ಬುಧವಾರ, ಮೇ 18, 2022
27 °C

ರಾಷ್ಟ್ರಪತಿ ಚುನಾವಣೆ: ಗೆಲುವಿನ ಹಾದಿ ಸುಗಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಪಂಚ ಮಹಾರಾಜ್ಯಗಳು ಮತ್ತು ಇತ್ತೀಚೆಗೆ ಆಂಧ್ರ ಪ್ರದೇಶದಲ್ಲಿ ನಡೆದ ಚುನಾವಣೆಯಲ್ಲಿ ಕಂಡ ದಯನೀಯ ಸೋಲು, ಸತತ ವೈಫಲ್ಯ, ಕುಸಿಯುತ್ತಿರುವ ಪಕ್ಷದ ವರ್ಚಸ್ಸು, ಜನಪ್ರಿಯತೆ ಕಂಗೆಟ್ಟಿದ್ದ ಕಾಂಗ್ರೆಸ್‌ಗೆ ರಾಷ್ಟ್ರಪತಿ ಚುನಾವಣೆ ವರವಾಗಿ ಪರಿಣಮಿಸಿದೆ. ಯುಪಿಎ ಅಭ್ಯರ್ಥಿ ಪ್ರಣವ್ ಮುಖರ್ಜಿ ಗೆಲುವಿನ ಸಾಧ್ಯತೆಗಳು ಪಕ್ಷದಲ್ಲಿ ಹೊಸ ಹುಮ್ಮುಸ್ಸು ಹಾಗೂ ನೈತಿಕ ಸ್ಥೈರ್ಯ ತುಂಬಿದೆ.   ಪ್ರಣವ್ ಗೆಲುವು ಬಹುತೇಕ ಖಚಿತವಾಗುತ್ತಿದ್ದಂತೆಯೇ ಕಾಂಗ್ರೆಸ್ ಹೊಸ ಉತ್ಸಾಹದಿಂದ ಬೀಗುತ್ತಿದೆ. ಆರಂಭದಲ್ಲಿ ತೃಣಮೂಲ ಕಾಂಗ್ರೆಸ್‌ನ ಮಮತಾ ಬ್ಯಾನರ್ಜಿ ಮತ್ತು ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಯಾದವ್ ಅವರ ವಿಭಿನ್ನ ನಡೆಯಿಂದ ಕಂಗೆಟ್ಟಿದ್ದ ಕಾಂಗ್ರೆಸ್‌ಗೆ ಎದುರಾಗಿದ್ದ ವಿಘ್ನಗಳು ಅಭ್ಯರ್ಥಿ ಘೊಷಣೆಯ ನಂತರ ಮಂಜಿನಂತೆ ಕರಗಿಹೋದವು.ಸಮಾಜವಾದಿ ಪಕ್ಷ, ಎನ್‌ಡಿಎದ ಶಿವಸೇನೆ, ಜೆಡಿಯು, ಎಡ ಪಕ್ಷಗಳ ಪೈಕಿ ಸಿಪಿಎಂ, ಫಾರ್ವರ್ಡ್ ಬ್ಲಾಕ್ ಹಾಗೂ ಜೆಡಿಎಸ್ ಬೆಂಬಲಕ್ಕೆ ನಿಂತ ಕಾರಣ ಪಕ್ಷದ ಆತ್ಮ ವಿಶ್ವಾಸ ಹೆಚ್ಚಿದೆ. ಆದರೆ, ಅದೇ ಎನ್‌ಡಿಎ ಪಾಳೆಯದಲ್ಲಿ ಇದಕ್ಕೆ ವಿಭಿನ್ನವಾದ ಪರಿಸ್ಥಿತಿ ನಿರ್ಮಾಣವಾಗಿದೆ. ರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸಿದಂತೆ ಅಂಗಪಕ್ಷಗಳು ತಾಳಿದ ವಿಭಿನ್ನ ನಿಲುವಿನಿಂದಾಗಿ ಎನ್‌ಡಿಎ ಮೈತ್ರಿಕೂಟ ಕಂಗೆಟ್ಟು ಹೋಗಿದೆ. ದಿನೇ ದಿನೇ ಮೈತ್ರಿಕೂಟದಲ್ಲಿಯ ಕಂದಕ ದೊಡ್ಡದಾಗುತ್ತ ನಡೆದಿರುವುದು ಬಿಜೆಪಿ ಆತಂಕ ಹೆಚ್ಚಿಸಿದೆ.ಈ ಎಲ್ಲ ಅನಿರೀಕ್ಷಿತ ರಾಜಕೀಯ ಬೆಳವಣಿಗೆಗಳು ಪ್ರಣವ್ ಹಾದಿಯನ್ನು ಸುಗಮಗೊಳಿಸಿದ್ದು, ಕಾಂಗ್ರೆಸ್ ಉತ್ಸಾಹವನ್ನು ಇಮ್ಮಡಿಗೊಳಿಸಿವೆ.ಶೇ 60ಕ್ಕೂ ಹೆಚ್ಚು ಮತಗಳನ್ನು ಪಡೆಯುವುದು ಖಚಿತವಾಗುತ್ತಿದ್ದಂತೆಯೇ ಕಾಂಗ್ರೆಸ್, ಎಷ್ಟು ಮತಗಳ ಅಂತರದಿಂದ ತನ್ನ ಅಭ್ಯರ್ಥಿ ಗೆಲುವು ಸಾಧಿಸಬಹುದು ಎಂದು ಲೆಕ್ಕಚಾರದಲ್ಲಿ ತೊಡಗಿದೆ. ಬಿಜೆಪಿ ಬೆಂಬಲಿತ ಅಭ್ಯರ್ಥಿ ಸಂಗ್ಮಾ ಸ್ಪರ್ಧೆ `ಕೇವಲ ಸಾಂಕೇತಿಕ~ ಎಂದು ಭಾವಿಸಿದಂತಿದೆ.ಆತ್ಮವಿಶ್ವಾಸದಿಂದ ಬೀಗುತ್ತಿದ್ದ ಎನ್‌ಡಿಎ ಪಾಳೆಯ `ಪವಾಡ~ದ ನಿರೀಕ್ಷೆಯಲ್ಲಿದೆ. ರಾಜಕೀಯದಲ್ಲಿ ಏನಾದರೂ ನಡೆಯಬಹುದು ಎಂಬ ತತ್ವದಲ್ಲಿ ನಂಬುಗೆ ಇಟ್ಟಿರುವ ಸಂಗ್ಮಾ, ಕೊನೆಯ ಗಳಿಗೆಯಲ್ಲಿ `ಪವಾಡ~ನಡೆಯಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ತನ್ನ ಸ್ಪರ್ಧೆ ಸಾಂಕೇತಿಕವಲ್ಲ ಎಂಬುವುದನ್ನು ನಿರೂಪಿಸುವ ಯತ್ನದಲ್ಲಿ ಅವರು ತೊಡಗಿದ್ದಾರೆ.ರಾಷ್ಟ್ರಪತಿ ಚುನಾವಣೆಯ ಗೆಲುವು ಖಂಡಿತ ಪಕ್ಷದಲ್ಲಿ ಹೊಸ ಚೈತನ್ಯ ತುಂಬುತ್ತದೆ ಮತ್ತು ದೇಶದ ಜನರಿಗೆ ಹೊಸ ಸಂದೇಶ ರವಾನಿಸುತ್ತದೆ ಎಂಬ ವಿಶ್ವಾಸ ಕಾಂಗ್ರೆಸ್‌ನಲ್ಲಿ ಮನೆಮಾಡಿದೆ. ಮುಂಬರುವ 2014ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗಳನ್ನು ಹೊಸ ಆತ್ಮವಿಶ್ವಾಸದಿಂದ ಎದುರಿಸಲು ರಾಷ್ಟ್ರಪತಿ ಚುನಾವಣೆ ನಾಂದಿ ಹಾಡಲಿದೆ ಎನ್ನುತ್ತಾರೆ ಪಕ್ಷದ ಹಿರಿಯ  ನಾಯಕರು.ಒಂದಾದ ನಂತರ ಒಂದರಂತೆ ನಡೆದ ಉಪ ಚುನಾವಣೆಗಳಲ್ಲಿ ಸೋತು ಸುಣ್ಣವಾಗಿರುವ ಕಾಂಗ್ರೆಸ್ ಇತ್ತೀಚಿಗೆ ನಡೆದ ಆಂಧ್ರ ಪ್ರದೇಶ ಉಪ ಚುನಾವಣೆಯಲ್ಲಿ ಪಾತಾಳಕ್ಕೆ ಕುಸಿದಿದೆ. ಪಕ್ಷ ಅಧಿಕಾರದಲ್ಲಿದ್ದ ಪಂಜಾಬ್, ಗೋವಾ ಮತ್ತು ಆಂಧ್ರದಲ್ಲಿಯ ಸೋಲು ಕಾಂಗ್ರೆಸ್ ಅನ್ನು ಕಂಗೆಡಿಸಿದೆ. ಸತತ ಸೋಲುಗಳ ನಂತರ ಗೆಲುವಿನ ರುಚಿ ಸವಿಯಲು ಕಾಂಗ್ರೆಸ್ ಸಜ್ಜಾಗಿದೆ.ಸಂಗ್ಮಾ ವಿಶ್ವಾಸ: ಈ ಮಧ್ಯೆ, ರಾಷ್ಟ್ರಪತಿ ಚುನಾವಣೆಗೆ ಉಮೇದುವಾರಿಕೆ ಮಾಡುವುದಾಗಿ ಹಟ ಹಿಡಿದಿರುವ ಸಂಗ್ಮಾ, ತಾವು ತಮಗೆ ಬೆಂಬಲ ನೀಡುತ್ತಿರುವವರ `ಕೈಗೊಂಬೆ~ಯಲ್ಲ ಎಂದಿದ್ದಾರೆ.`ಚುನಾವಣೆ ನಡೆದೇ ಇಲ್ಲ, ಆಗಲೇ ಸೋಲುತ್ತೇನೆ ಎನ್ನುವುದು ಸರಿಯಲ್ಲ.  ರಾಜಕೀಯದಲ್ಲಿ ತಿರುವುಗಳು ಚುರುಕಾಗಿ ನಡೆಯುತ್ತವೆ. ಏನುಬೇಕಾದರೂ ಆಗಬಹುದು ದಿನಾ ಬದಲಾವಣೆಗಳು ಆಗುತ್ತಿವೆ. ಏನಾಗುತ್ತದೆ ಎಂಬುದನ್ನು ನೀವು ಗಮನಿಸಿ~ ಎಂದು `ಸಿಎನ್‌ಎನ್-ಐಬಿಎನ್~ ವಾಹಿನಿಯ `ಡೆವಿಲ್ಸ್ ಅಡ್ವೊಕೇಟ್~ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.ಒಡಿಶಾದಲ್ಲಿ ಶೇ 25ರಷ್ಟು ಬುಡಕಟ್ಟು ಜನರಿದ್ದರೂ ಆ ರಾಜ್ಯದ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಎನ್‌ಡಿಎ ಬೆಂಬಲ ಸೂಚಿಸಿರುವ ಸಂಗ್ಮಾ ಅವರಿಗೆ ವಿಶ್ವಾಸ ವ್ಯಕ್ತಪಡಿಸಿಲ್ಲ. ಬಿಜೆಡಿ ಮುಖ್ಯಸ್ಥರಿಗೆ ಪಾಠ ಕಲಿಸಲೆಂದೇ ಬಿಜೆಪಿ ಈಶಾನ್ಯ ರಾಜ್ಯದ ಬುಡಕಟ್ಟು ಮುಖಂಡರಾದ ಸಂಗ್ಮಾ ಅವರನ್ನು ಬೆಂಬಲಿಸುತ್ತಿದೆ ಎಂದು ವಿಶ್ಲೇಷಿಸಲಾಗಿದೆ. ಆದರೆ, ತಾವು ಖಂಡಿತವಾಗಿಯೂ ಬಿಜೆಪಿಯ `ಕೈಗೊಂಬೆ~ಯಲ್ಲ ಎಂದು ನುಡಿದಿದ್ದಾರೆ.ಯಾರ ಕೈಗೊಂಬೆಯಲ್ಲ: ಸಂಗ್ಮಾ ಸ್ಪಷ್ಟನೆ

ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸುವುದಾಗಿ ಹಟ ಹಿಡಿದ ಸಂಗ್ಮಾ, ತಾವು ತಮಗೆ ಬೆಂಬಲ ನೀಡುತ್ತಿರುವವರ `ಕೈಗೊಂಬೆ~ಯಲ್ಲ ಎಂದಿದ್ದಾರೆ.`ಚುನಾವಣೆ ನಡೆದೇ ಇಲ್ಲ, ಆಗಲೇ ಸೋಲುತ್ತೇನೆ ಎನ್ನುವುದು ಸರಿಯಲ್ಲ.  ರಾಜಕೀಯದಲ್ಲಿ ತಿರುವುಗಳು ಚುರುಕಾಗಿ ನಡೆಯುತ್ತವೆ. ಏನು ಬೇಕಾದರೂ ಆಗಬಹುದು. ಏನಾಗುತ್ತದೆ ಎಂಬುದನ್ನು ನೀವು ಗಮನಿಸಿ~ ಎಂದು ಖಾಸಗಿ ವಾಹಿನಿಯ `ಡೆವಿಲ್ಸ್ ಅಡ್ವೊಕೇಟ್~ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.