`ರಾಯಬಾಗ ಹುಲಿ' ವಿ.ಎಲ್.ಪಾಟೀಲ

7
ವ್ಯಕ್ತಿ ಸ್ಮರಣೆ

`ರಾಯಬಾಗ ಹುಲಿ' ವಿ.ಎಲ್.ಪಾಟೀಲ

Published:
Updated:

ಸ್ವಾತಂತ್ರ್ಯ ಬಂದ ಹೊಸದರಲ್ಲಿ ಕಾಂಗ್ರೆಸ್ ಬಿಟ್ಟರೆ ಇನ್ಯಾರೂ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂಬಂತಹ ಸ್ಥಿತಿ ಇತ್ತು. ಅಂತಹ ಸಂದರ್ಭದಲ್ಲೂ ಮುಂಬೈ ಪ್ರಾಂತ್ಯದ ವಿಧಾನಸಭೆಗೆ 1952ರಲ್ಲಿ ನಡೆದ ಪ್ರಥಮ ಚುನಾವಣೆಯಲ್ಲಿ ರಾಯಬಾಗ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿಯನ್ನು ಪಕ್ಷೇತರ ಅಭ್ಯರ್ಥಿಯೊಬ್ಬರು ಮಣಿಸಿದ್ದರು.ಈ ಫಲಿತಾಂಶ ಪ್ರಧಾನಿ ಜವಾಹರಲಾಲ್ ನೆಹರೂ ಅವರಿಗೂ ಅಚ್ಚರಿ ಮೂಡಿಸಿತ್ತು. ಇದಕ್ಕೆ ಕಾರಣಕರ್ತರಾದವರು `ರಾಯಬಾಗ ಹುಲಿ', `ಜನರ ಪ್ರೀತಿಯ ಅಣ್ಣಾ' ಎಂದೇ ಬೆಳಗಾವಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಜನಜನಿತರಾಗಿರುವ ವಸಂತರಾವ್ ಲಕ್ಕನಗೌಡ ಪಾಟೀಲ. ರಾಜ್ಯದಲ್ಲಿ ವಿ.ಎಲ್.ಪಾಟೀಲ ಎಂದೇ ಪ್ರಖ್ಯಾತರು.ಕಾಂಗ್ರೆಸ್‌ನ ಕಡುವಿರೋಧಿಯಾಗಿದ್ದ ಅವರು, ಮುಂಬೈ ವಿಧಾನಸಭೆಗೆ ಬೆಳಗಾವಿ ಸುತ್ತಮುತ್ತಲ ಪ್ರದೇಶದಿಂದ ಕೆಲವು ಪಕ್ಷೇತರರೇ ಆರಿಸಿಬರುವಂತೆಯೂ ನೋಡಿಕೊಂಡಿದ್ದರು. ಮೊದಲ ಚುನಾವಣೆ ಎದುರಿಸಿದಾಗ ಅವರ ವಯಸ್ಸು ಕೇವಲ 30.ಆಗರ್ಭ ಶ್ರೀಮಂತ ಮನೆತನದಲ್ಲಿ 1922 ಮಾರ್ಚ್ 22 ರಂದು ಜನಿಸಿದ ಪಾಟೀಲರನ್ನು ದತ್ತಕ ನೀಡಿದ್ದರು. ಒಡಹುಟ್ಟಿದ್ದ ತಮ್ಮ ಪ್ರತಾಪರಾವ್ ಪಾಟೀಲ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಗುಂಡೇಟಿಗೆ ಬಲಿಯಾದರು. ಸೋದರನ ಜತೆಗೆ ಪಾಟೀಲರು ಕೂಡ ಕ್ರಾಂತಿವೀರ ನಾನಾ ಪಾಟೀಲ, ನಾಗನಾಥಣ್ಣಾ ನಾಯಿಕ ವಾಡಿ, ಬಾಬುರಾವ್ ಪಾಟೀಲ ಮೊದಲಾದವರೊಂದಿಗೆ ಗುರುತಿಸಿಕೊಂಡಿದ್ದರು. ಇದು ಕಾಂಗ್ರೆಸ್ಸೇತರ ಗುಂಪಾಗಿತ್ತು. ತಮ್ಮನನ್ನು ಕಳೆದುಕೊಂಡರೂ ಧೃತಿಗೆಡದ ವಸಂತರಾವ್ ಪಾಟೀಲ. ಕಾಂಗ್ರೆಸ್ ವಿರುದ್ಧ ತೊಡೆ ತಟ್ಟಿ ನಿಂತಿದ್ದರು.ರಾಜಕೀಯ ಕ್ಷೇತ್ರಕ್ಕೆ ಧುಮುಕುವ ಮೊದಲೇ ಅವರು ಶೈಕ್ಷಣಿಕ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ್ದರು. ಹಿಂದುಳಿದ ವರ್ಗದವರು, ಪರಿಶಿಷ್ಟರಿಗೆ ಶಿಕ್ಷಣ ದುಸ್ತರವೆನಿಸಿದ್ದ ದಿನಗಳಲ್ಲಿ ಈ ವರ್ಗಗಳ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಸಾಮಾಜಿಕ ಜವಾಬ್ದಾರಿಯನ್ನು ಹೊತ್ತುಕೊಂಡರು. ಆಗ ಅವರ ವಯಸ್ಸು ಕೇವಲ 23. ಕಿರಿಯ ವಯಸ್ಸಿನಲ್ಲಿಯೇ ಶೈಕ್ಷಣಿಕ, ರಾಜಕೀಯ ಎರಡು ದೋಣಿ ಪಯಣ ಆರಂಭಿಸಿದ ವಸಂತರಾವ್ ಪಾಟೀಲ ಎರಡೂ ಕ್ಷೇತ್ರಗಳಲ್ಲೂ ಅಕ್ಷರಶಃ ಹುಲಿಯೇ ಆಗಿ ಇಡೀ ಬೆಳಗಾವಿ ಜಿಲ್ಲೆಯಲ್ಲಿ ತಮ್ಮ ಪ್ರಭಾವವನ್ನು ಬೀರಿದ್ದರು. 1957ರಲ್ಲಿ ರಾಜ್ಯಗಳ ಪುನರ್‌ವಿಂಗಡಣೆ ನಂತರ ನಡೆದ ಚುನಾವಣೆಯಲ್ಲೂ ಮೈಸೂರು ರಾಜ್ಯ ಸೇರಿದ ರಾಯಬಾಗದಿಂದ ಪಾಟೀಲರು ಸ್ವತಂತ್ರ ಅಭ್ಯರ್ಥಿಯಾಗಿಯೇ ಮತ್ತೆ ಆರಿಸಿಬಂದರು.ಹಿಂದುಳಿದ ಕುರುಬ ಸಮಾಜದಲ್ಲಿ ಜನಿಸಿದವರಾದರೂ ಅವರ ಶ್ರೀಮಂತಿಕೆ ಜಾತಿ ಎಲ್ಲೆಯನ್ನು ದಾಟಿಸಿತ್ತು. ಆ ಸಮಯದಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಬಿ.ಡಿ.ಜತ್ತಿ ಗುಂಪಿನ ಲಿಂಗಾಯತರ ಪ್ರಭಾವ ಹೆಚ್ಚಾಗಿತ್ತು. ಇದನ್ನು ಒಡೆಯಲು ರಾಮಕೃಷ್ಣ ಹೆಗಡೆ ಮತ್ತು ಎಸ್.ನಿಜಲಿಂಗಪ್ಪ ವಸಂತರಾವ್ ಪಾಟೀಲರನ್ನು ಕಾಂಗ್ರೆಸ್‌ಗೆ ಸೆಳೆದುಕೊಂಡರು. 1962ರಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದೂ ಬಂದರು.ಹಿಡಿದ ಹಟವನ್ನು ಬಿಡದ ಛಲದಂಕಮಲ್ಲರಂತಿದ್ದ ಪಾಟೀಲರು ಕೆಲವೇ ತಿಂಗಳುಗಳಲ್ಲಿ ಇಡೀ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡರು. ಜಿಲ್ಲೆಯಲ್ಲಿ ಸದಸ್ಯತ್ವ ನೋಂದಣಿ ಸಂದರ್ಭದಲ್ಲಿ ಭಾರಿ ಹಣ ಖರ್ಚು ಮಾಡಿ ಎಷ್ಟೋ ಪಟ್ಟು ಅಧಿಕ ಸಂಖ್ಯೆಯಲ್ಲಿ ಸದಸ್ಯತ್ವ ಮಾಡಿಸಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರಾದರು. ಈ ಚುನಾವಣೆ ಆಗ ರಾಜ್ಯದಾದ್ಯಂತ ಕುತೂಹಲ ಕೆರಳಿಸಿತ್ತು. ಅಲ್ಲಿಯವರೆಗೂ ಕಾಂಗ್ರೆಸ್‌ನಲ್ಲಿ  ಪ್ರಭಾವಿತರಾಗಿದ್ದ ಲಿಂಗಾಯತರನ್ನು ಅವರು ಬದಿಗೊತ್ತಿದರು.ಮುಂದೆ ನಿಜಲಿಂಗಪ್ಪ ಮತ್ತು ಇಂದಿರಾಗಾಂಧಿ ಅವರ ನಡುವೆ ಭಿನ್ನಾಭಿಪ್ರಾಯ ಮೂಡಿದಾಗ ಪಾಟೀಲರು ಇಂದಿರಾಗಾಂಧಿ ಜತೆ ಗುರುತಿಸಿಕೊಂಡರು. ಅವರ ವರ್ಚಸ್ಸಿನ ಮುಂದೆ ಏನೂ ಮಾಡಲಾಗದ ಕಾಂಗ್ರೆಸ್ ಮುಖಂಡರು ಒಳಗೊಳಗೇ ಮಸಲತ್ತು ಮಾಡಿ ಚಿಕ್ಕೋಡಿ ಲೋಕಸಭಾ ಕ್ಷೇತ್ರವನ್ನು ಮೀಸಲು ಕ್ಷೇತ್ರವಾಗಿಸಿದರು.ಆಗಲೂ ಪಾಟೀಲರು ತಮ್ಮ ಆಪ್ತರಾಗಿದ್ದ ಬಿ.ಶಂಕರಾನಂದ ಅವರನ್ನು ಕಣಕ್ಕಿಳಿಸಿ ಗೆಲ್ಲಿಸಿದರು. ಎರಡು ಚುನಾವಣೆಗಳನ್ನು ಪಾಟೀಲರ ಸಂಪೂರ್ಣ ಸಹಕಾರದಿಂದಲೇ ಗೆದ್ದ ಶಂಕರಾನಂದರು ನಂತರ  ವರಸೆ ಬದಲಿಸಿದರು. ಪಾಟೀಲರ ಪ್ರಭಾವದಿಂದ ಹೊರಬರುವುದು ಶಂಕರಾನಂದರಿಗೆ ಮುಖ್ಯವಾಗಿತ್ತು. ಇದನ್ನು ಕಂಡು ಪಾಟೀಲರು ಆಪ್ತರ ಬಳಿ ` ನಾನು ಅವನಂತೆ ನಾಟಕ ಆಡುವುದನ್ನು ಕಲಿಯಬೇಕು' ಎಂದಿದ್ದರು.ಆದರೆ ಅವರಿಗೆ ನಾಟಕ, ಹಿಂದೊಂದು ಮುಂದೊಂದು ವಿದ್ಯೆ ಫಲಿಸಿರಲಿಲ್ಲ. ನೇರ, ನಿಷ್ಠುರ ಮತ್ತು ಮಾತು ಕೂಡ ಕಡ್ಡಿ ಮುರಿದಂತೆ ಇರುತ್ತಿತ್ತು. ಎಂದಿಗೂ, ಯಾರಿಗೂ ಹೆದರಿದವರಲ್ಲ. ವಸಂತರಾವ್‌ಪಾಟೀಲರು ಮಾತ್ರ ರಾಜಕಾರಣವನ್ನು ಎಂದೂ ಹಣ ಮಾಡಿಕೊಳ್ಳಲು ಬಳಸಲಿಲ್ಲ.1972ರವರೆಗೂ ಅವರನ್ನು ಸೋಲಿಸಲು, ವಿರುದ್ಧ ರಾಜಕೀಯ ತಂತ್ರ ಗಾರಿಕೆ ರೂಪಿಸಲು ಬೆಳಗಾವಿಯಲ್ಲಿ ಯಾರಿಂದಲೂ ಸಾಧ್ಯವಾಗಿರಲಿಲ್ಲ. ಆದರೆ, ಎಲ್ಲವೂ ತಾನು ಹೇಳಿದಂತೆಯೇ ನಡೆಯಬೇಕು ಎಂದು ಬಯಸುತ್ತಿದ್ದ ಹಟವಾದಿ. ಇದು ಇವರನ್ನು ಆಶ್ರಯಿಸಿ ರಾಜಕೀಯವಾಗಿ ಬೆಳೆದವರಿಗೆ ನುಂಗಲಾರದ ತುತ್ತಾಗಿತ್ತು. ಏನಾದರೊಂದು ತಂತ್ರ ಹೂಡಿ ಅವರನ್ನು ಹಣಿಯಲು ಮುಂದಾಗುತ್ತಿದ್ದರು. ವಸಂತರಾವ್ ಪಾಟೀಲರು ಕೂಡ ತಮ್ಮ ವಿರೋಧಿಗಳನ್ನು ಹಣಿಯದೇ ಬಿಡುತ್ತಿರಲಿಲ್ಲ. ವೀರೇಂದ್ರ ಪಾಟೀಲರ ಸರ್ಕಾರವನ್ನು ಅವರು ಕೆಡವಿದರು ಎಂಬ ಮಾತಿದೆ.ನಂತರ ಅಧಿಕಾರಕ್ಕೇರಿದ ದೇವರಾಜ ಅರಸು ಅವರು ಪಾಟೀಲರನ್ನು ಸಂಪುಟಕ್ಕೆ ಸೇರಿಸಿಕೊಳ್ಳದಿದ್ದಾಗ ಇಂದಿರಾಗಾಂಧಿ ಅವರಿಂದ ಒತ್ತಡ ಹೇರಿಸಿ ಸಂಪುಟ ಸೇರುವಲ್ಲಿ ಸಫಲರಾಗಿದ್ದರು. ಕಾಂಗ್ರೆಸ್‌ನಲ್ಲಿ ಇರುವಷ್ಟು ದಿನವೂ ಅವರು ಇಂದಿರಾಗಾಂಧಿ ಅವರಿಗೆ  ಆಪ್ತರಾಗಿದ್ದರು. ಆದರೆ ಕಾಂಗ್ರೆಸ್‌ನಲ್ಲಿನ ಬೆಳವಣಿಗೆ, ಹಿಂಸೆ, ಕಾಲೆಳೆಯುವ ಪ್ರವೃತ್ತಿಯಿಂದ ನೊಂದಿದ್ದ ಅವರನ್ನು ರಾಮಕೃಷ್ಣ ಹೆಗಡೆ ಹಳೇ ವಿಶ್ವಾಸದಿಂದ ಜನತಾಪಕ್ಷಕ್ಕೆ ಕರೆದುಕೊಂಡರು.ನಂತರ ಅಲ್ಲೂ ನೆಲೆ ನಿಲ್ಲಲಾಗಲಿಲ್ಲ. ಕಾಂಗ್ರೆಸ್ ಮತ್ತು ಜನತಾಪಕ್ಷದಿಂದ (ಕಾಗವಾಡ) ಗೆದ್ದಾಗ ಸಚಿವರಾಗಿ ಸೇವೆ ಸಲ್ಲಿಸಿದರು. ಪಾಟೀಲರು ಮುಂದೊಂದು ದಿನ ತನಗೂ  ಅಪಾಯಕಾರಿಯಾಗಬಹುದು ಎಂದು ಭಾವಿಸಿದ ರಾಮಕೃಷ್ಣ ಹೆಗಡೆ, ಪಾಟೀಲರ ವಿರುದ್ಧ ಆರೋಪ ಕೇಳಿಬಂದಾಗ ರಾಜೀನಾಮೆ ಪಡೆದುಕೊಂಡರು.1952 ರಿಂದ 1985ರ ಚುನಾವಣೆವರೆಗೂ ಬೆಳಗಾವಿ ಜಿಲ್ಲೆಯ ರಾಜಕೀಯದಲ್ಲಿ ವಿಶೇಷ ಛಾಪು ಮೂಡಿಸಿದ್ದ ಪಾಟೀಲರ ಪ್ರಾಬಲ್ಯ 1989ರ ನಂತರ ಕ್ಷೀಣಿಸತೊಡಗಿತು. 1987ರಲ್ಲಿ ಜಿಲ್ಲಾ ಪರಿಷತ್ ಅಸ್ತಿತ್ವಕ್ಕೆ ಬಂದಾಗ ಬ್ಯಾರಿಸ್ಟರ್ ಆಗಿದ್ದ ಮಗ ಅಮರಸಿಂಹ ಪಾಟೀಲರನ್ನು ಲಂಡನ್‌ನಿಂದ ಕರೆಯಿಸಿ ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿ ಜಿಲ್ಲಾ ಪರಿಷತ್ ಅಧ್ಯಕ್ಷರನ್ನಾಗಿಸಿದರು. ನಂತರ ಎಲ್ಲ ಅಪ್ಪಂದಿರಂತೆ ಅವರೂ ಮಕ್ಕಳನ್ನು ರಾಜಕೀಯದಲ್ಲಿ ಬೆಳೆಸಲು ಇಚ್ಛಿಸಿದ್ದರು. ಕೊನೆ ಕೊನೆಗೆ ಅವರಿಗೆ ಇದೇ ಮುಳುವಾಯಿತು.ಮಗಳು ಪ್ರತಿಭಾ ಪಾಟೀಲ ಕೂಡ ಒಮ್ಮೆ ಜಿಲ್ಲಾ ಪಂಚಾಯ್ತಿ ಸದಸ್ಯೆಯಾಗಿದ್ದರು. ನಂತರ ವಿಧಾನಸಭಾ ಚುನಾವಣೆಯಲ್ಲಿ ಮಗ, ಮಗಳು  ಹಾಗೂ ತಾವೊಂದು ಕ್ಷೇತ್ರದಿಂದ ಒಂದೊಂದು ಪಕ್ಷದ ಅಭ್ಯರ್ಥಿಗಳಾಗಿ ಕಣಕ್ಕಿಳಿದು ಹೇಳ ಹೆಸರಿಲ್ಲದಂತೆ ಸೋತು ಸುಣ್ಣವಾದರು. ಆದರೂ 1999ರಲ್ಲಿ ಕಾಂಗ್ರೆಸ್ ಪಕ್ಷದಿಂದ ತಮ್ಮ ಪುತ್ರ ಲೋಕಸಭೆಗೆ ಆರಿಸಿಬರಲು ಕಾರಣಕರ್ತರಾದರು.ರಾಜಕೀಯವಾಗಿ ಪ್ರಬುದ್ಧಮಾನಕ್ಕೆ ಬರುವ ಮೊದಲೇ ಪಾಟೀಲರು ಅಂದರೆ 1940-44ರವರೆಗೆ ಕೊಲ್ಲಾಪುರದ ರಾಜಾರಾಂ ಕಾಲೇಜಿನಲ್ಲಿ ವ್ಯಾಸಂಗ ಮಾಡುವ ಸಂದರ್ಭದಲ್ಲಿ ಅವರ ಸಂಪರ್ಕಕ್ಕೆ ಬಂದ ಬ್ಯಾರಿಸ್ಟರ್ ಬಾಳಾಸಾಹೇಬ ಖರಡೇಕರ್, ಎಂ.ಆರ್.ದೇಸಾಯಿ ಅವರಿಂದ ಪ್ರೇರಿತರಾಗಿ ಶಿಕ್ಷಣ ಪ್ರಸಾರಕ ಮಂಡಳಿ ಸ್ಥಾಪಿಸಿ ಆ ಮೂಲಕ ರಾಯಬಾಗ, ಅಥಣಿ, ಬೆಳಗಾವಿ, ಗೋಕಾಕ ತಾಲ್ಲೂಕುಗಳಲ್ಲಿ, ಮಹಾರಾಷ್ಟ್ರದ ಹಲವೆಡೆ ಶಾಲಾ ಕಾಲೇಜುಗಳನ್ನು ತೆರೆದಿದ್ದು ಕೆಲವು ಕಡೆ ಉಚಿತ ಬೋರ್ಡಿಂಗ್ ಸೌಕರ್ಯವನ್ನೂ ಕಲ್ಪಿಸಿ,  ಲಕ್ಷಾಂತರ ಮಕ್ಕಳಿಗೆ ಅನ್ನ-ಅಕ್ಷರ ದಾಸೋಹ ನೀಡಿದ್ದಾರೆ.ಈ ಶಿಕ್ಷಣ ಪ್ರಸಾರಕ ಮಂಡಳಿ ಆರಂಭಕ್ಕೂ ಒಂದು ವಿಶೇಷ ಘಟನೆ ಕಾರಣವಾಯಿತು. ಕೊಲ್ಲಾಪುರದಲ್ಲಿ ಸಂಬಳ ಹೆಚ್ಚಳಕ್ಕೆ ಒತ್ತಾಯಿಸಿ ಸತ್ಯಾಗ್ರಹ ಹೂಡಿದ್ದ ಶಿಕ್ಷಕರಿಗೆ ಈ ಮೂವರೂ ನೆರವು ನೀಡಿದ್ದಲ್ಲದೇ ಅವರ ಪರವಾಗಿ ಹೋರಾಟಕ್ಕೂ ಇಳಿದಿದ್ದರು. ಶಿಕ್ಷಕರ ಬೇಡಿಕೆ ಈಡೇರಿದಾಗ ಸಂತೋಷದಿಂದ ಅವರು ಆ ಕಾಲದಲ್ಲಿ ಕೊಟ್ಟ ಒಂದು ಲಕ್ಷ ರೂಪಾಯಿಯನ್ನು ಶೈಕ್ಷಣಿಕ ಕಾರ್ಯಕ್ಕೆ ಬಳಸುವ ತೀರ್ಮಾನ ಮಾಡಿ, ಈ ಮಂಡಳಿ ಸ್ಥಾಪಿಸಿದರು. ಮಂಡಳಿಗಾಗಿ ಪಾಟೀಲರು, ಜಮೀನು, ಬಂಗಾರವನ್ನು ಅಡವಿಟ್ಟು ಹಣ ತಂದಿದ್ದರು. ಇಂದು ಈ ಮಂಡಳಿ ನಡೆಸುತ್ತಿರುವ ಶಾಲಾ-ಕಾಲೇಜುಗಳಲ್ಲಿ ಸಹಸ್ರಾರು ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ.ವರ್ಣರಂಜಿತ ಹಾಗೂ ವಿವಾದಾತ್ಮಕ ರಾಜಕಾರಣಿ ವಸಂತರಾವ್ ಪಾಟೀಲರು, ತಮಗೆ ಜನರು ಕೊಡುವ ಗೌರವವನ್ನು ಮಕ್ಕಳಿಗೆ ವರ್ಗಾಯಿಸಲು ಮುಂದಾದಾಗ ಹಿನ್ನಡೆ ಅನುಭವಿಸಿದರು. ತಮ್ಮನ್ನು `ಅಣ್ಣಾ' ಎನ್ನುತ್ತಿದ್ದವರು ಮಕ್ಕಳನ್ನು `ಅಣ್ಣಾ' ಎನ್ನುವಂತೆ ಮಾಡಿ ತಮ್ಮನ್ನು `ಅಬಾ' ಎಂದು ಕರೆಯುವಂತಹ ವಾತಾವರಣ ಸೃಷ್ಟಿಸಿದ್ದರು. ಆದರೆ ಮಕ್ಕಳಲ್ಲಿ ಪಾಟೀಲರಷ್ಟು ಸಂಘಟನಾ ಶಕ್ತಿ ಇರಲಿಲ್ಲ. ಜತೆಗೆ ಪಾಟೀಲರು ಗಟ್ಟಿಯಾಗಿ ಒಂದು ಪಕ್ಷಕ್ಕೆ ಅಂಟಿಕೊಳ್ಳಲಿಲ್ಲ. ಪದೇ ಪದೇ ಪಕ್ಷ ಬದಲಿಸಿ ತಮ್ಮ ಶಕ್ತಿಯನ್ನು ತಾವೇ ಕುಂದಿಸಿಕೊಂಡರು.ಬಹಳ ಇಷ್ಟಪಟ್ಟು ರಾಯಬಾಗದಲ್ಲಿ ತೆರೆದ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧಿಕಾರವನ್ನು ತಪ್ಪಿಸಿ ಅವರ ವಿರುದ್ಧ ಎತ್ತಿಕಟ್ಟಲು ಎಸ್.ಆರ್.ಬಾನೆಯವರಿಗೆ ಕೊಟ್ಟಾಗ ವಿ.ಎಲ್.ಪಾಟೀಲರು ನೊಂದಿದ್ದರು. ಮತ್ತೆ ಅಧಿಕಾರ ಕಸಿದುಕೊಳ್ಳದೇ ಅವರು ವಿಶ್ರಮಿಸಲಿಲ್ಲ. ಮಗನನ್ನೇ ಅಧ್ಯಕ್ಷರನ್ನಾಗಿಸಿದರು. ಕಾರ್ಖಾನೆ ನಷ್ಟ ಅನುಭವಿಸಿತು. ಗೋಕಾಕ ತಾಲ್ಲೂಕಿಗೆ ಮಾತ್ರ ಸೀಮಿತವಾಗುತ್ತಿದ್ದ ನೀರಾವರಿ ಸೌಲಭ್ಯವನ್ನು  ರಾಯಬಾಗ ತಾಲ್ಲೂಕಿಗೆ ವಿಸ್ತರಿಸುವಲ್ಲಿ ಅವರ ಪಾತ್ರ ಪ್ರಮುಖವಾದುದು. ಐದಾರು ಸಾವಿರ ಎಕರೆ ಜಮೀನು ಹೊಂದಿದ್ದ ಜಮೀನ್ದಾರ ಪಾಟೀಲರು ಊಳಿಗಮಾನ್ಯ ಮನಃಸ್ಥಿತಿಯವರಾಗಿದ್ದರು.ಆರು ಬಾರಿ ಶಾಸಕರಾಗಿ, ಒಮ್ಮೆ ಸಂಸದರಾಗಿ ಚುನಾಯಿತರಾಗಿದ್ದರೂ ಗೌಡಿಕೆ, ದರ್ಪವನ್ನು ಬಿಟ್ಟಿರಲಿಲ್ಲ. ಆದರೆ, ಪರಿಶಿಷ್ಟ ಜಾತಿ, ಪಂಗಡದವರ ಮೇಲೆ ಅವರಿಗೆ ವಿಶೇಷ ಪ್ರೀತಿ ಇತ್ತು. ಆ ವರ್ಗಗಳಿಗೆ ಸೇರಿದ ಮಕ್ಕಳಿಗೆ ತಮ್ಮ ಶಾಲೆಗಳಲ್ಲಿ ಉಚಿತ ಊಟ-ವಸತಿ-ಶಿಕ್ಷಣ ನೀಡುತ್ತಿದ್ದರು. ಅದಕ್ಕಿಂತಲೂ ಮುಖ್ಯವಾಗಿ, 1952ರ ಲೋಕಸಭಾ ಚುನಾವಣೆಯಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅವರು ಸೋತಿದ್ದಾಗ, ಪಾಟೀಲರು ಮುಂಬೈ ವಿಧಾನಸಭೆಯ ಪಕ್ಷೇತರರ ಸದಸ್ಯರನ್ನು ಸೇರಿಸಿಕೊಂಡು ಅಂಬೇಡ್ಕರ್ ಅವರನ್ನು ರಾಜ್ಯಸಭೆಗೆ ಆರಿಸಿ ಕಳುಹಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ಇದಕ್ಕೆ ಮುಖ್ಯ ಕಾರಣ ಕೊಲ್ಲಾಪುರದ ಶಾಹು ಮಹಾರಾಜರ ಸಾಮಾಜಿಕ ಚಳವಳಿಯಿಂದ ಪ್ರೇರೇಪಿತರಾಗ್ದ್ದಿದುದು. ದೊಡ್ಡ ಮಟ್ಟದ ರಾಜಕಾರಣಿಯಾಗಿದ್ದರೂ ಅವರಿಗೆ ಇಡೀ ರಾಜ್ಯಕ್ಕೆ ನಾಯಕನಾಗಲು ಸಾಧ್ಯವಾಗಲಿಲ್ಲ. ಬರೀ ಬೆಳಗಾವಿಗೆ ಸೀಮಿತವಾಗಿ ಬಿಟ್ಟರು. ಇಂತಹ ವ್ಯಕ್ತಿತ್ವದ ವಸಂತರಾವ್ ಪಾಟೀಲ ಕರ್ನಾಟಕ, ಮಹಾರಾಷ್ಟ್ರ ಜನರಿಗೆ ಇನ್ನು ಬರೀ ನೆನಪು ಮಾತ್ರ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry