ರಾರಾಜಿಸುತ್ತಿರುವ ಅಶ್ಲೀಲ ಪೋಸ್ಟರ್‌ಗಳು

7
ಅತ್ಯಾಚಾರಕ್ಕೆ ಪ್ರಚೋದನೆ ನೀಡುವ ದೃಶ್ಯಗಳ ಹಾವಳಿ

ರಾರಾಜಿಸುತ್ತಿರುವ ಅಶ್ಲೀಲ ಪೋಸ್ಟರ್‌ಗಳು

Published:
Updated:
ರಾರಾಜಿಸುತ್ತಿರುವ ಅಶ್ಲೀಲ ಪೋಸ್ಟರ್‌ಗಳು

ಧಾರವಾಡ: ಕಳೆದ ವಾರ ತೆರೆಕಂಡಿರುವ `ಟೇಬಲ್ ನಂ 21' ಎಂಬ ಹಿಂದಿ ಚಿತ್ರದ ಪೋಸ್ಟರ್‌ಗಳನ್ನು ನಗರದ ಪಿ.ಬಿ.ರಸ್ತೆಯ ಲಕ್ಷ್ಮಿ ಥಿಯೇಟರ್ ಸುತ್ತ ಮುತ್ತ ಅಂಟಿಸಲಾಗಿದ್ದು, ಇವು ನಾಗರಿಕರಿಗೆ ಕಸಿವಿಸಿ ಉಂಟು ಮಾಡಿವೆ.ಅತ್ಯಂತ ಅಸಹ್ಯಕರವಾದ ಭಂಗಿಯಲ್ಲಿರುವ ಚಿತ್ರದ ದೃಶ್ಯವೊಂದನ್ನು ಒಳಗೊಂಡ ಈ ಪೋಸ್ಟರ್ ಅಷ್ಟೇ ಪ್ರಚೋದನಕಾರಿಯಾಗಿದೆ. ಚಿತ್ರದ ಪೋಸ್ಟರ್‌ಗಳನ್ನು ಗಮನಿಸಿದ ಹಲವು ಓದುಗರು `ಪ್ರಜಾವಾಣಿ' ಕಚೇರಿಗೆ ಕರೆ ಮಾಡಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದು, ಈ ಬಗೆಯ ಪೋಸ್ಟರ್‌ಗಳಿಂದ ಯುವತಿಯರು ರಸ್ತೆಯಲ್ಲಿ ಓಡಾಡುವುದೇ ದುಸ್ತರವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.ಎನ್‌ಟಿಟಿಎಫ್, ಸಂಗಮ ವೃತ್ತ, ತಹಶೀಲ್ದಾರ್ ಕಚೇರಿ ಹಾಗೂ ಕೋರ್ಟ್ ವೃತ್ತಗಳನ್ನು ಸಂಪರ್ಕಿಸುವ ಜ್ಯೋತಿ ಪೆಟ್ರೋಲ್ ಬಂಕ್ ಬಳಿ ಇರುವ ಲಕ್ಷ್ಮಿ ಥಿಯೇಟರ್‌ನ ಎದುರಿಗೇ ಇಂತಹ ಎರಡು ಬೃಹತ್ ಪ್ರಮಾಣದ ಅಶ್ಲೀಲ ಪೋಸ್ಟರ್‌ಗಳನ್ನು ಹಚ್ಚಲಾಗಿದೆ.ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಾಹಿತಿ ದಂಪತಿ ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ ಹಾಗೂ ಡಾ.ಹೇಮಾ ಪಟ್ಟಣಶೆಟ್ಟಿ, `ಇಂತಹ ಪೋಸ್ಟರ್‌ಗಳಿಂದ ಧಾರವಾಡ ನಗರದ ಮೇಲೆ ಅತ್ಯಾಚಾರ ಎಸಗಿದಂತಾಗಿದೆ. ಅಧಿಕಾರಸ್ಥರ (ರಾಜಕಾರಣಿಗಳ) ನಿರ್ಲಕ್ಷ್ಯ ಹಾಗೂ ಅಧಿಕಾರ ಚಲಾಯಿಸುವವರ (ಪೊಲೀಸರು ಹಾಗೂ ಪಾಲಿಕೆ ಅಧಿಕಾರಿಗಳು) ಕರ್ತವ್ಯ ವಿಮುಖತೆ ಈ ಪೋಸ್ಟರ್‌ಗಳು ಕಾಣಿಸಿಕೊಳ್ಳಲು ಕಾರಣ.

ಸಿನಿಮಾ ಥಿಯೇಟರ್‌ನವರಿಗೆ ಜನರ ಸಾಂಸ್ಕೃತಿಕ ಅಭಿರುಚಿಗಿಂತ ತಮಗೆ ದುಡ್ಡು ಬರುವುದೇ ಮುಖ್ಯವಾಗಿದೆ. ಅವರಿಗೆ ಬಾಯಿ ಮಾತಿನಲ್ಲಿ ಹೇಳಿ ಪ್ರಯೋಜನವಿಲ್ಲ. ತುರ್ತು ಕ್ರಮ ಜರುಗಿಸಬೇಕು' ಎಂದರು.ಎರಡು ದಶಕಗಳಿಂದ ಇಂತಹ ಅಶ್ಲೀಲ ಸಿನಿಮಾ ಹಾಗೂ ಪೋಸ್ಟರ್‌ಗಳ ವಿರುದ್ಧ ಧ್ವನಿ ಎತ್ತುತ್ತಾ ಬಂದಿರುವ `ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆ'ಯ ಜಿಲ್ಲಾ ಸಂಚಾಲಕ ಎಚ್.ಜಿ.ದೇಸಾಯಿ, `ಭಾರತೀಯ ಅಪರಾಧ ದಾಖಲೆಗಳ ಬ್ಯುರೊ ವರದಿಯು (ಎನ್‌ಸಿಆರ್‌ಬಿ) ಇಂತಹ ಅಶ್ಲೀಲ ಪೋಸ್ಟರ್ ಹಾಗೂ ಸಿನಿಮಾಗಳಿಂದಲೇ ಯುವಕರು ಪ್ರಚೋದನೆಗೆ ಒಳಗಾಗಿ ಅತ್ಯಾಚಾರದಂತಹ ಹೇಯ ಕೃತ್ಯಗಳನ್ನು ಎಸಗುತ್ತಿದ್ದಾರೆ ಎಂದು ಹೇಳಿದೆ. ಈ ಬಗ್ಗೆ ತಿಳಿದೂ ಸೆನ್ಸಾರ್ ಮಂಡಳಿ ಕಣ್ಣು ಮುಚ್ಚಿ ಕುಳಿತಿದೆ. ಪೊಲೀಸರು ಹಾಗೂ ಪಾಲಿಕೆ ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಬೇಕು' ಎಂದು ಒತ್ತಾಯಿಸಿದರು.`ಎಲ್ಲೆಲ್ಲಿ ಈ ಸಿನಿಮಾದ ಪೋಸ್ಟರ್‌ಗಳನ್ನು ಹಚ್ಚಿದ್ದಾರೆ ಎಂಬುದು ಗೊತ್ತಾಗಿಲ್ಲ. ಹಿರಿಯ ಅಧಿಕಾರಿಗಳೊಂದಿಗೆ ಇದೇ 10ರಂದು ಲಕ್ಷ್ಮಿ ಥಿಯೇಟರ್ ವ್ಯವಸ್ಥಾಪಕರನ್ನು ಭೇಟಿಯಾಗಿ ಅವರಿಗೆ ನೋಟಿಸ್ ನೀಡಲಾಗುವುದು. ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು' ಎಂದು ಪಾಲಿಕೆಯ ಧಾರವಾಡ ನಗರದ ಮಾರುಕಟ್ಟೆ ವಿಭಾಗದ ಅಧಿಕಾರಿ ಎಂ.ಡಿ.ಭೋಸಲೆ `ಪ್ರಜಾವಾಣಿ'ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry