ಬುಧವಾರ, ನವೆಂಬರ್ 20, 2019
21 °C

`ರಾಯರ ಹಾಡು ಅಂದ್ರೆ ಆತ್ಮತೃಪ್ತಿ

Published:
Updated:

>ರಾಯಚೂರು: `ರಾಘವೇಂದ್ರಸ್ವಾಮಿಗಳು ಸಂಗೀತ ಪ್ರಿಯರು. ಸಂಗೀತವನ್ನೇ ಆರಾಧಿಸುತ್ತಿದ್ದ ದೈವಗುರು... ಅಂಥ ರಾಯರ ಬಗೆಗಿನ ರಚನೆಗಳನ್ನು ನಾನು ಹಾಡಿದಾಗ ಅದೇನೋ... ಬೇರೆ ಹಾಡು  ಹಾಡಿದಾಗಿನಕ್ಕಿಂತ ಹೆಚ್ಚಿನ ಆತ್ಮತೃಪ್ತಿ... ಸಮಾಧಾನ ಆದ ಅನುಭವ ಆಗುತ್ತದೆ'ಭಾನುವಾರ ಅಗಲಿದ ದೇಶದ ಪ್ರಸಿದ್ಧ ಹಿರಿಯ ಹಿನ್ನೆಲೆ ಗಾಯಕ ಡಾ. ಪಿ.ಬಿ ಶ್ರೀನಿವಾಸ್ ಅವರು 2009ರಲ್ಲಿ ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿಮಠದಲ್ಲಿ ನಡೆದ ರಾಘವೇಂದ್ರಸ್ವಾಮಿಗಳ ಆರಾಧನಾ ಮಹೋತ್ಸವದಲ್ಲಿ ಆಸ್ಥಾನ ವಿದ್ವಾನ್ ಪ್ರಶಸ್ತಿ ಸ್ವೀಕರಿಸಿದ ಸಂದರ್ಭದಲ್ಲಿ ಆಡಿದ ನುಡಿಗಳು.ರಾಘವೇಂದ್ರ ಸ್ವಾಮಿಗಳ ರಚನೆಗಳನ್ನು ಹಾಡಿದಾಗ ಈ ಸುಕ್ಷೇತ್ರಕ್ಕೆ ಬಂದ ಅನುಭವ ನನಗಾಗುತ್ತದೆ. ಸ್ವತಃ ರಾಯರು ಸಂಗೀತ ಪ್ರಿಯರು. ಸಂಗೀತಕ್ಕೂ ಹಾಗೂ ರಾಯರಿಗೆ ಇರುವ ಸಂಬಂಧಕ್ಕೆ ದ್ಯೋತಕವಾಗಿ ಆಸ್ಥಾನ್ ವಿದ್ವಾನ್ ಪ್ರಶಸ್ತಿಯನ್ನು ಶ್ರೀಮಠ ತಮಗೆ ಕಲ್ಪಿಸಿದೆ. ರಾಯರ ಹೆಸರಿನಲ್ಲಿ ತಮಗೆ ಪ್ರದಾನ ಮಾಡಿದ ಈ ಪ್ರಶಸ್ತಿಯು ಜೀವನದಲ್ಲಿ ತಾವು ಪಡೆದ ಎಲ್ಲ ಪ್ರಶಸ್ತಿಗಿಂತ ಮಿಗಿಲು. ರಾಯರ ಕೃಪೆಗೆ ಪಾತ್ರರಾದ ಅನುಭವ ತಮಗಾಗುತ್ತಿದೆ ಎಂದು ಭಾವ ಪರವಶರಾಗಿ ಡಾ.ಪಿ.ಬಿ ಶ್ರೀನಿವಾಸ್ ನುಡಿದಿದ್ದರು.ಗಾನ ಗಾರುಡಿಗ ಡಾ.ಪಿಬಿಎಸ್ ಅವರ ಈ ಭಾವಪರವಶ ನುಡಿಗಳನ್ನಾಲಿಸಿದ ಭಕ್ತ ಸಮೂಹ  ಮಂತ್ರಮುಗ್ಧರಾಗಿದ್ದರು. ಡಾ.ಪಿಬಿಎಸ್ ಮಾತಿಗಷ್ಟೇ ಸೀಮಿತರಾಗಲಿಲ್ಲ. ರಾಘವೇಂದ್ರ ಸ್ವಾಮಿಗಳ ಬಗೆಗಿನ ಕೆಲ ರಚನೆಗಳನ್ನು ಹಾಡಿ ಸಂಗೀತ ಸೇವೆ ಸಮರ್ಪಿಸಿದ್ದರು.ಮೂರು ವರ್ಷಗಳ ಹಿಂದೆ ರಾಘವೇಂದ್ರ ಸ್ವಾಮಿಗಳ ಮಠದ ಆವರಣದಲ್ಲಿ ಅವರು ಅಂದು ಹಾಡಿದ್ದ ಸ್ವತಃ ರಾಘವೇಂದ್ರಸ್ವಾಮಿಗಳೇ  ರಚಿಸಿದ್ದ `ಇಂದು ಎನಗೆ ಗೋವಿಂದ... ನಿನ್ನಯ ಪಾದಾರವಿಂದ...' ಹಾಡು ಹಾಗೂ ಇತರ ಹಾಡುಗಳು ಇಂದಿಗಮಠದಲ್ಲಿ ಪ್ರತಿಧ್ವನಿಸಿದಂತೆ ಭಾಸವಾಗುತ್ತದೆ.

ಪ್ರತಿಕ್ರಿಯಿಸಿ (+)