ಭಾನುವಾರ, ಏಪ್ರಿಲ್ 18, 2021
33 °C

ರಾಮನ್ ಪರಿಣಾಮ ಮತ್ತು ರಾಮನ್

ಚಿತ್ರ Updated:

ಅಕ್ಷರ ಗಾತ್ರ : | |ಪ್ರತಿ ವರ್ಷ ಫೆಬ್ರುವರಿ 28 ರಂದು, ದೇಶದಾದ್ಯಂತ, ಅದರಲ್ಲಿ ವಿಶೇಷವಾಗಿ ಕರ್ನಾಟಕದಲ್ಲಿ ‘ರಾಷ್ಟ್ರೀಯ ವಿಜ್ಞಾನ ದಿನಾಚರಣೆ’  ಆಚರಿಸಲಾಗುತ್ತ ಬರಲಾಗಿದೆ.  ಈ ರಾಷ್ಟ್ರೀಯ ದಿನಾಚರಣೆ ಯನ್ನು ಯಾವ ಕಾರಣಕ್ಕೆ ಆಚರಿಸಲಾಗುತ್ತಿದೆ ಮತ್ತು ಅದರ ಮಹತ್ವ ಏನೆಂಬುದನ್ನು  ಸಂಕ್ಷಿಪ್ತದಲ್ಲಿ ವಿವರಿಸುವುದೇ ಈ ಲೇಖನದ ಉದ್ದೇಶ. 1928ರ ಫೆಬ್ರುವರಿ 28ರಂದು ಬೆಂಗಳೂರಿನ ಸೆಂಟ್ರಲ್ ಕಾಲೇಜು 20ನೇ ಶತಮಾನದ ಅತ್ಯಂತ ಪ್ರಮುಖ ವೈಜ್ಞಾನಿಕ ಸಂಶೋಧನೆಯ ಘೋಷಣೆಗೆ ಸಾಕ್ಷಿಯಾಯಿತು. ಅಂದು ಡಾ. ಸಿ.ವಿ.ರಾಮನ್ ತಮ್ಮ ಜೀವಮಾನದ ಸತತ ಸಂಶೋಧನೆಯ ಫಲವಾಗಿ ಬೆಳಕಿನ ವಿಕಿರಣಶೀಲತೆ  ಪ್ರಕಟಿಸಿದರು.ಈ ಸಾಧನೆಯನ್ನು ಸಂಕ್ಷಿಪ್ತವಾಗಿ ವಿವರಿಸಬೇಕೆಂದರೆ, ‘ಯಾವುದೇ ಪಾರದರ್ಶಕ ವಸ್ತು-ಅದು ಘನರೂಪದಲ್ಲಿರಲಿ, ದ್ರವ ಅಥವಾ ಅನಿಲ ರೂಪದಲ್ಲಿರಲಿ, ಆ ದ್ರವ್ಯದ ಮೂಲಕ ಪ್ರಖರವಾದ ಬೆಳಕಿನ ಕಿರಣವನ್ನು ಹಾಯಿಸಿದಾಗ, ಹಾಗೆ ಹಾದ ಬೆಳಕು, ಹಾಯುತ್ತಿರುವ ವಸ್ತುವಿನ ಒಳ ಅಣುರಚನೆಯನ್ನು ಅವಲಂಬಿಸಿ ಏಕೀಕರಣಗೊಂಡು ವರ್ಣಪಟಲದ ಮೇಲೆ ಕೆಲವು ಹೊಸರೇಖೆಗಳನ್ನು ಗುರುತಿಸುತ್ತದೆ. ಇವುಗಳ ಸಹಾಯದಿಂದ ಹಲವು ವಸ್ತುಗಳ ನಿಜ ಸ್ವರೂಪವನ್ನು ಸುಲಭವಾಗಿ ಗುರ್ತಿಸಬಹುದು. ಇದು ಮುಂದೆ ರಾಮನ್ ಪರಿಣಾಮ ಎಂದು ಜಗತ್ಪ್ರಸಿದ್ಧಿ  ಪಡೆದು ಹಲವಾರು ಆವಿಷ್ಕಾರಗಳಿಗೆ ಎಡೆಮಾಡಿತು. ನಂತರ, ರಾಮನ್‌ರು (ಮಾರ್ಚ್, 16, 1928) ದಕ್ಷಿಣ ಭಾರತದ ವೈಜ್ಞಾನಿಕ ಸಂಘದಲ್ಲಿ ಇದನ್ನು ಪ್ರಾಯೋಗಿಕವಾಗಿ ವಿಜ್ಞಾನಿಗಳ ಮುಂದೆ ಸಾಬೀತುಪಡಿಸಿದರು. ತಮ್ಮ ಈ ಸಂಶೋಧನೆಯನ್ನು ಜಗತ್ತಿನ ಹಲವು ವೈಜ್ಞಾನಿಕ ಪತ್ರಿಕೆಗಳಲ್ಲಿ  ಪ್ರಚುರಪಡಿಸಿದರು. ಈ ಸಂಶೋಧನೆಯನ್ನು ಜಗತ್ತಿನಾದ್ಯಂತ ವಿಜ್ಞಾನಿಗಳು ಸ್ವಾಗತಿಸಿದರು. ಅವರಲ್ಲಿ ಐನ್‌ಸ್ಟೀನ್ ಮತ್ತು ಸೊಮರ್‌ಫೆಲ್ಡ್ ಪ್ರಮುಖರು.ಹಲವಾರು ದಶಕಗಳ ಸತತ ಅಧ್ಯಯನ ಮತ್ತು ಪ್ರಯೋಗಗಳ ಫಲ ಈ ‘ರಾಮನ್ ಪರಿಣಾಮ’. ಈ ಸಂಶೋಧನೆ ಎಷ್ಟು ಪ್ರಮುಖವಾಗಿತ್ತು ಎಂದರೆ 1987ರ ಹೊತ್ತಿಗೆ, ಈ ಸಂಶೋಧನೆಎ  ಆಧರಿಸಿ ಸುಮಾರು 5000  ಪ್ರಬಂಧಗಳು ಪ್ರಕಟವಾದವು! ಇದು ಅಚ್ಚರಿಯನ್ನುಂಟು ಮಾಡುವಂಥ ಸಂಗತಿಯಾದರೂ ನಿಜ ಸಂಗತಿ.ಅದಕ್ಕೂ ಪೂರ್ವದಲ್ಲಿ ರಾಮನ್ ಅವರು ಹಲವಾರು ಮೂಲಭೂತ ಸಂಶೋಧನೆಗಳನ್ನು ಪ್ರಕಟಿಸಿದ್ದರು. ಈ ಸಂಶೋಧನೆಗಾಗಿ 1929 ರಲ್ಲಿಯೇ ತಮಗೆ ನೊಬೆಲ್ ಪಾರಿತೋಷಕ ಸಿಗುತ್ತದೆಂದು ರಾಮನ್‌ರು ನಿರೀಕ್ಷಿಸಿದ್ದರು, ಆದರೆ, 1930 ರಲ್ಲಿ ಪಾರಿತೋಷಕವು ಅವರನ್ನು ಹುಡುಕಿಕೊಂಡು ಭಾರತಕ್ಕೆ ಬಂದಿತು. ರಾಮನ್‌ರಿಗೆ ಎಷ್ಟು ಆತ್ಮವಿಶ್ವಾಸವಿತ್ತೆಂದರೆ ಈ ಪಾರಿತೋಷಕ ಘೋಷಣೆಯಾಗುವುದಕ್ಕಿಂತ ಎರಡು ತಿಂಗಳು ಮುಂಚೆಯೇ ತಮಗಾಗಿ ಮತ್ತು ಸಹಧರ್ಮಿಣಿ ಲೋಕಸುಂದರಿಗಾಗಿ ನೌಕೆಯಲ್ಲಿ ಎರಡು ಎರಡು ಟಿಕೆಟ್‌ಗಳನ್ನು ಕಾಯ್ದಿರಿಸಿದ್ದರು. ಇದು ಸಿ.ವಿ.ರಾಮನ್‌ರ ಆತ್ಮವಿಶ್ವಾಸ ಮತ್ತು ಪ್ರತಿಭೆಗೆ ಸಾಕ್ಷಿ.ಕಾವೇರಿ ತೀರದ ತಿರುಚನಾಪಳ್ಳಿ ಬಳಿಯ ಚಿಕ್ಕ ಗ್ರಾಮ ತಿರುವಾನೈಕ್ಕಾವಲ್‌ದಲ್ಲಿ ಜನಿಸಿ ಭಾರತಕ್ಕೆ ಎರಡನೆಯ ನೊಬೆಲ್ ಪಾರಿತೋಷಕವನ್ನು ತಂದುಕೊಟ್ಟ ಸಿ.ವಿ.ರಾಮನ್ ಜನ್ಮತಃ ಅಭಿಜಾತ ವಿಜ್ಞಾನಿ. ತಮ್ಮ ಸುತ್ತಲಿನ ನಿಸರ್ಗವನ್ನು ತೆರೆದ ಕಣ್ಣುಗಳಿಂದ, ವಿಶ್ಲೇಷನಾತ್ಮಕ ಬುದ್ಧಿಯಿಂದ ವಿಶ್ಲೇಷಿಸಿ ಪ್ರಕೃತಿಯ ರಹಸ್ಯಗಳನ್ನು ವೈಜ್ಞಾನಿಕವಾಗಿ ಬಯಲುಗೊಳಿಸಿದರು. ಇಂಥ ಪ್ರತಿಭಾವಂತ ವಿಜ್ಞಾನಿ ಜೀವನದುದ್ದಕ್ಕೂ ಬಗೆಬಗೆಯ ನೋವುಗಳನ್ನೂ ಕಷ್ಟ ನಷ್ಟಗಳನ್ನು ಅನುಭವಿಸಿದರೂ ಎದೆಗುಂದಲಿಲ್ಲ. ಬೆಂಗಳೂರಿನ ಟಾಟಾ ವೈಜ್ಞಾನಿಕ ಸಂಸ್ಥೆಯಿಂದ 1948ರಲ್ಲಿ ನಿವೃತ್ತಿಹೊಂದಿ, ಪೂರ್ವ ನಿಯೋಜಿತ ಯೋಜನೆಯಂತೆ ಬೆಂಗಳೂರಿನಲ್ಲಿ ತಮ್ಮದೇ ಆದ ರಾಮನ್ ಸಂಶೋಧನಾ ಸಂಸ್ಥೆಯನ್ನು 1949 ರಲ್ಲಿ ಆರಂಭಿಸಿದರು.ಕೊನೆಗಾಲದಲ್ಲಿ ಆರೋಗ್ಯ ಸರಿ ಇರಲಿಲ್ಲ. ಆದರೂ ಸಂಶೋಧನೆಗಳನ್ನು ಮುಂದುವರಿಸಿ ತಾವೇ ಕಟ್ಟಿ ಬೆಳೆಸಿದ ಸಂಸ್ಥೆಯಲ್ಲಿ 1970ರ ನವೆಂಬರ್ ತಿಂಗಳ 11 ರಂದು ಬೆಳಗಿನ ಜಾವದಲ್ಲಿ ನಿಧನರಾದರು. ಇಡೀ ಜಗತ್ತಿನ ವೈಜ್ಞಾನಿಕ ಲೋಕವೇ ಅಂದು ಶೋಕಿಸಿತು. ಅವರ ಪಾರ್ಥಿವ ಶರೀರವನ್ನು ರಾಮನ್ ಸಂಸ್ಥೆಯ ಕಟ್ಟಡದ ಮುಂದಿನ ಬಯಲಿನಲ್ಲಿಯೇ ದಹನಗೊಳಿಸಲಾಯಿತು. ಅಲ್ಲಿಯೇ ಅವರ ಪುತ್ರ ರಾಧಾಕೃಷ್ಣನ್ ಆಸ್ಟ್ರೇಲಿಯಾದ ‘ಡೋನ್ನಿಯಲ್ ಸ್ಮಿತಿ’  ಎಂಬ ಹೂಗಿಡದ ಸಸಿಯನ್ನು ನೆಟ್ಟರು. ಆ ಗಿಡ ಈಗ ಎತ್ತರವಾಗಿ ಬೆಳೆದು ಹಳದಿ ವರ್ಣದ ಹೂಗಳನ್ನು ಬಿಡುತ್ತಿದೆ. ಅದನ್ನು ನೋಡಿ ಫೋಟೋಗಳನ್ನು ತೆಗೆದಾಗಲೆಲ್ಲಾ ಭಾರತರತ್ನ ಸಿ.ವಿ.ರಾಮನ್‌ರ ಭಾಸ್ಕರ ವ್ಯಕ್ತಿತ್ವ ಕಂಗಳ ಮುಂದೆ ನಿಲ್ಲುತ್ತದೆ.

              

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.