ರಾಷ್ಟ್ರೀಯವಾದಿ ಪಡೆ ನಿರ್ಮಾಣದ ಗುರಿ: ಬಾಬಾ

ಬುಧವಾರ, ಜೂಲೈ 17, 2019
29 °C

ರಾಷ್ಟ್ರೀಯವಾದಿ ಪಡೆ ನಿರ್ಮಾಣದ ಗುರಿ: ಬಾಬಾ

Published:
Updated:

ಹರಿದ್ವಾರ (ಪಿಟಿಐ): `ನಾನು ಯಾವುದೇ ತರಬೇತಿ ಪಡೆದ ಉಗ್ರರು ಅಥವಾ ಮಾವೊವಾದಿಗಳನ್ನು ತಯಾರು ಮಾಡುತ್ತೇನೆ ಎಂದು ಹೇಳಿಲ್ಲ. ಬದಲಿಗೆ ರಾಷ್ಟ್ರೀಯವಾದಿಗಳ ಪಡೆ ರಚಿಸಲಿದ್ದೇನೆ~ ಎಂದು ಬಾಬಾ ರಾಮ್‌ದೇವ್ ಹೇಳಿದ್ದಾರೆ.ಸಶಸ್ತ್ರ ಯುವ ಪಡೆ ರಚನೆಯ ತಮ್ಮ ನಿರ್ಧಾರಕ್ಕೆ ವ್ಯಾಪಕ ಟೀಕೆಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಗುರುವಾರ ಅವರು ಈ ಸಮರ್ಥನೆ ನೀಡಿದ್ದಾರೆ. ಕಪ್ಪುಹಣದ ವಿರುದ್ಧ ಸಮರ ಸಾರಿ ಸತ್ಯಾಗ್ರಹ ನಡೆಸುತ್ತಿರುವ ರಾಮ್‌ದೇವ್ ಇಲ್ಲಿನ ಪತಂಜಲಿ ಯೋಗಪೀಠದಲ್ಲಿ ಅನುಯಾಯಿಗಳನ್ನು ಉದ್ದೇಶಿಸಿ ಮಾತನಾಡಿದರು.`ನಾನೇನು ಹೇಳಿದ್ದೇನೆ ಎಂಬುದನ್ನು ಜನತೆ ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ನಮ್ಮ ಬೇಡಿಕೆ ಈಡೇರುವತನಕ ಸತ್ಯಾಗ್ರಹದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ~ ಎಂದು ಅವರು ಸ್ಪಷ್ಟಪಡಿಸಿದರು.ರಾಮಲೀಲಾ ಮೈದಾನದಲ್ಲಿ ನಡೆದ ಪೊಲೀಸರ ದೌರ್ಜನ್ಯದಿಂದ ಗಾಯಗೊಂಡಿರುವ ಸತ್ಯಾಗ್ರಹಿಗಳ ವೈದ್ಯಕೀಯ ಖರ್ಚನ್ನು ತಮ್ಮ ಪತಂಜಲಿ ಯೋಗಪೀಠವೇ ಭರಿಸುತ್ತದೆ ಎಂದು ಅವರು ತಿಳಿಸಿದರು.ಕುಸಿಯುತ್ತಿರುವ ಆರೋಗ್ಯ: ರಾಮ್‌ದೇವ್ ಅವರ ಆರೋಗ್ಯ ಸ್ಥಿತಿ ಕ್ರಮೇಣ ಕುಸಿಯುತ್ತಿದೆ ಎಂದು ಅವರನ್ನು ನೋಡಿಕೊಳ್ಳುತ್ತಿರುವ ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ. `ನಿಂಬೆ ರಸ ಮತ್ತು ಜೇನು ಸೇವಿಸಲು ರಾಮ್‌ದೇವ್ ಒಪ್ಪಿಕೊಂಡಿದ್ದಾರೆ~ ಎಂದು ಹರಿದ್ವಾರದ ಜಿಲ್ಲಾಧಿಕಾರಿ ತಿಳಿಸಿದ್ದಾರೆ.ಹಿಂಸೆಗೆ ಬೆಂಬಲ ಇಲ್ಲ: ಅಣ್ಣಾ ಸ್ಪಷ್ಟನೆ


ಅಹಮದಾಬಾದ್ (ಪಿಟಿಐ): `ರಾಮ್‌ದೇವ್ ಅವರು ಅಹಿಂಸಾ ಮಾರ್ಗವನ್ನು ತೊರೆದರೆ ನಾವು ಅವರನ್ನು ತೊರೆಯುತ್ತೇವೆ~ ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಸ್ಪಷ್ಟಪಡಿಸಿದ್ದಾರೆ.`ನಮಗ್ಯಾರಿಗೂ ಹಿಂಸೆಯಲ್ಲಿ ನಂಬಿಕೆ ಇಲ್ಲ, ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ಹಿಂಸೆಗೆ ತಾವಿಲ್ಲ~ ಎಂದು ಅವರು ಸಶಸ್ತ್ರ ಪಡೆ ಕಟ್ಟುವ ರಾಮ್‌ದೇವ್ ಅವರ ಹೇಳಿಕೆಗೆ ಗುರುವಾರ ಪ್ರತಿಕ್ರಿಯಿಸಿದ್ದಾರೆ.ರಾಮಲೀಲಾ ಮೈದಾನದಲ್ಲಿ ತಮ್ಮ ಅನುಯಾಯಿಗಳನ್ನು ಸರ್ಕಾರ ನಡೆಸಿಕೊಂಡ ರೀತಿಯಿಂದ ರಾಮ್‌ದೇವ್ ಹೀಗೆ ಹೇಳಿರಬಹುದು ಎಂದು ಸಹ ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry