ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಗೆ ಚಾಲನೆ

7

ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಗೆ ಚಾಲನೆ

Published:
Updated:

ಬೆಂಗಳೂರು: ಸ್ನಾತಕೋತ್ತರ ವೈದ್ಯಕೀಯ/ದಂತ ವೈದ್ಯಕೀಯ ಪದವಿ, ಡಿಪ್ಲೊಮಾ ಕೋರ್ಸ್‌ಗಳ ಪ್ರವೇಶಕ್ಕೆ ಮೊದಲ ಬಾರಿಗೆ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ಎನ್‌ಇಇಟಿ) ನಡೆಸುವ ಪ್ರಕ್ರಿಯೆಗೆ ನ್ಯಾಷನಲ್ ಬೋರ್ಡ್ ಆಫ್ ಎಕ್ಸಾಮಿನೇಷನ್ಸ್ (ಎನ್‌ಬಿಇ) ಚಾಲನೆ ನೀಡಿದೆ.ನವೆಂಬರ್ 23ರಿಂದ ಡಿಸೆಂಬರ್ 6ರವರೆಗೆ ಬೆಂಗಳೂರು ಸೇರಿದಂತೆ ದೇಶದ 33 ಕೇಂದ್ರಗಳಲ್ಲಿ ಎನ್‌ಇಇಟಿ ಪರೀಕ್ಷೆ ನಡೆಯಲಿದೆ. ಇದೇ   4ರಿಂದಲೇ ಆನ್‌ಲೈನ್ ಮೂಲಕ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳು ಒಂದಕ್ಕಿಂತ ಹೆಚ್ಚಿನ ಪ್ರವೇಶ ಪರೀಕ್ಷೆ ಬರೆಯುವುದನ್ನು ತಪ್ಪಿಸುವ ಉದ್ದೇಶದಿಂದ ದೇಶದಾದ್ಯಂತ ಏಕರೂಪ ಪ್ರವೇಶ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ.2013ರ ಮಾರ್ಚ್ 31ಕ್ಕೂ ಮೊದಲೇ ಒಂದು ವರ್ಷದ ಇಂಟರ್ನ್‌ಶಿಪ್ ಪೂರ್ಣಗೊಳಿಸುವ ಅಥವಾ ಈಗಾಗಲೇ ಪೂರ್ಣಗೊಳಿಸಿರುವ ಎಂಬಿಬಿಎಸ್ ಪದವೀಧರರು ಎನ್‌ಇಇಟಿ ಪರೀಕ್ಷೆ ಬರೆಯಲು ಅರ್ಹರು. ಪರೀಕ್ಷೆಯು ಒಟ್ಟು 240 ಬಹುಆಯ್ಕೆ ಮಾದರಿಯ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಇದೇ 4ರಿಂದ ನವೆಂಬರ್ 10ರವರೆಗೆ ಆನ್‌ಲೈನ್ ಮೂಲಕ ಪರೀಕ್ಷೆಗೆ ಹೆಸರು ನೋಂದಾಯಿಸಬಹುದು. ಜನವರಿ 31ಕ್ಕೆ ಫಲಿತಾಂಶ ಪ್ರಕಟವಾಗಲಿದೆ.ರ‌್ಯಾಂಕ್ ಪಟ್ಟಿಯಲ್ಲಿ ಸ್ಥಾನ ಪಡೆಯಲು ಸಾಮಾನ್ಯ ವರ್ಗದ ಅಭ್ಯರ್ಥಿಗಳು ಶೇ 50ರಷ್ಟು, ಹಿಂದುಳಿದ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಶೇ 45ರಷ್ಟು ಹಾಗೂ ದೈಹಿಕ ಅಂಗವಿಕಲರು ಶೇ 40ರಷ್ಟು ಅಂಕ ಪಡೆಯಬೇಕು. ಈ ಬಾರಿಯ ಪ್ರವೇಶ ಪರೀಕ್ಷೆಯಲ್ಲಿ ಅರ್ಹತೆ ಪಡೆದವರು ಮುಂದಿನ ವರ್ಷ ಸ್ನಾತಕೋತ್ತರ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಅರ್ಹರಲ್ಲ. ರ‌್ಯಾಂಕ್‌ಪಟ್ಟಿ ಆಯಾ ವರ್ಷಕ್ಕೆ ಮಾತ್ರ ಸೀಮಿತವಾಗಿರುತ್ತದೆ ಎಂದು ಅವರು ಹೇಳಿದರು.ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಎರಡು ಪ್ರತ್ಯೇಕ ರ‌್ಯಾಂಕ್ ಪಟ್ಟಿಗಳನ್ನು ಪ್ರಕಟಿಸಲಾಗುತ್ತದೆ. ಅಲ್ಲದೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೀಸಲಾತಿಗೆ ಅನುಗುಣವಾಗಿ ಪ್ರವೇಶ ನೀಡಲಾಗುತ್ತದೆ. ದೆಹಲಿಯ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ, ಚಂಡಿಗಡದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಹಾಗೂ ಪುದುಚೇರಿಯ ಜವಾಹರಲಾಲ್ ನೆಹರೂ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯನ್ನು ಹೊರತುಪಡಿಸಿ ದೇಶದ ಎಲ್ಲ ವೈದ್ಯಕೀಯ ಕಾಲೇಜುಗಳು ಎನ್‌ಇಇಟಿ ವ್ಯಾಪ್ತಿಗೆ ಒಳಪಡಲಿವೆ.ಸೀಟು ಹಂಚಿಕೆ: ಖಾಸಗಿ ಕಾಲೇಜುಗಳಲ್ಲಿ ಶೇ 50ರಷ್ಟು ಸೀಟುಗಳನ್ನು ಸರ್ಕಾರಿ ಕೋಟಾ ಮೂಲಕ ಭರ್ತಿ ಮಾಡಲಾಗುತ್ತದೆ. ಇನ್ನುಳಿದ ಶೇ 50ರಷ್ಟು ಸೀಟುಗಳನ್ನು ಆಡಳಿತ ಮಂಡಳಿ ಕೋಟಾದಡಿ ಭರ್ತಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಆದರೆ ಈ ಸೀಟುಗಳ ಭರ್ತಿಗೂ ಎನ್‌ಇಇಟಿ ರ‌್ಯಾಂಕ್ ಪಟ್ಟಿಯನ್ನೇ ಮಾನದಂಡವಾಗಿ ಪರಿಗಣಿಸಲಾಗುತ್ತದೆ ಎಂದು ತಿಳಿಸಿದರು.ಸರ್ಕಾರಿ ಕಾಲೇಜುಗಳಲ್ಲಿ ಶೇ 50ರಷ್ಟು ಸೀಟುಗಳನ್ನು ಅಖಿಲ ಭಾರತ ಕೋಟಾದಡಿ ಹಾಗೂ ಇನ್ನುಳಿದ ಶೇ 50ರಷ್ಟು ಸೀಟುಗಳನ್ನು ರಾಜ್ಯದ ಕೋಟಾದಡಿ ಭರ್ತಿ ಮಾಡಲಾಗುತ್ತದೆ. ಯಾವುದೇ ವೈದ್ಯಕೀಯ ಕಾಲೇಜಿನಲ್ಲಿ  ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಕ್ಕೆ ಎನ್‌ಇಇಟಿಯಲ್ಲಿ ಅರ್ಹತೆ ಗಳಿಸುವುದು ಕಡ್ಡಾಯ ಎಂದರು.ಕಂಪ್ಯೂಟರ್ ಆಧಾರಿತ ಪರೀಕ್ಷೆ: ಎನ್‌ಇಇಟಿ ಕಂಪ್ಯೂಟರ್ ಆಧಾರಿತ ಪ್ರವೇಶ ಪರೀಕ್ಷೆ ಆಗಿರುತ್ತದೆ. ಅಂದರೆ ಇದು ಇಂಟರ್‌ನೆಟ್ ಮೂಲಕ ನಡೆಯುವ ಪರೀಕ್ಷೆ ಅಲ್ಲ. ಕಂಪ್ಯೂಟರ್ ಸ್ಕ್ರೀನ್ ಮೇಲೆ ಬಹುಆಯ್ಕೆ ಮಾದರಿಯ ಪ್ರಶ್ನೆಗಳು ಮೂಡಿಬಂದಾಗ, ಅಭ್ಯರ್ಥಿಗಳು ಸೂಕ್ತ ಉತ್ತರವನ್ನು `ಕ್ಲಿಕ್~ ಮಾಡಬೇಕು.ಯಾವುದೇ ಕಂಪ್ಯೂಟರ್‌ನಲ್ಲಿ ಅಥವಾ ಎಲ್ಲಿ ಬೇಕಾದರೂ ಕುಳಿತು ಪರೀಕ್ಷೆ ಬರೆಯಲು ಅವಕಾಶವಿಲ್ಲ. ನಿಗದಿತ ಪರೀಕ್ಷಾ ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಿರುವ ಕಂಪ್ಯೂಟರ್‌ಗಳನ್ನೇ ಬಳಸಿ ಉತ್ತರಿಸಬೇಕು. ಪರೀಕ್ಷೆಯ ಅವಧಿ ಮೂರು ಗಂಟೆ. ದಿನಕ್ಕೆ ಎರಡು ಪಾಳಿಯಂತೆ ಒಟ್ಟು ಹತ್ತು ದಿನ ಪರೀಕ್ಷೆ ನಡೆಯಲಿದೆ. ಯಾವ ಪಾಳಿಯ ಪರೀಕ್ಷೆಗೆ ಹಾಜರಾಗಬೇಕು ಎಂಬುದನ್ನು ವಿದ್ಯಾರ್ಥಿಗಳಿಗೆ ಮೊದಲೇ ತಿಳಿಸಲಾಗುವುದು ಎಂದು ವಿವರಿಸಿದರು. ರಾಜ್ಯದ 44 ಕಾಲೇಜುಗಳು ಸೇರಿದಂತೆ ದೇಶದಲ್ಲಿ ಒಟ್ಟು 314 ವೈದ್ಯಕೀಯ ಕಾಲೇಜುಗಳಿವೆ. ರಾಜ್ಯದಲ್ಲಿ ಖಾಸಗಿ ಕಾಲೇಜುಗಳು ಇದುವರೆಗೆ ಶೇ 33ರಷ್ಟು ಸೀಟುಗಳನ್ನು ಮಾತ್ರ ಸರ್ಕಾರಕ್ಕೆ ಬಿಟ್ಟುಕೊಡುತ್ತಿದ್ದವು.  ಎನ್‌ಇಇಟಿ ಜಾರಿಯಿಂದಾಗಿ ಶೇ 50ರಷ್ಟು ಸೀಟುಗಳನ್ನು ನೀಡಬೇಕಾಗುತ್ತದೆ. ಡೀಮ್ಡ ವಿಶ್ವವಿದ್ಯಾಲಯಗಳು ಕೂಡ ಇದರ ವ್ಯಾಪ್ತಿಗೆ ಬರಲಿವೆ.

ಪರೀಕ್ಷಾ ಶುಲ್ಕ

ಸಾಮಾನ್ಯ ಮತ್ತು ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3,750 ರೂಪಾಯಿ, ಪರಿಶಿಷ್ಟ ಜಾತಿ/ಪಂಗಡ, ದೈಹಿಕ ಅಂಗವಿಕಲ ಅಭ್ಯರ್ಥಿಗಳಿಗೆ 2,750 ರೂಪಾಯಿ ಶುಲ್ಕ ನಿಗದಿ ಮಾಡಲಾಗಿದೆ.ಆ್ಯಕ್ಸಿಸ್ ಬ್ಯಾಂಕಿನ ಆಯ್ದ ಶಾಖೆಗಳಲ್ಲಿ ಪರೀಕ್ಷೆಯ ವಿವರಗಳನ್ನು ಒಳಗೊಂಡ ಕೈಪಿಡಿ ಮತ್ತು ಶುಲ್ಕ ಪಾವತಿಸುವ ರಸೀದಿಯನ್ನು ಅ.4ರಿಂದ ನವೆಂಬರ್ 10ವರೆಗೆ ವಿತರಿಸಲಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry