ರಾಮ, ಕೃಷ್ಣ ಯಾರು ಹೆಚ್ಚು ಸಮ್ಮತ?

7

ರಾಮ, ಕೃಷ್ಣ ಯಾರು ಹೆಚ್ಚು ಸಮ್ಮತ?

Published:
Updated:

ಸಾಗರ (ಶಿವಮೊಗ್ಗ ಜಿಲ್ಲೆ): ಸೀಮೋಲ್ಲಂಘನೆಯ ಬಿಕ್ಕಟ್ಟುಗಳನ್ನು ಕನ್ನಡದ ಕವಿಗಳು ಭಾಷಿಕ, ಕೌಟುಂಬಿಕ, ಸಾಮಾಜಿಕ ಹಾಗೂ ಅಧ್ಯಾತ್ಮಿಕ ನೆಲೆಗಳಲ್ಲಿ ಹಲವು ರೂಪಕಗಳ ಮೂಲಕ ವೈಶಿಷ್ಟ್ಯಪೂರ್ಣವಾಗಿ ಚಿತ್ರಿಸಿದ್ದಾರೆ ಎಂದು ಕವಿ ಡಾ.ಎಚ್.ಎಸ್. ವೆಂಕಟೇಶಮೂರ್ತಿ ಹೇಳಿದರು.ಇಲ್ಲಿಗೆ ಸಮೀಪದ ಹೆಗ್ಗೋಡಿನಲ್ಲಿ ನಡೆಯುತ್ತಿರುವ `ನೀನಾಸಂ~ ಸಂಸ್ಕೃತಿ ಶಿಬಿರದಲ್ಲಿ ಬುಧವಾರ `ಕನ್ನಡ ಕಾವ್ಯದಲ್ಲಿ ಸೀಮೋಲ್ಲಂಘನದ ಮಹಾ ಪ್ರತೀಕಗಳು~ ವಿಷಯ ಕುರಿತು ಅವರು ಮಾತನಾಡಿದರು.

ಸೀಮೋಲ್ಲಂಘನೆಯ ಪ್ರಕ್ರಿಯೆಯಲ್ಲಿ ಮನುಷ್ಯ ಪ್ರವೇಶಿಸುವ ಹೊಸ ಲೋಕವನ್ನು ತನ್ನದಾಗಿಸಿಕೊಳ್ಳುತ್ತಾನೋ ಅಥವಾ ಆತ ಆ ಲೋಕದವನೇ ಆಗಿಬಿಡುತ್ತಾನೋ ಎಂಬ ಪ್ರಶ್ನೆಗೆ ಕನ್ನಡ ಕಾವ್ಯ ಅತ್ಯಂತ ಸಮರ್ಥವಾಗಿ ಮುಖಾಮುಖಿಯಾಗಿದೆ ಎಂದು ವಿಶ್ಲೇಷಿಸಿದರು.ಸೀಮಿತ ವ್ಯಕ್ತಿತ್ವದ ಮೂಲಕ ರಾಮ ಪೂರ್ಣತೆ ಕಂಡುಕೊಂಡರೆ, ಕೃಷ್ಣ ಸಮೃದ್ಧ ವ್ಯಕ್ತಿತ್ವದೊಂದಿಗೆ ಪೂರ್ಣತೆ ಕಂಡುಕೊಂಡ. ಶಿವ ಪ್ರಮಾಣಾತ್ಮಕ ವ್ಯಕ್ತಿತ್ವದೊಂದಿಗೆ ಪೂರ್ಣತೆಯತ್ತ ಹೊರಟ ಎಂಬ ಡಾ.ರಾಮ ಮನೋಹರ ಲೋಹಿಯಾ ಅವರ `ರಾಮ ಕೃಷ್ಣ ಶಿವ~ ಪ್ರಬಂಧದಲ್ಲಿನ ಸಾಲುಗಳನ್ನು ಉಲ್ಲೇಖಿಸಿದ ಅವರು, `ಮರ್ಯಾದೆಯ ಸೀಮೆಯನ್ನು ಒಪ್ಪಿಕೊಳ್ಳುವ ರಾಮ ಮತ್ತು ಮೀರುವ ಕೃಷ್ಣ ಈ ಎರಡೂ ವ್ಯಕ್ತಿತ್ವವನ್ನು ನಮ್ಮ ಸಂಸ್ಕೃತಿ ಒಪ್ಪಿಕೊಂಡಿದೆ. ಇಲ್ಲಿ ಯಾವ ಮೌಲ್ಯ ಹೆಚ್ಚು ಒಪ್ಪಿತವಾದದ್ದು ಎಂಬುದೇ ಸಮಸ್ಯಾತ್ಮಕವಾದದ್ದು~ ಎಂದರು.ಸೀಮೋಲ್ಲಂಘನೆಗೆ ಸಂಬಂಧಿಸಿದಂತೆ ಕನ್ನಡ ಕಾವ್ಯ ಹಾಕಿಕೊಂಡ ಸೀಮೆಯ ಗಡಿ ಅತ್ಯಂತ ಸಂಕೀರ್ಣವಾದುದು. ಪರನಾರಿಯನ್ನು ಅಪೇಕ್ಷಿಸುವುದು ಅಪರಾಧ ಎಂಬ ನಿಲುವು ಹೊಂದಿದ್ದ ರಾವಣ, ಸೀತೆಯನ್ನು ಕಂಡಾಕ್ಷಣ ವ್ರತ ಮುರಿದ ಸೀಮೋಲ್ಲಂಘನೆಯ ಬಗ್ಗೆ ನಾಗಚಂದ್ರ ತನ್ನ ಕಾವ್ಯದಲ್ಲಿ `ಸಮುದ್ರವೂ ಒಮ್ಮಮ್ಮೆ ತನ್ನ ಮೇರೆಯನ್ನು ದಾಟುವುದಿಲ್ಲವೇ?~ ಎಂಬ ಸಾಲುಗಳನ್ನು ಬರೆದಿರುವುದನ್ನು ಅವರು ಉಲ್ಲೇಖಿಸಿದರು.ಪುತಿನ ಅವರ `ಗೋಕುಲ ನಿರ್ಗಮನ~ ಕವಿತೆಯಲ್ಲಿನ `ಪರನಾಡಿನ ಕರೆ ಕೇಡಿನ ಕರೆ~ ಎಂಬ ಸಾಲುಗಳು ಒಂದು ದೇಶದಿಂದ ಮತ್ತೊಂದು ದೇಶಕ್ಕೆ, ಭಾಷೆಗೆ ಸ್ಥಳಾಂತರಗೊಳ್ಳುವಾಗ ಸೃಷ್ಟಿಯಾಗುವ ಬಿಕ್ಕಟ್ಟುಗಳನ್ನು ಸೂಚಿಸುವಂಥದ್ದು. ಅದೇ ರೀತಿಯಲ್ಲಿ ಭಗವದ್ಗೀತೆಯಲ್ಲಿ ಅರ್ಜುನ ಯುದ್ಧ ನಿರಾಕರಿಸಲು ನೀಡಿದ ವರ್ಣ ಸಂಕರದ ಕಾರಣ ಕೂಡ, ಜಾತಿಯ ಸೀಮೋಲ್ಲಂಘನೆಯ ಪ್ರತೀಕ ಎಂದು ಎಚ್‌ಎಸ್‌ವಿ ವ್ಯಾಖ್ಯಾನಿಸಿದರು.ಪುರಾಣದಲ್ಲಿನ ಸಮುದ್ರ ಮಥನ ಪ್ರಸಂಗ ಸೀಮೋಲ್ಲಂಘನೆಯ ಅತ್ಯುತ್ತಮ ರೂಪಕದಂತಿದೆ. ಸೀಮೋಲ್ಲಂಘನೆಗೆ ಎದುರಾಗುವ ಪ್ರತಿರೋಧ ಅಡಚಣೆಯ ರೂಪದಲ್ಲೂ ಇರಬಹುದು, ಆಕರ್ಷಣೆಯ ರೂಪದಲ್ಲೂ ಬರಬಹುದು ಎಂಬುದನ್ನು ಕನ್ನಡ ಕಾವ್ಯ ಅತ್ಯಂತ ಎಚ್ಚರದಿಂದ ಗಮನಿಸಿ ನಿರ್ವಹಿಸಿದೆ ಎಂದರು.

ಆಧುನಿಕ ಕನ್ನಡ ಕಾವ್ಯ ಸೀಮೋಲ್ಲಂಘನೆಗೆ ಸಂಬಂಧಿಸಿದಂತೆ `ನಾಯಕ~ರು ಎದುರಿಸುವ ಬಿಕ್ಕಟ್ಟುಗಳನ್ನು ಚಿತ್ರಿಸುವತ್ತ ಗಮನ ಹರಿಸಿದೆ.

ಗೋಪಾಲಕೃಷ್ಣ ಅಡಿಗ ಅವರ `ಮೋಹನ ಮುರಳಿ~ ಕಾವ್ಯ ಇದಕ್ಕೆ ಅತ್ಯುತ್ತಮ ಉದಾಹರಣೆ. ಈ ಬಿಕ್ಕಟ್ಟುಗಳು ಅಡಿಗರ ಕಾವ್ಯದಲ್ಲಿ `ಕರೆ~ಯ ರೂಪದಲ್ಲಿದ್ದರೆ, ಪುತಿನ ಅವರ ಕಾವ್ಯದಲ್ಲಿ `ಕೊಳಲಿ~ನ ಧ್ವನಿಯಾಗಿ, ಬೇಂದ್ರೆ ಕಾವ್ಯದಲ್ಲಿ `ಕೋಗಿಲೆ~ಯ ಧ್ವನಿಯಾಗಿ ಮಾರ್ದನಿಸಿದೆ ಎಂದು ವಿಶ್ಲೇಷಿಸಿದರು.ದೇವತೆಗಳು ಮನುಷ್ಯ ಸಹಜ ಬಯಕೆಗಳತ್ತ ಆಕರ್ಷಿತಗೊಳ್ಳುವ, ಮನುಷ್ಯ ದೈವತ್ವದ ಗುಣ ಪಡೆಯುವ ಸೀಮೋಲ್ಲಂಘನೆಯನ್ನು ಕುಮಾರವ್ಯಾಸ ತನ್ನ ಕವಿತೆಗಳಲ್ಲಿ ಬಳಸಿರುವ ಅರ್ಜುನ ಹಾಗೂ ಊರ್ವಶಿಯ ಪ್ರಸಂಗವನ್ನು ಅವರು ಉದಾಹರಿಸಿದರು.ಪ್ರತಿಕ್ರಿಯೆ ನೀಡಿದ ಸಾಹಿತಿ ಡಾ.ಯು.ಆರ್. ಅನಂತಮೂರ್ತಿ, ಕನ್ನಡದ ಪ್ರಾಚೀನ ಕವಿಗಳು ಮೀರುವಿಕೆಯನ್ನು ಆಶ್ಚರ್ಯದಿಂದ ನೋಡಿದ್ದಾರೆಯೇ ಹೊರತು ಖಂಡಿಸಲು ಹೋಗಿಲ್ಲ ಎಂದರು.

ಬೆಳಗಿನ ಗೋಷ್ಠಿಯಲ್ಲಿ ರವೀಂದ್ರನಾಥ ಟ್ಯಾಗೋರ್ ಅವರ ಸಾಹಿತ್ಯ ಮತ್ತು ಸಂಗೀತದ ಕುರಿತು ಕೊಲ್ಕತ್ತದ ಬರಹಗಾರ ಸಮೀಕ್ ಬಂದೋಪಾಧ್ಯಾಯ ಹಾಗೂ ಸುದೇಷ್ಣಾ ಬ್ಯಾನರ್ಜಿ ಮಾತನಾಡಿದರು.

ಟ್ಯಾಗೋರ್ ಅವರ ಎರಡು ಕತೆಗಳನ್ನು ಆಧರಿಸಿದ `ಬಾಬುಗಿರಿ~ ನಾಟಕ ಕೆ.ವಿ. ಅಕ್ಷರ ನಿರ್ದೇಶನದಲ್ಲಿ ಪ್ರದರ್ಶನಗೊಂಡಿತು. ಸಂಜೆ ಬೆಂಗಳೂರು ಸಹೋದರರಿಂದ ಕರ್ನಾಟಕ ಸಂಗೀತ ಗಾಯನ ಕಾರ್ಯಕ್ರಮ ನಡೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry