ಗುರುವಾರ , ಮೇ 26, 2022
28 °C

ರಾಮಾಯಣಕ್ಕೆ ಮಾನವೀಯತೆ ಪ್ರೇರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಇಂದಿಗೂ ಜನಮಾನಸದಲ್ಲಿ ಜೀವಂತವಾಗಿರುವ ರಾಮಾಯಣದ ಪಾತ್ರಗಳನ್ನು ಸೃಷ್ಟಿಸಲು ಆದಿಕವಿ ಮಹರ್ಷಿ ವಾಲ್ಮೀಕಿ ಅವರಿಗೆ ಮಾನವೀಯತೆಯೇ ಪ್ರೇರಣೆ ಎಂದು ಸಾಹಿತಿ ಆರ್.ಕೆ. ಹುಡಗಿ ಹೇಳಿದರು.ಗುಲ್ಬರ್ಗ ಜಿಲ್ಲಾಡಳಿತ ಮತ್ತು ಸಮಾಜಕಲ್ಯಾಣ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವದಲ್ಲಿ ಉಪನ್ಯಾಸ ನೀಡಿದರು. ಮಹರ್ಷಿ ವಾಲ್ಮೀಕಿ ಹೇಳಿದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳದೇ ಆಚರಿಸಿದರೆ ಅರ್ಥವಿಲ್ಲ. ನಾವು ಅವರಂತೆ ಪರಿಶ್ರಮಿಗಳಾಗಬೇಕು.ಗುರಿ ಮುಟ್ಟುವ ತನಕ ವಿರಮಿಸದ ಹಠಮಾರಿಗಳಾಗಬೇಕು. ಈ ನಿಟ್ಟಿನಲ್ಲಿ   ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದರು.ನಾವು ಹೋರಾಟಕ್ಕೆ ಯುವಜನರನ್ನು ಕರೆಯುತ್ತೇವೆ. ಆದರೆ ಅವರಿಗೆ ಓದಲು ಹೇಳುವುದಿಲ್ಲ. ಓದಲು ಎದುರಾಗುವ ಅವರ ಕಷ್ಟಗಳನ್ನು ಪರಿಹರಿಸಲು ಯತ್ನಿಸುವುದಿಲ್ಲ.ಕಲಿಕೆಯಲ್ಲಿ ಹಿಂದುಳಿಯಲು ಕಾರಣವಾಗುವ ಧಾರ್ಮಿಕ ಸೂಕ್ಷ್ಮತೆಗಳ ಬಗ್ಗೆ ಯೋಚಿಸುವುದಿಲ್ಲ ಎಂದ ಹುಡಗಿ, ಹೋರಾಟಗಾರರು ಶಿಕ್ಷಣಕ್ಕೆ ಆದ್ಯತೆ ನೀಡಿದಾಗ ಮಾತ್ರ ಬೆಳವಣಿಗೆ ಸಾಧ್ಯ. ಈ ಮೌನಪ್ರತಿಜ್ಞೆಯನ್ನು ಪ್ರತಿಯೊಬ್ಬರು ಕೈಗೊಳ್ಳಬೇಕು ಎಂದರು.ಕವಿಗಳು ಸಂವೇದನಾಶೀಲರು. ಜನಮಾನಸದಲ್ಲಿ ನೆಲೆಸುವ ಶಕ್ತಿ ಹೊಂದಿದ್ದಾರೆ. ಭಾವಾವೇಶದ ಮೂಲಕ ಜನರನ್ನು ಬಡಿದೆಬ್ಬಿಸಿ ಪ್ರಭುತ್ವಕ್ಕೆ ಧಕ್ಕೆ ತರುವ ಸಾಧ್ಯತೆ ಇರುವ ಕಾರಣ ಸಾಹಿತಿ, ಕವಿಗಳನ್ನು ದೂರ ಇಡಲು ಪ್ರಯತ್ನಿಸುತ್ತಾರೆ ಎಂದು ಲೇವಡಿ ಮಾಡಿದರು.ವಿಧಾನ ಪರಿಷತ್ ಶಾಸಕ  ಅಲ್ಲಂಪ್ರಭು ಪಾಟೀಲ್ ಮಾತನಾಡಿ, ತಪ್ಪು ತಿದ್ದಿಕೊಂಡು ನಡೆದರೆ ಬದುಕಿನಲ್ಲಿ ಯಶಸ್ವಿಯಾಗಲು ಸಾಧ್ಯ ಎಂಬುದನ್ನು ಮಹರ್ಷಿ ವಾಲ್ಮೀಕಿ ಸಾಧನೆಯಿಂದ ನಾವು ಕಲಿಯಬೇಕು. ಹಿಂದಿನ ಸರ್ಕಾರಗಳು ಕಲ್ಪಿಸಿರುವ ಮೀಸಲಾತಿ ಸೌಲಭ್ಯ ಬಳಸಿ, ಹಿಂದುಳಿದ ಜನಾಂಗದವರು ಅಭಿವೃದ್ಧಿ ಹೊಂದಲು ಪ್ರಯತ್ನಿಸಬೇಕು ಎಂದರು. ಶಾಸಕಿ ಅರುಣಾ ಚಂದ್ರಶೇಖರ್ ಪಾಟೀಲ್ ರೇವೂರ ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರ ನೀತಿಧರ್ಮ ಮತ್ತು ತತ್ವದಂತೆ ನಾವೆಲ್ಲರೂ ಒಂದಾಗಿ ಬಾಳೋಣವೆಂದರು. ಶಾಸಕ ಖಮರುಲ್ ಇಸ್ಲಾಂ ಮಾತನಾಡಿ, ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಹಕ್ಕಿನಿಂದ ಬದುಕುವುದೇ ರಾಮಾಯಣ ಮತ್ತು ಮಹಾಭಾರತ ಮಹಾಕಾವ್ಯಗಳಿಗೆ ನಾವು ನೀಡುವ ಗೌರವ ಎಂದರು.ಜಿಲ್ಲಾ ಮಹರ್ಷಿ ವಾಲ್ಮೀಕಿ ನಾಯಕ್ ಸಂಘದ ಅಧ್ಯಕ್ಷ ನಂದಕುಮಾರ ಮಾಲಿಪಾಟೀಲ್ ಮಾತನಾಡಿ, ಜಿಲ್ಲಾ ವಾಲ್ಮೀಕಿ ಭವನಕ್ಕೆ ಜಿಲ್ಲಾಡಳಿತ ಜಾಗ ಮಂಜೂರು ಮಾಡಬೇಕು ಎಂದರು. ಜಿಲ್ಲಾಧಿಕಾರಿ ಡಾ. ವಿಶಾಲ್ ಆರ್., ಜಿಲ್ಲಾ ಪೊಲೀಸ್ ಅಧೀಕ್ಷಕ ಪ್ರವೀಣ ಎಂ.ಪವಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಜಿ.ವಿಜಯಕುಮಾರ ಇದ್ದರು. ಜಿಲ್ಲಾ ಸಮಾಜಕಲ್ಯಾಣ ಅಧಿಕಾರಿ ಎಸ್.ಪಿ.ನಂದಗಿರಿ ಸ್ವಾಗತಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರಾಜೇಂದ್ರ ಯರನಾಳೆ  ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.