ರಾರಾವಿಯಲ್ಲಿ ಎತ್ತುಗಳ ಪರಿಷೆ

7

ರಾರಾವಿಯಲ್ಲಿ ಎತ್ತುಗಳ ಪರಿಷೆ

Published:
Updated:

ಸಿರುಗುಪ್ಪ: ತಾಲ್ಲೂಕಿನ ರಾರಾವಿ ಯಲ್ಲಮ್ಮ ದೇವಿಯ ಜಾತ್ರೆ ಅಂಗವಾಗಿ ಮೂರು ದಿನಗಳ ಕಾಲ ನಡೆದ ಜಾನುವಾರುಗಳ ಪರಿಷೆಯಲ್ಲಿ 500ಕ್ಕೂ ಅಧಿಕ ಕಿಲಾರಿ ಜೋಡೆತ್ತುಗಳು ಪಾಲ್ಗೊಂಡು ಖರೀದಿಸುವ ರೈತರ ಗಮನಸೆಳೆದವು.ನೆರೆಯ ಆಂಧ್ರದ, ಆಲೂರು, ತಾಡಪತ್ರಿ, ಮಲಿಗೇರಿ, ಎಮ್ಮಿಗನೂರು, ನೆಣಿಕೆ, ಪತ್ತಿಕೊಂಡ, ಅನಂತಪುರ, ಧರ್ಮಾವರಂ ಮತ್ತು ಚಿಕ್ಕಬಳ್ಳಾಪುರ ಅಲ್ಲದೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಿಂದ ರೈತರು ಪರಿಷೆಯಲ್ಲಿ ಭಾಗವಹಿಸಿದ್ದರು. ಕಿಲಾರಿ ತಳಿಯ ಎತ್ತುಗಳು ಮತ್ತು ಸ್ಥಳೀಯ ಜವಾರಿ ರಾಸುಗಳಿಗೆ ಭಾರಿ ಬೇಡಿಕೆ ಇತ್ತು.ಈ ವರ್ಷ ಬರದ ಛಾಯೆ ಆವರಿಸಿದ್ದರಿಂದ ಜಾನುವಾರುಗಳ ಖರೀದಿ ಮಂದಗತಿಯಲ್ಲಿತ್ತು. ರಾಸುಗಳ ವಯಸ್ಸು, ದೃಢಕಾಯದ, ಸುಂದರ ಸೀಮೆ ಆಧರಿಸಿ ದರ ನಿಗದಿಯಾಗಿತ್ತು. ಉತ್ತಮ ರಾಸುಗಳು 70ರಿಂದ 95 ಸಾವಿರ ರೂಪಾಯಿಗೆ ಮಾರಾಟವಾಗಿದ್ದು ವಿಶೇಷ.ಐದು ದಿನಗಳ ಕಾಲ ನಡೆಯುವ ಈ ಜಾನುವಾರಗಳ ಪರಿಷೆಯಲ್ಲಿ ಎತ್ತುಗಳೊಂದಿಗೆ ಭಾಗವಹಿಸುವ ರೈತರಿಗೆ ದೇವಸ್ಥಾನದಲ್ಲಿ ಉಚಿತ ವಸತಿ, ಊಟ ಅಲ್ಲದೇ ಎತ್ತುಗಳಿಗೆ ಮೇವು ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಸಮಿತಿಯ ಕಾರ್ಯದರ್ಶಿ ಮುಕ್ಕುಂದಿ ಬಸವನಗೌಡ ಪತ್ರಿಕೆಗೆ ತಿಳಿಸಿದರು.ಉತ್ತಮ ರಾಸುಗಳಿಗೆ ಇಂದು ಸಂಜೆ ಬಹುಮಾನವನ್ನು ಎಪಿಎಂಸಿ ಅಧ್ಯಕ್ಷ ಮಂಜುನಾಥಗೌಡ ವಿತರಿಸಿದರು.

ಪರಿಷೆಯಲ್ಲಿ ನಾಡಂಗದ ಜೋಡೆತ್ತಿಗೆ ಐದು ಸಾವಿರ ರೂಪಾಯಿ (ಪ್ರಥಮ), ತೊಂಡೆಹಾಳು ಜೋಡೆತ್ತಿಗೆ ಮೂರು ಸಾವಿರ ರೂಪಾಯಿ (ದ್ವಿತೀಯ) ಮತ್ತು ನಾಗರಹಾಳು ಗ್ರಾಮದ ಜೋಡೆತ್ತಿಗೆ 2 ಸಾವಿರ ರೂಪಾಯಿ (ತೃತೀಯ) ಬಹುಮಾನ ನೀಡಲಾಯಿತು.ಜಿ.ಪಂ.ಸದಸ್ಯ ಡಿ.ಸೋಮಪ್ಪ, ತಾ.ಪಂ.ಸದಸ್ಯ ಈರಣ್ಣ, ಎಪಿಎಂಸಿ ಸದಸ್ಯರಾದ ಟಿ.ಮಹಾದೇವಗೌಡ, ಗರಡಿ ಮಲ್ಲಿಕಾರ್ಜುನ, ಕೆ. ಚಂದ್ರಶೇಖರ, ಮಾಜಿ ಅಧ್ಯಕ್ಷ ಕೆ. ನಾಗೇಶಪ್ಪ, ಗ್ರಾ.ಪಂ.ಅಧ್ಯಕ್ಷರು ಮತ್ತು ದೇವಸ್ಥಾನ ಸಮಿತಿಯ ಸದಸ್ಯರಾದ ಎ.ರಾಮಪ್ಪ, ಸುರೇಶ್‌ದೇಸಾಯಿ, ದೊಡ್ಡಯ್ಯ, ವೆಂಕಟೇಶ, ಲಿಂಗಪ್ಪ, ಈಶಪ್ಪ, ಯಲ್ಲಪ್ಪ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry