ರಾಮ್‌ದೇವ್ ಬಂಧನ ಅಮಾನವೀಯ

ಭಾನುವಾರ, ಜೂಲೈ 21, 2019
23 °C

ರಾಮ್‌ದೇವ್ ಬಂಧನ ಅಮಾನವೀಯ

Published:
Updated:

ಕೋಲಾರ: ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಯೋಗ ಗುರು ಬಾಬಾ ರಾಮದೇವ್ ಅವರನ್ನು ಬಲವಂತವಾಗಿ ಹೊತ್ತೊಯ್ಸ ಘಟನೆ ಅಮಾನವೀಯ ಮತ್ತು ಪ್ರಜಾಪ್ರಭುತ್ವ ವಿರೋಧಿ ಯಾದದ್ದು. ಅವರೊಂದಿಗೆ ಉಪವಾಸ ಕುಳಿತಿದ್ದ ಮಕ್ಕಳು, ಮಹಿಳೆಯರ ಮೇಲೂ ಕೇಂದ್ರ ಸರ್ಕಾರ ಪೊಲೀಸರ ಮೂಲಕ ಅಮಾನವೀಯವಾಗಿ ವರ್ತಿಸಿ ದೇಶದ 121 ಕೋಟಿ ಜನತೆಗೆ ಅನ್ಯಾಯ ಎಸಗಿದೆ ಎಂದು ಶ್ರೀರಾಮಸೇನೆ ಪ್ರಮುಖ ಪ್ರಮೋದ್ ಮುತಾಲಿಕ್ ಆರೋಪಿಸಿದರು.ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮದೇವ್ ಅವರನ್ನು ಬಂಧಿಸಿದ್ದು ಆತಂಕಕಾರಿ ಘಟನೆ. ಸ್ವಾತಂತ್ರ್ಯ ಹೋರಾಟ ಸಂದರ್ಭದ ಜಲಿಯನ್ ವಾಲಾಬಾಗ್ ದುರಂತವನ್ನು ನೆನಪಿಗೆ ತರುವಂಥ ಘಟನೆ. ಅಂಥ ಅತಿ ಹೀನಾಯದ ಕ್ರಮವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ ಎಂದರು.

ಈ ಘಟನೆ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಯೇ ಕಾರಣ. ಘಟನೆಯ ಬಗ್ಗೆ ಪ್ರಧಾನಿ ಮನಮೋಹನ ಸಿಂಗ್ ದೇಶದ ಜನಕ್ಕೆ ಸ್ಪಷ್ಟನೆ ನೀಡಬೇಕು. ಬಂಧನ ಘಟನೆಯ ಮೂಲ ಈ  ಇಬ್ಬರು ಅಪರಾಧಿಗಳಾಗಿದ್ದಾರೆ ಎಂದರು.ರಾಮದೇವ್ ಅವರು ಆರ್‌ಎಸ್‌ಎಸ್‌ನವರು ಎಂದು ದೂಷಿಸಿರುವುದು ಕೂಡ ಸರಿಯಲ್ಲ. ಅವರು ಮುಸ್ಲಿಮರ ವಿರುದ್ಧ ಮಾತಾಡಲಿಲ್ಲ. ದೇಶದಿಂದ ಭ್ರಷ್ಟಾಚಾರವನ್ನು ಕಿತ್ತೋಡಿಸಿ ಎಂದು ಆಗ್ರಹಿಸಿದರು.ಅವರೊಂದಿಗೆ ವೇದಿಕೆಯಲ್ಲಿ ರಾಜಕಾರಣಿಗಳ್ಯಾರೂ ಇರಲಿಲ್ಲ. ಕಾವಿಧಾರಿಗಳಾದ ಸ್ವಾಮೀಜಿಗಳು ಮತ್ತು ಬೆಂಬಲಿಗರು ಮಾತ್ರವಿದ್ದರು. ರಾಮದೇವ್ ಅವರನ್ನು ಟೀಕಿಸುವ ಭರದಲ್ಲಿ ಆರ್‌ಎಸ್‌ಎಸ್‌ಗೆ ಕಳಂಕ ತರುವಂಥ ಹೇಳಿಕೆಗಳನ್ನು ಕೇಂದ್ರ ಸರ್ಕಾರದ ಪ್ರತಿನಿಧಿಗಳು ನೀಡಿದ್ದಾರೆ ಎಂದು ಆರೋಪಿಸಿದರು.

ಭೇಟಿ, ಸಾಂತ್ವನ: ಇತ್ತೀಚೆಗೆ ಮೃತ ಪಟ್ಟ ಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷ ವಿನಯ್ ಅವರ ಮನೆಗೆ ತೆರಳಿದ ಮುತಾಲಿಕ್ ಕುಟುಂಬದ ಸದಸ್ಯರಿಗೆ ಸಾಂತ್ವ ನೀಡಿದರು.   ನಂತರ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡು, ವಿನಯ್ ನೆನಪಿಗೆ ಸೇನೆಯ ಕಾರ್ಯಕರ್ತರು ವರ್ಷಕ್ಕೊಮ್ಮೆ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಕರೆ ನೀಡಿದರು.

ಮಾದಕ ದ್ರವ್ಯ ಸೇವನೆಯಂಥ ದುಶ್ಚಟಗಳಿಗೆ ಯುವಜನರು ಬಲಿಯಾಗಬಾರದು. ಭಾರತೀಯ ಸಂಸ್ಕೃತಿಯನ್ನು ಸಂರಕ್ಷಿಸಲು ಯುವಜನರು ಶಕ್ತಿವಂತರಾಗಬೇಕು ಎಂದರು.ಸೇನೆಯ ಜಿಲ್ಲಾ ಸಂಚಾಲಕ ಪ್ರಮೋದ್, ನರೇಶ್, ಕಿಶೋರ್, ರಾಜು, ರಮೇಶ್, ರಮೇಶರಾಜು, ಸುನೀಲ್, ಚಂದ್ರಶೇಖರ್, ಭಜರಂಗದಳ ಬಾಲಾಜಿ ಭಾಗವಹಿಸಿದ್ದರು.ಪರಿಸರ ಸಂರಕ್ಷಣೆಗೆ ಸಲಹೆ

ವಿಶ್ವ ಪರಿಸರದ ದಿನದ ಪ್ರಯುಕ್ತ ನಗರದ ರಹಮತ್ ನಗರದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಭಾನುವಾರ ಕಾನೂನು ನೆರವು ಪ್ರಾಧಿಕಾರ, ವಕೀಲರ ಸಂಘ, ಶಿಕ್ಷಣ ಇಲಾಖೆ, ಅರಣ್ಯ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಗಿಡ ನೆಡುವ ಕಾರ್ಯಕ್ರಮಕ್ಕೆ ಪ್ರಧಾನ ಹಿರಿಯ ಸಿವಿಲ್  ನ್ಯಾಯಾಧೀಶ ಎ.ವಿಜಯನ್ ಚಾಲನೆ ನೀಡಿದರು.ನ್ಯಾಯಾಧೀಶ ಕೆಂಗಬಾಲಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ, ವಕೀಲರ ಸಂಘದ ಅಧ್ಯಕ್ಷ ಅರುಣ್‌ಕುಮಾರ್ ಮಾತನಾಡಿದರು.ಮಕ್ಕಳ ಹಕ್ಕುಗಳ ಕಾಯಿದೆ ಕುರಿತು ಕೆ.ವಿ.ಸುರೇಂದ್ರಕುಮಾರ್, ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಕಾಯಿದೆ ಕುರಿತು ವಕೀಲ ಎಂ.ಪಿ.ನಾರಾಯಣಸ್ವಾಮಿ ಉಪನ್ಯಾಸ ನೀಡಿದರು. ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಅನಿಲ್ ಕುಮಾರ್, ವಲಯ ಅರಣ್ಯಾಧಿಕಾರಿ ರಾಮಕೃಷ್ಣಪ್ಪ, ಕ್ಲಸ್ಟರ್ ಮುಖ್ಯಸ್ಥ ಅಬ್ದುಲ್ ವಾಜೀದ್ ಖಾನ್, ಮುಖ್ಯಶಿಕ್ಷಕಿ ಸಾಹಿದಾ ಬೇಗಂ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry