ್ವರಪ್ರಸ್ತಾರವನ್ನು ಲಗತ್ತಿಸಿ ಅವರ್ಣನೀಯ ಖುಷಿಯನ್ನುಂಟು ಮಾಡಿದರು. ಅವರು ಹಾಡಿದ ಸ್ವರಾಕ್ಷರಗಳಂತೂ ಔಚಿತ್ಯಪೂರ್ಣವೂ ಅರ್ಥಪೂರ್ಣವೂ ಆಗಿ ರೂಪುಗೊಂಡವು. ರಾಗದ ಸ್ವರಗಳೂ ಸಾಹಿತ್ಯದ ಪದಗಳೂ ಒಂದೇ ಆಗಿ ಅಪೂರ್ವವಾಗಿದ್ದವು.

ಶ್ರೀರಂಗ ಪಂಚರತ್ನ ಸ್ತೋತ್ರದ ಮುನ್ನುಡಿಯೊಂದಿಗೆ  ಶ್ರಿರಂಗನಾಥ ಪಾಹಿಮಾಂ (ಕಲ್ಯಾಣ ವಸಂತ) ಕೀರ್ತನೆಯನ್ನು ತಮ್ಮ ಕಲಾ ಹಿರಿಮೆಯೊಂದಿಗೆ ಸಾದರಪಡಿಸಿದರು. ಸಕಲ ಲಕ್ಷಣಾಂಶಗಳಿಂದ ತುಂಬಿ ಬಂದ ಮಾಮವ ಪಟ್ಟಾಭಿ (ಮಣಿರಂಗು) ಮತ್ತು ಮಹಿಳಾ ಹರಿದಾಸರುಗಳಲ್ಲಿ ಉಲ್ಲೇಖನೀಯರಾದ ಕೋಲಾರ ಪದ್ಮಾಬಾಯಿ ಅವರ  `ವೀಣೆಪಿಡುದುದೆ~ (ಹಮೀರ್‌ಕಲ್ಯಾಣಿ) ರಚನೆಗಳ ಗಾಯನ ಡಾ. ಸುಕನ್ಯಾಅವರ ವಿಲಕ್ಷಣ ವಿದ್ವತ್ತು ಮತ್ತು ನೈಪುಣ್ಯವನ್ನು ಪ್ರಕಟಗೊಳಿಸಿತು.

ಅಪ್ರತಿಮ ಗಾಯಕ

ಸುಮಾರು 25ಕ್ಕೂ ಹೆಚ್ಚಿನ ದಿನಗಳವರೆಗೆ ವೈವಿಧ್ಯಮಯ ರಾಮನವಮಿ ಸಂಗೀತ ಕಛೇರಿಗಳನ್ನು ಏರ್ಪಡಿಸಿರುವ ಕೇಂದ್ರದ ರೂವಾರಿ ಶಾರದಾ ಪ್ರಸಾದ್ ಮತ್ತು ಬೋಧಕ- ಕಲಾವಿದ ಲಕ್ಷ್ಮೀಕೇಶವ್ ಅವರು ನಿಜಕ್ಕೂ ಅಭಿನಂದನೀಯರು. ಅತಿ ಕಿರಿಯ, ಕಿರಿಯ, ಹಿರಿಯ, ನುರಿತ, ಜ್ಯೇಷ್ಠ, ಸ್ಥಳೀಯ ಮತ್ತು ಪರಸ್ಥಳಗಳ ಹೀಗೆ ಅನೇಕ ಹಂತದ ಕಲಾವಿದರು, ಕರ್ನಾಟಕ ಮತ್ತು ಹಿಂದೂಸ್ತಾನಿ ಗಾಯನ ಮತ್ತು ವಾದನ ಕಛೇರಿಗಳು ರಸಿಕರು ಮುಫತ್ತಾಗಿ ಆಸ್ವಾದಿಸುವಂತಹ ಯಶಸ್ವೀ ಏರ್ಪಾಟುಗಳನ್ನು ಅವರು ಮಾಡಿರುವುದು ಗಮನಾರ್ಹ.

ಬಾಲ ಪ್ರತಿಭೆಯಾಗಿ ಪ್ರತ್ಯಕ್ಷವಾದ ಹಿಂದೂಸ್ತಾನಿ ಗಾಯಕ ಧನಂಜಯ ಹೆಗಡೆ ಅವರು ಜೀನಿಯಸ್‌ಆಗಿ ಬೆಳೆಯುತ್ತಿರುವುದು ಪ್ರಶಂಸಾರ್ಹವಾದುದು. ತಮ್ಮ ತಾಯಿ ಗೀತಾ ಹೆಗಡೆ, ತಂದೆ ಜಿ.ಎಸ್.ಹೆಗಡೆ ಮತ್ತು ವರಿಷ್ಠ ಗಾಯಕ ಪಂ.ವಿನಾಯಕ ತೊರವಿ ಅವರ ಮಾರ್ಗದರ್ಶನದಲ್ಲಿ ವಿಕಸನಗೊಂಡಿರುವ ಅವರ ವಿದ್ವತ್‌ಪ್ರತಿಭೆಗಳು ಅನ್ಯಾದೃಶವಾಗಿವೆ. ಬಸವೇಶ್ವರ ನಗರದ ಶ್ರೀವಾಣಿ ವಿದ್ಯಾ ಕೇಂದ್ರದ ಸಭಾಂಗಣದಲ್ಲಿ ಮಂಗಳವಾರ ಅವರು ಹಾಡಿದಾಗ ಸರಳ ಮತ್ತು ಸರಸವಾದ ಕಲಾಲೋಕ ತೆರೆದುಕೊಂಡಿತು. ಸಾವಧಾನವಾಗಿ ಬೆಹಾಗ್ ರಾಗವನ್ನು ಹಾಡಿ ಸಂಗೀತಪ್ರೇಮಿಗಳನ್ನು ತಣಿಸಿದರು. ಕೈಸೆ ಸುಖ ಮತ್ತು  ಫಿರ್ ಸೆ ಕಾಮನ ಬಂದಿಶ್‌ಗಳನ್ನು ಬೋಲ್‌ಬಾಂಟ್‌ಗಳು, ಬೋಲ್‌ಬನಾವ್‌ಗಳು, ಬೋಲ್‌ತಾನ್‌ಗಳು, ತಾನ್‌ಗಳು ಮತ್ತು ಸರಿಗಮ್‌ಗಳೊಂದಿಗೆ ರಾಗಭಾವವನ್ನು ಹರಡಿದರು. ರಾಗ್ ಜೋಗ್(ಸಾಜನ್‌ಮೇರೆ, ತರಾನಾ), ತುಳಸೀದಾಸ್‌ಭಜನ್ (ರಘುವರ ತುಮಕೊ, ಮಿಶ್ರ ಪಹಾಡಿ) ಮತ್ತು ಪುರಂದರದಾಸರ ನೀನ್ಯಾಕೋ (ಜೋನ್‌ಪುರಿ) ಗಾಯಕರ ಅಪ್ರತಿಮ ಕೌಶಲ್ಯವನ್ನು ಪ್ರತಿಬಿಂಬಿಸಿತು. ವ್ಯಾಸಮೂರ್ತಿಕಟ್ಟಿ (ಹಾರ್ಮೋನಿಯಂ) ಮತ್ತು ಗೋಪಾಲಕೃಷ್ಣ ಹೆಗಡೆ (ತಬಲಾ) ಉತ್ತಮ ಸಾಥ್ ನೀಡಿದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.