ಶನಿವಾರ, ಏಪ್ರಿಲ್ 17, 2021
27 °C

ರಾಮ-ವಿವೇಕರ ಗಡಿಯಲ್ಲಿ ಬದುಕು ದುಸ್ತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಅತ್ತ ಬೆಳೆಯುತ್ತಿರುವ ವಿವೇಕಾನಂದನಗರ. ಇತ್ತ ಅಭಿವೃದ್ಧಿಯ ಕನಸು ಕಾಣುತ್ತಿರುವ ಜನರನ್ನು ಒಳಗೊಂಡಿರುವ ರಾಮಲಿಂಗೇಶ್ವರನಗರ. ಎರಡೂ ಪ್ರದೇಶಗಳು ಸೇರುವ ಜಾಗದಲ್ಲಿರುವವರ ಬದುಕು ಮಾತ್ರ ದುಸ್ತರ.ನಗರದ ಹಳೆಯ ಪ್ರದೇಶಗಳಲ್ಲಿ ಒಂದಾದ ರಾಮಲಿಂಗೇಶ್ವರ ನಗರದ ಸಮೀಪಕ್ಕೆ ತಾಗಿಕೊಂಡೇ ಬೆಳೆಯುತ್ತಿದೆ ವಿವೇಕಾನಂದನಗರ. ಅಲ್ಲಿ ಇನ್ನೇನು ಪ್ಲಾಟ್‌ಗಳನ್ನು ತಯಾರಿಸಿ ಮಾರುವ ಸಿದ್ಧತೆಗಳು ನಡೆಯುತ್ತಿವೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಇನ್ನೊಂದು ಬದಿಯಲ್ಲಿ ತೋಳನಕೆರೆಯ ಅಭಿವೃದ್ಧಿ ಕಾರ್ಯ ನಾಗಾಲೋಟದಲ್ಲಿ ನಡೆಯುತ್ತಿದೆ. ಇದನ್ನೆಲ್ಲ ನೋಡುತ್ತಲೇ ಸಂಕಷ್ಟದ ಜೀವನ ನಡೆಸುತ್ತಿದ್ದಾರೆ ರಾಮಲಿಂಗೇಶ್ವರ ನಗರದ ಒಂದು ಬದಿಯ ಜನರು.ರಾಮಲಿಂಗೇಶ್ವರನಗರದ ಮೂರು ಭಾಗಗಳು ಇಳಿಜಾರಾಗಿದ್ದು, ಒಂದು ಭಾಗ ಕೆರೆಯ ಕಡೆಗೆ ತೆರೆದುಕೊಂಡಿದೆ. ಮೂರು ಭಾಗಗಳ ಎತ್ತರ ಪ್ರದೇಶದಿಂದ ಬರುವ ಕೊಳೆ ಕೆಳಗಿನ ಪ್ರದೇಶದಲ್ಲಿ ಸಂಗ್ರಹವಾಗುತ್ತದೆ. ಇದು ಈ ಹಿಂದೆ ತೋಳನಕೆರೆಯನ್ನು ಸೇರುತ್ತಿತ್ತು. ಆದರೆ ಕೆರೆ ಅಭಿವೃದ್ಧಿಗೆ ಮುಂದಾದ ಜಿಲ್ಲಾಡಳಿತ ಕೆರೆಗೆ ಕೊಳೆನೀರು ಸೇರಿಸುವ ಎಲ್ಲ ಮಾರ್ಗಗಳನ್ನು ಬಂದ್ ಮಾಡಿದೆ. ಹೀಗಾಗಿ ಕೊಳೆ ಸಂಗ್ರಹವಾಗಿ ರಾಮಲಿಂಗೇಶ್ವರನಗರದ ಒಂದು ಭಾಗ ಹಂದಿಗಳ ಆವಾಸಸ್ಥಾನವಾಗಿ ಮಾರ್ಪಟ್ಟಿದೆ. ಸೊಳ್ಳೆಗಳ ಕಾಟವಂತೂ ಹೇಳತೀರದು ಎಂದು ಇಲ್ಲಿನ ನಿವಾಸಿಗಳು ಹೇಳುತ್ತಾರೆ.`ಪಾಲಿಕೆ ಸಿಬ್ಬಂದಿ ಇಲ್ಲಿ ಸ್ವಚ್ಛತೆಯನ್ನು ಆಗಾಗ ಮಾಡುತ್ತಾರೆ. ಆದರೆ ಮೇಲ್ಭಾಗದಿಂದ ಹರಿದು ಬರುವ ಕೊಳೆ ನೀರು ಹಾಗೂ ಇಲ್ಲೇ ಸಂಗ್ರಹವಾಗುವ ಪ್ಲಾಸ್ಟಿಕ್‌ನಿಂದಾಗಿ ಮತ್ತೆ ಒಂದೆರಡು ದಿನಗಳಲ್ಲಿ ಕೊಚ್ಚೆ ತುಂಬಿಕೊಳ್ಳುತ್ತದೆ~ ಎಂದು ಸ್ಥಳೀಯರು ಹೇಳುತ್ತಾರೆ.ಈ ಪ್ರದೇಶದಲ್ಲಿ ಬನ್ನಿ ಮಹಾಂಕಾಳಮ್ಮನ ಗುಡಿ ಇದೆ. ಇದರ ಸುತ್ತ ಕೂಡ ಕೊಳೆ ತುಂಬಿದೆ. ಪೂಜೆ ನಡೆಯುವ ಮಂಗಳವಾರ ಹಾಗೂ ಶುಕ್ರವಾರ ದೇವಿಯ ಚಾಕರಿ ಎಂದು ತಿಳಿದು ಗುಡಿಯ ಸುತ್ತಲ ಪ್ರದೇಶವನ್ನು ಕೆಲವರು ಶುಚಿಗೊಳಿಸುತ್ತಾರೆ. ಇದು ಬಿಟ್ಟರೆ ಗುಡಿಯ ಬಳಿಯಲ್ಲೂ ಸ್ವಚ್ಛತೆ ದೂರವೇ.

`ಸೊಳ್ಳೆ ಕಡಿಸಿಕೊಂಡು, ಜಡ್ಡು ಬಿದ್ದು ಸಾಕಾಗಿದೆ. ಸಮಾಧಾನವೆಂಬುದೇ ಇಲ್ಲ~ ಎಂದು ಸ್ಥಳೀಯ ಮಹಿಳೆಯೊಬ್ಬರು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.