ರಾಷ್ಟ್ರಧ್ವಜಕ್ಕೆ ಅವಮಾನ; ಅದರ ಸುತ್ತ ಅನುಮಾನ!

7

ರಾಷ್ಟ್ರಧ್ವಜಕ್ಕೆ ಅವಮಾನ; ಅದರ ಸುತ್ತ ಅನುಮಾನ!

Published:
Updated:

ಬಾಗಲಕೋಟೆ: ಬವಿವ ಸಂಘದ ಪಿ.ಎಂ. ನಾಡಗೌಡ ದಂತ ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ರಾಷ್ಟ್ರಧ್ವಜವನ್ನು ತುಳಿದು ಅವಮಾನಿಸಿದ್ದಾರೆ ಎನ್ನಲಾದ ಘಟನೆಯು ರಾಜ್ಯದಾದ್ಯಂತ ಗೊಂದಲಕ್ಕೆ ಕಾರಣವಾಗಿದೆ.ವಿದ್ಯಾರ್ಥಿಗಳ ತಂಡ ರಾಷ್ಟ್ರಧ್ವಜವನ್ನು ತುಳಿದು ಅವಮಾನಿಸಿದೆ ಎಂದು ಖಾಸಗಿ ವಾಹಿನಿಯೊಂದು ಸುದ್ದಿ ಬಿತ್ತರಿಸಿದಾಗ ಈ ಘಟನೆಯನ್ನು ಖಂಡಿಸಿ ಕೆಲ ಸಂಘಟನೆಗಳ ಮುಖಂಡರು ಬೀದಿಗಿಳಿದು ಪ್ರತಿಭಟನೆ ನಡೆಸಿದರು.ಧ್ವಜಕ್ಕೆ ಅವಮಾನಿಸಿದ ವಿದ್ಯಾರ್ಥಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆಯೂ ವಿವಿಧ ಸಂಘಟನೆಗಳ ಮುಖಂಡರು ಒಕ್ಕೊರಲಿನಿಂದ ಒತ್ತಾಯಿಸಿದರು. ಆದರೆ ಧ್ವಜಕ್ಕೆ ಅವಮಾನಿಸಿರುವುದನ್ನು ಕಾಲೇಜಿನ ಪ್ರಾಧ್ಯಾಪಕರು ಅಲ್ಲಗಳೆದಿದ್ದಾರೆ.ನಿಜವಾಗಿ ಆಗಿದ್ದೇನು? ಶುಕ್ರವಾರ (ಫೆ.25) ನಡೆಯಬೇಕಿದ್ದ ದಂತ ಮಹಾವಿದ್ಯಾಲಯದ ವಾರ್ಷಿಕ ದಿನಾಚರಣೆ ಕಾರ್ಯಕ್ರಮದಲ್ಲಿ ‘ಕಾರ್ಗಿಲ್ ವಿಜಯೋತ್ಸವ’ದ ಬಗ್ಗೆ ರೂಪಕ ಪ್ರದರ್ಶಿಸಲಿದ್ದ ವಿದ್ಯಾರ್ಥಿಗಳ ತಂಡವು ರಿಹರ್ಸಲ್ ನಡೆಸುತ್ತಿರುವಾಗ ಈ ಗೊಂದಲ ಉದ್ಭವಿಸಿದೆ.“ಕಾಲಲ್ಲಿ ಬಿದ್ದಿರುವುದು ರಾಷ್ಟ್ರಧ್ವಜವಲ್ಲ; ಕೇಸರಿ, ಬಿಳಿ ಹಾಗೂ ಹಸಿರು ಬಣ್ಣದ ಮೂರು ತುಂಡು ಬಟ್ಟೆಗಳವು” ಎಂದು ರಿಹರ್ಸಲ್‌ನ ನಿರ್ಣಾಯಕರಾಗಿದ್ದ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರೊ.ಕಾಶಿನಾಥ ಆರಬ್ಬಿ ‘ಪ್ರಜಾವಾಣಿ’ಗೆ ತಿಳಿಸಿದರು.“ದೇಶಭಕ್ತಿಗೆ ಸ್ಫೂರ್ತಿಯಾಗುವಂತಹ ‘ಕಾರ್ಗಿಲ್ ವಿಜಯೋತ್ಸವ’ದ ರೂಪಕ ಪ್ರದರ್ಶನಕ್ಕೆ ತಯಾರಿ ನಡೆಸಿದ್ದ ವಿದ್ಯಾರ್ಥಿಗಳೇ ಧ್ವಜವನ್ನು ತುಳಿಯುವುದು ಹೇಗೆ ಸಾಧ್ಯ. ರೂಪಕದ ಕೊನೆಯಲ್ಲಿ ಆ ಮೂರು ತುಂಡು ಬಟ್ಟೆಗಳನ್ನು ಎತ್ತಿ ತೋರಿಸುವ ಸನ್ನಿವೇಶವಿದೆ. ಆದರೆ ಆ ರೂಪಕ ಕೊನೆಗೊಳ್ಳುವ ಮುಂಚಿನ ದೃಶ್ಯ ಪ್ರಸಾರಗೊಂಡಿದ್ದರಿಂದ ತಪ್ಪು ಕಲ್ಪನೆ ಮೂಡಿದೆ” ಎಂದು ತಿಳಿಸಿದರು.ಈ ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ ಕಾಲೇಜಿನ ಪ್ರಾಚಾರ್ಯ ಡಾ.ಶ್ರೀನಿವಾಸ್ ವನಕಿ, ‘ಈ ಘಟನೆ ನಡೆದಾಗ ತಾವು ಊರಲ್ಲಿ ಇರಲಿಲ್ಲ; ಒಂದು ವೇಳೆ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದರೆ ಅಂತಹ ವಿದ್ಯಾರ್ಥಿಗಳ ಮೇಲೆ ಖಂಡಿತವಾಗಿಯೂ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.ಕೇಸರಿ, ಬಿಳಿ, ಹಸಿರು ಬಣ್ಣ ಹಾಗೂ ಅದರ ನಡುವೆ ಅಶೋಕ ಚಕ್ರ ಹೊಂದಿರುವ ನಿರ್ದಿಷ್ಟ ಅಳತೆಯ ಧ್ವಜವನ್ನು ಮಾತ್ರ ರಾಷ್ಟ್ರಧ್ವಜ ಎಂದು ಪರಿಗಣಿಸಲಾಗುತ್ತದೆ.ರಿಹರ್ಸಲ್ ಸಂದರ್ಭದಲ್ಲಿ ವಿದ್ಯಾರ್ಥಿಗಳು ರಾಷ್ಟ್ರಧ್ವಜವನ್ನು ಹೋಲುವ ಮೂರು ತುಂಡು ಬಟ್ಟೆಗಳನ್ನು ತುಳಿದಿದ್ದಾರೆ ಎಂಬುದೇ ಸತ್ಯ. ಆದರೆ ಧ್ವಜವನ್ನು ಹೋಲುವ ‘ತ್ರಿವರ್ಣ ಬಟ್ಟೆ’ ಕಾಲಲ್ಲಿ ಬಿದ್ದಿರುವುದು ಹಾಗೂ ಕೈಯಲ್ಲಿ ಧ್ವಜವನ್ನು ಹಿಡಿದ ವಿದ್ಯಾರ್ಥಿಯೊಬ್ಬ ಅದರ ಮೇಲೆ ಕಾಲಿಟ್ಟಿರುವ ದೃಶ್ಯ ಟಿವಿಯಲ್ಲಿ ಪ್ರಸಾರಗೊಂಡಿದ್ದರಿಂದ ಜನರು ಆಕ್ರೋಶಗೊಂಡರು.ಆಕಸ್ಮಿಕ ಆಗಿರಬಹುದಾದ ಈ ಘಟನೆಯು ರಾಜ್ಯದಾದ್ಯಂತ ಪ್ರಚಾರ ಪಡೆದುಕೊಂಡಿದ್ದು ಮಾತ್ರ ವಿಪರ್ಯಾಸ.ವಾರ್ಷಿಕ ದಿನಾಚರಣೆ ರದ್ದು

ಬಾಗಲಕೋಟೆ: ಬವಿವ ಸಂಘದ ಪಿ.ಎಂ.ನಾಡಗೌಡ ದಂತ ವಿಜ್ಞಾನ ಮಹಾವಿದ್ಯಾಲಯದಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನಿಸಲಾಗಿದೆ ಎಂದು ಖಾಸಗಿ ವಾಹಿನಿಯಲ್ಲಿ ವರದಿಯೊಂದು ಬಿತ್ತರಗೊಂಡ  ಹಿನ್ನೆಲೆಯಲ್ಲಿ ಫೆ.25ರಂದು ನಡೆಯಬೇಕಿದ್ದ ವಾರ್ಷಿಕ ದಿನಾಚರಣೆಯನ್ನು ರದ್ದುಪಡಿಸಲಾಗಿದೆ.ಟಿವಿಯಲ್ಲಿ ಪ್ರಸಾರಗೊಂಡ ವರದಿಯ ಬಗ್ಗೆ ಸ್ಪಷ್ಟೀಕರಣ ಕೇಳಿರುವ ರಾಜೀವ ಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯವು ಅಲ್ಲಿಯವರೆಗೆ ಕಾರ್ಯಕ್ರಮವನ್ನು ರದ್ದುಪಡಿಸುವಂತೆ ಸೂಚಿಸಿದೆ ಎಂದು ತಿಳಿದುಬಂದಿದೆ.ಈ ಬಗ್ಗೆ ಲಿಖಿತ ಸ್ಪಷ್ಟನೆ ನೀಡಿರುವ ಕಾಲೇಜಿನ ಪ್ರಾಚಾರ್ಯ ಡಾ.ಶ್ರೀನಿವಾಸ್ ವನಕಿ, ‘ರಾಷ್ಟ್ರಧ್ವಜಕ್ಕೆ ಅವಮಾನಿಸಲಾಗಿದೆ ಎಂಬ ಘಟನೆಯ ಪರಿಶೀಲನೆ ನಡೆಸಲಾಗುತ್ತಿದೆ. ಆದರೆ ಕಾಲೇಜಿನ ವತಿಯಿಂದ ವರದಿಗಾರರಿಗೆ ಯಾವುದೇ ಬೆದರಿಕೆ ಕರೆಗಳನ್ನು ಮಾಡಿಲ್ಲ’ ಎಂದು ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry