ರಾಮ-ರಹೀಮರ ಭಾವೈಕ್ಯ ಗ್ರಾಮ ರಾಮತೀರ್ಥ

7

ರಾಮ-ರಹೀಮರ ಭಾವೈಕ್ಯ ಗ್ರಾಮ ರಾಮತೀರ್ಥ

Published:
Updated:

ರಾಮ-ರಹೀಮ ಇಬ್ಬರೂ ಒಂದೇ ಎಂಬ ತತ್ವವನ್ನು ಅಕ್ಷರ ಸಹ ಆಚರಣೆಯಲ್ಲಿರಿಸಿಕೊಂಡು ಭಾವೈಕ್ಯ ಮೆರೆಯುತ್ತಿರುವ ವಿಶೇಷ ಗ್ರಾಮ ಹರಿಹರ ತಾಲ್ಲೂಕಿನ `ರಾಮತೀರ್ಥ~.

ಪುರಾತನ ಕಾಲದಲ್ಲಿ ಸೂಳೆಕೆರೆ ಹಳ್ಳದಲ್ಲಿ ಸ್ನಾನ ಮಾಡಿ ಗ್ರಾಮದಲ್ಲಿದ್ದ ರಾಮನ ದೇವಸ್ಥಾನದಲ್ಲಿ ತೀರ್ಥ ಸ್ವೀಕರಿಸಿದರೆ, ರೋಗ-ರುಜಿನಗಳು ವಾಸಿಯಾಗುತ್ತಿದ್ದವು. ಅದಕ್ಕಾಗಿ ಈ ಗ್ರಾಮಕ್ಕೆ `ರಾಮತೀರ್ಥ~ ಎಂದು ಹೆಸರು ಬಂದಿರಬಹುದು ಎಂಬುದು ಗ್ರಾಮಸ್ಥರ ನಂಬಿಕೆ.

ಗ್ರಾಮದಲ್ಲಿರುವ ಸುಮಾರು 80ವರ್ಷಗಳಷ್ಟು ಹಳೆಯದಾದ ಆಂಜನೇಯ ದೇವಸ್ಥಾನವಿದೆ. ಈ ದೇವಸ್ಥಾನದ ಎದುರಿಗೆ ಮುಸ್ಲಿಂ ಧರ್ಮದ ಧ್ವಜ ಕಟ್ಟೆ ಇದೆ. ಈ ಧ್ವಜ ಕಟ್ಟೆಯ ಬದಿಯಲ್ಲಿ ಹೊನ್ನೂರುಸ್ವಾಮಿ ದರ್ಗಾಕ್ಕೆ ಗ್ರಾಮಸ್ಥರು ಪ್ರತಿ ಭಾನುವಾರ ಮತ್ತು ಗುರುವಾರ `ಸಕ್ಕರೆ ಓದಿಕೆ~ ಮಾಡಿಸುತ್ತಾರೆ. ಇದರಿಂದ ಗ್ರಾಮಕ್ಕೆ ಶುಭವಾಗುತ್ತದೆ ಎಂಬ ನಂಬಿಕೆ ಗ್ರಾಮಸ್ಥರಲ್ಲಿದೆ. ವಿಶೇಷವೆಂದರೆ, ಗ್ರಾಮದಲ್ಲಿ ಒಂದೂ ಮುಸ್ಲಿಂ ಕುಟುಂಬವಿಲ್ಲ!

ತಾಲ್ಲೂಕಿನ ರಾಜನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದಕ್ಷಿಣ ಭಾಗದಲ್ಲಿರುವ ರಾಮತೀರ್ಥ ಗ್ರಾಮ 374 ಪುರುಷರು ಹಾಗೂ 347 ಮಹಿಳೆಯರು ಒಟ್ಟು 721 ಜನಸಂಖ್ಯೆ ಹೊಂದಿದೆ. ಗ್ರಾಮದಲ್ಲಿ ವೀರಶೈವ, ಜಂಗಮ, ರೆಡ್ಡಿ, ವಿಶ್ವಕರ್ಮ, ಗಂಗಾಮತಸ್ಥ, ನಾಯಕ ಜನಾಂಗದವರು ಇದ್ದಾರೆ. ಸಣ್ಣ ಹಿಡುವಳಿದಾರರು ಹಾಗೂ ಕೃಷಿ ಕಾರ್ಮಿಕರೇ ಹೆಚ್ಚಾಗಿ ವಾಸಿಸುವ ಈ ಗ್ರಾಮ ವ್ಯಾಪ್ತಿಯಲ್ಲಿರುವ ಸುಮಾರು 797 ಎಕರೆ ಸಾಗುವಳಿ ಜಮೀನುಗಳು ತೆಂಗು, ಅಡಿಕೆ, ಬಾಳೆ ಹಾಗೂ ಎಲೆಬೆಳ್ಳಿ ತೋಟಗಳು ವರ್ಷಪೂರ್ತಿ ಹಸಿರಿನಿಂದ ನಳನಳಿಸುತ್ತವೆ. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿವರೆಗಿನ ವಿದ್ಯಾಭ್ಯಾಸಕ್ಕೆ ಅನುಕೂಲವಿದೆ.

ಬೇಸಾಯವೇ ಬದುಕು

ಇಲ್ಲಿನ ಜನ ಬೇಸಾಯವನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ. ಗ್ರಾಮದ ಬದಿಯಲ್ಲಿ ಹರಿಯುವ ಸೂಳೆಕೆರೆ ಹಳ್ಳದಿಂದಾಗಿ 10 ಗುಂಟೆ ಜಮೀನು ಹೊಂದಿರುವ ಅನೇಕ ಸಣ್ಣ ಹಿಡುವಳಿದಾರರು ಎಲೆಬಳ್ಳಿ ತೋಟ ಕೃಷಿಯಿಂದ ಜೀವನ ಸಾಗಿಸುತ್ತಿದ್ದಾರೆ. ಸರ್ಕಾರದ 11 ಎಕರೆ ಗೋಮಾಳ ಪ್ರದೇಶದ ಕೆಲವು ಭಾಗವನ್ನು ಸ್ಮಶಾನಕ್ಕೆ ನೀಡಲಾಗಿದೆಯಾದರೂ, ಸ್ಮಶಾನಕ್ಕೆ ಸೂಕ್ತ ರಸ್ತೆ ಇಲ್ಲ. ರಾಮತೀರ್ಥ ಮತ್ತು ಬೆಳ್ಳೂಡಿ ಗ್ರಾಮಗಳನ್ನು ಬೆಸೆಯುವ ಉದ್ದೇಶದಿಂದ ಇತ್ತೀಚೆಗೆ ನಿರ್ಮಾಣಗೊಂಡ ಚೆಕ್‌ಡ್ಯಾಂ, ರಸ್ತೆಯ ಸಮಸ್ಯೆಯಿಂದಾಗಿ ಸಾರ್ವಜನಿಕ ಸಂಚಾರಕ್ಕೆ ದೊರೆತಿಲ್ಲ. ಹಲವಾರು ಸಮಸ್ಯೆಗಳು ಗ್ರಾಮಸ್ಥರನ್ನು ಕಾಡುತ್ತಿವೆ.

ಮುಗ್ಧ ಜನರು

`ಎಷ್ಟೋ ವರ್ಷಗಳವರೆಗೆ ತಾಲ್ಲೂಕಿನಲ್ಲಿ ರಾಮತೀರ್ಥ ಎಂಬ ಗ್ರಾಮವಿದೆ ಎಂದು ನಗರದ ಜನರಿಗೆ ಗೊತ್ತಿರಲಿಲ್ಲ. ಅದಕ್ಕೆ ಕಾರಣ, ನಮ್ಮೂರಿನ ಯಾವುದೇ ವ್ಯಾಜ್ಯ-ತಂಟೆ ತಕರಾರು ಪೊಲೀಸ್ ಠಾಣೆ ಮೆಟ್ಟಿಲು ಹತ್ತಿರ ಸುಳಿದಿರಲಿಲ್ಲ. ಅಷ್ಟೊಂದು ಸೌಹಾರ್ದ ಹಾಗೂ ಹೊಂದಾಣಿಕೆ ಗ್ರಾಮಸ್ಥರಲ್ಲಿದೆ. ನಮ್ಮೂರಿನ ಜನ ತುಂಬಾ ಮುಗ್ಧರು, ತಾವಾಯಿತು ತಮ್ಮ ಕೆಲಸವಾಯಿತು. ಮತ್ತೊಬ್ಬರ ತಂಟೆಗೆ ಹೋಗುವುದಿಲ್ಲ~ ಎನ್ನುತ್ತಾರೆ ಗ್ರಾಮದ ಹಿರಿಯ ಟಿ. ಹನುಮಂತಪ್ಪ.

`ಇತ್ತೀಚೆಗೆ ಗ್ರಾಮಸ್ಥರ ಮುಗ್ಧತೆಯೇ ದೌರ್ಬಲ್ಯ ಎನ್ನುವಂತಾಗಿದೆ. ಗ್ರಾಮದ ಪಕ್ಕದಲ್ಲೇ ಸೂಳೆಕೆರೆಹಳ್ಳ ಹರಿಯುತ್ತದೆ. ಹಳ್ಳದ ಮೇಲ್ಭಾಗ ಜಮೀನುಗಳಲ್ಲಿನ ಸೋರಿಕೆ ನೀರಿನಲ್ಲಿ ಬೆರೆತ ರಸಗೊಬ್ಬರ ಹಾಗೂ ಕ್ರಿಮಿನಾಶಕಗಳಿಂದ ಹಳ್ಳದ ನೀರು ಮಲಿನಗೊಂಡಿದೆ. ಈ ನೀರನ್ನು ಕುಡಿಯಲು ಬಳಸುವುದರಿಂದ ರೋಗಗಳು ಹರಡುತ್ತದೆ. ಕುಡಿಯುವ ನೀರಿಗಾಗಿ ಗ್ರಾಮ ಪಂಚಾಯ್ತಿಯಿಂದ ಕೊಳವೆಬಾವಿ ಕೊರೆಸಿದ್ದಾರೆ. ಅದರಲ್ಲಿ ಫ್ಲೋರೈಡ್ ಅಂಶ ಹೆಚ್ಚಾಗಿದ್ದು, ಅದೂ ಸಹ ಕುಡಿಯಲು ಯೋಗ್ಯವಾಗಿಲ್ಲ. ಅನಿವಾರ್ಯವೆಂಬಂತೆ ಇದೇ ನೀರನ್ನು ಕುಡಿಯಲು ಬಳಸುತ್ತಿದ್ದೇವೆ~ ಎನ್ನುತ್ತಾರೆ ಗ್ರಾಮಸ್ಥ ಎಚ್.ಎಸ್. ಮಹಾದೇವಪ್ಪ.

`ಗ್ರಾಮಕ್ಕೆ ಸಾರಿಗೆ ವ್ಯವಸ್ಥೆ ಸೂಕ್ತವಾಗಿಲ್ಲ. ಕಾಲೇಜುಗಳ ನಡೆಯುವ ದಿನಗಳಲ್ಲಿ ಕೆಎಸ್‌ಆರ್‌ಟಿಸಿಯ ಒಂದೇ ಬಸ್ ಗ್ರಾಮಕ್ಕೆ ಬೆಳಿಗ್ಗೆ ಮತ್ತು ಸಾಯಂಕಾಲ ಮಾತ್ರ ಬರುತ್ತದೆ. ಬಾಕಿ ದಿನಗಳಲ್ಲಿ ಗ್ರಾಮದಲ್ಲಿರುವ ಸರಕು ಸಾಗಣೆ ಆಟೋರಿಕ್ಷಾಗಳನ್ನೇ ಸಾರಿಗೆ ಸಾಧನಗಳನ್ನಾಗಿ ಬಳಸಿಕೊಳ್ಳುತ್ತಿದ್ದೇವೆ. ರಾತ್ರಿಯ ವೇಳೆ ವಯೋವೃದ್ಧರು ಅಥವಾ ಗರ್ಭಿಣಿಯರು ಅನಾರೋಗ್ಯದಿಂದ ಬಳಲಿದಾಗ ಇದೇ ಸರಕು ಸಾಗಾಣಿಕೆ ಆಟೋರಿಕ್ಷಾಗಳನ್ನೇ ಬಳಸುತ್ತೇವೆ. ಸೂಕ್ತ ಸಾರಿಗೆ ವ್ಯವಸ್ಥೆ ಗ್ರಾಮಕ್ಕೆ ಅಗತ್ಯ ಎನ್ನುತ್ತಾರೆ ಗ್ರಾಮದ ಎಚ್.ಎಸ್. ಬಸವರಾಜ.

`ಗ್ರಾಮದ ರಸ್ತೆಗಳೆಲ್ಲಾ ಹದಗೆಟ್ಟು ಹೋಗಿವೆ. ಫ್ಲೋರೈಡ್‌ಯುಕ್ತ ನೀರಿನಿಂದಾಗಿ ಗ್ರಾಮಸ್ಥರು ಮೂಳೆ ಸವೆತ ರೋಗದಿಂದ ನರಳುತ್ತಿದ್ದಾರೆ. ನೀರಿಗಾಗಿ ನಿರ್ಮಿಸಿದ ಓವರ್‌ಹೆಡ್ ಟ್ಯಾಂಕ್ ಕಾಮಗಾರಿ ಅರ್ಧಕ್ಕೆ ನಿಂತಿದೆ. ಪ್ರೌಢಶಾಲೆಗಾಗಿ ಮಕ್ಕಳು ಪಕ್ಕದ ಹಳ್ಳಿಗೆ ಅಥವ ನಗರಕ್ಕೆ ಹೋಗಬೇಕಾದ ಪರಿಸ್ಥಿತಿ ಇದೆ. ನಾವೆಲ್ಲಾ ಸತ್ತ ಮೇಲಾದರೂ ನಮ್ಮೂರು ಅಭಿವೃದ್ಧಿ ಆಗಬಹುದಾ?~ ಎಂದು ಪ್ರಶ್ನಿಸುತ್ತಾರೆ ಗ್ರಾಮದ ಹಿರಿಯರಾದ ಅಡಿವೆಪ್ಪಾರ ಪರಮೇಶ್ವರಪ್ಪ.

ಗ್ರಾಮಕ್ಕೆ ನೀರಿನ ಶುದ್ಧೀಕರಣ ಘಟಕ ಸ್ಥಾಪನೆ ಮಾಡಿದರೆ, ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರು ದೊರೆಯುತ್ತದೆ. ಸಾರಿಗೆ ವ್ಯವಸ್ಥೆ ಉತ್ತಮಗೊಂಡರೆ, ಗ್ರಾಮದ ಮಹಿಳೆಯರು ವಿದ್ಯಾವಂತರಾಗುತ್ತಾರೆ. ಮುಸ್ಲಿಂ ಜನಾಂಗದವರೇ ಇಲ್ಲದ ಊರಿನಲ್ಲಿ ಮುಸ್ಲಿಂ ದರ್ಗಾಕ್ಕೆ ವಾರದಲ್ಲಿ ಎರಡು ದಿನ ಸಕ್ಕರೆ ಓದಿಕೆ ಮಾಡಿಸುತ್ತಾ ಭಾವೈಕ್ಯ ಮೆರೆಯತ್ತಿರುವ ರಾಮತೀರ್ಥ ಎಲೆ ಮರೆ ಕಾಯಂತೆ ಇದ್ದರೂ, ರಾಜ್ಯದಲ್ಲೇ ಮಾದರಿ ಗ್ರಾಮವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry