ಶುಕ್ರವಾರ, ಮೇ 7, 2021
27 °C

ರಾಮೋತ್ಸವದ ತಂಗಾಳಿ

ಪ್ರೊ. ಮೈಸೂರು ವಿ. ಸುಬ್ರಹ್ಮಣ್ಯ Updated:

ಅಕ್ಷರ ಗಾತ್ರ : | |

ಬೆಂಗಳೂರಲ್ಲೆಲ್ಲಾ ರಾಮೋತ್ಸವದ ತಂಗಾಳಿ. ಪ್ರತಿಷ್ಠಿತ ಕಲಾವಿದರನ್ನು ಆಹ್ವಾನಿಸಲು ಮಂಡಳಿಗಳ ಮಧ್ಯೆ ಪೈಪೋಟಿಯೇ ನಡೆದಿದೆ!ರಾಮೋತ್ಸವ ಎಂದೊಡನೆ ಒಮ್ಮೆಗೇ ನೆನಪಿಗೆ ಬರುವುದು ಚಾಮರಾಜಪೇಟೆಯ ರಾಮ ಸೇವಾ ಮಂಡಳಿ. ದಿವಂಗತ ನಾರಾಯಣಸ್ವಾಮಿ ರಾವ್ ಅವರ ಸತತ ಪ್ರಯತ್ನದ ಫಲವಾಗಿ 73 ವರ್ಷ ವಿಜೃಂಭಣೆಯಿಂದ ರಾಮೋತ್ಸವ ನಡೆಸಿರುವ ಮಂಡಳಿ ಈ ವರ್ಷದ ರಾಮೋತ್ಸವವನ್ನು ಮೇ 6ರವರೆಗೆ ಹಮ್ಮಿಕೊಂಡಿದೆ.ಉತ್ಸವದ ಚೊಚ್ಚಲ ಕಛೇರಿ ಎಂದಿನಂತೆ ಡಾ. ಕದ್ರಿ ಗೋಪಾಲನಾಥ್ ಅವರದು. ಪೂರ್ವಾರ್ಧದಲ್ಲಿ ಜನಪ್ರಿಯ ಕೃತಿಗಳನ್ನು ನುಡಿಸುತ್ತಾ ಸಾಗಿ, ಉದ್ಘಾಟನಾ ಸಮಾರಂಭಕ್ಕಾಗಿ ಮಧ್ಯದಲ್ಲಿ ಬಿಡುವು ಕೊಟ್ಟರು. ಉತ್ತರಾರ್ಧದಲ್ಲಿ ವಿಸ್ತಾರ ಮಾಡಿ ಲಯವಾದ್ಯಗಳ ತನಿಯೂ ನಡೆಯಿತು.ಒಂದು ಕಾಲದಲ್ಲಿ ತುಂಬಾ ಬಳಕೆಯಲ್ಲಿದ್ದ `ಬ್ರೋವ ಬಾರಮ್ಮ~- ನುಡಿಸಿದಾಗ ಕೇಳುಗರ ಸಂತೋಷಕ್ಕೆ ಪಾರವೇ ಇರಲಿಲ್ಲ. ಇನ್ನು ವಾದ್ಯ ಸಂಗೀತ ಎಂದಮೇಲೆ `ರಘುವಂಶ~ ಕೃತಿ ಇಲ್ಲದಿರುತ್ತದೆಯೇ? ಅದೇ ರೀತಿಯ ಇನ್ನೊಂದು ರಚನೆ `ವಾಂಚಿತೋನು~ ಕೀರ್ತನೆ ಸಹ ರಂಜನೀಯವಾಗಿ ಮೂಡಿತು.

 

ವಿಸ್ತಾರಕ್ಕೆ ಮೋಹಕವಾದ `ಮೋಹನರಾಮ~ ಕೀರ್ತನೆಯನ್ನು ಆಯ್ದರು. ತ್ಯಾಗರಾಜರು ಈ ಕೃತಿಯಲ್ಲಿ ಭಗವಂತನ ರೂಪ ಮಹಿಮೆಯನ್ನು ವಿವರಿಸಿದ್ದಾರೆ. ಸರ್ವರಿಗೂ-ಸರ್ವಲೋಕಕ್ಕೂ ಪ್ರಿಯನಾದವನು ಮೋಹನರಾಮ. ಜೊತೆಗೆ ಮೋಹನ ರಾಗದ ಜನಪ್ರಿಯ ಕೃತಿಗಳಲ್ಲಿ ಇದೂ ಒಂದು. ಪದ್ಮಶ್ರೀ ಗೋಪಾಲನಾಥ್ ತಮ್ಮ ಸ್ಯಾಕ್ಸೋಫೋನ್‌ನಲ್ಲಿ ರಾಗವನ್ನು ಆಹ್ಲಾದಕರವಾಗಿ ನುಡಿಸಿ, ಚುರುಕಾಗಿ ಸ್ವರಪ್ರಸ್ತಾರ ಮಾಡಿದರು.

 

ವಾದ್ಯದ ಬಿರುಸಾದ ನಾದ, ಚೈತನ್ಯಪೂರ್ಣ ನಿರೂಪಣೆ ಕೇಳುಗರಿಗೆ ಖುಷಿ ಕೊಟ್ಟಿತು. ಕನ್ಯಾಕುಮಾರಿ ಪಿಟೀಲಿನಲ್ಲಿ ಉತ್ತಮ ಸಾಥ್ ನೀಡಿದರೆ, ಲಯವಾದ್ಯಗಾರರು (ಹರಿಕುಮಾರ್, ರಾಜೇಂದ್ರ ನಾಕೋಡ್ ಮತ್ತು ಬಿ. ರಾಜಶೇಖರ್) ಚುರುಕಾಗಿ ತಮ್ಮ ಕೈಚಳಕ ತೋರಿದರು.ಅಗೋಚರವಾದ ಪ್ರಭೆ

ಶ್ರೀ ಶೇಷಾದ್ರಿಪುರಂ ರಾಮಸೇವಾ ಸಮಿತಿ ಏರ್ಪಡಿಸಿರುವ 64ನೇ ವರ್ಷದ ಶ್ರೀರಾಮ ನವಮಿ ಸಂಗೀತೋತ್ಸವವು ಏ. 22ರವರೆಗೆ ನಡೆಯಲಿದೆ. ಇಲ್ಲಿ ಯುಗಳ ಗಾಯನ ಮಾಡಿದ ಶೇಷಾಚಾರಿ ಮತ್ತು ರಾಘವಾಚಾರಿ `ಹೈದರಾಬಾದ್ ಸಹೋದರರು~ ಎಂದೇ ಪರಿಚಿತರು. ಅವರೊಂದಿಗೆ ಪಿಟೀಲಿನಲ್ಲಿ ದೆಹಲಿ ಸುಂದರ್‌ರಾಜನ್, ಮೃದಂಗದಲ್ಲಿ ತ್ರಿವೇಂಡ್ರಂ ಬಾಲಾಜಿ ಹಾಗೂ ಘಟದಲ್ಲಿ ಶ್ರೀಶೈಲ ಹುರುಪಿನಿಂದ ಪಕ್ಕವಾದ್ಯ ನುಡಿಸಿದರು.ಹೈದರಾಬಾದ್ ಸಹೋದರರು ರಾಮನ ಮೇಲೆ ಅನೇಕ ಕೃತಿಗಳನ್ನು ಹಾಡಿದರು. ಉದಾಹರಣೆಗೆ `ಸೀತಾಪತೆ~ ನೋಡಬಹುದು. ಒಂದು ಕಾಲದಲ್ಲಿ ಅತಿ ಜನಪ್ರಿಯವಾಗಿದ್ದ ಕೀರ್ತನೆ. ಅದಕ್ಕೆ ಹಾಕಿದ ಸ್ವರ ಕಿರಿದಾದರೂ ಸ್ವಾರಸ್ಯವಾಗಿತ್ತು.ಮುಂದೆ ಎರಡು ಕಿರು ಕೃತಿಗಳು: `ಕೋದಂಡ ರಾಮಂ ಭಜಾಮಿ~ ಮತ್ತು `ಎನ್ನಡು ಜೂತುನೋ ಇನಕುಲ ತಿಲಕ~. ಬಹಳ ಹಿಂದಿನಿಂದ ತ್ಯಾಗರಾಜರ `ಏತಾವುನರಾ ನಿಲಕಡೆ ನೀಕು~ ಕೀರ್ತನೆಯನ್ನು ವಿಸ್ತಾರಕ್ಕೆ ಆರಿಸುವುದು ವಾಡಿಕೆ. ಈ ಕೃತಿಯಲ್ಲಿ ತ್ಯಾಗರಾಜರು ಭಗವದ್ ಸ್ವರೂಪ ಮತ್ತು ತತ್ವವನ್ನು ಕುರಿತು ಹಾಡಿದ್ದಾರೆ.`ಎಲ್ಲಾ ದೇವತೆಗಳ ರೂಪನಾದ ಬ್ರಹ್ಮವಸ್ತುವು ಶ್ರೀರಾಮ~ ಎಂಬ ತತ್ವವೇ ಈ ಕೀರ್ತನೆ. ಘನವಾದ ಕಲ್ಯಾಣಿ ರಾಗವನ್ನು ಸಹೋದರರಿಬ್ಬರೂ ಹಂಚಿಕೊಂಡು ವಿಸ್ತರಿಸಿದರು. ಸ್ವರಪ್ರಸ್ತಾರವೂ ಚೆನ್ನಾಗಿ ಮೇಳೈಸಿತು. ಆದರೂ ಹಿಂದಿನ ಆ ಗತ್ತು - ಪ್ರಖರ ಅಭಿವ್ಯಕ್ತಿ ಇರಲಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.