ಸೋಮವಾರ, ಜೂನ್ 14, 2021
26 °C

ರಾಯಚೂರಿನಂಥ ಬೆಂಗಾಡು ಆಗುತ್ತಿದೆಯೇ ಕಲ್ಪತರು ನಾಡು

ಪ್ರಜಾವಾಣಿ ವಾರ್ತೆ/ಸಿ.ಕೆ.ಮಹೇಂದ್ರ Updated:

ಅಕ್ಷರ ಗಾತ್ರ : | |

ತುಮಕೂರು: ಒಂದು ಕಡೆ ಅಂತರ್ಜಲ ಕುಸಿದು ಕುಡಿಯುವ ನೀರಿಗೂ ಹಾಹಾಕಾರ. ಇನ್ನೊಂದು ಕಡೆ ಜಿಲ್ಲೆಯ ತಾಪಮಾನ ಒಂದು ವಾರದಿಂದ ಜರ‌್ರನೆ ಏರುತ್ತಿದ್ದು, ಬಿಸಿಲ ಬೇಗೆಗೆ ಜನ ಕಂಗಾಲಾಗತೊಡಗಿದ್ದಾರೆ. ತೋಟಗಾರಿಕೆ ಬೆಳೆಗಾರರ ಆತಂಕ ದಿನೇದಿನೆ ಬಿಸಿಲಿನಂತೆಯೇ ಹೆಚ್ಚುತ್ತಿದೆ.ಮಂಗಳವಾರ 35-36 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುವ ಮೂಲಕ ಜಿಲ್ಲೆ ಅಕ್ಷರಶಃ ಬಿಸಿಲಿನ ಬೆಂಕಿಯಲ್ಲಿ ಬೆಂದು ಹೋಗಿದೆ. ತೇವಾಂಶ ಪ್ರಮಾಣ ಇಳಿಮುಖವಾಗಿದ್ದು, ಆತಂಕ ಮೂಡಿಸಿದೆ. ಕಳೆದ ವಾರ ಉಷ್ಣಾಂಶ 38 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಆದರೆ ಉಷ್ಣಾಂಶ ಮುಂದಿನ ಮೂರು ದಿನದಲ್ಲಿ ಮತ್ತಷ್ಟು ಹೆಚ್ಚುವ ಸಂಭವವಿದೆ.ಸೋಮವಾರ ಜಿಲ್ಲೆಯ ಉಷ್ಣಾಂಶ ಹತ್ತಿರಹತ್ತಿರ ರಾಯಚೂರು ಜಿಲ್ಲೆಯ ಉಷ್ಣಾಂಶಕ್ಕೆ ಸಮನಾಗಿತ್ತು. ಹೀಗಾಗಿ ಜನರು ಸೆಕೆಯಿಂದ ಕಂಗಾಲಾಗಿ ಹೋದರು. ಈ ಮಟ್ಟದ ಅಧಿಕ ತಾಪಮಾನ ಅನುಭವಿಸದ ಜಿಲ್ಲೆಯ ಜನತೆ ಆತಂಕದಲ್ಲಿ ಇದ್ದಾರೆ.ಅಧಿಕ ತಾಪಮಾನದಲ್ಲಿ ಬದುಕುವ ಸಾಮರ್ಥ್ಯವನ್ನು ಜಿಲ್ಲೆಯ ಜನರು ಹೊಂದಿಲ್ಲದ ಕಾರಣ ಜ್ವರ, ಚರ್ಮ ರೋಗದಂಥ ರೋಗಗಳಿಗೆ ಈಡಾಗುತ್ತಿದ್ದಾರೆ. ಬಿಸಿಲಿನ ಪರಿಣಾಮ ಹಿರಿಯರು, ಮಕ್ಕಳಿಗೆ ಹೆಚ್ಚು ತಟ್ಟುತ್ತಿದೆ.

ಜಿಲ್ಲೆಯಲ್ಲಿ ಮಿತಿ ಮೀರಿ ನಡೆಯುತ್ತಿರುವ ಗ್ರಾನೈಟ್ ಗಣಿಗಾರಿಕೆ ಉಷ್ಣಾಂಶದಲ್ಲಿ ಏರುಪೇರಾಗಲು ಕಾರಣವಾಗುತ್ತಿದೆ.

 

ಗ್ರಾನೈಟ್ ಗಣಿಗಾರಿಕೆ, ಬಂಡೆ ಸೀಳುವುದು, ಜೆಲ್ಲಿ ಕ್ರೆಷರ್‌ನಿಂದಾಗಿ ವಾತಾವರಣದಲ್ಲಿ ಬಿಸಿ ಹೆಚ್ಚಾಗಲು ಕಾರಣವಾಗಿವೆ. ಗ್ರಾನೈಟ್ ಗಣಿಗಾರಿಕೆ ವಾತಾವರಣದ ತೇವಾಂಶ ಕಡಿಮೆ ಮಾಡಿ ಬಿಸಿ ಹೆಚ್ಚಿಸುತ್ತಿದೆ.`ಈ ವರ್ಷದಷ್ಟು ಉಷ್ಣಾಂಶ ಯಾವ ವರ್ಷದಲ್ಲೂ ದಾಖಲಾಗಿರಲಿಲ್ಲ. ಈ ಸಲ ನಿರಂತರ ಹೆಚ್ಚುತ್ತಿರುವ ಉಷ್ಣಾಂಶ ಪರಿಸರದ ಅಸಮತೋಲನಕ್ಕೆ ಕನ್ನಡಿಯಾಗಿದೆ. ಈಗಲೇ ಹೆಚ್ಚೆತ್ತುಕೊಂಡು ಪರಿಸರ ಸಮತೋಲನ ಕಾಪಾಡಿಕೊಳ್ಳದಿದ್ದರೆ ಮುಂದಿನ ದಿನಗಳು ಜಿಲ್ಲೆಯ ಪಾಲಿಗೆ ಕಷ್ಟಕರವಾಗಲಿವೆ~ ಎಂದು ತುಮಕೂರು ವಿ.ವಿ. ಹವಾಮಾನ ಕೇಂದ್ರದ ಡಾ.ನಾಗಭೂಷಣ್ ಎಚ್ಚರಿಸುತ್ತಾರೆ.ಜಿಲ್ಲೆಯ ತುಮಕೂರು, ಮಧುಗಿರಿ, ಕೊರಟಗೆರೆ, ಪಾವಗಡದ ಬೆಟ್ಟಗುಡ್ಡ ಸಾಲು ಜಿಲ್ಲೆಗೆ ವರವಾಗುವ ಬದಲಿಗೆ ಮಾನವ ನಿರ್ಮಿತ ಕೃತ್ಯದಿಂದಾಗಿ ಶಾಪವಾಗಿ ಪರಿಣಮಿಸತೊಡಗಿವೆ. ಈ ಬೆಟ್ಟಗುಡ್ಡಗಳಲ್ಲಿನ ಮರಗಳನ್ನು ಕಡಿದು ಬಯಲು ಮಾಡುತ್ತಿರುವ ಕಾರಣ ಸೂರ್ಯನ ಬಿಸಿಲು ನೇರವಾಗಿ ಬಂಡೆಗಳ ಮೇಲೆ ಬಿದ್ದು ವಾತಾವರಣದಲ್ಲಿ ಶಾಖ ಅತಿ ಹೆಚ್ಚಾಗಲು ಕಾರಣವಾಗುತ್ತಿದೆ.

 

ಶಾಖ ಹೆಚ್ಚಾಗುತ್ತಾ ಹೋದಂತೆ ವಾತಾವರಣದ ತೇವಾಂಶ ಕೂಡ ಕಡಿಮೆಯಾಗುತ್ತದೆ. ಇದು ಕೃಷಿ, ಜನ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಅಧ್ಯಯನ ಹೇಳುತ್ತಿದೆ.

ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಪರಿಸರ ಮಾಲಿನ್ಯ ಕೂಡ ವಾತಾವರಣದಲ್ಲಿ ಬಿಸಿ ಹೆಚ್ಚಾಗಲು ಕಾರಣವಾಗಿದೆ.

 

ಜಿಲ್ಲೆಯಲ್ಲಿ ಪ್ರತಿ ವರ್ಷ ವಾಹನಗಳ ಸಂಖ್ಯೆ ಹೆಚ್ಚುತ್ತಾ ಸಾಗಿದ್ದು, ಪರಿಸರ ಮಾಲಿನ್ಯ ತಡೆಯುವಲ್ಲಿ ವಿಫಲವಾಗಿರುವುದು ವಾತಾವರಣದ ಬಿಸಿ ಹೆಚ್ಚಲು ಕಾರಣವಾಗುತ್ತಿದೆ ಎನ್ನಲಾಗಿದೆ ಅಧ್ಯಯನ.ಜಿಲ್ಲೆಯಲ್ಲಿ ಅರಣ್ಯನಾಶ ಕೂಡ ಎಗ್ಗಿಲ್ಲದೆ ಸಾಗಿದೆ. ಅಳಿವಿನಂಚಿಗೆ ಸಾಗಿರುವ ಜಿಲ್ಲೆಯ ಅರಣ್ಯ ಪ್ರದೇಶಗಳ ಪುನುರುಜ್ಜೀವನಕ್ಕೆ ಈವರೆಗೂ ಯಾವುದೇ ಕಾರ್ಯಕ್ರಮ ಹಾಕಿಕೊಂಡಿಲ್ಲ. ಅಲ್ಲದೆ ಇರುವ ಅಲ್ಪಸ್ವಲ್ಪ ಅರಣ್ಯ ಸಂರಕ್ಷಿಸಲು ಇಲಾಖೆಗೆ ಸಾಧ್ಯವಾಗುತ್ತಿಲ್ಲ.ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದ 2009ರ ಸಮೀಕ್ಷೆ ಪ್ರಕಾರ ಜಿಲ್ಲೆಯಲ್ಲಿ ಅರಣ್ಯ ಪ್ರದೇಶದ ಶೇ 94.45ರಷ್ಟು ಪ್ರದೇಶದಲ್ಲಿ ಅರಣ್ಯ ಖಾಲಿಯಾಗಿದೆ.ಚಿಕ್ಕನಾಯಕನಹಳ್ಳಿ, ತಿಪಟೂರು, ಗುಬ್ಬಿಯಲ್ಲಿ ಅವ್ಯಾಹತವಾಗಿ ನಡೆದ ಗಣಿಗಾರಿಕೆಯಿಂದಾಗಿಯೂ ಪರಿಸರದ ಮೇಲೆ ಅಡ್ಡಪರಿಣಾಮ ಬೀರಿತ್ತು. ಪರಿಸರ, ಅರಣ್ಯ ಕಾಪಾಡುವ, ಗಿಡ ಬೆಳೆಸುವ ನಿಟ್ಟಿನಲ್ಲಿ ಕೂಡಲೇ ಕಾರ್ಯಯೋಜನೆ ರೂಪುಗೊಳ್ಳದಿದ್ದರೆ ಜಿಲ್ಲೆ ಭವಿಷ್ಯಕ್ಕೆ ಆತಂಕ ತಪ್ಪಿದ್ದಲ್ಲ ಎನ್ನಲಾಗಿದೆ.ಯುಗಾದಿ ಸಮಯದಲ್ಲಿ ಒಂದೆರಡು ದಿನಗಳಲ್ಲಿ ಮಳೆ ಬಾರದಿದ್ದರೆ ಜಿಲ್ಲೆಯ ತೋಟಗಾರಿಕೆಯನ್ನು ಊಹಿಸಿಕೊಳ್ಳುವುದು ಕೂಡ ಕಷ್ಟ ಎಂದು ಜಿಲ್ಲಾ ತೋಟಗಾರಿಕ ಇಲಾಖೆ ಉಪ ನಿರ್ದೇಶಕ ಪ್ರಸಾದ್ ಆತಂಕ ತೋಡಿಕೊಂಡರು.ಮುಖ್ಯಾಂಶಗಳು* 36 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲು* ಬಿಸಿಲಿನಿಂದ ಹೆಚ್ಚುತ್ತಿರುವ ರೋಗ ರುಜಿನ* ಗ್ರಾನೈಟ್ ಗಣಿಗಾರಿಕೆ ತಂದಿತ್ತ ಬಿಸಿಲ ಶಾಪ* ಶೇ. 94ರಷ್ಟು ಪ್ರದೇಶದಲ್ಲಿ ಅರಣ್ಯ ಖಾಲಿ* ವಾಹನ ಮಾಲಿನ್ಯ ತಡೆಗಟ್ಟುವಲ್ಲಿ ಸೋಲು* ಬೇಕಿದೆ ಪರಿಸರ ಉಳಿಸುವ ಕಾರ್ಯ

     ಯೋಜನೆ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.