ರಾಷ್ಟ್ರಕ್ಕೆ ಒಳಿತು ಬಯಸುವ ಪೀಳಿಗೆ ಅಗತ್ಯ

7

ರಾಷ್ಟ್ರಕ್ಕೆ ಒಳಿತು ಬಯಸುವ ಪೀಳಿಗೆ ಅಗತ್ಯ

Published:
Updated:

ಸಿರಿಗೆರೆ: ರಾಷ್ಟ್ರಕ್ಕೆ ಒಳಿತು ಬಯಸುವ ಯುವಪೀಳಿಗೆಯ ಅಗತ್ಯವಿದೆ ಎಂದು ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಎಸ್.ಟಿ. ಶಾಂತಗಂಗಾಧರ ಕರೆ ನೀಡಿದರು.ಇಲ್ಲಿನ ಗುರುಶಾಂತೇಶ್ವರ ದಾಸೋಹ ಮಂಟಪದಲ್ಲಿ ಬುಧವಾರ ತರಳಬಾಳು ಬೃಹನ್ಮಠದ ಅಣ್ಣನ ಬಳಗದ ವತಿಯಿಂದ ನಡೆದ ಲಿಂಗೈಕ್ಯ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಅವರ 3ನೇ ಶ್ರದ್ಧಾಂಜಲಿ ಹಾಗೂ ಸಾಮೂಹಿಕ ವಿವಾಹ ಮಹೋತ್ಸವ ಉದ್ದೇಶಿಸಿ ಅವರು ಮಾತನಾಡಿದರು.ಪ್ರಸ್ತುತ ಜಗತ್ತಿನಲ್ಲಿ ಹಣ, ಗುಣವನ್ನು ಅತಿಕ್ರಮಿಸಿದೆ. ಇಂತಹ ಸಂದರ್ಭದಲ್ಲಿ ಗುಣದ ಅಭಾವ ತಲೆದೋರುತ್ತಿದೆ ಎಂದು ವಿಷಾದಿಸಿದರು.ಕಷ್ಟಕೋಟಲೆಗಳಿಗೆ ಅಂಜಿ ಹಿಂದೆ ಸರಿಯಬೇಡಿ. ಗುಣ ಮತ್ತು ಕಿವಿ ಎರಡೂ ಸರಿ ಇದ್ದಲ್ಲಿ ಇಂತಹ ಸಾರ್ಥಕ ಜೀವನ ನಡೆಸಲು ಸಾಧ್ಯ. ಈಗೀಗ ಅವಿಭಕ್ತ ಕುಟುಂಬದ ಪರಿಕಲ್ಪನೆ ಕಣ್ಮರೆಯಾಗಿರುವುದು ವಿಷಾದನೀಯ ಎಂದರು.ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಸಾಣೇಹಳ್ಳಿ ತರಳಬಾಳು ಶಾಖಾಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಲೋಲುಪ ಜೀವನ ನಡೆಸುವವರು ನರಕವನ್ನು ಈ ಜನ್ಮದಲ್ಲಿಯೇ ಅನುಭವಿಸಿ ಹೋಗುತ್ತಾರೆ. ಯಾವುದೇ ಐಶ್ವರ್ಯ, ಅಂತಸ್ತು, ದುಶ್ಚಟ, ಕಾಮನೆಗಳ ದಾಸರಾಗದೆ ಸಾತ್ವಿಕ ನೆಲೆಗಟ್ಟಿನಲ್ಲಿ ಬದುಕಿ ಸುಖಿ ಸಂಸಾರ ನಡೆಸಿ ಎಂದು ಕರೆ ನೀಡಿದರು.ಲಿಂಗೈಕ್ಯ ಮಲ್ಲಿಕಾರ್ಜುನ ಸ್ವಾಮೀಜಿ ಅವರು ಮೂಢನಂಬಿಕೆ, ಡಂಬಾಚಾರಗಳನ್ನು ತಳ್ಳಿಹಾಕಿ ಧಾರ್ಮಿಕ ಜಾಗೃತಿ ಮೂಡಿಸುವಲ್ಲಿ ಮಹತ್ತರವಾದ ಶ್ರಮ ವಹಿಸಿದವರು. ನಮ್ಮದು ಕೃಷಿ ಪ್ರಧಾನವಾದ ನಾಡು, ಅದನ್ನು ನಾವು ಮರೆಯಬಾರದು, ಅದರ ಏಳಿಗೆಗೆ ನಾವೆಲ್ಲಾ ಶ್ರಮಿಸಬೇಕು, ಭೂಮಿಗೆ ಬೆವರನ್ನು ಬಸಿ ಆಗ ನಿನಗೆ ಭೂತಾಯಿ ಫಲ ನೀಡುವಳು ಎಂಬ ಸಂದೇಶದೊಂದಿಗೆ ಕೃಷಿಗೆ ಪ್ರೋತ್ಸಾಹ ನೀಡಿದವರು ಎಂದು ಸ್ಮರಿಸಿದರು.ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಪ್ರೊ.ಎಸ್.ಬಿ. ರಂಗನಾಥ್, ಕಾರ್ಯನಿರ್ವಾಹಕ ಅಧಿಕಾರಿ ಕೆ.ಜಿ. ಶಿವಮೂರ್ತಿ, ಪ್ರಾದೇಶಿಕ ಅಧಿಕಾರಿ ಡಾ.ನಾ. ಲೋಕೇಶ ಒಡೆಯರ್, ಉಪ ಪ್ರಾಂಶುಪಾಲ ಸಿ.ಎಲ್. ಬಸವರಾಜ್, ಎಚ್.ಎನ್. ಓಂಕಾರಪ್ಪ, ಕೆ. ಮೌನೇಶ್ವರಾಚಾರ್ ಹಾಜರಿದ್ದರು.

ಅಣ್ಣನ ಬಳಗದ ಅಧ್ಯಕ್ಷ ಐ.ಜಿ. ಚಂದ್ರಶೇಖರಯ್ಯ ಸ್ವಾಗತಿಸಿದರು. ಎಸ್. ರವಿ ವಂದಿಸಿದರು. ಕಾರ್ಯದರ್ಶಿ ಜಿ.ಎಸ್. ಶಿವಕುಮಾರ್ ಕಾರ್ಯಕ್ರಮ ನಿರೂಪಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry