ಶುಕ್ರವಾರ, ಮೇ 7, 2021
24 °C

ರಾಯಲ್ ಚಾಲೆಂಜರ್ಸ್- ರಾಜಸ್ತಾನ ರಾಯಲ್ಸ್ ಹಣಾಹಣಿ ಇಂದು

ಪ್ರಜಾವಾಣಿ ವಾರ್ತೆ/ಮಹಮ್ಮದ್ ನೂಮಾನ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಚೆನ್ನೈ ಸೂಪರ್ ಕಿಂಗ್ಸ್ ಕೈಯಲ್ಲಿ ಎದುರಾದ ಅನಿರೀಕ್ಷಿತ ಸೋಲಿನ ಆಘಾತದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಂದೆ ಮತ್ತೊಂದು ಸವಾಲು ಬಂದು ನಿಂತಿದೆ. ಐಪಿಎಲ್ ಟ್ವೆಂಟಿ-20 ಟೂರ್ನಿಯಲ್ಲಿ ಭಾನುವಾರ ನಡೆಯುವ ಪಂದ್ಯದಲ್ಲಿ ಆರ್‌ಸಿಬಿ ರಾಜಸ್ತಾನ ರಾಯಲ್ಸ್‌ನ್ನು ಎದುರಿಸಲಿದೆ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದ ಮೂಲಕ ಗೆಲುವಿನ ಹಾದಿಗೆ ಮರಳುವುದು ಉಭಯ ತಂಡಗಳ ಗುರಿ. ಏಕೆಂದರೆ ಸತತ ಎರಡು ಸೋಲುಗಳ ಕಹಿಯೊಂದಿಗೆ ಇವೆರಡು ತಂಡಗಳು ಎದುರಾಗುತ್ತಿವೆ.ಡೇನಿಯಲ್ ವೆಟೋರಿ ಬಳಗ ಕ್ರಮವಾಗಿ ಕೋಲ್ಕತ್ತ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಎದುರು ಸೋಲು ಅನುಭವಿಸಿದೆ. ರಾಹುಲ್ ದ್ರಾವಿಡ್ ನೇತೃತ್ವದ ರಾಯಲ್ಸ್ ತಂಡ ಮುಂಬೈ ಇಂಡಿಯನ್ಸ್ ಹಾಗೂ ನೈಟ್ ರೈಡರ್ಸ್ ಎದುರು ಪರಾಭವಗೊಂಡಿದೆ. ಆದ್ದರಿಂದ ಎರಡೂ ತಂಡಗಳು ಸಾಕಷ್ಟು ಒತ್ತಡದೊಂದಿಗೆಯೇ ಭಾನುವಾರ ಕಣಕ್ಕಿಳಿಯಲಿವೆ.ಸೂಪರ್ ಕಿಂಗ್ಸ್ ಎದುರಿನ ಸೋಲನ್ನು ವೆಟೋರಿ ಬಳಗಕ್ಕೆ ಈಗಲೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕೊನೆಯ ಎರಡು ಓವರ್‌ಗಳಲ್ಲಿ ಗೆಲುವಿಗೆ ಬೇಕಾಗಿದ್ದ 43 ರನ್‌ಗಳನ್ನು ಗಳಿಸುವಲ್ಲಿ ಮಹೇಂದ್ರ ಸಿಂಗ್ ದೋನಿ ಬಳಗ ಯಶಸ್ವಿಯಾಗಿತ್ತು. ಈ ಪಂದ್ಯ ಕ್ರಿಕೆಟ್ ಪಂಡಿತರಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.ವೆಟೋರಿ ಅವರ ನಾಯಕತ್ವದ ಬಗ್ಗೆಯೂ ಟೀಕೆಗಳು ಎದ್ದಿವೆ. 19ನೇ ಓವರ್‌ನ್ನು ಎಸೆಯುವ ಜವಾಬ್ದಾರಿಯನ್ನು ವಿರಾಟ್ ಕೊಹ್ಲಿಗೆ ನೀಡಿದ್ದು ಅಚ್ಚರಿಗೆ ಕಾರಣವಾಗಿತ್ತು. ವೆಟೋರಿ ತಮ್ಮ ಬೌಲರ್‌ಗಳನ್ನು ಸರಿಯಾಗಿ ಬಳಸಿಕೊಂಡಿಲ್ಲ ಎಂಬ ಟೀಕೆ ಎದ್ದಿದೆ.ಕೊಹ್ಲಿ ಎಸೆದ ಆ ಓವರ್‌ನಲ್ಲಿ ಅಲ್ಬಿ ಮಾರ್ಕೆಲ್ 28 ರನ್‌ಗಳನ್ನು ಗಳಿಸಿ ಸೂಪರ್ ಕಿಂಗ್ಸ್ ತಂಡದ ರೋಚಕ ಗೆಲುವಿಗೆ ಕಾರಣರಾಗಿದ್ದರು. ಆದ್ದರಿಂದ ಈ ಪಂದ್ಯದಲ್ಲಿ ಬೌಲಿಂಗ್ ಮೂಲಕ ತಂಡದ ಗೆಲುವಿಗೆ ನೆರವಾಗುವ ಜೊತೆಗೆ ಟೀಕಾಕಾರರ ಬಾಯಿ ಮುಚ್ಚಿಸುವ ಹೆಚ್ಚುವರಿ ಜವಾಬ್ದಾರಿಯೂ ವೆಟೋರಿ ಮೇಲಿದೆ.ಕ್ರಿಸ್ ಗೇಲ್ ಮತ್ತು ವಿರಾಟ್ ಕೊಹ್ಲಿ ಫಾರ್ಮ್ ಕಂಡುಕೊಂಡಿರುವುದು ಆರ್‌ಸಿಬಿ ವಲಯದಲ್ಲಿ ಹರ್ಷಕ್ಕೆ ಕಾರಣವಾಗಿದೆ. ಆದರೆ ಇತರ ಬ್ಯಾಟ್ಸ್‌ಮನ್‌ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರುತ್ತಿಲ್ಲ. ಅದರಲ್ಲೂ ಮುಖ್ಯವಾಗಿ ಚೇತೇಶ್ವರ ಪೂಜಾರ ಮತ್ತು ಸೌರಭ್ ತಿವಾರಿ ತಮಗೆ ಲಭಿಸಿದ ಅವಕಾಶವನ್ನು ಸದುಪಯೋಗಪಡಿಸುವಲ್ಲಿ ವಿಫಲರಾಗಿದ್ದಾರೆ.ರಾಯಲ್ಸ್ ವಿರುದ್ಧ ಆರ್‌ಸಿಬಿ ಕೆಲವೊಂದು ಬದಲಾವಣೆಗೆ ಮುಂದಾಗುವುದು ಖಚಿತ. ಜಹೀರ್ ಖಾನ್, ಆರ್. ವಿನಯ್ ಕುಮಾರ್ ಮತ್ತು ಮುತ್ತಯ್ಯ ಮುರಳೀಧರನ್ ಕಳೆದ ಮೂರು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಸೂಪರ್ ಕಿಂಗ್ಸ್ ಎದುರು ತಂಡ ಐದನೇ ಬೌಲರ್‌ನ ಕೊರತೆ ಎದುರಿಸಿತ್ತು.ಕಳೆದ ಪಂದ್ಯದಲ್ಲಿ ಎದುರಾದ ಸೋಲಿನ ಬಗ್ಗೆ ತಂಡ ತಲೆಕೆಡಿಸಿಕೊಂಡಿಲ್ಲ ಎಂದು ಶನಿವಾರ ಮುತ್ತಯ್ಯ ಮುರಳೀಧರನ್ ತಿಳಿಸಿದರು. `ಇಲ್ಲಿ ಸೋಲಿನ ಆಘಾತದಿಂದ ಹೊರಬರುವ ಪ್ರಶ್ನೆಯೇ ಏಳುವುದಿಲ್ಲ. ಟ್ವೆಂಟಿ-20 ಪಂದ್ಯದಲ್ಲಿ ಈ ರೀತಿಯ ಸೋಲು ಎದುರಾಗುವುದು ಸಹಜ~ ಎನ್ನುವ ಮೂಲಕ ಎಲ್ಲ ಆಟಗಾರರು ಮಾನಸಿಕವಾಗಿ ಸಜ್ಜಾಗಿರುವ ಸೂಚನೆಯನ್ನು ಅವರು ನೀಡಿದ್ದಾರೆ.ರಾಹುಲ್ ದ್ರಾವಿಡ್ ನೇತೃತ್ವದ ರಾಯಲ್ಸ್ ತಂಡವನ್ನು ಕೂಡಾ ಸಾಕಷ್ಟು ಸಮಸ್ಯೆಗಳು ಕಾಡುತ್ತಿವೆ. ಕಳೆದ ಎರಡು ಪಂದ್ಯಗಳಲ್ಲಿ ಸಂಘಟಿತ ಪ್ರದರ್ಶನ ನೀಡಲು ತಂಡಕ್ಕೆ ಸಾಧ್ಯವಾಗಿಲ್ಲ. ಬ್ಯಾಟಿಂಗ್‌ನಲ್ಲಿ ತಮ್ಮ ಸಾನಿಧ್ಯವನ್ನು ತೋರಿಸಿಕೊಟ್ಟಿರುವುದು ಒವೇಸ್ ಶಾ ಮತ್ತು ಅಜಿಂಕ್ಯ ರಹಾನೆ ಮಾತ್ರ. ಇತರ ಆಟಗಾರರು ಇನ್ನೂ ಲಯ ಕಂಡುಕೊಂಡಿಲ್ಲ. ಅದೇ ರೀತಿ ಬೌಲರ್‌ಗಳ ಅನನುಭವ ಕೂಡಾ ತಂಡಕ್ಕೆ ಮುಳುವಾಗಿ ಪರಿಣಮಿಸಿದೆ.ರಾಹುಲ್ ದ್ರಾವಿಡ್ ತನ್ನೂರಿನ ತಂಡದ ವಿರುದ್ಧ ರಾಯಲ್ಸ್ ತಂಡವನ್ನು ಮುನ್ನಡೆಸುತ್ತಿರುವುದರಿಂದ ಈ ಪಂದ್ಯ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ತಂಡಗಳ ಬಲಾಬಲ ನೋಡುವಾಗ ಆರ್‌ಸಿಬಿ `ಫೇವರಿಟ್~ ಆಗಿ ಕಂಡುಬರುತ್ತದೆ. ಆದರೆ ಟ್ವೆಂಟಿ-20 ಪಂದ್ಯದಲ್ಲಿ ಏನು ಬೇಕಾದರೂ ನಡೆಯಬಹುದು.ಪಂದ್ಯದ ಆರಂಭ: ರಾತ್ರಿ 8.00ಕ್ಕೆ; ನೇರ ಪ್ರಸಾರ: ಸೆಟ್ ಮ್ಯಾಕ್ಸ್

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.