ಭಾನುವಾರ, ನವೆಂಬರ್ 17, 2019
20 °C

ರಾಮಯ್ಯನವರ ಸಗಣಿ-ಗಂಜಳದ ಪ್ರಯೋಗ!

Published:
Updated:
ರಾಮಯ್ಯನವರ ಸಗಣಿ-ಗಂಜಳದ ಪ್ರಯೋಗ!

ವಿಶ್ವರಂಗಭೂಮಿಯ ದಿನ ವಿಶ್ವದಲ್ಲೆಲ್ಲಾ ಆಗುವ ರಂಗಭೂಮಿಯ ವಿಧವಿಧದ ಆರಾಧನೆಗಳಂತೆ ಬೆಂಗಳೂರಿನಲ್ಲೂ ಆಯಿತು. ಅದರಲ್ಲೂ ರಂಗಶಂಕರದಲ್ಲಿ ಹೋದ ವರ್ಷದಂತೆಯೇ ಈ ವರ್ಷವೂ ಕಾರ್ಪೊರೇಟ್ ಥರದ ಐಡಿಯಾವೊಂದು (ಹತ್ತು ಜನ ನಾಟಕಕಾರರು, ಹತ್ತು ಜನ ನಿರ್ದೇಶಕರು, ಹತ್ತು ನಿಮಿಷದ ಹತ್ತು ನಾಟಕಗಳು, ನಲವತ್ತು ಜನ ನಟರು! ಮೂರು ಭಾಷೆಗಳು, ಒಂದೇ ವೇದಿಕೆ!) ದೊಡ್ಡ ಇವೆಂಟಾಗಿ ಸುದ್ದಿಯಾಯಿತು. ಅದರ ಮಾರನೆಯ ದಿನವೇ ಅದೇ ರಂಗಶಂಕರದಲ್ಲಿ ಕೋಲಾರದಿಂದ ಬಂದಿದ್ದ `ಆದಿಮ' ತಂಡದವರು ಆಡಿದ ನಾಟಕ `ಲೆಟ್ ಪಾಲಿ ಥ್ರೈವ್ ಯಾನೆ ಯಾರೇ ಕೂಗಾಡಲಿ' ಯಾರ ಗಮನವನ್ನೂ ಸೆಳೆಯಲಿಲ್ಲವಷ್ಟೇ ಅಲ್ಲ, ಸಭಾಂಗಣದ ಅರ್ಧದಷ್ಟು ಪ್ರೇಕ್ಷಕರೂ ಸೇರಿರಲಿಲ್ಲ. ಆದರೆ ನಿಜಾರ್ಥದಲ್ಲಿ ಈ ವರ್ಷದ ವಿಶ್ವರಂಗಭೂಮಿಗೆ ಕನ್ನಡದ ಸಂದರ್ಭದಲ್ಲಿ `ಲೆಟ್ ಪಾಲಿ ಥ್ರೈವ್', ಸಿದ್ಧಪರಂಪರೆಯನ್ನು ಸಾರಾಸಗಟಾಗಿ ಮುರಿದ ಆಧುನಿಕೋತ್ತರ ನಾಟಕ ಎಂದೇ ಹೇಳಬೇಕು.`ಲೆಟ್ ಪಾಲಿ ಥ್ರೈವ್ ಯಾನೆ ಯಾರೇ ಕೂಗಾಡಲಿ' ಎಂಬ ಇಂಗ್ಲಿಷ್, ಹಿಂದಿ, ಕನ್ನಡ ಮೂರೂ ಭಾಷೆಯ ಒಂದೊಂದು ನುಡಿಸಂಕರದ ಶೀರ್ಷಿಕೆಯ ಜೊತೆಗೆ A Crazy Postmodern Philosophical Discourse on Bullshit ಎಂಬ ಇಂಗ್ಲಿಷ್ ಅಡಿಬರಹವನ್ನು ಹೊತ್ತುಬಂದ ಪ್ರಯೋಗ ಶೀರ್ಷಿಕೆ, ಅಡಿಬರಹಗಳಷ್ಟೆ ವಿಕ್ಷಿಪ್ತವೂ, ಅನರ್ಥದ ವೇಷದಲ್ಲಿ ಅಪಾರಾರ್ಥವೂ, ಅಪಾರ ಅರ್ಥಗಳ ವೇಷದಲ್ಲಿ ಅನರ್ಥಗಳೂ, ಬುದ್ಧಿಗಬ್ಬದ ಜೊತೆಗೆ ಭಾವಗಬ್ಬವೂ, ಭಾವಗಬ್ಬದ ಒಳಗೆ ಬುದ್ಧಿಗಬ್ಬವೂ ಆಗಿ ಮೈದಾಳಿತು. ಪ್ರೇಕ್ಷಕರ ಜಡ್ಡುಗಟ್ಟಿದ ಕ್ರಿಯಾಶೀಲತೆ, ಪೂರ್ವಗ್ರಹ, ಅಸ್ತಿತ್ವ ರಾಜಕಾರಣ, ಸಂಸ್ಕೃತಿಯ ಮನವರಿಕೆಗಳನ್ನು ಕ್ಷಣಕ್ಷಣವು ಮುರಿಯುತ್ತ ಕಟ್ಟುವ, ಕಟ್ಟುತ್ತ ಮುರಿಯುವ ಪ್ರಕ್ರಿಯೆ ನಾಟಕದ ಮುಖ್ಯ ಉದ್ದೇಶವಾಗಿತ್ತು.`ದಿನಕ್ಕೊಂದು ರುಪಾಯಿ ಕೊಡಿ' ಎಂದು ಶುರುವಾಗಿ ಅದು ಯಾವಾಗ 35 ಸಾವಿರ ರೂಪಾಯಿಯಾಯಿತೋ ಅದರಲ್ಲಿ ಕೋಲಾರದ ತೇರಳ್ಳಿ ಬೆಟ್ಟದ ಬಂಡೆಗಳ ನಡುವೆ ಹುಟ್ಟಿದ ಸಂಸ್ಥೆಯೇ ಇಂದು `ಆದಿಮ' ಆಗಿ ಬೆಳೆದುನಿಂತಿದೆ. ತಿಂಗಳುತಿಂಗಳು ನಡೆಯುವ `ಹುಣ್ಣಿಮೆಹಾಡು' ಕಾರ‌್ಯಕ್ರಮ ಜನಪ್ರಿಯವಾಗಿದೆ. ವರ್ಷವರ್ಷವೂ 15 ಮಂದಿ ಪ್ರತಿಭಾವಂತರು `ಲಿವಿಂಗ್ ಸ್ಕೂಲ್' ಎಂಬ ವಿಶೇಷ ಪರಿಕಲ್ಪನೆಯಲ್ಲಿ ತರಬೇತುಗೊಂಡು, ರಾಜ್ಯದಾದ್ಯಂತ ರಂಗಸಂಗೀತ, ನಾಟಕ-ಪ್ರಯೋಗಗಳ ಮೂಲಕ ಯಾತ್ರೆ ಕೈಗೊಳ್ಳುತ್ತಾರೆ. ಹಾಗೆ ಹೊರಟ ಎರಡು ಪ್ರಯೋಗಗಳಲ್ಲಿ ಪ್ರಸ್ತುತ ಪ್ರಯೋಗವೂ ಒಂದು.ಇದನ್ನು ಬರೆದವರು `ಸೂರೊಂದು ಊರು ನೂರು' ಎಂಬ ನೆಲಸಂಸ್ಕೃತಿಯ ಕನಸನ್ನು ಕಂಡ ಅದರ ದ್ರಷ್ಟಾರ ಕೋಟಿಗಾನಹಳ್ಳಿ ರಾಮಯ್ಯನವರು. ಸಾಹಿತ್ಯ, ರಂಗಭೂಮಿ, ಸಿನಿಮಾ, ಪತ್ರಿಕೆ, ಸಂಘಟನೆ ಹೀಗೆ ಇವರ ಆಸಕ್ತಿಯ ಕಾರ್ಯಕ್ಷೇತ್ರಗಳು ಹಲವು. `ನಾಯಿ ತಿಪ್ಪ', `ಹಕ್ಕಿ ಹಾಡು', `ರತ್ನ ಪಕ್ಷಿ', `ಕಾಗೆ ಕಣ್ಣು ಇರುವೆ ಬಲ', `ಒಗಟಿನ ರಾಣಿ' ಇವು ಇವರ ಮಕ್ಕಳ ನಾಟಕಗಳು. `ಗಂಗಭಾರತ', `ಕಣ್ಣಾಸ್ಪತ್ರೆಯ ಕ್ಯೂನಲ್ಲಿ ಜಗದಂಬೆ' ಮತ್ತು `ಲೆಟ್ ಪಾಲಿ ಥ್ರೈವ್' ಇವರ ಇತರೆ ನಾಟಕಗಳು. ಮಕ್ಕಳ ನಾಟಕಗಳು ಎಂದ ಮಾತ್ರಕ್ಕೆ ಇವು ಮಕ್ಕಳ ನಾಟಕಗಳಂತೇನೂ ಇರುವುದಿಲ್ಲ; ಬದಲಿಗೆ ದೊಡ್ಡವರೂ ಹುಬ್ಬೇರಿಸುವಂಥ ಸಾಮಾಜಿಕ, ಸಾಂಸ್ಕೃತಿಕ ಸ್ಥಿತ್ಯಂತರಗಳನ್ನು ಎತ್ತಿತೋರುತ್ತವೆ.ರಾಮಯ್ಯನವರ ಎಲ್ಲ ನಾಟಕಗಳಂತೆಯೇ ಪ್ರಸ್ತುತ ನಾಟಕದ ಕಥಾವಸ್ತುವೂ ಸಮಾಜದ ಅತಿ ಕನಿಷ್ಠನನ್ನು, ಅಥವ ಬಡವನನ್ನು, ಪ್ರಭುತ್ವ, ವ್ಯವಸ್ಥೆ, ಧರ್ಮ ಹತ್ತಿಕ್ಕಿದವನನ್ನು ಕುರಿತಾದ್ದು. ಟೀವಿ ಚಾನಲೊಂದು `ಯಾರು ದೊಡ್ಡವರು' ಎಂಬ ತನ್ನ ರಿಯಾಲಿಟಿ ಕಾರ‌್ಯಕ್ರಮದ ಸಲುವಾಗಿ ಒಂದು ಹಳ್ಳಿಗೆ ಹೋಗುತ್ತದೆ. ಅಲ್ಲಿ ಒಬ್ಬ ಗೌಡನಿದ್ದಾನೆ, ಅವನಿಗೊಬ್ಬ ಸುಂದರ ಮಗಳಿದ್ದಾಳೆ, ಚೇಲಾಗಳಿದ್ದಾರೆ. ಹಾಗೆಯೇ ಅಲ್ಲೊಬ್ಬ ಬಡ ಅಜ್ಜಿಯಿದ್ದಾಳೆ, ಅವಳಿಗೊಬ್ಬ ಪೆದ್ದ ಮೊಮ್ಮಗನಿದ್ದಾನೆ. ಟೀವಿ ಚಾನಲ್ಲು ಎಲ್ಲ ಬಿಟ್ಟು ಆ ಅಜ್ಜಿಯನ್ನೇ ನಿರ್ಣಾಯಕಳನ್ನಾಗಿ ಮಾಡಿ, ಊರಲ್ಲಿ ಯಾರು ದೊಡ್ಡವರು ಎಂದು ಹೇಳಬೇಕಾಗಿ ಬಂದಾಗ ಅವಳು ಎಲ್ಲರನನ್ನೂ ಬಿಟ್ಟು ತನ್ನ ಕೋಣವನ್ನು ತೋರಿಸುತ್ತಾಳೆ. ಇಲ್ಲಿಂದ ಕೋಣ ಪ್ರಖ್ಯಾತವಾಗುತ್ತದೆ, ಕೋಣದ ಜೊತೆಗೆ ಅದನ್ನು ಮೇಯಿಸುವ ಮೊಮ್ಮಗ ತಿಪ್ಪನೂ ಪ್ರಸಿದ್ಧನಾಗುತ್ತಾನೆ.

ಅವನಿಗೆ ಮನಸೋತು ಪ್ರೀತಿಸತೊಡಗುತ್ತಾಳೆ ಗೌಡರ ಮಗಳು! ನಂತರ ಕೋಣ ಐಡೆಂಟಿಟಿ ಪಾಲಿಟಿಕ್ಸಿನ ಬಗ್ಗೆ ಮಾತನಾಡುತ್ತದೆ. ತಿಪ್ಪನ ಬದಲಿಗೆ ಕೋಣಕ್ಕೇ ಗೌಡರ ಮಗಳ ಮೇಲೆ ಕಣ್ಣುಬೀಳುತ್ತದೆ! ಹೀಗೆ ನಾಟಕ ಯಾರೂ ಊಹಿಸಲಾರದ ತಿರುವುಮುರುವುಗಳನ್ನು ತೆಗೆದುಕೊಳ್ಳುತ್ತ ಒಂದು ನಿಶ್ಚಿತ ಎಂಬ ಯಾವುದೇ ಸಿದ್ಧಸೂತ್ರಕ್ಕೆ ನಿಲುಕದಂತೆ ಐಡೆಂಟಿಟಿ ಪಾಲಿಟಿಕ್ಸೂ, ಕ್ಲಾಸ್ ಪಾಲಿಟಿಕ್ಸೂ, ಕಾಸ್ಟ್ ಪಾಲಿಟಿಕ್ಸೂ, ಸಾಹಿತ್ಯದ ಪಾಲಿಟಿಕ್ಸೂ, ಇಂಟಲೆಕ್ಚುವಲ್ ಪಾಲಿಟಿಕ್ಸೂ, ಮೀಡಿಯಾ ಪಾಲಿಟಿಕ್ಸೂ, ಲ್ಯಾಂಗ್ವೇಜ್ ಪಾಲಿಟಿಕ್ಸೂ, ಕಲ್ಚರ್ ಪಾಲಿಟಿಕ್ಸೂ ಹೀಗೆ ಎಲ್ಲ ಬಗೆಯ ಪಾಲಿಟಿಕ್ಸನ್ನು ಕುರಿತೂ ಮಾತನಾಡುತ್ತದೆ. ಕಡೆಗೆ ಇದೆಲ್ಲವೂ ಬುಲ್ಶಿಟ್ಟೆಂದೋ ಅಥವಾ ಬುಲ್ಶಿಟ್ಟು ಕೂಡ ನಿರ್ಲ್ಯಕ್ಷ್ಯಕ್ಕೆ ಒಳಗಾದ್ದು ಎಂದೋ, ಹೀಗೆ ಸಂಕೀರ್ಣವಾದ ವಿಚಾರಗಳ ಮಗ್ಗುಲುಗಳನ್ನು ತೋರುತ್ತ, ತೋರಿದ್ದನ್ನೇ ವಿಡಂಬಣೆ ಮಾಡುತ್ತ ಹೋಗುತ್ತದೆ.ನಾಟಕಕಾರರೇ ಹೇಳುವಂತೆ, `ಸಗಣಿ ಗಂಜಳಗಳಲ್ಲೂ ತಾರತಮ್ಯ ನೆಲೆಗೊಂಡಿರುವ ಭಾರತೀಯ ಮನೋಧರ್ಮದ ನಿಜ ಶೋಧನೆ ಈ ನಾಟಕ. ನಾನು ಇದಕ್ಕಾಗಿ ನಮ್ಮ ಮರಸುನಾಡು ಮಣ್ಣಿನ ಜನಪದ ಕಥೆಯೊಂದನ್ನು, ಸಂಪತ್ತಿಗೆ ಸವಾಲ್ ಎಂಬ ಜನಪ್ರಿಯ ಸಿನಿಮಾ, ಹಾಗೂ ಧುತ್ತರಗಿಯವರ ಜನಪ್ರಿಯ ವೃತ್ತಿ ನಾಟಕದ ಕಥಾಹಂದರವನ್ನು ಬಿಡುಬೀಸಾಗಿ ಬಳಸಿಕೊಂಡಿದ್ದೇನೆ. ಇದೆಲ್ಲವನ್ನು ನಮ್ಮ ಪೋಸ್ಟ್ ಮಾಡರ‌್ನಿಸ್ಟ್ ಸುಗ್ಗಿ ಕಣದಲ್ಲಿ ಹರವಿ ಗುಂಡುಹೊಡೆದು ಪಡಗುಹಾಕಿ ಜೊಳ್ಳುರಾಶಿಯನ್ನೂ ಘನ ವಿದ್ವತ್ತಿನ ಸುಗ್ಗಿರಾಶಿಯೆಂದು ನಂಬಿರುವ ಅವರ ದಿವಾಳಿತನವನ್ನೂ ತೂರಿ, ನಾಳೆಯ ಬಿತ್ತನೆಗೆ ಒಂದಿಷ್ಟು ಕಾಳು ಕೂಡಿಡುವುದಷ್ಟೇ ಈ ನಾಟಕದ ಎಂಬಿಷನ್!'.ನಾಟಕವೆಂದರೆ ಅದರಲ್ಲಿ ಘನವಾದ ವಸ್ತು-ಪಾತ್ರ-ಸಂಘರ್ಷಗಳಿರಬೇಕು ಎಂದು ತಿಳಿದಿರುವ ನಮ್ಮ ಪಾರಂಪರಿಕ ನಂಬುಗೆಯನ್ನೇ ಬುಡಮೇಲು ಮಾಡುವಂತೆ ಪ್ರಸ್ತುತ ನಾಟಕದ ಮುಖ್ಯಪಾತ್ರ ಒಂದು ಕೋಣ! ಅದರ ಸಂಘರ್ಷ ಐಡೆಂಟಿಟಿಯದ್ದು! ನಾಟಕದ ಪ್ರತಿ ಪಾತ್ರವೂ, ಪಾತ್ರ ಮತ್ತು ಸನ್ನಿವೇಶಕ್ಕೆ ತಕ್ಕಂತೆ ತನ್ನ ಆಲೋಚನೆಗಳನ್ನು ಮಾತಾಗಿಸುವುದಿಲ್ಲ, ಬದಲಿಗೆ ನಾಟಕಕಾರರೇ ಪ್ರತಿ ಪಾತ್ರಗಳ ಬುದ್ಧಿ-ನಾಲಿಗೆ ಮೇಲೆ ಕೂತು ಜಾಗ್ರತೆಯಿಂದ ಮಾತನಾಡಿಸುತ್ತಾರೆ. ಪ್ರತಿ ಮಾತೂ ವ್ಯಂಗ್ಯದ ಮೊನಚಿನಿಂದ ಪ್ರೇಕ್ಷಕನನ್ನು ನಗಿಸುತ್ತ ಇರಿಯುತ್ತದೆ. ನಾಟಕದಲ್ಲಿ ಒಂದು ಭಾಷೆಯೆಂಬುದಿಲ್ಲ, ಕನ್ನಡ, ಹಿಂದಿ, ಇಂಗ್ಲಿಷ್, ತೆಲುಗು ಹೀಗೆ ಯಾವ ಸಂದರ್ಭದಲ್ಲಿ ಯಾವ ಭಾಷೆಯನ್ನು ಬೇಕಾದರೂ ಆಡಬಹುದು.

ಇನ್ನೊಂದು ಮುಖ್ಯ ವಿಚಾರವೆಂದರೆ ಪ್ರಸ್ತುತ ಪ್ರಯೋಗ ಯಾವುದೋ ಒಬ್ಬ ನಿರ್ದೇಶಕರ `ನಿರ್ದೇಶನ' ಎಂಬ ಹಂಗಿನಿಂದ ಮುಕ್ತಗೊಂಡು ಇಡೀ ನಟಸಮೂಹವೇ ನಿರ್ದೇಶಿಸಿಕೊಂಡಿದೆ! (ನಿರ್ದೇಶಕನ ಜವಾಬ್ದಾರಿಯನ್ನು ನಾಟಕಕಾರರೇ ತಮ್ಮ ನಾಟಕದಲ್ಲೇ ಮಾಡಿಬಿಟ್ಟಿರುವಾಗ ನಿರ್ದೇಶಕರಿಗೆ ಇಲ್ಲಿ ಕೆಲಸವೇ ಇಲ್ಲ ಎನ್ನಬಹುದು; ಅಥವಾ ಯಾವ ನಿರ್ದೇಶಕ ಬಂದರೂ ಈ ನಾಟಕವನ್ನು ಮತ್ಯಾವ ರೀತಿಯಲ್ಲೂ ಮಾಡಿಸಲು ಬಾರದೇನೋ. ಅದು ನಾಟಕ ಕೃತಿಯ ಮಿತಿಯೂ ಹೌದು ಎಂದು ಒಪ್ಪಿಕೊಳ್ಳಬೇಕು). ರಾಜ್ಯದ ಬೇರೆಬೇರೆ ಮೂಲೆಯಿಂದ, ಬೇರೆಬೇರೆ ಸಂಸ್ಕಾರಗಳಿಂದ ಬಂದ ನಟರ ಸಮೂಹವೇ ಇರುವಾಗ, ಮತ್ತು ಇಡೀ ತಂಡವೇ ಸೇರಿ ನಿರ್ದೇಶಿಸಿಕೊಂಡಿರುವಾಗ ನಾಟಕ ಎಲ್ಲೂ ಕೂಡ ತುಂಬ ಪರ್ಫೆಕ್ಟಾಗುವ ಗೀಳಿನಿಂದ ಪಾರಾಗಿ ಒರಟು ಒರಟಾಗಿಯೇ ಉಳಿದಿದೆ; ಇಂಥ ಒರಟು ಮೊನೆಗಳೇ ಪ್ರಯೋಗವನ್ನು ಅಂದಗೊಳಿಸಿದೆ.ಇಲ್ಲಿಯವರೆಗೂ ಬರೇ ನಾಕುಕಾಲಿನ ಕುರ್ಚಿಯನ್ನೇ ನೋಡಿ ಗೊತ್ತಿರುವ, ಬಳಸಿ ಗೊತ್ತಿರುವ ನಮ್ಮ ಮುಂದೆ ಬಡಗಿಯೊಬ್ಬ ಏಕಾಏಕಿ ಏಳುಕಾಲಿನ ಕುರ್ಚಿಯೊಂದನ್ನು ತಂದು ನಿಲ್ಲಿಸಿದರೆ, ಒಮ್ಮೆಗೆ ಒಪ್ಪಿಕೊಳ್ಳಲು ಕೊಂಚ ಕಸಿವಿಸಿಯಾಗುತ್ತದೆ. ಏಳುಕಾಲಿನ ಕುರ್ಚಿಯನ್ನು ಮಾಡುವ `ಉಪಕರಣ', ಇಲ್ಲವೆ `ಪದ್ಧತಿ' ನಮ್ಮಲ್ಲಿ ಇರುವುದಿಲ್ಲ, ಮತ್ತೂ ಕೆಲವೊಮ್ಮೆ ಏಳುಕಾಲಿನ ಕುರ್ಚಿಯನ್ನು `ಬಳಸುವ ಮನೋಪಕರಣ'ವೂ ಇರುವುದಿಲ್ಲ. ಆದಮಾತ್ರಕ್ಕೆ ಕುರ್ಚಿಯನ್ನು ಮಾಡುವ ಬಗೆ ಹೀಗಲ್ಲ ಎಂದೋ ಅಥವಾ ಇದು ಕುರ್ಚಿಯೇ ಅಲ್ಲ ಎಂದು ಹೇಳಲು ಸಾಧ್ಯವೇ?ಹಾಗೆ ಪ್ರಸ್ತುತ ಪ್ರಯೋಗ ಹಲವು ತಕರಾರು, ಪ್ರಶ್ನೆಗಳು, ತೊಡಕುಗಳು, ಭಿನ್ನಾಭಿಪ್ರಾಯಗಳ ನಡುವೆಯೇ ಕನ್ನಡ ನಾಟಕ ಕ್ಷೇತ್ರಕ್ಕೆ ಹೊಸ ಬಗೆಯದ್ದು ಎನಿಸುತ್ತಿದೆ. ಮೆಚ್ಚುವುದು, ತೆಗಳುವುದು ಇದೆಲ್ಲದರ ಮುಕ್ತನೋಟದಲ್ಲೇ ಇದನ್ನು ಎಲ್ಲ ರಂಗಾಸಕ್ತರೂ ನೋಡಲೇಬೇಕಾದ ತುರ್ತು ಇದೆ. ಒಂದು ಫೋನು ಮಾಡಿದರೆ ಸಾಕು (99452 08735) ನಿಮ್ಮ ಊರಿಗೇ ಬಂದು ಪ್ರದರ್ಶನ ಮಾಡುತ್ತಾರೆ. ಹೊಸಬಗೆಯ ಪ್ರಯೋಗಗಳನ್ನು ಅನುಮಾನದಿಂದ ನೋಡುವುದು ಹೇಗೆ ಕಾಯಿಲೆಯೋ ಹಾಗೇ ಹಳೆಯ ಪಾರಂಪರಿಕ ಪ್ರಯೋಗಗಳನ್ನು ನಿರ್ಲ್ಯಕ್ಷ್ಯದಿಂದ ನೋಡುವುದೂ ಒಂದು ಕಾಯಿಲೆ. ಹೊಸತು ಹಳತು ಇದೆಲ್ಲದರ ನಡುವೆ ಪ್ರಯೋಗವೊಂದು ವ್ಯಕ್ತಿಗೆ ಮತ್ತು ಸಮಷ್ಟಿಗೆ ಹೇಗೆ ಹೊಸಕಾಣ್ಕೆಯನ್ನು ಕೊಡಬಲ್ಲುದೋ ಅದು ಮಾತ್ರ ಸತ್ಯ ಮತ್ತು ಮುಖ್ಯ.

ಪ್ರತಿಕ್ರಿಯಿಸಿ (+)