ರಾಷ್ಟ್ರಪತಿ ಆಳ್ವಿಕೆಗೆ ಕೇಂದ್ರಕ್ಕೆ ಶಿಫಾರಸು ಮಾಡಲು ಆಗ್ರಹ

7
ರಾಜ್ಯಪಾಲರನ್ನು ಭೇಟಿ ಮಾಡಿದ ಕಾಂಗ್ರೆಸ್ ನಿಯೋಗ: ಸರ್ಕಾರ ವಜಾಕ್ಕೆ ಮನವಿ

ರಾಷ್ಟ್ರಪತಿ ಆಳ್ವಿಕೆಗೆ ಕೇಂದ್ರಕ್ಕೆ ಶಿಫಾರಸು ಮಾಡಲು ಆಗ್ರಹ

Published:
Updated:

ಬೆಂಗಳೂರು: `ಆಡಳಿತಾರೂಢ ಬಿಜೆಪಿ ಸರ್ಕಾರ ಬಹುಮತ ಕಳೆದುಕೊಂಡಿರುವುದರಿಂದ ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಉಂಟಾಗಿದೆ. ರಾಜ್ಯಪಾಲರು ಕೂಡಲೇ ಸರ್ಕಾರವನ್ನು ವಜಾ ಮಾಡಿ, ರಾಷ್ಟ್ರಪತಿ ಆಡಳಿತ ಜಾರಿಗೊಳಿಸುವಂತೆ ಕೇಂದ್ರಕ್ಕೆ ಶಿಫಾರಸು ಮಾಡಬೇಕು' ಎಂದು ಕಾಂಗ್ರೆಸ್ ಒತ್ತಾಯಿಸಿದೆ.ವಿಧಾನ ಮಂಡಲದ ಉಭಯ ಸದನಗಳ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಎಸ್.ಆರ್. ಪಾಟೀಲ್, ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ನೇತೃತ್ವದಲ್ಲಿ ಕಾಂಗ್ರೆಸ್ ನಿಯೋಗ ಶನಿವಾರ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರನ್ನು ರಾಜಭವನದಲ್ಲಿ ಭೇಟಿ ಮಾಡಿ, ಸರ್ಕಾರ ಬಹುಮತ ಕಳೆದುಕೊಂಡಿರುವುದರಿಂದ ವಿಧಾನಸಭೆಯನ್ನು ವಿಸರ್ಜಿಸಬೇಕು ಎಂದು ಮನವಿ ಸಲ್ಲಿಸಿದೆ.

`ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಸಂಪುಟದ ಸಚಿವರಲ್ಲೇ ಭಿನ್ನಮತ ಇರುವ ಕಾರಣ, ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಜಾರಿಯಾಗುತ್ತಿಲ್ಲ. ರಾಜ್ಯದ ಆಡಳಿತ ವ್ಯವಸ್ಥೆ ಕುಸಿದು ಬಿದ್ದಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವನ್ನು ವಜಾ ಮಾಡಬೇಕು' ಎಂದು ನಿಯೋಗವು ಒತ್ತಾಯಿಸಿದೆ.ಹಾವೇರಿಯಲ್ಲಿ ಇತ್ತೀಚೆಗೆ ನಡೆದ ಕೆಜೆಪಿ ಸಮಾವೇಶದಲ್ಲಿ ಬಿಜೆಪಿಯ 14 ಶಾಸಕರು ಮತ್ತು ಆರು ಜನ ವಿಧಾನ ಪರಿಷತ್ ಸದಸ್ಯರು ಪಾಲ್ಗೊಂಡಿದ್ದರು. ಬಿಜೆಪಿ ಶಾಸಕರು ಕೆಜೆಪಿ ಜೊತೆ ಬಹಿರಂಗವಾಗಿ ಗುರುತಿಸಿಕೊಂಡಿರುವುದು, ಪಕ್ಷದ ಸದಸ್ಯತ್ವವನ್ನು ಸ್ವಇಚ್ಛೆಯಿಂದ ತೊರೆದಿರುವ ಸಂಕೇತ. ಅದೇ ರೀತಿ, ಬಿಜೆಪಿಯ ನಾಲ್ಕು ಶಾಸಕರು ಹಾಗೂ ಇಬ್ಬರು ಸಂಸದರು ಬಿಎಸ್‌ಆರ್ ಕಾಂಗ್ರೆಸ್ ಜೊತೆ ಬಹಿರಂಗವಾಗಿ ಗುರುತಿಸಿಕೊಂಡಿದ್ದಾರೆ. ಅವರೂ ಬಿಜೆಪಿ ಸದಸ್ಯತ್ವ ತೊರೆದಿದ್ದಾರೆ ಎಂಬುದರ ಸಂಕೇತ ಇದು ಎಂದು ರಾಜ್ಯಪಾಲರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಕಾಂಗ್ರೆಸ್ ಪ್ರತಿಪಾದಿಸಿದೆ.ವಿಧಾನಸಭೆಯಲ್ಲಿ ಸರ್ಕಾರ ಕೇವಲ 100 ಸದಸ್ಯರ ಬೆಂಬಲ ಹೊಂದಿದೆ. ಅಲ್ಪಮತದ ಸರ್ಕಾರ, ಇತ್ತೀಚೆಗೆ ಮುಕ್ತಾಯವಾದ ವಿಧಾನ ಮಂಡಲದ ಅಧಿವೇಶನದಲ್ಲಿ ವಿವಾದಾತ್ಮಕ ಮಸೂದೆಗಳಿಗೆ ಅಂಗೀಕಾರ ಪಡೆದುಕೊಂಡಿದೆ. ಗೋಹತ್ಯೆ ನಿಷೇಧ ಮಸೂದೆ ಮತ್ತು ಖಾಸಗಿ ವಿಶ್ವವಿದ್ಯಾಲಯಗಳ ಮಸೂದೆಗಳಿಗೆ ವಿರೋಧ ಪಕ್ಷಗಳ ಅನುಪಸ್ಥಿತಿಯಲ್ಲಿ ಅನುಮೋದನೆ ಪಡೆದುಕೊಂಡಿರುವುದು ಸಂವಿಧಾನಬಾಹಿರ ನಡೆ. ಈ ಮಸೂದೆ ಜಾರಿಗೆ ಬಾರದಂತೆ ಕ್ರಮ ಕೈಗೊಳ್ಳಬೇಕು ಎಂದೂ ಕಾಂಗ್ರೆಸ್ ಒತ್ತಾಯಿಸಿದೆ.ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಹಿಂದೆ ಉದ್ಯಾನ ನಗರಿ ಎಂದು ಪ್ರಶಂಸೆಗೆ ಪಾತ್ರವಾಗಿದ್ದ ಬೆಂಗಳೂರು ಈಗ ತ್ಯಾಜ್ಯ ವಿಲೇವಾರಿ ಸಮಸ್ಯೆ ಪರಿಹರಿಸಲಾಗದ ಸ್ಥಿತಿಗೆ ತಲುಪಿದೆ ಎಂದೂ ದೂರಲಾಗಿದೆ. ಮನವಿ ಸಲ್ಲಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಪರಮೇಶ್ವರ್, `ಗೋಹತ್ಯೆಯನ್ನು ನಿಷೇಧಿಸುವ ಮಸೂದೆಗೆ ರಾಷ್ಟ್ರಪತಿಗಳ ಅಂಗೀಕಾರ ಇನ್ನೂ ದೊರೆತಿಲ್ಲ. ಆದರೂ, ಮತ್ತೊಂದು ಮಸೂದೆಗೆ ಅಂಗೀಕಾರ ಪಡೆದುಕೊಳ್ಳಲಾಗಿದೆ. ಸಮಾಜವನ್ನು ಧರ್ಮದ ನೆಲೆಯಲ್ಲಿ ವಿಭಜಿಸುವ ಹುನ್ನಾರ ಇದರ ಹಿಂದೆ ಅಡಗಿದೆ' ಎಂದು ಆರೋಪಿಸಿದರು.`ಕೆಜೆಪಿ ಬಣ ಮತ್ತು ಜೆಡಿಎಸ್ ಬೆಂಬಲ ದೊರೆತಿದ್ದರೆ, ಬೆಳಗಾವಿಯಲ್ಲಿ ನಡೆದ ಅಧೀವೇಶನದ ವೇಳೆ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಸಾಧ್ಯವಾಗುತ್ತಿತ್ತು' ಎಂದು ಸಿದ್ದರಾಮಯ್ಯ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಿಎಜಿ ವರದಿ: ಸಿಬಿಐ ತನಿಖೆಗೆ ಆಗ್ರಹ

ಬೆಂಗಳೂರು: ಗಣಿಗಾರಿಕೆ ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಜಮೀನನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವುದರಲ್ಲಿ ಆಗಿರುವ ಅಕ್ರಮಗಳ ಬಗ್ಗೆ ಸಿಬಿಐ ಅಥವಾ ಲೋಕಾಯುಕ್ತ ತನಿಖೆ ನಡೆಸಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಶನಿವಾರ ಇಲ್ಲಿ ಒತ್ತಾಯಿಸಿದರು.ವಿಧಾನ ಮಂಡಲದಲ್ಲಿ ಮಂಡನೆಯಾಗಿರುವ ಮಹಾಲೇಖಪಾಲರ (ಸಿಎಜಿ) ವರದಿ ಪ್ರಕಾರ 2007ರಿಂದ 2012ರವರೆಗೆ ಕಾನೂನುಬಾಹಿರವಾಗಿ 212 ಎಕರೆ ಡಿನೋಟಿಫಿಕೇಶನ್ ಮಾಡಲಾಗಿದೆ. ಅಕ್ರಮ ಗಣಿಗಾರಿಕೆಯಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಇದಕ್ಕೆ ಕಾರಣರಾದವರಿಂದಲೇ ಹಣ ವಸೂಲಿ ಮಾಡಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.ಸಿಎಜಿ ವರದಿ ಬಗ್ಗೆ ವಿಧಾನಮಂಡಲದಲ್ಲಿ ಚರ್ಚೆಯಾಗಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸಿದವು. ಆದರೆ, ಚುನಾವಣೆ ಸಂದರ್ಭದಲ್ಲಿ ಇಕ್ಕಟ್ಟಿಗೆ ಸಿಲುಕಿಸುತ್ತಾರೆ ಎಂಬ ಉದ್ದೇಶದಿಂದ ಸರ್ಕಾರ ಚರ್ಚೆಗೆ ಅವಕಾಶ ನೀಡಲಿಲ್ಲ. ಇದನ್ನು ಮುಚ್ಚಿಹಾಕಬೇಕು ಎಂಬ ಕಾರಣಕ್ಕಾಗಿ ಅಧಿವೇಶನ ವಿಸ್ತರಣೆಗೂ ಒಪ್ಪಲಿಲ್ಲ ಎಂದು ಟೀಕಿಸಿದರು.ಪ್ರಕರಣದ ಸತ್ಯಾಸತ್ಯತೆ ಹೊರ ಬರಬೇಕಾದರೆ ಸಿಬಿಐ ತನಿಖೆ ಆಗಬೇಕು. ಸರ್ಕಾರಕ್ಕೆ ಸಿಬಿಐ ಮೇಲೆ ವಿಶ್ವಾಸ ಇಲ್ಲದಿದ್ದರೆ ಲೋಕಾಯುಕ್ತ ತನಿಖೆಗೆ ಆದೇಶಿಸಲಿ ಎಂದರು. `ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 120ರಿಂದ 140 ಸ್ಥಾನ ಗಳಿಸಲಿದೆ. ನಮ್ಮ ಪಕ್ಷ ಆಡಳಿತದ ಚುಕ್ಕಾಣಿ ಹಿಡಿಯುವುದು ಖಚಿತ.

ಆಗ ವಿಚಾರಣೆಗಾಗಿ ವಿಶೇಷ ನ್ಯಾಯಾಲಯ ತೆರೆಯಲಾಗುವುದು' ಎಂದು ತಿಳಿಸಿದರು. ಡಿ.ಎಂ. ನಂಜುಂಡಪ್ಪ ವರದಿ ಅನುಷ್ಠಾನ, ಕೃಷ್ಣಾ ಮೇಲ್ದಂಡೆ ಯೋಜನೆ, ಕುಡಿಯುವ ನೀರಿನ ಸಮಸ್ಯೆ, ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಪ್ರಾತಿನಿಧ್ಯ ನೀಡಲು ಅವಕಾಶ ಕಲ್ಪಿಸುವ ಸಂವಿಧಾನದ 371ನೇ ವಿಧಿಗೆ ತಿದ್ದುಪಡಿ ತರುವ ವಿಚಾರ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆಯಾಗಬೇಕಾಗಿತ್ತು.  ಆದರೆ, ಸರ್ಕಾರ ಚರ್ಚೆಗೆ ಅವಕಾಶ ನೀಡದ ಕಾರಣ ಬೇಸರದಿಂದಲೇ ವಿಧಾನಸಭೆಯ ಕಲಾಪ ಬಹಿಷ್ಕರಿಸಲಾಯಿತು. ಇದರಿಂದ ಉತ್ತರ ಕರ್ನಾಟಕ ಭಾಗದ ಜನರಿಗೆ ನೋವಾಗಿದ್ದರೆ ವಿಷಾದಿಸುವುದಾಗಿ ಹೇಳಿದರು

ಭಾರದ್ವಾಜ್ ಭೇಟಿ ಮಾಡಿದ ಶೆಟ್ಟರ್

ಬೆಂಗಳೂರು: ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಶನಿವಾರ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರನ್ನು ರಾಜಭವನದಲ್ಲಿ ಭೇಟಿಯಾಗಿ ಈಚೆಗೆ ಬೆಳಗಾವಿಯಲ್ಲಿ ನಡೆದ ವಿಧಾನಮಂಡಲ ಅಧಿವೇಶನ ಸೇರಿದಂತೆ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಕುರಿತು ಅರ್ಧಗಂಟೆ ಕಾಲ ಸಮಾಲೋಚನೆ ನಡೆಸಿದರು.ಸರ್ಕಾರಕ್ಕೆ ಪೂರ್ಣ ಬಹುಮತವಿದೆ. ನಿಯಮಾನುಸಾರವೇ ವಿಧಾನಮಂಡಲದ ಅಧಿವೇಶನದಲ್ಲಿ ಮಸೂದೆಗಳನ್ನು ಅಂಗೀಕರಿಸಲಾಗಿದೆ. ಈ ಬಗ್ಗೆ ವಿರೋಧ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಮಾಡುತ್ತಿರುವ ಆರೋಪಗಳಲ್ಲಿ ಹುರುಳಿಲ್ಲ ಎಂದು ಶೆಟ್ಟರ್ ಅವರು ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಟ್ಟರು ಎನ್ನಲಾಗಿದೆ.ಗೋಹತ್ಯೆ ನಿಷೇಧ ಮಸೂದೆ, ಖಾಸಗಿ ವಿಶ್ವವಿದ್ಯಾಲಯಗಳ ಮಸೂದೆಗಳು ಸೇರಿದಂತೆ ಅಧಿವೇಶನದಲ್ಲಿ ಅಂಗೀಕಾರವಾಗಿರುವ ಮಸೂದೆಗಳಿಗೆ ಅನುಮೋದನೆ ನೀಡಬೇಕು ಎಂದು ಮನವಿ ಮಾಡಿದರು ಎಂದು ಗೊತ್ತಾಗಿದೆ. ಶುಕ್ರವಾರ ಜೆಡಿಎಸ್ ಮುಖಂಡರು ಹಾಗೂ ಶನಿವಾರ ಬೆಳಿಗ್ಗೆ ಕಾಂಗ್ರೆಸ್ ಮುಖಂಡರ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿ ಮಸೂದೆಗಳಿಗೆ ಒಪ್ಪಿಗೆ ನೀಡದಂತೆ ರಾಜ್ಯಪಾಲರಿಗೆ ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ವಾಸ್ತವಾಂಶ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಶೆಟ್ಟರ್ ಅವರು ರಾಜ್ಯಪಾಲರನ್ನು ಭೇಟಿಯಾಗಿದ್ದರು ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.ಸಿಎಂ ಅಸಮಾಧಾನಬೆಂಗಳೂರು: ಗೋಹತ್ಯೆ ನಿಷೇಧ ಮಸೂದೆ ಮತ್ತು ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಅವಕಾಶ ಕಲ್ಪಿಸುವ ಮಸೂದೆಗಳಿಗೆ ಒಪ್ಪಿಗೆ ನೀಡಬಾರದು ಎಂದು ಪ್ರತಿಪಕ್ಷಗಳು ರಾಜ್ಯಪಾಲರಿಗೆ ದೂರು ನೀಡಿರುವ ಬಗ್ಗೆ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅಸಮಾಧಾನ ವ್ಯಕ್ತಪಡಿಸಿದರು.ಮುಖ್ಯಮಂತ್ರಿಗಳ ಗೃಹ ಕಚೇರಿ `ಕೃಷ್ಣಾ'ದಲ್ಲಿ ಶನಿವಾರ ಜನತಾ ದರ್ಶನದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚರ್ಚೆಗೆ ಅವಕಾಶ ನೀಡದೇ ಸರ್ಕಾರ ಯಾವುದೇ ಮಸೂದೆಯನ್ನು ಅಂಗೀಕರಿಸಿಲ್ಲ ಎಂದರು. ವಿಧಾನಮಂಡಲದ ಅಧಿವೇಶನದಲ್ಲಿ ಚರ್ಚೆಗೆ ಅಕಾಶವಿದ್ದರೂ ಸಭಾತ್ಯಾಗ ಮಾಡಿರುವ ಪ್ರತಿಪಕ್ಷಗಳು, ಮಸೂದೆ ಮಂಡಿಸಿದ ನಂತರ ವಿರೋಧ ವ್ಯಕ್ತಪಡಿಸುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry