ರಾಷ್ಟ್ರಪತಿ ಆಯ್ಕೆಗೆ ಇಂದು ಮತದಾನ: ಭಾನುವಾರ ಫಲಿತಾಂಶ

ಭಾನುವಾರ, ಜೂಲೈ 21, 2019
22 °C

ರಾಷ್ಟ್ರಪತಿ ಆಯ್ಕೆಗೆ ಇಂದು ಮತದಾನ: ಭಾನುವಾರ ಫಲಿತಾಂಶ

Published:
Updated:

ನವದೆಹಲಿ (ಪಿಟಿಐ): ನೂತನ ರಾಷ್ಟ್ರಪತಿ ಆಯ್ಕೆಗೆ ಗುರುವಾರ ನಡೆಯಲಿರುವ ಚುನಾವಣೆಗೆ ಎಲ್ಲ ಸಿದ್ಧತೆಗಳೂ ಪೂರ್ಣಗೊಂಡಿದ್ದು, ಯುಪಿಎ ಅಭ್ಯರ್ಥಿ ಪ್ರಣವ್ ಮುಖರ್ಜಿ ಅವರು ಬಿಜೆಪಿ ಬೆಂಬಲಿತ ಅಭ್ಯರ್ಥಿ ಪಿ.ಎ.ಸಂಗ್ಮಾ ಎದುರು ನಿರಾಯಾಸ ಗೆಲುವು ಪಡೆಯುವ ಸಾಧ್ಯತೆ ಇದೆ.

ಒಟ್ಟ 10.98 ಲಕ್ಷ ಮತ ಮೌಲ್ಯದಲ್ಲಿ ಪ್ರಣವ್ ಸುಮಾರು 7.5 ಲಕ್ಷ ಮತ ಮೌಲ್ಯಗಳನ್ನು ಪಡೆಯಬಹುದೆಂಬುದು ಯುಪಿಎ ಚುನಾವಣಾ ಮ್ಯಾನೇಜರ್‌ಗಳ ಲೆಕ್ಕಾಚಾರವಾಗಿದೆ. ಭಾನುವಾರ (22ರಂದು) ಸಂಜೆ ವೇಳೆಗೆ ಫಲಿತಾಂಶ ಹೊರಬೀಳಲಿದೆ.

ಯುಪಿಎ ಮೈತ್ರಿಕೂಟದ ಪಕ್ಷಗಳು, ಸರ್ಕಾರವನ್ನು ಹೊರಗಿನಿಂದ ಬೆಂಬಲಿಸುತ್ತಿರುವ ಸಮಾಜವಾದಿ ಪಕ್ಷ, ಬಹುಜನ ಸಮಾಜವಾದಿ ಪಕ್ಷ, ರಾಷ್ಟ್ರೀಯ ಜನತಾದಳ, ಜೆಡಿಎಸ್ ಮಾತ್ರವಲ್ಲದೆ, ಎನ್‌ಡಿಎ ಕೂಟದಲ್ಲಿರುವ ಜೆಡಿಯು, ಶಿವಸೇನೆ, ಸಿಪಿಎಂ ಮತ್ತು ಫಾರ್ವರ್ಡ್ ಬ್ಲಾಕ್, ಪ್ರಣವ್ ಅವರಿಗೆ ಮತ ಹಾಕುವುದಾಗಿ ಘೋಷಿಸಿವೆ. ಮತ ಚಲಾಯಿಸಬೇಕಿರುವ ಜನಪ್ರತಿನಿಧಿಗಳ ಸಂಖ್ಯೆ ಒಟ್ಟು 4896. ಇವರಲ್ಲಿ ಸಂಸದರ ಸಂಖ್ಯೆ 776 ಆದರೆ, ರಾಜ್ಯ ವಿಧಾನಸಭೆಗಳ ಶಾಸಕರ ಸಂಖ್ಯೆ 4120. ಇವರ ಒಟ್ಟು ಮತಮೌಲ್ಯ 10,97,012. ಅಭ್ಯರ್ಥಿ ಜಯಶಾಲಿಯಾಗಲು ಶೇ 50ರಷ್ಟು ಮತಗಳನ್ನು ಪಡೆಯಬೇಕಾಗುತ್ತದೆ.

ಯುಪಿಎ ಅಭ್ಯರ್ಥಿ ಪ್ರಣವ್ ಮುಖರ್ಜಿ ಅವರನ್ನೇ ಬೆಂಬಲಿಸಲು ತೃಣಮೂಲ ಕಾಂಗ್ರೆಸ್ ಮಂಗಳವಾರ ನಿರ್ಧರಿಸುವುದರೊಂದಿಗೆ ಚುನಾವಣೆಯಲ್ಲಿ ಪ್ರಣವ್  ಅವರ ಗೆಲುವು ನಿಚ್ಚಳವಾಗಿದೆ. ಆದರೆ, ಪ್ರಣವ್ ಅವರು ನಾಮಪತ್ರ ಸಲ್ಲಿಸುವ ವೇಳೆ ಲಾಭದಾಯಕ ಹುದ್ದೆ ಹೊಂದಿದ್ದರು ಎಂದು ಆಪಾದಿಸಿರುವ ಬಿಜೆಪಿ ಅಭ್ಯರ್ಥಿ ಪಿ.ಎ.ಸಂಗ್ಮಾ, ಈ ಕುರಿತು ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತುವ ಬಗ್ಗೆಯೂ ಚಿಂತಿಸುತ್ತಿದ್ದಾರೆ. ನ್ಯಾಯಾಲಯದಲ್ಲಾದರೂ ತಮಗೆ ಗೆಲುವು ಸಿಗಬಹುದೆಂಬ ಆಶಾಭಾವ ಅವರದ್ದಾಗಿದೆ.

ಯಾವುದಕ್ಕೂ ಜುಲೈ 22ರವರೆಗೆ ಕಾದು ನೋಡಿ ಎಂದು ಬುಡಕಟ್ಟು ಜನಾಂಗದ ಅಭ್ಯರ್ಥಿ ಎಂದು ಬಿಂಬಿಸಿಕೊಂಡಿದ್ದ ಸಂಗ್ಮಾ ಸುದ್ದಿಗಾರರಿಗೆ ಮಾರ್ಮಿಕವಾಗಿ ಹೇಳಿದ್ದಾರೆ.

ಪ್ರಣವ್ ಮುಖರ್ಜಿ ಮತಗಳಿಕೆ ಲೆಕ್ಕಾಚಾರ

ಯುಪಿಎ ಸದಸ್ಯರ ಒಟ್ಟು ಮತಮೌಲ್ಯ 4,50,555. ಇವುಗಳಲ್ಲಿ ಕಾಂಗ್ರೆಸ್‌ನ ಬಲ 3,31,855. ಒಟ್ಟು ಮತಗಳಲ್ಲಿ ಯುಪಿಎ ಮೌಲ್ಯ ಶೇ 41.07ರಷ್ಟಿದೆ.

ತೃಣಮೂಲ ಕಾಂಗ್ರೆಸ್‌ನ ಮತಮೌಲ್ಯ ಶೇ 4.4ರಷ್ಟು.

ಸಮಾಜವಾದಿ ಪಕ್ಷದ ಮತ ಮೌಲ್ಯದ ಪಾಲು ಶೇ 6.34ರಷ್ಟು.

ಬಹುಜನ ಸಮಾಜ ಪಕ್ಷದ ಮತ ಮೌಲ್ಯದ ಪಾಲು ಶೇ 4ರಷ್ಟು.

ಜೆಡಿಯು ಬೆಂಬಲದ ಪಾಲು ಶೇ 3.80ರಷ್ಟು.

ಶಿವಸೇನೆ ಮತಮೌಲ್ಯದ ಬಲ ಶೇ 1.70ರಷ್ಟು.

ಶೇ 0.80ರಷ್ಟು ಮತ ಮೌಲ್ಯ ಬಲದ ಸಿಪಿಐ ಮತ್ತು 0.30ರಷ್ಟು ಮತ ಮೌಲ್ಯವಿರುವ ಆರ್‌ಎಸ್‌ಪಿ ಮತ ಚಲಾಯಿಸದೆ ತಟಸ್ಥವಾಗಿರಲು ನಿರ್ಧರಿಸಿರುವುದು ಪ್ರಣವ್ ಅವರಿಗೆ ಅನುಕೂಲವಾಗಿ ಪರಿಣಮಿಸಲಿದೆ.

ಇವೆಲ್ಲವನ್ನೂ ಸೇರಿಸಿದರೆ ಪ್ರಣವ್ ಬೆಂಬಲ ಶೇ 60.21ರಷ್ಟಾಗುತ್ತದೆ (ಗೆಲುವಿಗೆ ಬೇಕಿರುವುದು ಶೇ 50ರಷ್ಟು ಮತಗಳು)

ಪಿ.ಸಂಗ್ಮಾ ಮತಗಳಿಕೆ ಲೆಕ್ಕಾಚಾರ

ಬಿಜೆಪಿ ಮತ ಮೌಲ್ಯ ಶೇ 21.20ರಷ್ಟು.

ಶಿರೋಮಣಿ ಅಕಾಲಿದಳದ ಮತ ಮೌಲ್ಯ ಶೇ 1.10ರಷ್ಟು.

ಎಐಎಡಿಎಂಕೆ ಶೇ 3.30ರಷ್ಟು.

ಬಿಜು ಜನತಾ ದಳ ಶೇ 2.80ರಷ್ಟು.

ಇವೆಲ್ಲವನ್ನು ಸೇರಿಸಿದರೆ ಒಟ್ಟು ಮತಮೌಲ್ಯ 3.15 ಲಕ್ಷ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry