ರಾಷ್ಟ್ರಪತಿಗಳದ್ದು ಕೇವಲ 9 ನಿಮಿಷದ ಭಾಷಣ!

7

ರಾಷ್ಟ್ರಪತಿಗಳದ್ದು ಕೇವಲ 9 ನಿಮಿಷದ ಭಾಷಣ!

Published:
Updated:

ವಿಜಾಪುರ: ಸೈನಿಕ ಶಾಲೆಯ ಸುವರ್ಣ ಮಹೋತ್ಸವಕ್ಕೆ ಇದೇ 24ರಂದು ಆಗಮಿಸುವ ರಾಷ್ಟ್ರಪತಿಗಳು, ಇಲ್ಲಿ ಕಳೆಯುವುದು ಕೇವಲ 80 ನಿಮಿಷ ಮಾತ್ರ. ಇನ್ನು ಅವರು ಮಾಡುವ ಭಾಷಣದ ಅವಧಿ ಒಂಬತ್ತು ನಿಮಿಷವಷ್ಟೇ.

ರಾಷ್ಟ್ರಗೀತೆ ನುಡಿಸಲು ಎರಡೇ ನಿಮಿಷ, ಏಳೆದೆಳೆದು ಕನಿಷ್ಠ ಏಳು ನಿಮಿಷಗಳ ಕಾಲ ಹಾಡುವ ‘ಜೈ ಭಾರತ ಜನನಿಯ ತನುಜಾತೆ...’ ನಾಡಗೀತೆಯನ್ನು ಮೂರೇ ನಿಮಿಷದಲ್ಲಿ ಹಾಡಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯಪಾಲ ಹಂಸರಾಜ್‌ ಭಾರದ್ವಾಜ್‌ ಅವರಿಗೆ ಭಾಷಣಕ್ಕೆ ನೀಡಿರುವ ಅವಧಿ ತಲಾ ಐದು ನಿಮಿಷ.

ವೇದಿಕೆಯಲ್ಲಿ ರಾಷ್ಟ್ರಪತಿಗಳು, ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳ ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಸೇರಿದಂತೆ ಇಬ್ಬರು ಸಚಿವರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಶಿಕ್ಷಣ ಸಚಿವರು ಬಂದರೆ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಚಿವ ಎಸ್‌.ಆರ್‌. ಪಾಟೀಲರು20ವೇದಿಕೆಯಿಂದ ಹೊರಗುಳಿಯುವ ಸಾಧ್ಯತೆ ಇದೆ. ಸೈನಿಕ ಶಾಲೆಯ ಪ್ರಾಚಾರ್ಯ ಕರ್ನಲ್‌ ಆರ್‌.ಬಾಲಾಜಿ ಸ್ವಾಗತಿಸಿದರೆ, ಜಿಲ್ಲಾಧಿಕಾರಿ ಶಿವಯೋಗಿ ಕಳಸದ ವಂದನಾರ್ಪಣೆ ಮಾಡುವರು.

ರಾಷ್ಟ್ರಪತಿಗಳಿಗೆ ಸೈನಿಕ ಶಾಲೆಯಿಂದ ಗೌರವಾರ್ಪಣೆ ನಡೆಯಲಿದೆ. ಇದಕ್ಕಾಗಿ ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದಿಂದ ಶಿರಸಿಯಲ್ಲಿ ಶ್ರೀಗಂದದ ಕಟ್ಟಿಗೆಯಲ್ಲಿ ಸ್ಮರಣಿಕೆ ಮಾಡಿಸಲಾಗಿದೆ. ಸೈನಿಕ ಶಾಲೆ ಆರಂಭವಾದ 1963ರಿಂದ ಕಾರ್ಯನಿರ್ವಹಿಸಿ ಈಗ ನಿವೃತ್ತರಾಗಿರುವ ಶಿಕ್ಷಕ ಜಿ.ಡಿ. ಕಾಳೆ ಅವರನ್ನು ವೇದಿಕೆಗೆ ಆಹ್ವಾನಿಸಿ ರಾಷ್ಟ್ರಪತಿಗಳಿಂದ ಸನ್ಮಾನಿಸಲಾಗುತ್ತಿದೆ.

ಶಿಷ್ಟಾಚಾರದಂತೆ ಸಮಾರಂಭದ ಆರಂಭ ಮತ್ತು ಕೊನೆಯಲ್ಲಿ ಸೇನಾ ಬ್ಯಾಂಡ್‌ನವರು ರಾಷ್ಟ್ರಗೀತೆ ನುಡಿಸಲಿದ್ದಾರೆ. ಅದಕ್ಕಾಗಿ ಬೆಳಗಾವಿಯ ಮರಾಠ ಲೈಟ್‌ ಇನ್‌ಫಂಟ್ರಿಯ ಬ್ಯಾಂಡ್‌ ತರಿಸಲಾಗಿದೆ.

ನಾಡಗೀತೆಯನ್ನು ಇಲ್ಲಿಯ ಸ್ಪಾಟ್‌ಲೈಟ್‌ ಫಿಲಂ ಸಂಸ್ಥೆಯವರು ಹಾಡಲಿದ್ದಾರೆ. ವೀರೇಶ ವಾಲಿ ಮತ್ತು ಶ್ರೀನಿವಾಸ ಗುರ್ಜಾಲ್‌ ನೇತೃತ್ವದ ಈ ತಂಡದಲ್ಲಿ ಶೈಲಜಾ ಪಡಗಾನೂರ, ದಿವ್ಯಾ ಕೌಜಲಗಿ, ಕವಿತಾ ಕಾಖಂಡಕಿ, ಪೂಜಾ ಹಿರೇಮಠ, ಚೈತ್ರಾ ಜೋಶಿ, ದೇವು ಕೆ., ರವಿ ಬರಾಡೆ, ಮಹೇಶ ಬಗಲಿ, ವಿನೋದ ಕಟಗೇರಿ, ಐಶ್ವರ್ಯ ಗೂಗವಾಡ ಇರಲಿದ್ದಾರೆ. ಆದರೆ, ಈ ತಂಡದಲ್ಲಿ 11 ಜನ ಇರುವುದು ಬೇಡ. ಐದೇ ಜನ ಸಾಕು ಎಂದು ಭದ್ರತಾ ಅಧಿಕಾರಿಗಳು ತಕರಾರು ತೆಗೆದಿದ್ದು, ಈ ತಂಡದ ಸದಸ್ಯರ ಸಂಖ್ಯೆಯಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಚಹಾ ಕೂಟಕ್ಕೆ ಐದು ನಿಮಿಷ

‘ಸಮಾರಂಭದ ನಂತರ ಸೈನಿಕ ಶಾಲೆಯ ಪ್ರಾಚಾರ್ಯರ ಕೊಠಡಿಯಲ್ಲಿ ಚಹಾ ಸೇವಿಸಲು ಐದು ನಿಮಿಷ ಸಮಯಾವಕಾಶ ಇದೆ. ಚಹಾ ಕೂಟದ ಜೊತೆಗೆ ಗಣ್ಯರೊಂದಿಗೆ ಚರ್ಚಿಸಲು ಅನುವಾಗುವಂತೆ ವ್ಯವಸ್ಥೆ ಮಾಡಲಾಗಿದೆ’ ಎಂದು ಶಾಲೆಯ ಸುವರ್ಣ ಮಹೋತ್ಸವ ಸ್ವಾಗತ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಶಿವಯೋಗಿ ಕಳಸದ ಹೇಳಿದರು.

‘ಜಿಲ್ಲೆಯ ಸಂಸದರು, ಶಾಸಕರು ಮತ್ತು ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗಿದೆ. ಸೈನಿಕ ಶಾಲೆಯ ವಿದ್ಯಾರ್ಥಿಗಳೆಲ್ಲರೂ ಸಮಾರಂಭದಲ್ಲಿ ಪಾಲ್ಗೊಳ್ಳುವರು’ ಎಂದರು.

‘ಬೆಳಿಗ್ಗೆ 11.55ಕ್ಕೆ ಸೈನಿಕ ಶಾಲೆಯ ಹೆಲಿಪ್ಯಾಡ್‌ಗೆ ಆಗಮಿಸುವ ರಾಷ್ಟ್ರಪತಿಗಳು ಅಲ್ಲಿಂದ ನೇರವಾಗಿ ಶಾಲೆಯ ಒಳಾಂಗಣ ಕ್ರೀಡಾಂಗಣಕ್ಕೆ ತೆರಳಿ ಅದನ್ನು ಉದ್ಘಾಟಿಸಿ, ವೇದಿಕೆಗೆ ಬರುವರು. ಮುಖ್ಯಮಂತ್ರಿಗಳು, ರಾಜ್ಯಪಾಲರ ಭಾಷಣದ ನಂತರ ರಾಷ್ಟ್ರಪತಿಗಳು ಸಂದೇಶ ನೀಡುವರು. ರಾಷ್ಟ್ರಗೀತೆಯ ನಂತರ ಸೈನಿಕ ಶಾಲೆಯ ಮುಂಭಾಗದಲ್ಲಿ ನಮ್ಮ ಶಾಲೆಯ ಎಲ್ಲ ಶಿಕ್ಷಕರು ರಾಷ್ಟ್ರಪತಿಗಳೊಂದಿಗೆ ಫೋಟೊ ತೆಗೆಸಿಕೊಳ್ಳಲಿದ್ದೇವೆ’ ಎಂದು ಪ್ರಾಚಾರ್ಯ ಕರ್ನಲ್‌ ಆರ್‌.ಬಾಲಾಜಿ ಹೇಳಿದರು.

‘ಸುವರ್ಣಮಹೋತ್ಸವ ಸಮಾರಂಭಕ್ಕೆ ರಾಜ್ಯ ಸರ್ಕಾರ ₨ 25 ಲಕ್ಷ ಬಿಡುಗಡೆ ಮಾಡಿದೆ’ ಎಂದರು.

ರಾಷ್ಟ್ರಪತಿಗಳ ಕಾರ್ಯಕ್ರಮದ ವೇಳಾಪಟ್ಟಿ

ಬೆಳಿಗ್ಗೆ 11.55ಕ್ಕೆ ಸೈನಿಕ ಶಾಲೆಯ ಹೆಲಿಪ್ಯಾಡ್‌ಗೆ ಆಗಮನ.

ಮಧ್ಯಾಹ್ನ 12ಕ್ಕೆ ಸೈನಿಕ ಶಾಲೆಯ ಹೆಲಿಪ್ಯಾಡ್‌ನಿಂದ ಒಳಾಂಗಣ

ಕ್ರೀಡಾಂಗಣದತ್ತ ಪ್ರಯಾಣ.

12.05ಕ್ಕೆ ಒಳಾಂಗಣ ಕ್ರೀಡಾಂಗಣ ಉದ್ಘಾಟನೆ.

12.10ಕ್ಕೆ ಸಮಾರಂಭದ ವೇದಿಕೆಗೆ ಆಗಮನ.

12.15ಕ್ಕೆ ರಾಷ್ಟ್ರಗೀತೆ

12.17ಕ್ಕೆ ನಾಡಗೀತೆ

12.19ಕ್ಕೆ ಸ್ವಾಗತ–ಪ್ರಾಚಾರ್ಯ ಕರ್ನಲ್‌ ಆರ್‌.ಬಾಲಾಜಿ ಅವರಿಂದ

12.23 ಗೌರವಾರ್ಪಣೆ.

12.26 ಸೈನಿಕ ಶಾಲೆಯ ಹಿರಿಯ ಶಿಕ್ಷಕ ಜಿ.ಡಿ. ಕಾಳೆ ಸನ್ಮಾನ.

12.29 ಮುಖ್ಯಮಂತ್ರಿಗಳ ಭಾಷಣ.

12.34 ರಾಜ್ಯಪಾಲರ ಭಾಷಣ.

12.39 ರಾಷ್ಟ್ರಪತಿಗಳ ಭಾಷಣ.

12.49ಕ್ಕೆ ವಂದನಾರ್ಪಣೆ–ಜಿಲ್ಲಾಧಿಕಾರಿ ಶಿವಯೋಗಿ ಕಳಸದ ಅವರಿಂದ.

12.52ಕ್ಕೆ ರಾಷ್ಟ್ರಗೀತೆ.

1.00ಕ್ಕೆ ಸೈನಿಕ ಶಾಲೆಯ ಶಿಕ್ಷಕರ ಜೊತೆಗೆ ಫೋಟೊ ತೆಗೆಸಿಕೊಳ್ಳುವುದು.

1.05ಕ್ಕೆ ಹೆಲಿಪ್ಯಾಡ್‌ನತ್ತ ಪ್ರಯಾಣ. 1.10ಕ್ಕೆ ಹೆಲಿಪ್ಯಾಡ್‌ಗೆ ಆಗಮನ.,

1.15ಕ್ಕೆ ಹೆಲಿಪ್ಯಾಡ್‌ನಿಂದ ಬೆಳಗಾವಿಗೆ ನಿರ್ಗಮನ.

ಮೂರು ಹಂತದ ತಪಾಸಣೆ

ಸಮಾರಂಭಕ್ಕೆ ಆಹ್ವಾನಿತರಿಗೆ ಮಾತ್ರ ಪ್ರವೇಶ. ಅವರೆಲ್ಲ ಒಂದು ಗಂಟೆ ಮುಂಚಿತವಾಗಿಯೇ ಆಗಮಿಸಬೇಕು. ಎಲ್ಲರಿಗೂ ಮುಖ್ಯ ದ್ವಾರದ ಮೂಲಕ ಪ್ರವೇಶ ನೀಡಲಾಗುವುದು. ಪಾಸ್‌ ಇರುವ ವಾಹನಗಳಿಗೆ ಮಾತ್ರ ಒಂದು ಹಂತದ ವರೆಗೆ ಪ್ರವೇಶ. ಮೊಬೈಲ್‌, ಬ್ಯಾಗ್‌, ವ್ಯಾನಿಟಿ ಬ್ಯಾಗ್‌ ಮತ್ತಿತರ ವಸ್ತುಗಳ ನಿಷೇಧ.

ರಾಷ್ಟ್ರಪತಿಗಳ ಕಾರ್ಯಕ್ರಮಕ್ಕೆ ಭದ್ರತಾ ಅಧಿಕಾರಿಗಳು ವಿಧಿಸಿರುವ ನಿಬಂಧನೆಗಳು ಇವು.

‘ಸಮಾರಂಭದ ಸ್ಥಳದಲ್ಲಿ ಮೊಬೈಲ್‌ ಜಾಮರ್‌ ಅಳವಡಿಸಲಾಗಿದೆ. ಎಲ್ಲರೂ ಮೊಬೈಲ್‌ಗಳನ್ನು ತಮ್ಮ ಮನೆ ಇಲ್ಲವೆ ವಾಹನಗಳಲ್ಲಿ ಇಟ್ಟು ಬರಬೇಕು. ಇಲ್ಲದಿದ್ದರೆ ಪ್ರವೇಶ ದ್ವಾರದಲ್ಲಿ ಭದ್ರತಾ ಅಧಿಕಾರಿಗಳು ಅವುಗಳನ್ನು ಪಡೆದುಕೊಳ್ಳಲಿದ್ದಾರೆ. ಭದ್ರತೆಯ ದೃಷ್ಟಿಯಿಂದ ಸಹಕಾರ ನೀಡಬೇಕು’ ಎಂದು ಎಸ್ಪಿ, ಡಿಸಿ ಮನವಿ ಮಾಡಿದರು.

‘ಕಾರ್ಯಕ್ರಮಕ್ಕೆ ಬರುವವರು ಮೂರು ಹಂತದ ತಪಾಸಣೆ ಎದುರಿಸಬೇಕಾಗುತ್ತದೆ. ಸಮಾರಂಭದಲ್ಲಿ ಎದ್ದು ಅತ್ತಿತ್ತ ಸಂಚರಿಸಲು ಅವಕಾಶ ನೀಡುವುದಿಲ್ಲ. ತಮಗೆ ಹಂಚಿಕೆ ಮಾಡಿದ ಆಸನಗಳಲ್ಲಿಯೇ ಆಸೀನರಾಗಬೇಕು’ ಎಂದು ಅಧಿಕಾರಿಗಳು ತಿಳಿಸಿದರು.

ಸಂಚಾರ ನಿರ್ಬಂಧ

ವಿಜಾಪುರ ಸೈನಿಕ ಶಾಲೆ ಎದುರಿನ ಅಥಣಿ ರಸ್ತೆಯಲ್ಲಿ ಇದೇ 24ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1.20ರ ವರೆಗೆ ಸಂಚಾರ ಸಂಪೂರ್ಣ ಬಂದ್‌ ಆಗಲಿದೆ.

ರಾಷ್ಟ್ರಪತಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದರಿಂದ ಭದ್ರತೆಯ ದೃಷ್ಟಿಯಿಂದ ಈ ರಸ್ತೆಯ ಗೋದಾವರಿ ಹೋಟೆಲ್‌ ಕ್ರಾಸ್‌ನಿಂದ ಟಕ್ಕೆ ಕ್ರಾಸ್‌ ವರೆಗಿನ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಜಯ್‌ ಹಿಲೋರಿ ಹೇಳಿದರು.

ಈ ಅವಧಿಯಲ್ಲಿ ಇಲ್ಲಿ ಯಾವುದೇ ವಾಹನ, ಜನ ಸಂಚಾರಕ್ಕೆ ಅನುಮತಿ ಇಲ್ಲ. ಜಿಲ್ಲಾ ಆಸ್ಪತ್ರೆಗೆ ಹೋಗುವವರು ಇಬ್ರಾಹಿಂ ರೋಜಾ ಮುಂಭಾಗದ ರಸ್ತೆಯ ಮೂಲಕ ಹೋಗಬೇಕು. ವಾಹನಗಳವರು ಪರ್ಯಾಯ ರಸ್ತೆಗಳ ಮೂಲಕ ಸಂಚರಿಸಬೇಕು ಎಂದು ಅವರು ಸೂಚಿಸಿದರು.

ಸರ್ಪಗಾವಲು; ದಿನವಿಡೀ ತಾಲೀಮು

ಸೈನಿಕ ಶಾಲೆಯಲ್ಲಿ ಪೊಲೀಸ್‌ ಸರ್ಪಗಾವಲು ಹಾಕಲಾಗಿದೆ. ಬೆಳಗಾವಿಯ ಉತ್ತರ ವಲಯ ಐಜಿಪಿ ಚರಣರೆಡ್ಡಿ ಅವರು ನಗರದಲ್ಲಿಯೇ ಬೀಡು ಬಿಟ್ಟು ಭದ್ರತಾ ವ್ಯವಸ್ಥೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

ಶ್ವಾನ ದಳ, ಬಾಂಬ್‌ ನಿಷ್ಕ್ರಿಯ ದಳದವರು ಸಭಾಂಗಣದ ಸ್ಥಳವನ್ನು ಇಂಚಿಂಚು ಶೋಧಿಸುತ್ತಿದ್ದಾರೆ.

ರಾಷ್ಟ್ರಪತಿಗಳ ಕಾರ್ಯಕ್ರಮದಲ್ಲಿ ಒಂದು ನಿಮಿಷವೂ ವ್ಯತ್ಯಾಸವಾಗುವ ಹಾಗಿಲ್ಲ. ಅದಕ್ಕಾಗಿ ಸೇನಾ ಪಡೆಯ ಒಂದು ಹೆಲಿಕಾಪ್ಟರ್‌ ಹಾಗೂ ರಾಷ್ಟ್ರಪತಿಗಳು ಮತ್ತು ಗಣ್ಯರಿಗಾಗಿ ಮೀಸಲಿಟ್ಟಿರುವ ಕಾರುಗಳ ಮೂಲಕ ಸಂಚಾರದ ತಾಲೀಮನ್ನು ನಡೆಸಲಾಯಿತು.

ಕನ್ನಡ ಮಾಯ

ಸೈನಿಕ ಶಾಲೆಯ ಪ್ರಮುಖ ರಸ್ತೆಗಳಲ್ಲಿ ಫಲಕಗಳನ್ನು ಹಾಕಲಾಗಿದೆ. ಅಪ್ಪಿತಪ್ಪಿಯೂ ಅವುಗಳಲ್ಲಿ ಕನ್ನಡ ಅಕ್ಷರಗಳಿಲ್ಲ. ಎಲ್ಲವೂ ಇಂಗ್ಲಿಷ್‌ ಮಯವಾಗಿದೆ ಎಂಬುದು ಕೆಲವರ ದೂರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry