ಮಂಗಳವಾರ, ಮೇ 18, 2021
24 °C

ರಾರಾಜಿಸಿದ ಬಾವುಟ, ಮುಗಿಲು ಮುಟ್ಟಿದ ಜೈಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಮುಗಿಲು ಮುಟ್ಟಿದ ಜೈಕಾರಗಳು... ರಾರಾಜಿಸುತ್ತಿದ್ದ ಕನ್ನಡ ಬಾವುಟಗಳು... ಕುಣಿದು ಕುಪ್ಪಳಿಸಿದ ಕನ್ನಡಾಭಿಮಾನಿಗಳು... ಕಲಾಸಕ್ತರನ್ನು ರಂಜಿಸಿದ ಕಲಾ ತಂಡಗಳ ಪ್ರದರ್ಶನ...ತಾಲ್ಲೂಕಿನ ಕಾಕತಿ ಗ್ರಾಮದಲ್ಲಿ ಭಾನುವಾರ ನಡೆದ ಬೆಳಗಾವಿ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಮೆರವಣಿಗೆಯಲ್ಲಿ ಕಂಡು ಬಂದ ದೃಶ್ಯಾವಳಿಗಳಿವು.ಭಾನುವಾರ ಕಾಕತಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಮೆರವಣಿಗೆಯು ಕನ್ನಡಮಯ ವಾತಾವರಣವನ್ನು ಸೃಷ್ಟಿಸಿತ್ತು. ಸಮ್ಮೇಳನದ ಅಂಗವಾಗಿ ಗ್ರಾಮವು ಮದುವಣಗಿತ್ತಿಯಂತೆ ಸಿಂಗಾರಗೊಂಡಿತ್ತು. ಮೆರವಣಿಗೆಯ ಮಾರ್ಗದಲ್ಲಿ ಮನೆಗಳ ಮುಂದೆ ಹಾಕಲಾಗಿದ್ದ ರಂಗೋಲಿಗಳು, ಪೂರ್ಣಕುಂಭ ಹೊತ್ತ ಸುಮಂಗಲೆಯರು ಮೆರವಣಿಗೆಗೆ ವಿಶೇಷ ಕಳೆ ತಂದು ಕೊಟ್ಟವು.ಎಲ್ಲಿ ನೋಡಿದರಲ್ಲಿ ಕನ್ನಡ ಬಾವುಟಗಳು ರಾರಾಜಿಸುತ್ತಿದ್ದವು. ಕನ್ನಡಾಭಿಮಾನಿಗಳ ಜೈಕಾರಗಳು ಮುಗಿಲು ಮುಟ್ಟಿದ್ದವು. ಯುವಕರು ಹಾಗೂ ಕನ್ನಡಾಭಿಮಾನಿಗಳು ಕುಣಿದು ಕುಪ್ಪಳಿಸಿದರು. ಮೆರವಣಿಗೆಯ ಮಾರ್ಗದುದ್ದಕ್ಕೂ ಕನ್ನಡ ಜಾತ್ರೆಯ ವಾತಾವರಣ ನಿರ್ಮಾಣವಾಗಿತ್ತು.ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ ಕಲಾ ತಂಡಗಳು ನೀಡಿದ ಪ್ರದರ್ಶನ ನೆರೆದಿದ್ದ ಕಲಾಸಕ್ತರನ್ನು ರಂಜಿಸಿತು. ಸಾರಾಪುರದ ಶಾಂತಿನಾತ ಕಲಾತಂಡ ನೀಡಿದ ಪ್ರದರ್ಶನ ಕನ್ನಡಾಭಿಮಾನಿಗಳನ್ನು ಮಂತ್ರಮುಗ್ಧರನ್ನಾಗಿಸಿತು. ಡೊಳ್ಳು ಕೋಲಾಟ, ಡೊಳ್ಳು ಕುಣಿತ, ಜಾಂ್ ಪಥಕ್, ಹೆಜ್ಜೆ ಮೇಳ, ಲೇಜಿಮ್ ಹಾಗೂ ಗ್ರಾಮೀಣ ಸೊಗಡಿನ ವಿವಿಧ ಚಟುವಟಿಕೆಗಳು ಜನರನ್ನು ರಂಜಿಸಿದವು.ಮೆರವಣಿಗೆಯ ಪೂರ್ವದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಕ.ಸಾ.ಪ ಜಿಲ್ಲಾ ಘಟಕದ ಅಧ್ಯಕ್ಷ ಯ.ರು. ಪಾಟೀಲ ಪರಿಷತ್ತಿನ ಧ್ವಜ, ಕ.ಸಾ.ಪ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಸಸಾಲಟ್ಟಿ ನಾಡಧ್ವಜ ಹಾಗೂ ಗ್ರಾಮದ ಹಿರಿಯರಾದ ಎಸ್.ಎಂ. ಜಗಜಂಪಿ ರಾಷ್ಟ್ರಧ್ವಜಗಳ ಧ್ವಜಾರೋಹಣ ನೆರವೇರಿಸಿದರು.ಬೆರಳೆಣಿಕೆಯ ಸಾಹಿತಿ, ಕವಿಗಳು

ಬೆಳಗಾವಿ: ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿರಲಿಲ್ಲ. ಸಮ್ಮೇಳನದ ವೇದಿಕೆಯಲ್ಲಿ ಹೆಚ್ಚಿನ ಸಂಖ್ಯೆ ಆಸನಗಳು ಖಾಲಿ ಇದ್ದವು. ಸಾಹಿತಿಗಳು, ಕವಿಗಳು, ಲೇಖಕರು, ಕಲಾವಿದರು ಬೆರಳಣಿಕೆಯಷ್ಟು ಕಂಡುಬಂದರು.ಸಮಾರಂಭ ಆರಂಭದಲ್ಲಿ ವೇದಿಕೆಯ ಮುಂಭಾಗದ ಆಸನಗಳ ಪೈಕಿ ಮೂರು ಸಾಲುಗಳಲ್ಲಿ ಮಾತ್ರ ಜನರು ಕಂಡುಬಂದರು. ನಂತರ ಗುಂಪು ಗುಂಪಾಗಿ ಆಗಮಿಸಿದ ಜನರು, ಸಮ್ಮೇಳನ ಅಧ್ಯಕ್ಷರ ಭಾಷಣ ಆರಂಭವಾಗುವ ಸಮಯಕ್ಕೆ ವೇದಿಕೆಯಲ್ಲಿ ಹೆಚ್ಚಿನ ಸಂಖ್ಯೆ ಜನರು ಕಂಡುಬಂದರು.ಬೆಳಗಾವಿಯಲ್ಲಿ ಕನ್ನಡದ ವಾತಾವರಣ ನಿರ್ಮಾಣ ಮಾಡುವ ಅಗತ್ಯವಿದೆ ಎಂದು ಹೇಳುವ ಅನೇಕರು, ಸಮ್ಮೇಳನದ ಕಡೆಗೆ ಬಂದಿರಲಿಲ್ಲ. ಗೋಷ್ಠಿಗಳಲ್ಲಿಯಂತೂ ಹೆಚ್ಚಿನ ಆಸನಗಳು ಖಾಲಿ ಖಾಲಿ ಇದ್ದವು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.