ಬುಧವಾರ, ನವೆಂಬರ್ 20, 2019
21 °C

ರಾಮ್‌ದೇವ್ ಸತ್ಯಾಗ್ರಹ ನಿಲ್ಲಿಸಲಿ- ಪೇಜಾವರ ಶ್ರೀ

Published:
Updated:

ಉಡುಪಿ:  `ಭ್ರಷ್ಟಾಚಾರ ಮತ್ತು ಕಪ್ಪು ಹಣದ ವಿರುದ್ಧ ನಡೆಸುತ್ತಿರುವ ಉಪವಾಸ ಸತ್ಯಾಗ್ರಹವನ್ನು ಬಾಬಾ ರಾಮ್‌ದೇವ್ ನಿಲ್ಲಿಸಬೇಕು~ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಆಗ್ರಹಿಸಿದ್ದಾರೆ.



`ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಮತ್ತು ಬಾಬಾ ರಾಮ್‌ದೇವ್ ಭ್ರಷ್ಟಾಚಾರದ ವಿರುದ್ಧವಾಗಿ ನಡೆಸಿದ ಸತ್ಯಾಗ್ರಹ ದೇಶದಲ್ಲಿಯೇ ಅದ್ಭುತ ಜಾಗೃತಿ ಉಂಟುಮಾಡಿದ್ದು, ಯುವಕರಲ್ಲಿಯೂ ಹೊಸ ಚೈತನ್ಯ ಮೂಡಿಸಿದೆ. ರಾಷ್ಟ್ರದಾದ್ಯಂತ ಪರಿಣಾಮ ಬೀರಿರುವುದರಿಂದ ಸತ್ಯಾಗ್ರಹದ ಉದ್ದೇಶವು ಫಲಿಸಿದೆ~ ಎಂದು ಸ್ವಾಮೀಜಿ ತಿಳಿಸಿದ್ದಾರೆ.



`ಸುತ್ತೂರು ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ಮತ್ತು ರವಿಶಂಕರ ಗುರೂಜಿ ಹಾಗೂ ತಾವು ಜತೆಗೂಡಿ ಕೇಂದ್ರ ಸರ್ಕಾರದೊಂದಿಗೆ ಸಂಧಾನ ಪ್ರಕ್ರಿಯೆ ಆರಂಭಿಸಿದ್ದು, ತನ್ಮೂಲಕವಾಗಿ ಬಾಬಾ ರಾಮ್‌ದೇವ್ ಅವರ ಉದ್ದೇಶ ನೆರವೇರುವುದಕ್ಕೆ ಸರ್ವ ಪ್ರಯತ್ನ ಮಾಡುತ್ತೇವೆ~ ಎಂದರು. `ಒಂದು ವೇಳೆ ಸಂಧಾನ ಫಲಿಸದಿದ್ದರೆ, ಎಲ್ಲಾ ಸಂತರು ಸೇರಿ ಸಾಮೂಹಿಕವಾಗಿ ಭ್ರಷ್ಟಾಚಾರ ಮತ್ತು ಕಪ್ಪುಹಣದ ವಿರುದ್ಧ ಹೋರಾಟ ನಡೆಸುತ್ತೇವೆ. ನಮ್ಮ ಮೂವರ ಮಾತಿಗೆ ಮನ್ನಣೆ ನೀಡಿಉಪವಾಸ ಸತ್ಯಾಗ್ರಹ  ನಿಲ್ಲಿಸಬೇಕು ಎಂದು  ಬಾಬಾ ರಾಮ್‌ದೇವ್ ಅವರನ್ನು ಕೇಳಿಕೊಂಡಿದ್ದೇವೆ. ಅದರಂತೆ ಅವರು ಉಪವಾಸವನ್ನು ಸಮಾಪ್ತಿಗೊಳಿಸುತ್ತಾರೆ ಎಂದು ನಂಬಿದ್ದೇವೆ~ ಎಂದು ಪೇಜಾವರಶ್ರೀ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ರಾಮ್‌ದೇವ್ ಆರೋಗ್ಯಕ್ಕೆ ಪ್ರಾರ್ಥಿಸಿ ಇಂದು ಶತರುದ್ರಾಭಿಷೇಕ: ಭ್ರಷ್ಟಾಚಾರ ಮತ್ತು ಕಪ್ಪುಹಣದ ವಿರುದ್ಧ ಕೆಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಏಳು ದಿನಗಳಿಂದ ಹರಿದ್ವಾರದಲ್ಲಿ ಉಪವಾಸ ದೀಕ್ಷೆಯಲ್ಲಿರುವ ಯೋಗಗುರು ಬಾಬಾ ರಾಮ್‌ದೇವ್ ಅವರ ಆರೋಗ್ಯದಲ್ಲಿ ಏರುಪೇರು ಆಗುತ್ತಿರುವುದರಿಂದ ಕಳವಳಗೊಂಡಿರುವ ಅನುಯಾಯಿಗಳು ಆರೋಗ್ಯ ಸುಧಾರಣೆಗಾಗಿ ಪ್ರಾರ್ಥನೆ ಆರಂಭಿಸಿದ್ದಾರೆ. ಅದರಂತೆ ಉಡುಪಿ ಪತಂಜಲಿ ಯೋಗ ಸಮಿತಿ,ಭಾರತ ಸ್ವಾಭಿಮಾನ್ ಟ್ರಸ್ಟ್ ಜತೆಗೂಡಿ ರಥಬೀದಿ ಪುರಾಣ ಪ್ರಸಿದ್ಧ ಚಂದ್ರಮೌಳೀಶ್ವರ ದೇವಸ್ಥಾನದಲ್ಲಿ ಇದೇ 11ರಂದು ಬೆಳಿಗ್ಗೆ 7.30ಕ್ಕೆ ಶತರುದ್ರಾಭಿಷೇಕ ಆಯೋಜಿಸಿದೆ. `ಕಾರ್ಯಕ್ರಮದಲ್ಲಿ ರಾಮದೇವ್ ಅವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು~ ಎಂದು ಸಮಿತಿ ಅಧ್ಯಕ್ಷ ಉಮೇಶ್ ಕೋಟ್ಯಾನ್ ತಿಳಿಸಿದ್ದಾರೆ.



ಸತ್ಯಾಗ್ರಹ ಮುಂದುವರಿಕೆ:ರಾಮ್‌ದೇವ್ ಅವರನ್ನು ಬೆಂಬಲಿಸಿ ಪತಂಜಲಿ ಯೋಗ ಸಮಿತಿ, ಭಾರತ ಸ್ವಾಭಿಮಾನ್ ಟ್ರಸ್ಟ್ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಸುತ್ತಿರುವ ಸತ್ಯಾಗ್ರಹ ಮುಂದುವರಿದಿದೆ.



 ತಾಲ್ಲೂಕು ಮತ್ತು ಗ್ರಾಮಮಟ್ಟದಲ್ಲಿಯೂ ಸತ್ಯಾಗ್ರಹ ನಡೆಸಲು ಸಮಿತಿ ನಿರ್ಧರಿಸಿದೆ. `ಮೊದಲ ಹಂತವಾಗಿ ಮಂಚಕಲ್, ಸಂತೆಕಟ್ಟೆ ಮತ್ತು ಕುಂದಾಪುರಗಳಲ್ಲಿ ಸತ್ಯಾಗ್ರಹ ನಡೆಯಲಿದೆ~ ಎಂದು ಪ್ರಕಟಣೆ ತಿಳಿಸಿದೆ.

ಪ್ರತಿಕ್ರಿಯಿಸಿ (+)