ರಾಯಚೂರಲ್ಲಿ ಐಐಟಿ ಸ್ಥಾಪನೆಗೆ ಬೆಂಬಲ: ಶೆಟ್ಟರ್

7

ರಾಯಚೂರಲ್ಲಿ ಐಐಟಿ ಸ್ಥಾಪನೆಗೆ ಬೆಂಬಲ: ಶೆಟ್ಟರ್

Published:
Updated:

ರಾಯಚೂರು: ಅಭಿವೃದ್ಧಿ ಮತ್ತು ರಾಜ್ಯದ ಹಿತಾಸಕ್ತಿ ಬಂದಾಗ ಪಕ್ಷಬೇಧ ಮೆರೆತು ಒಂದಾಗಿ ಕೆಲಸ ಮಾಡಬೇಕಾಗಿದೆ. ರಾಯಚೂರು ಜಿಲ್ಲೆಯ ಬಹು ದಿನದ ಬೇಡಿಕೆ ಭಾರತೀಯ ತಂತ್ರಜ್ಞಾನ ಸಂಸ್ಥೆ ಸ್ಥಾಪನೆ ಮಾಡಬೇಕು ಎಂಬುದಾಗಿದೆ.ರಾಜ್ಯ ಸರ್ಕಾರದ ಸಂಪೂರ್ಣ ಬೆಂಬಲವಿದ್ದು, ಕೇಂದ್ರ ಸಚಿವರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ವೀರಪ್ಪ ಮೊಯಿಲಿ ಅವರು ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಮೂಲಕ ಈ ಭಾಗದಲ್ಲಿ ಐಐಟಿ ಸ್ಥಾಪನೆಗೆ ಪ್ರಯತ್ನಿಸಬೇಕು ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.ಶುಕ್ರವಾರ ಸಮೀಪದ ಆಸ್ಕಿಹಾಳ ಗ್ರಾಮದ ಹತ್ತಿರ ಪವರ್ ಗ್ರಿಡ್ ಕಾರ್ಪೊರೇಶನ್ ಸಂಸ್ಥೆಯು ಆಯೋಜಿಸಿದ್ಧ ರಾಯಚೂರು-ಸೊಲ್ಲಾಪುರ 765 ಕೆವಿ ಸಾಮರ್ಥ್ಯದ ಪ್ರಸರಣ ವ್ಯವಸ್ಥೆ ಶಂಕುಸ್ಥಾಪನೆ ಮತ್ತು ಉಪಕೇಂದ್ರ ನಿರ್ಮಾಣ ಕಾಮಗಾರಿಗೆ ಶಂಕು ಸ್ಥಾಪನೆ ಸಮಾರಂಭದಲ್ಲಿ ಮಾತನಾಡಿದರು.ಇದೇ 18ರಂದು ಗುಲ್ಬರ್ಗದಲ್ಲಿ ಸಚಿವ ಸಂಪುಟ ಸಭೆ ನಡೆಸಲಾಗುತ್ತಿದೆ. ಈ ಭಾಗದ ಬಹುಮುಖ್ಯ ಸಮಸ್ಯೆ, ಸವಾಲುಗಳ ಪರಿಹಾರಕ್ಕೆ ಗಂಭೀರ ಚಿಂತನೆ ನಡೆಸಿ ನಿರ್ಧಾರ ಕೈಗೊಳ್ಳುವ ಪ್ರಯತ್ನ ಮಾಡಲಾಗುವುದು. ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ನಿರ್ಮಾಣ ಮಾಡುವ ಸಮಸ್ತ ಉತ್ತರ ಕರ್ನಾಟಕದ ಜನತೆ ಅಭಿವೃದ್ಧಿ ವಿಷಯದಲ್ಲಿ, ನಾಡಿನ ಹಿತಚಿಂತನೆ ವಿಷಯದಲ್ಲಿ ಒಂದೇ ಎಂಬುದನ್ನು ಸಾಬೀತುಪಡಿಸಿದ್ದೇವೆ ಎಂದು ನುಡಿದರು.ವಿದ್ಯುತ್ ವಲಯ ಸುಧಾರಣೆಗೆ ರಾಜ್ಯ ಸರ್ಕಾರವು ತನ್ನ ಆರ್ಥಿಕ ಇತಿಮಿತಿಯಲ್ಲಿ ವಿದ್ಯುತ್ ಸ್ವಾವಲಂಬನೆಗೆ ಎಲ್ಲ ಕ್ರಮ ಕೈಗೊಳ್ಳುತ್ತಿದೆ. ಈಚೆಗೆ ಹಾಸನ ಜಿಲ್ಲೆ ಶಾಂತಿ ಗ್ರಾಮದಲ್ಲಿ 400 ಮೆಗಾವಾಟ್ ಜಲವಿದ್ಯುತ್ ಯೋಜನೆಗೆ ಚಾಲನೆ ನೀಡಲಾಗಿದೆ. ಒಟ್ಟು 3,764 ಮೆಗಾವಾಟ್ ಶಾಖೋತ್ಪನ್ನ ವಿದ್ಯುತ್ ಉತ್ಪಾದನೆ ಘಟಕಗಳಿಗೆ ಕೇಂದ್ರ ಕಲ್ಲಿದ್ದಲು ದೊರಕಿಸಬೇಕು ಎಂದು ಮನವಿ ಮಾಡಿದರು.ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿ, ರಾಯಚೂರು-ಸೊಲ್ಲಾಪುರ 765 ಕೆವಿ ಸಾಮರ್ಥ್ಯದ ವಿದ್ಯುತ್ ಪ್ರಸರಣ ವ್ಯವಸ್ಥೆ ಶಂಕುಸ್ಥಾಪನೆ ದಕ್ಷಿಣ ಭಾರತದ ರಾಜ್ಯಗಳಿಗರ ವರದಾನವಾಗಿದೆ. ಇಲ್ಲಿ 230 ಕೋಟಿ ಮೊತ್ತದಲ್ಲಿ ಗ್ರಿಡ್ ನಿರ್ಮಾಣ. ಒಟ್ಟು ಯೋಜನೆಗೆ 2000 ಕೋಟಿ ಮೊತ್ತವನ್ನು ಕೇಂದ್ರ ಇಂಧನ ಖಾತೆ ಕರ್ಚು ಮಾಡುತ್ತಿದೆ. ಇದಕ್ಕೆ ಕೇಂದ್ರ ಇಂಧನ ಖಾತೆ ಹಿಂದಿನ ಸಚಿವ ಸುಶೀಲಕುಮಾರ ಶಿಂಧೆ ಹಾಗೂ ಈಗಿನ ಇಂಧನ ಖಾತೆ ಸಚಿವ ವೀರಪ್ಪ ಮೊಯಿಲಿ ಅವರ ವಿಶೇಷ ಕಾಳಜಿಯೇ ಕಾರಣವಾಗಿದೆ ಎಂದು ಹೇಳಿದರು.ಒಂದು ವರ್ಷ ಅವಧಿಯಲ್ಲಿ ಈ ಕಾರ್ಯ ಪೂರ್ಣಗೊಳ್ಳಬೇಕು. ಬೇಗನೇ ವಿದ್ಯುತ್ ಸಂಪರ್ಕ ಮಾರ್ಗ ರೂಪಗೊಳ್ಳಬೇಕು. ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ಕೇಂದ್ರ ಸರ್ಕಾರವು ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ವರದಾನವಾಗುವಂಥ ಮತ್ತೊಂದು ಯೋಜನೆ ದೊರಕಿಸಿದೆ. ಗುಲ್ಬರ್ಗ-ಅನಂತಪುರ ರಾಷ್ಟ್ರೀಯ ಹೆದ್ದಾರಿ ಮಾರ್ಗ ಯೋಜನೆಗೆ 1200 ಕೋಟಿ ದೊರಕಿಸಿದೆ. ಅನಂತಪುರ ರಾಷ್ಟ್ರೀಯ ಹೆದ್ದಾರಿಯನ್ನು ಈ ನೂತನ ಹೆದ್ದಾರಿ ಸಂಪರ್ಕಗೊಂಡು ಬೆಂಗಳೂರಿಗೆ ಸಂಪರ್ಕ ಕಲ್ಪಿಸಲಿದೆ. ಈಗಾಗಲೇ ಯೋಜನೆ ಅನುಮೋದನೆಗೊಂಡಿದೆ ಎಂದು ತಿಳಿಸಿದರು.ಹೈ.ಕ ಭಾಗ ಕಣ್ತೆರೆದು ನೋಡಿ: ಮುಂಬೈ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕ ಎಂಬುವಂಥವು ಉತ್ತರ ಕರ್ನಾಟಕ ಎರಡು ಕಣ್ಣುಗಳಿದ್ದಂತೆ. ಒಂದು ಕಣ್ಣು ಇದ್ದರೆ ವ್ಯಕ್ತಿ ಹೇಗೆ ಛಂದ ಕಾಣುವುದಿಲ್ಲವೋ ಹಾಗೆಯೇ ನಮ್ಮ ಸ್ಥಿತಿ ಆಗುತ್ತದೆ. ಹೀಗಾಗಿ ಹೈದರಾಬಾದ್ ಕರ್ನಾಟಕ ಪ್ರದೇಶದ ಅಭಿವೃದ್ಧಿಯತ್ತಲೂ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ವಿಶೇಷ ಆಸ್ತೆ ವಹಿಸಬೇಕು ಎಂದು ಹೇಳಿದರು.ಕಲಂ 371 ಲೋಕ ಸಭೆಯಲ್ಲಿ ಮಂಡನೆಯಾಗಿದ್ದು, ಇದನ್ನು 2/3  ಬಹುಮತದೊಂದಿಗೆ  ಪಾಸ್ ಮಾಡಬೇಕಾದದ್ದು ಎಲ್ಲ ರಾಜಕೀಯ ಪಕ್ಷಗಳ ಹೊಣೆಯಾಗಿದೆ. ರಾಜ್ಯ ಸರ್ಕಾರವೂ ಇದಕ್ಕಾಗಿ ಪ್ರಯತ್ನಿಸಬೇಕು ಎಂದರು.ಅಧ್ಯಕ್ಷತೆವಹಿಸಿದ್ದ ಶಾಸಕ ಸಯ್ಯದ್ ಯಾಸಿನ್ ಮಾತನಾಡಿ, ಈ ಭಾಗದಲ್ಲಿ 765 ವಿದ್ಯುತ್ ಪ್ರಸರಣ ವ್ಯವಸ್ಥೆ, ಗ್ರಿಡ್ ನಿರ್ಮಾಣದಿಂದ ಈ ಭಾಗಕ್ಕೆ ಅನುಕೂಲ ಆಗಲಿದೆ. ಈ ಭಾಗದ ಬಹುದಿನದ ಬೇಡಿಕೆ 371 ಕಲಂ ಜಾರಿಗೆ ಕೇಂದ್ರ ಸಚಿವ ಖರ್ಗೆ ಅವರು ವಿಶೇಷ ಪ್ರಯತ್ನ ಮಾಡಿದ್ದಾರೆ. ಕುಡಿಯುವ ನೀರು ಪೂರೈಕೆ ಯೋಜನೆ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯ ನಡೆಯಬೇಕಿದೆ ಎಂದರು.ಕೇಂದ್ರ ಇಂಧನ ಖಾತೆ ರಾಜ್ಯ ಸಚಿವ  ಕೆ.ಸಿ ವೇಣುಗೋಪಾಲ್, ಪುದುಚೇರಿ ರಾಜ್ಯದ ಇಂಧನ ಖಾತೆ ಸಚಿವ  ಟಿ ತ್ಯಾಗರಾಜನ್, ರಾಜ್ಯ ಇಂಧನ ಖಾತೆ ಸಚಿವೆ ಶೋಭಾ ಕರಂದ್ಲಾಜೆ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್ ಪಾಟೀಲ್ ಮಾತನಾಡಿದರು. ಶಾಸಕರಾದ ಪ್ರತಾಪಗೌಡ ಪಾಟೀಲ್. ಹಂಪಯ್ಯ ನಾಯಕ, ರಾಜಾ ರಾಯಪ್ಪ ನಾಯಕ, ಸಂಸದ ಎಸ್ ಪಕ್ಕೀರಪ್ಪ, ವಿಧಾನ ಪರಿಷತ್ ಸದಸ್ಯ ಅಮರನಾಥ್ ಪಾಟೀಲ್, ಪವರ್ ಗ್ರಿಡ್ ಕಾರ್ಪೊರೇಶನ್ ಸಂಸ್ಥೆಯ ಅಧ್ಯಕ್ಷ ಆರ್.ಎನ್ ನಾಯಕ ವೇದಿಕೆಯಲ್ಲಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry