ಬುಧವಾರ, ಜೂನ್ 16, 2021
23 °C

ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊನ್ನಾಳಿ:  ನಿಷ್ಕ್ರಿಯವಾಗಿರುವ ರಾಜ್ಯ ಸರ್ಕಾರವನ್ನು ರಾಜ್ಯಪಾಲರು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಬೇಕು ಎಂದು ರೈತ ಮುಖಂಡ ಕುರುವ ಗಣೇಶ್ ಒತ್ತಾಯಿಸಿದರು.ಬಿಜೆಪಿ ಮುಖಂಡರ ಅಧಿಕಾರ ದಾಹ, ಒಳಜಗಳ, ಆಂತರಿಕ ಕಿತ್ತಾಟದಿಂದಾಗಿ ರಾಜ್ಯ ಸರ್ಕಾರ ಅಸ್ತಿತ್ವದಲ್ಲಿದೆಯೇ ಎಂಬ ಅನುಮಾನ ಮೂಡುತ್ತಿದೆ. ಇದರ ಪರಿಣಾಮ ಆಡಳಿತ ಯಂತ್ರ ಕುಸಿದಿದೆ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಆರೋಪಿಸಿದರು.ತಮ್ಮ ಕರ್ತವ್ಯ ಮರೆತಿರುವ ಶಾಸಕರಿಗೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಹಕ್ಕಿಲ್ಲ. ಇನ್ನು ಮುಂದೆ ಅವರು ಶಾಸಕರೇ ಅಲ್ಲ. ರಾಜ್ಯದ ಜನರು ಬರಗಾಲದಿಂದ ತತ್ತರಿಸುತ್ತಿರುವಾಗ ತಮ್ಮ ಜವಾಬ್ದಾರಿ ಮರೆತು ಮಜಾ ಮಾಡುತ್ತಿರುವವರು ಜನಪ್ರತಿನಿಧಿಗಳೇ? ಎಂದು ಪ್ರಶ್ನಿಸಿದರು.ರಾಜ್ಯದ ಸಮಸ್ತ ಮಠಗಳು ಭಕ್ತಾದಿಗಳಿಗೆ ಶಾಂತಿಮಂತ್ರ ಬೋಧಿಸಿ, ಧರ್ಮದ ಅಡಿ ಬಾಳ್ವೆ ನಡೆಸಲು ಮಾರ್ಗದರ್ಶನ ನೀಡುತ್ತಿದ್ದವು. ಮಾನವ ಕುಲ ಒಂದೇ ಎಂಬ ಏಕತೆಯ ಸಂದೇಶವನ್ನು ಸಾರಿದ ಗುರುಗಳ ಪಾದಪೂಜೆ ಮಾಡಿ ಇಡೀ ರಾಜ್ಯದ ಜನತೆ ಆಶೀರ್ವಾದ ಪಡೆಯುತ್ತಿದ್ದರು.

 

ಆದರೆ, ಈಗ ಕರ್ನಾಟಕದ ಕೆಲ ಮಠಾಧೀಶರು ಸಮಸ್ತ ಭಕ್ತರ ಎದುರಿನಲ್ಲಿ ಕೆಲವು ಪುಢಾರಿಗಳ ಪಾದಪೂಜೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ರಾಜಕಾರಣಿಗಳನ್ನು ಹೊಗಳುವ ಕೆಲ ಮಠಾಧೀಶರ ಮಠಗಳಿಗೆ ರೈತ ಸಂಘದ ವತಿಯಿಂದ ಬೀಗ ಹಾಕಬೇಕಾದ ಸ್ಥಿತಿ ಉದ್ಭವಿಸುವ ದಿನ ದೂರ ಇಲ್ಲ ಎಂದು ಅವರು ಹೇಳಿದರು.ಜಾತಿಗೊಂದು ಮಠ, ಜಾತಿಗೊಬ್ಬ ಗುರುಗಳನ್ನು ಸೃಷ್ಟಿ ಮಾಡಿ, ಭಕ್ತಾದಿಗಳಲ್ಲಿ ಜಾತಿ ಗೊಂದಲ ಮೂಡಿಸಿ ಜಾತೀಯತೆ ಜೀವಂತವಾಗಿಡುತ್ತಿರುವವರೇ ಮಠಾಧೀಶರು. ರಾಜಕಾರಣ ಮಾಡಬೇಕಿದ್ದರೆ ಇಂತಹ ಮಠಾಧೀಶರು ಕಾವಿ ತ್ಯಜಿಸಿ ರಾಜಕೀಯ ಮಾಡಲಿ. ಕಾವಿ ಧರಿಸಿ ರಾಜಕೀಯ ಮಾಡುವವರನ್ನು ರೈತ ಸಂಘ ಮತ್ತು ಹಸಿರು ಸೇನೆ ಸಹಿಸುವುದಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.ಹಸಿರು ಸೇನೆ ಅಧ್ಯಕ್ಷ ಭರ್ಮಪ್ಪ ಮಾಸಡಿ ಮಾತನಾಡಿ, ರೈತರು ಬೆಳೆ ವೈಫಲ್ಯ, ವೈಜ್ಞಾನಿಕ ಬೆಲೆ ಲಭಿಸದಿರುವ ಹಿನ್ನೆಲೆಯಲ್ಲಿ ತೀವ್ರ ನಷ್ಟ ಅನುಭವಿಸುತ್ತಿದ್ದಾರೆ. ಆದರೆ, ಅವರ ಗೋಳನ್ನು ಆಲಿಸಲು ಒಬ್ಬರೂ ತಯಾರಿಲ್ಲ. ಇಂತಹ ಜನಪ್ರತಿನಿಧಿಗಳು ನಮಗೆ ಬೇಕೇ ಎಂದು ಆಕ್ರೋಶ ವ್ಯಕ್ತಪಡಿಸಿದರು.ರೈತ ಸಂಘದ ಅಧ್ಯಕ್ಷ ಎ.ಜಿ. ಚನ್ನಪ್ಪ ನಂದೇರ, ಕಾರ್ಯದರ್ಶಿ ಬಿ.ಎಚ್. ಉಮೇಶ್, ಮುಖಂಡರಾದ ಬಸವರಾಜಪ್ಪ, ಮಲ್ಲಿಗೇನಹಳ್ಳಿ ಪರಮೇಶ್ವರಪ್ಪ, ಶುಂಠಿ ಗಣೇಶಪ್ಪ, ಮಂಜುನಾಥ್, ಕಡದಕಟ್ಟೆ ರಂಗಪ್ಪ, ಅರಕೆರೆ ಲಿಂಗರಾಜ್ ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.