ಬುಧವಾರ, ನವೆಂಬರ್ 13, 2019
23 °C

ರಾಮೋತ್ಸವದ ನಾದಗಾಳಿ

Published:
Updated:
ರಾಮೋತ್ಸವದ ನಾದಗಾಳಿ

ಚೈತ್ರದ ಚಿಗುರಿನೊಂದಿಗೆ ಎಲ್ಲ ಕಡೆ ನಾದಗಾಳಿ ಬೀಸುತ್ತಿದೆ. ಮತ್ತೊಮ್ಮೆ ರಾಮೋತ್ಸವ ಸಂಗೀತದ ಕಾಲ! ಬಹುತೇಕ ನವಮಿಯಿಂದ ರಾಮೋತ್ಸವ ಪ್ರಾರಂಭಿಸಿದರೆ, ಕೆಲವು ಕಡೆ ಯುಗಾದಿಯಿಂದಲೇ ನಾಂದಿ! ಇದಕ್ಕೆ `ಗರ್ಭನವಮಿ' ಎಂದೇ ಪ್ರತೀತಿ. ಈ ವರ್ಷ ಎರಡು ಪ್ರಮುಖ ಸಂಸ್ಥೆಗಳು ಯುಗಾದಿಯಿಂದಲೇ ರಾಮೋತ್ಸವ ಪ್ರಾರಂಭಿಸಿವೆ. ಅವುಗಳಲ್ಲಿ ಒಂದಾದ ಶ್ರೀವಾಣಿ ಕಲಾ ಕೇಂದ್ರ ಬಸವೇಶ್ವರ ನಗರದ ತನ್ನ ಸ್ವಂತ ಶಾಲಾ ಕಟ್ಟಡದಲ್ಲಿ ಮೇ 6ರವರೆಗೆ ಸಂಗೀತ (ಕರ್ನಾಟಕ, ಹಿಂದುಸ್ತಾನಿ), ನೃತ್ಯ, ಯಕ್ಷಗಾನ, ಸೂತ್ರದ ಗೊಂಬೆ ಆಟಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದೆ.ವಾಣಿ ಕಲಾ ಕೇಂದ್ರದಲ್ಲಿ ಯುಗಾದಿಯಂದು ಸ್ಯಾಕ್ಸೋಫೋನ್ ನುಡಿಸಿದ ಪದ್ಮಶ್ರೀ ಡಾ. ಕದ್ರಿ ಗೋಪಾಲನಾಥ್ ಅವರು ತಿಲಂಗ್ ರಾಗವನ್ನು ತೆಗೆದುಕೊಂಡು ಪಾಪನಾಶಂ ಶಿವನ್ ಅವರ ರಚನೆಯೊಂದಿಗೆ ಮುಂದುವರೆದರು. ರಾಗದ ಲಾಲಿತ್ಯ ಎಲ್ಲರ ಗಮನ ಸೆಳೆಯಿತು. ಮುಂದಿನ  `ನಾದಲೋಲುಡೈ'ದಲ್ಲೂ ಲಾಲಿತ್ಯವೇ ಪ್ರಧಾನ!ಆಗ ಹೆಚ್ಚು ಪರಿಚಿತವಲ್ಲದ ಮನೋರಂಜನಿ ರಾಗವನ್ನು ಆಯ್ದರು. ಇದು ಒಂದು ಔಡವ ಸಂಪೂರ್ಣ ರಾಗ. ತ್ಯಾಗರಾಜರ ಅಡುಕರಾದಾನಿ  ಕೀರ್ತನೆಗೆ ಸ್ವರ ಹಾಕಿ, ಚರಣವನ್ನು ದ್ರುತ ಕಾಲದಲ್ಲಿ ನುಡಿಸಿದರು. ಖರಹರಪ್ರಿಯ ರಾಗವನ್ನು ವಿಸ್ತರಿಸಿ, ಕಾವಿನ ಸ್ವರಪ್ರಸ್ತಾರ ಮಾಡಿ, ಶಿಖರ ಮುಟ್ಟಿದಾಗ ಲಯವಾದ್ಯಗಳಿಗೆ ತನಿ ಬಿಟ್ಟರು. ಮೃದಂಗದಲ್ಲಿ ವಿ. ಪ್ರವೀಣ್, ತಬಲದಲ್ಲಿ ರಾಜೇಂದ್ರ ನಾಕೋಡ್ ಹಾಗೂ ಮೋರ್ಚಿಂಗ್‌ನಲ್ಲಿ ಬಿ. ರಾಜಶೇಕರ್ ಕೈಚಳಕ ತೋರಿದರು. ಪಿಟೀಲಿನಲ್ಲಿ ಸಿ.ಎನ್. ಚಂದ್ರಶೇಖರ್ ನೆರವಾದರು.ವೈಯಾಲಿಕಾವಲ್ ರಾಮ ಮಂದಿರ

ಗರ್ಭನವಮಿ ಆಚರಿಸುತ್ತಿರುವ ಇನ್ನೊಂದು ಸಂಸ್ಥೆ ವೈಯಾಲಿಕಾವಲ್ ಎಕ್ಸ್‌ಟೆನ್ಷನ್ ಅಸೋಸಿಯೇಷನ್ ಏಪ್ರಿಲ್ 23ರವರೆಗೆ ಸೀತಾ ಕಲ್ಯಾಣ, ರಥೋತ್ಸವ, ಹನುಮಂತೋತ್ಸವ, ವಸಂತೋತ್ಸವ, ಶ್ರೀರಾಮ ಪಟ್ಟಾಭಿಷೇಕ ಮುಂತಾದ ಧಾರ್ಮಿಕ ವಿಧಿಗಳಲ್ಲದೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಏರ್ಪಡಿಸಿದೆ. ಕರ್ನಾಟಕವಲ್ಲದೆ ಆಂಧ್ರ, ಕೇರಳ, ತಮಿಳುನಾಡಿನಿಂದಲೂ ಬಂದ ಕಲಾವಿದರು ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದಾರೆ. ಇಲ್ಲಿ ಭಾನುವಾರ ಸಂಜೆ ಹಾಡಿದ ಮೊಡಮುಡಿ ಸುಧಾಕರ ಅವರು ವಿಜಯವಾಡ ಬಾನುಲಿಯ ನಿಲಯದ ಕಲಾವಿದರು.ಕಾರ್ಯಕ್ರಮದ ಪೂರ್ವಾರ್ಧದಲ್ಲಿ ದೀಕ್ಷಿತರ `ಪವನಾತ್ಮಜ ರಕ್ಷ' ಕೃತಿಯನ್ನು ಕಿರು ಸ್ವರಪ್ರಸ್ತಾರದೊಂದಿಗೆ ಹಾಡಿ, ಸಂಗೀತ ಸಾಮ್ರೋಜ್ಯ ಸಂಚಾರಿಣಿ  ತೆಗೆದುಕೊಂಡರು. ತ್ಯಾಗರಾಜರ ಸುಂದರ ಕೃತಿಗಳಲ್ಲಿ ಒಂದಾದ `ಕೊಲುವೈ ಯುನ್ನಾಡಿ' ಕೇಳುಗರಿಗೆ ಎಂದೂ ಪ್ರಿಯವಾದುದೇ. ತ್ಯಾಗರಾಜರ ಇನ್ನೊಂದು ಕೃತಿಯನ್ನು ಹಾಡಿ, ಸ್ವಲ್ಪ ವಿಳಂಬದಲ್ಲಿ ಅನ್ನಪೂರ್ಣೆ ವಿಶಾಲಾಕ್ಷಿ  ನಿರೂಪಿಸಿದರು.ಮೋಹನವನ್ನು ಹಿತಮಿತವಾಗಿ ವಿಸ್ತರಿಸಿ ಕೃತಿಗೆ ಸ್ವರವನ್ನೂ ಸೇರಿಸಿದರು. ಕಂಠದಲ್ಲಿ ಲೋಪವಿಲ್ಲದಿದ್ದರೂ ಮಿತ ವ್ಯಾಪ್ತಿಯುಳ್ಳ ಶಾರೀರ. ಜೊತೆಗೆ ನೆರವಲ್‌ನಲ್ಲೂ ಪ್ರೌಢಿಮೆ ಬರಬೇಕಿದೆ. ಪಿಟೀಲಿನಲ್ಲಿ ಎಂ.ಎಸ್. ಗೋವಿಂದಸ್ವಾಮಿ, ಮೃದಂಗದಲ್ಲಿ ಸಿ. ಚೆಲುವರಾಜ್ ಹಾಗೂ ಘಟದಲ್ಲಿ ಸುಕನ್ಯಾ ರಾಮ್‌ಗೋಪಾಲ್ ಇಂಬು ತುಂಬಿದರು.ನೃತ್ಯ ಸಂಗೀತದ ಮಿಲನ

ಅನನ್ಯದ ನಿರಂತರ ಚಟುವಟಿಕೆಗಳಲ್ಲಿ `ಆರೋಗ್ಯಧಾರಾ' ಪ್ರಮುಖವಾದುದು. ಕಲಾವಿದರ ಆರೋಗ್ಯ ಚಿಕಿತ್ಸೆಗೆ ಆರ್ಥಿಕ ನೆರವು ನೀಡುವ ಅನುಪಮ ಯೋಜನೆ. ಈ ಯೋಜನೆಗೆ ಆರ್ಥಿಕ ಬಲ ತುಂಬಲು ಒಂದು ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ನೃತ್ಯ ಸಂಗೀತ ಮಿಲನದಲ್ಲಿ 50 ಕಲಾವಿದರು ಭರತನಾಟ್ಯ, ಒಡಿಸ್ಸಿ, ಕೂಚಿಪುಡಿ, ಮೋಹಿನಿ ಆಟ, ಕಥಕ್ ಶೈಲಿಗಳಲ್ಲಿ ನರ್ತಿಸಿ, ವರ್ಣರಂಜಿತ, ವೈವಿಧ್ಯಮಯ ಕಾರ್ಯಕ್ರಮಗಳನ್ನು ನೀಡಿದರು.ವೀಣಾ ಮೂರ್ತಿ ಅವರ ನಿರ್ದೇಶನದಲ್ಲಿ ಕಲಾವಿದರು ಕೂಚಿಪುಡಿ ನೃತ್ಯವನ್ನು ಮಾಡಿದರು. ಲಲಿತಾ ಶ್ರೀನಿವಾಸನ್ ಅವರ ನಿರ್ದೇಶನದ ಭರತನಾಟ್ಯದಲ್ಲಿ ಕನ್ನಡ ಭಾವಗೀತೆಗಳು ಸುಂದರವಾಗಿ ಮೂಡಿದರೆ, ಒಡಿಸ್ಸಿ (ಶರ್ಮಿಳಾ ಮುಖರ್ಜಿ/ಪು.ತಿ.ನ.), ಮೋಹಿನಿ ಆಟಗಳಲ್ಲೂ (ಶ್ರೀದೇವಿ ಉನ್ನಿ/   ಕುವೆಂಪು) ಮತ್ತು ಕಥಕ್ (ಕುವೆಂಪು ಮತ್ತು ಬೇಂದ್ರೆ; ನಿರ್ದೇಶನ- ನಂದಿನಿ ಮೆಹತಾ ಮತ್ತು ಮುರಳೀ ಮೋಹನ್)ನಲ್ಲೂ ಕನ್ನಡ ಗೀತೆಗಳು ಬೆಳಗಿ ಮನಸ್ಸಿಗೆ ಹರ್ಷ ಮೂಡಿತು. ಕೊನೆಯಲ್ಲಿ ಎಲ್ಲ ನರ್ತಕರು ಕೂಡಿ ನರ್ತಿಸಿ ಮಂಗಳ ಹಾಡಿದರು.ಸಂಗೀತಗಾರರ ಒಂದು ದೊಡ್ಡ ತಂಡವೇ ಹಿನ್ನೆಲೆಯಲ್ಲಿ ನೆರವಾಯಿತು. ಇನ್ನೂ ಹೆಚ್ಚಿನ ಪೂರ್ವ ಸಿದ್ಧತೆಯಿಂದ ಕಾರ್ಯಕ್ರಮದ ಮೌಲ್ಯವನ್ನು ಹೆಚ್ಚಿಸಬಹುದಾಗಿತ್ತಾದರೂ, ಉದ್ದೇಶ-ಗುರಿ ಘನವಾದದ್ದು.ವಚನ ಸಂಗೀತೋತ್ಸವ

ಶತಮಾನಗಳು ಕಳೆದರೂ ಶಿವಶರಣರ ವಚನಗಳು ಇಂದಿಗೂ ಪ್ರಸ್ತುತವಾಗಿರುವುದು ಅವುಗಳ ಸಾರ್ವಕಾಲಿಕ ಮೌಲ್ಯವನ್ನು ಸಾರುತ್ತವೆ. ವಚನ ಗಾಯನವೂ ಅಷ್ಟೇ ಪ್ರಾಚೀನವಾದರೂ ಪ್ರಚಲಿತ ಕಾಲದಲ್ಲಿ ಗಾಯನಕ್ಕೆ ವಚನಗಳ ಆಯ್ಕೆ, ರಾಗ ಸಂಯೋಜನೆ, ವಾದ್ಯಗಳ ಮೇಳ, ನಿರೂಪಣೆಯಲ್ಲಿ ಭಾವ ತುಂಬಿ ಹಾಡುವುದು ಮುಂತಾದ ವಿಷಯಗಳು ಅಧ್ಯಯನಕ್ಕೆ ಯೋಗ್ಯವಾದವು. ಈ ನಿಟ್ಟಿನಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಏರ್ಪಡಿಸಿದ್ದ ವಚನ ಸಂಗೀತೋತ್ಸವದಲ್ಲಿ ಗಾಯನವಲ್ಲದೆ ಪ್ರಾತ್ಯಕ್ಷಿಕೆ, ಉಪನ್ಯಾಸಗಳನ್ನೂ ಏರ್ಪಡಿಸಿದ್ದು ಅಭಿನಂದನಾರ್ಹ.ಸಹಜವಾಗಿಯೇ ಉತ್ಸವದ ಚೊಚ್ಚಲ ಕಾರ್ಯಕ್ರಮ ಮಂಗಳ ವಾದ್ಯದೊಂದಿಗೆ ನಡೆಯಿತು. ಶಹನಾಯ್ ಕಲಾವಿದ ಪಂಡಿತ್ ಎಸ್. ಬಾಳೇಶ್ ಮೂಲತಃ ಬೆಳಗಾವಿಯವರಾದರೂ, ಕೆಲಕಾಲದಿಂದ ಚೆನ್ನೈ ನಿವಾಸಿ. ತಮ್ಮ ವಾದನವನ್ನು ಅವರು ನಟ ಭೈರವ್ ರಾಗದಿಂದ ಪ್ರಾರಂಭಿಸಿದರು. ಸ್ವರದಿಂದ ಸ್ವರಕ್ಕೆ ಏರುತ್ತಾ ರಾಗದ ಒಂದು ಉತ್ತಮ ಚಿತ್ರ ಬಿಡಿಸಿದರು. ಶಹನಾಯ್‌ನ ಮಧುರ ನಾದ ಮನ ಸೆಳೆಯಿತು. ಸಹ ವಾದನದಲ್ಲಿ ಶ್ರೀಕೃಷ್ಣ ಬಾಳೇಶ್, ತಬಲಾದಲ್ಲಿ ಸುರೇಶ್ ಅತ್ರೆ, ದುಕ್ಕಡ್‌ನಲ್ಲಿ ಪ್ರಕಾಶ್ ಬಾಳೇಶ್ ಮತ್ತು ಸ್ವರ ಮಂಡಳ್‌ನಲ್ಲಿ ಆರ್.ಕೆ. ರವಿ  ನೆರವಾದರು.ಹೊನ್ನಾವರದ ಡಾ. ಅಶೋಕ್ ಹೂಗಣ್ಣನವರ್ `ಉಳ್ಳವರು ಶಿವಾಲಯವ ಮಾಡುವರು', `ಸ್ವಾಮಿ ನೀನೆ', `ಚಕೋರಂಗೆ ಚಂದ್ರಮನ' ಮುಂತಾದ ಅನೇಕ ವಚನಗಳನ್ನು ಗಾಯನದಲ್ಲಿ ಪ್ರಸ್ತುತಪಡಿಸಿದರು. ಕಂಠ ಮಾಧುರ್ಯ ಮಿತವಾದರೂ ಸರಳವಾಗಿ ಹಾಡಿದರು. ಎಂ. ನಾಗೇಶ್ ತಬಲಾದಲ್ಲಿ ಮತ್ತು ಸುಧಾಂಶು ಕುಲಕರ್ಣಿ ಹಾರ್ಮೋನಿಯಂನಲ್ಲಿ ಸಹಕರಿಸಿದರು.ಶಿವಕುಮಾರ್ ಹಿರೇಮಠ್ `ಕಂಡೆ ಭಕ್ತರಿಗೆ', `ನಡೆ ಚೆನ್ನ ನುಡಿ ಚೆನ್ನ' ಹಾಗೂ ಅರ್ಥಪೂರ್ಣವಾದ `ಪ್ರಣತಿ ಇದೆ ಭಕ್ತಿ ಇದೆ'ಯನ್ನು ನಿರೂಪಿಸಿದರು. ಅವರಿಗೆ ಒಳ್ಳೆಯ ಕಂಠವಿದ್ದರೂ ಇನ್ನೂ ಸ್ವಲ್ಪ ಭಾವ ತುಂಬಿ ಹಾಡಿದರೆ ಪರಿಣಾಮ ಗಾಢವಾದೀತು. ತಬಲಾದಲ್ಲಿ ಗುರು ಸಂಗಪ್ಪ ಹೂಗಾರ್ ಮತ್ತು ಹಾರ್ಮೋನಿಯಂನಲ್ಲಿ ಸತೀಶ್ ಕೊಳ್ಳಿ ನೆರವಾದರು.

 

ಪ್ರತಿಕ್ರಿಯಿಸಿ (+)