ರಾಮಭಕ್ತನಿಗೆ ಶ್ರದ್ಧಾ ಭಕ್ತಿಯಿಂದ ಅಂತ್ಯಕ್ರಿಯೆ

7

ರಾಮಭಕ್ತನಿಗೆ ಶ್ರದ್ಧಾ ಭಕ್ತಿಯಿಂದ ಅಂತ್ಯಕ್ರಿಯೆ

Published:
Updated:
ರಾಮಭಕ್ತನಿಗೆ ಶ್ರದ್ಧಾ ಭಕ್ತಿಯಿಂದ ಅಂತ್ಯಕ್ರಿಯೆ

ಹೋತನಹಳ್ಳಿ (ಅಕ್ಕಿಆಲೂರ): ಆಕಸ್ಮಿಕವಾಗಿ ಅಸುನೀಗಿದ ಮಂಗವೊಂದನ್ನು ಅಕ್ಕಿಆಲೂರ ಬಳಿಯಿರುವ ಹೋತನಹಳ್ಳಿ ಗ್ರಾಮಸ್ಥರು ಧಾರ್ಮಿಕ ವಿಧಿವಿಧಾನಗಳೊಂದಿಗೆ ಶ್ರದ್ಧೆ ಮತ್ತು ಭಕ್ತಿ ಪೂರ್ವಕವಾಗಿ ಅಂತ್ಯ ಸಂಸ್ಕಾರ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ.ಆಧುನಿಕತೆಯ ಪ್ರಭಾವ ಹಾಗೂ ಬದಲಾಗುತ್ತಿರುವ ಜೀವನ ಶೈಲಿಯಿಂದಾಗಿ ಸಮುದಾಯದಲ್ಲಿ ಭಕ್ತಿ-ಭಾವ ಕಣ್ಮರೆಯಾಗುತ್ತಿದೆ ಎನ್ನುವ ಮಾತಿದೆ. ಆದರೆ ಗ್ರಾಮದಲ್ಲಿ ನಡೆದಿರುವ ಘಟನೆ ಈ ಮಾತನ್ನು ಸುಳ್ಳಾಗಿಸಿದೆ. ಶ್ರೀರಾಮನ ಪರಮಭಕ್ತ ಆಂಜನೇಯನ ಸ್ವರೂಪದಲ್ಲಿ ಮಂಗನನ್ನು ಕಾಣುವ ಪರಿಪಾಠ ಗ್ರಾಮೀಣರಲ್ಲಿ ಇಂದಿಗೂ ರೂಢಿಯಲ್ಲಿದೆ ಎನ್ನುವುದನ್ನು ಈ ಘಟನೆ ಸಾಕ್ಷೀಕರಿಸಿದೆ.ಕಳೆದ ಹಲವು ವರ್ಷಗಳಿಂದ ಈ ಗ್ರಾಮದಲ್ಲಿ ನೆಲೆಯೂರಿದ್ದ ಮಂಗ ಗ್ರಾಮಸ್ಥರೊಂದಿಗೆ ಸಲುಗೆ ಬೆಳೆಸಿಕೊಂಡಿತ್ತು. ಮಂಗವನ್ನು ತುಂಬಾ ಹಚ್ಚಿಕೊಂಡಿದ್ದ ಗ್ರಾಮಸ್ಥರಿಗೆ ಮಂಗ ಆಕಸ್ಮಿಕವಾಗಿ ಅಸುನೀಗಿದೆ ಎನ್ನುವ ಸುದ್ದಿಯನ್ನು ಸಹಿಸಿಕೊಳ್ಳಲಾಗಲಿಲ್ಲ. ಮನೆಯ ಸದಸ್ಯರೊಬ್ಬರು ಅಗಲಿದಾಗ ಉಂಟಾಗುವ ದುಃಖ ಗ್ರಾಮಸ್ಥರಲ್ಲಿ ಮನೆ ಮಾಡಿತ್ತು. ಗ್ರಾಮಸ್ಥರೊಂದಿಗೆ ಒಂದಾಗಿ ಬೆರೆತು ಪ್ರೀತಿ-ವಾತ್ಸಲ್ಯ ಸಂಪಾದಿಸಿದ್ದ ಮಂಗ ಮೃತಪಟ್ಟಾಗ ಇಡೀ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿತ್ತು.ಮನುಷ್ಯರಿಗೆ ಸಲ್ಲಿಸುವ ರೀತಿಯಲ್ಲಿಯೇ ಧಾರ್ಮಿಕ ವಿಧಾನಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲು ನಿಶ್ಚಯಿಸಿದ ಗ್ರಾಮಸ್ಥರು ಮಂಗನ ಮೃತದೇಹವನ್ನು ಅಲಂಕರಿಸಿದ ಚಕ್ಕಡಿಯಲ್ಲಿಟ್ಟು ಮೆರವಣಿಗೆ ನಡೆಸಿದರು. ಡೊಳ್ಳು, ಭಜನೆಯೊಂದಿಗೆ ಗ್ರಾಮದ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ಕೈಗೊಂಡು ಆ ಬಳಿಕ ಧಾರ್ಮಿಕ ಕಾರ್ಯಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.ಈ ಕುರಿತು `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಗ್ರಾಮದ ಸಿದ್ದಾರೂಢ ಮಠದ ಶಂಕರಾನಂದ ಶ್ರೀಗಳು, ಗಿಡ, ಪ್ರಾಣಿ, ಪಕ್ಷಿ, ನದಿ ಸೇರಿದಂತೆ ಒಟ್ಟಾರೆ ಪ್ರಕೃತಿಯನ್ನು ದೇವರ ಸ್ವರೂಪದಲ್ಲಿ ಕಾಣುವುದು ಭಾರತೀಯ ಸಂಸ್ಕೃತಿ. ಗ್ರಾಮಸ್ಥರೊಂದಿಗೆ ಸಲುಗೆ ಹೊಂದಿ ಪ್ರೀತಿ-ವಿಶ್ವಾಸ ಸಂಪಾದಿಸಿದ್ದ ಮಂಗನ ಅಂತ್ಯಸಂಸ್ಕಾರವನ್ನು ಧಾರ್ಮಿಕ ಸಂಪ್ರದಾಯದಂತೆ ನಡೆಸುವ ಮೂಲಕ ಗ್ರಾಮಸ್ಥರು ತಮ್ಮ ಪ್ರಾಣಿ ಪ್ರೀತಿಯನ್ನು ಸಾದರ ಪಡಿಸಿದ್ದಾರೆ ಎಂದರು.

 

ಮಲ್ಲಪ್ಪ ಗೊಂದಿ, ನಿಂಗಪ್ಪ ಬಾಗಲದವರ, ಮಂಜಪ್ಪ ಹಾದಿಮನಿ, ಮಲ್ಲನಗೌಡ ಹಂಚಿನಮನಿ, ಬಂಗಾರೆಪ್ಪ ಗೊಂದಿ, ಕಲ್ಲನಗೌಡ ಕಳ್ಳಿಮನಿ, ನಾಗಪ್ಪ ಮುಳಕೇರಿ, ಶಾಂತಪ್ಪ ಹಾದಿಮನಿ, ನಾಗಪ್ಪ ಬಾಳಗೊಂಡರ ಅಂತ್ಯಸಂಸ್ಕಾರ ಕಾರ್ಯದಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry