ರಾಯಚೂರಿನಲ್ಲಿ ಐಐಟಿ- ಶಿಫಾರಸಿಗೆ ನಿರ್ಧಾರ: ಶೈಕ್ಷಣಿಕ ಬದಲಾವಣೆ ನಿರೀಕ್ಷೆ

7

ರಾಯಚೂರಿನಲ್ಲಿ ಐಐಟಿ- ಶಿಫಾರಸಿಗೆ ನಿರ್ಧಾರ: ಶೈಕ್ಷಣಿಕ ಬದಲಾವಣೆ ನಿರೀಕ್ಷೆ

Published:
Updated:

ರಾಯಚೂರು: ನಾಡಿನ ಶ್ರೇಷ್ಠ ಆರ್ಥಿಕ ತಜ್ಞರಾಗಿದ್ದ ಡಾ. ಡಿ.ಎಂ. ನಂಜುಂಡಪ್ಪ ವರದಿ ಶಿಫಾರಸಿನಂತೆ ರಾಯಚೂರಿನಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಸ್ಥಾಪಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಗುರುವಾರ ಗುಲ್ಬರ್ಗದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

 

ಈ ಮೂಲಕ ಜಿಲ್ಲೆಯ ಜನತೆಯ ಬಹುದಿನಗಳ ಬೇಡಿಕೆಗೆ ರಾಜ್ಯ ಸರ್ಕಾರ ಸ್ಪಂದಿಸುವ ಇಚ್ಛಾಶಕ್ತಿ ಪ್ರದರ್ಶಿಸಿದೆ.

ರಾಯಚೂರಿಗೆ ಪವರ್ ಗ್ರಿಡ್ ಕಾರ್ಪೊರೇಶನ್ ಈಚೆಗೆ ಏರ್ಪಡಿಸಿದ್ದ ಸಮಾರಂಭದಲ್ಲಿ ಪಾಲ್ಗೊಂಡಿದ್ದ  ಮುಖ್ಯಮಂತ್ರಿ ಜಗದೀಶ ಶೆಟ್ಟರ್, `ಗುಲ್ಬರ್ಗದ ಸಚಿವ ಸಂಪುಟ ಸಭೆಯಲ್ಲಿ ರಾಯಚೂರಿನಲ್ಲಿ ಐಐಟಿ ಸ್ಥಾಪನೆ ಬಗ್ಗೆ ನಿರ್ಧರಿಸಲಾಗುವುದು. ಈ ವಿಷಯಕ್ಕೆ ರಾಜ್ಯ ಸರ್ಕಾರ ಬದ್ಧವಾಗಿದ್ದು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದೆ. ಕೇಂದ್ರ ಸಚಿವರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಎಂ ವೀರಪ್ಪ ಮೊಯಿಲಿ, ಕೇಂದ್ರ ಸರ್ಕಾರಕ್ಕೆ ಸೂಕ್ತ ಮನವರಿಕೆ ಮಾಡಿಕೊಟ್ಟು ಐಐಟಿ ಕೇಂದ್ರ ರಾಯಚೂರಿನಲ್ಲಿಯೇ ಸ್ಥಾಪನೆ ಮಾಡಲು ಇಚ್ಛಾಶಕ್ತಿ ತೋರಿಸಬೇಕು~ ಎಂದಿದ್ದರು.ಮುಖ್ಯಮಂತ್ರಿ ಜಗದೀಶ ಶೆಟ್ಟರ್ ನಗರದ ಐಐಟಿ ಮಂಜೂರಾತಿ ಹೋರಾಟ ಸಮಿತಿ, ರಾಯಚೂರು ವಾಣಿಜ್ಯೋದ್ಯಮ ಸಂಸ್ಥೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಿಗೆ ಕೊಟ್ಟ ಭರವಸೆ, ಆಡಿದ ಮಾತನ್ನು ಉಳಿಸಿಕೊಂಡಿದ್ದಾರೆ. ಸಂಪುಟ ಸಭೆ ನಿರ್ಧಾರದ ಮೂಲಕ ಚೆಂಡನ್ನು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಅಂಗಳಕ್ಕೆ ರವಾನಿಸಿದಂತಾಗಿದೆ ಎಂದು ಸಮಿತಿ ಮುಖಂಡರು ಹೇಳಿದ್ದಾರೆ.ಪ್ರಾದೇಶಿಕ ಅಸಮತೋಲನ ಹೋಗಲಾಡಿಸುವ ನಿಟ್ಟಿನಲ್ಲಿ ಅಧ್ಯಯನ ನಡೆಸಿದ್ದ ಅರ್ಥಶಾಸ್ತ್ರಜ್ಞ ನಂಜುಂಡಪ್ಪ ನೀಡಿದ ವರದಿಯಲ್ಲಿ ರಾಯಚೂರಿನಲ್ಲಿ ಐಐಟಿ ಸ್ಥಾಪನೆ ಮಾಡಬೇಕು ಎಂದು ಶಿಫಾರಸು ಮಾಡಿ ದಶಕಗಳು ಕಳೆದಿದೆ.ಈ ಶಿಫಾರಸಿನ ಬಗ್ಗೆ ಆರಂಭದಲ್ಲಿ ಒತ್ತಾಯ ಕಂಡು ಬಂದರೂ ಆಡಳಿತಕ್ಕೆ ಬಂದ ಸರ್ಕಾರಗಳ ಉಪೇಕ್ಷೆಯಿಂದ ಮೂಲೆಗುಂಪಾಗಿತ್ತು. ರಾಯಚೂರು ವಾಣಿಜ್ಯೋದ್ಯಮ ಸಂಘ, ಐಐಟಿ ಮಂಜೂರಾತಿ ಹೋರಾಟ ಸಮಿತಿ, ಕನ್ನಡಪರ ಸಂಘಟನೆಗಳು ಈ ಕುರಿತು ಬಿಜೆಪಿ ಸರ್ಕಾರಕ್ಕೆ ಒತ್ತಾಯ ಮಾಡಿದ್ದವು.ಐಐಟಿ ಕೈ ತಪ್ಪುವ ಭೀತಿ: ಡಾ.ಡಿ.ಎಂ ನಂಜುಂಡಪ್ಪ ವರದಿಯಲ್ಲಿ ರಾಯಚೂರಿನಲ್ಲಿ ಐಐಟಿ ಸ್ಥಾಪನೆ ಬಗ್ಗೆ ಶಿಫಾರಸು ಇದ್ದರೂ ಅದನ್ನು ತಪ್ಪಿಸಿ ಚಿಕ್ಕಬಳ್ಳಾಪುರದಲ್ಲಿ ವಿಶ್ವೇಶ್ವರಯ್ಯ ಐಐಟಿ ಸಂಸ್ಥೆ ಸ್ಥಾಪನೆ ಬಗ್ಗೆ ಕೇಂದ್ರ ಪ್ರಭಾವಿ ಸಚಿವರೊಬ್ಬರು ಪ್ರಯತ್ನಿಸಿದ್ದು ಬಯಲಾಗಿತ್ತು. ಈ ಒಳಸುಳಿ ಅರಿತ ಇಲ್ಲಿನ ಸಂಘಟನೆಗಳು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಜನಪ್ರತಿನಿಧಿಗಳ ಮೇಲೆ ಒತ್ತಡ ತಂದಿದ್ದವು. ಆಗ ಕೇಂದ್ರದ ಸಚಿವರ ಶರವೇಗದ ಪ್ರಯತ್ನ ತಗ್ಗಿತ್ತು ಎಂದು ಹೋರಾಟಗಾರರು ತಿಳಿಸಿದ್ದಾರೆ.ಸಂಘಟನೆಗಳ ನಿರಂತರ ಒತ್ತಡದಿಂದ ರಾಜ್ಯ ಸರ್ಕಾರವು ಕೊನೆಗೂ ನಂಜುಂಡಪ್ಪ ವರದಿ ಶಿಫಾರಸಿಗೆ ಮುಂದಾಗಿದೆ. ವಿಳಂಬವಾದರೂ ರಾಯಚೂರಿನಲ್ಲಿ ಐಐಟಿ ಸ್ಥಾಪನೆಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಂಡು ಸ್ಪಂದಿಸಿರುವುದು ಜಿಲ್ಲೆಯ ಜನತೆಗೆ, ಹೋರಾಟಗಾರರಿಗೆ ಸಂದ ಜಯ ಎಂದು ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹೇಳಿದ್ದಾರೆ.ರಾಜ್ಯ ಸರ್ಕಾರವು ರಾಯಚೂರಿನಲ್ಲಿ ಐಐಟಿ ಸ್ಥಾಪನೆ ಬಗ್ಗೆ ಶೀಘ್ರದಲ್ಲಿ ಕೇಂದ್ರ ಸರ್ಕಾರಕ್ಕೆ ಅಗತ್ಯ ಪ್ರಸ್ತಾವನೆಯನ್ನು ಕಳುಹಿಸಿ ಕಾಳಜಿ ಮೆರೆಯಬೇಕು ಎಂಬುದು ಈ ಜಿಲ್ಲೆಯ ಜನತೆಯ ಒತ್ತಾಯವಾಗಿದೆ.ಶೈಕ್ಷಣಿಕ ವಾತಾವರಣದಲ್ಲಿ ಬದಲಾವಣೆ: ಭಾರತೀಯ ತಂತ್ರಜ್ಞಾನ ಸಂಸ್ಥೆ ಇಲ್ಲಿ ಸ್ಥಾಪನೆಗೊಂಡರೆ ಕೇವಲ ರಾಯಚೂರು ಜಿಲ್ಲೆಯಷ್ಟೇ ಅಲ್ಲ. ಹೈ.ಕ ಭಾಗದ ಶೈಕ್ಷಣಿಕ ಪರಿಸರವೇ ಬದಲಾಗುತ್ತದೆ.ತಾಂತ್ರಿಕ ಶಿಕ್ಷಣ ಪಡೆದವರ ಜೊತೆಗೆ ಬೇರೆಯವರಿಗೂ ಉದ್ಯೋಗ ಅವಕಾಶಗಳು ಹೆಚ್ಚಾಗುತ್ತವೆ. ಉದ್ದಿಮೆದಾರರು ಈ ಭಾಗದತ್ತ ಆದ್ಯತೆ ನೀಡುತ್ತಾರೆ.  ಭವಿಷ್ಯದ ಪೀಳಿಗೆಗೆ ಭವಿಷ್ಯ ಬಂಗಾರ ಆಗುತ್ತದೆ ಎಂಬುದು ತಜ್ಞರು, ಶಿಕ್ಷಣ ಪ್ರೇಮಿಗಳ ಅಭಿಪ್ರಾಯವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry