ರಾಷ್ಟ್ರೀಯ ಕೃಷಿ ಮೇಳ: 2.5ಲಕ್ಷಕ್ಕೂ ಅಧಿಕ ಮಂದಿ ಭೇಟಿ

7

ರಾಷ್ಟ್ರೀಯ ಕೃಷಿ ಮೇಳ: 2.5ಲಕ್ಷಕ್ಕೂ ಅಧಿಕ ಮಂದಿ ಭೇಟಿ

Published:
Updated:
ರಾಷ್ಟ್ರೀಯ ಕೃಷಿ ಮೇಳ: 2.5ಲಕ್ಷಕ್ಕೂ ಅಧಿಕ ಮಂದಿ ಭೇಟಿ

ಬೆಂಗಳೂರು: ರಾಷ್ಟ್ರೀಯ ಕೃಷಿ ಮೇಳದಲ್ಲಿ ಸತತ ಮೂರನೇ ದಿನವೂ ಜನಜಾತ್ರೆ ಕಂಡು ಬಂದಿತು. ಶುಕ್ರವಾರ ಕೂಡ ಎರಡೂವರೆ ಲಕ್ಷಕ್ಕಿಂತಲೂ ಅಧಿಕ ಮಂದಿ ಮೇಳಕ್ಕೆ ಭೇಟಿ ನೀಡಿರಬಹುದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಅಂದಾಜಿಸಿದೆ. ಮೇಳದ ಮೂರನೇ ದಿನ ರೈತರ ಚಿತ್ತ ಕೃಷಿ ಯಂತ್ರೋಪಕರಣಗಳತ್ತ ವಾಲಿತ್ತು.ಅಧಿಕ ಸಂಖ್ಯೆಯ ರೈತರು ಕೃಷಿ ಯಂತ್ರೋಪಕರಣಗಳ ಮಳಿಗೆಗಳಿಗೆ ಭೇಟಿ ಕೊಟ್ಟು ಆಸಕ್ತಿಯಿಂದ ಪ್ರಾತ್ಯಕ್ಷಿಕೆ ವೀಕ್ಷಿಸಿದ್ದು ಕಂಡು ಬಂದಿತು.

 

ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಪ್ರಸ್ತುತಪಡಿಸಿದ ಟ್ರ್ಯಾಕ್ಟರ್- ಹೈಡ್ರಾಲಿಕ್ ಚಾಲಿತ ಅಟ್ಟಣಿಗೆ ಮೇಳದಲ್ಲಿ ಗಮನಸೆಳೆಯಿತು. ತೆಂಗು, ಮಾವು ಮತ್ತಿತರ ಹಣ್ಣಿನ ಕೊಯ್ಲು ಹಾಗೂ ಔಷಧಿ ಸಿಂಪರಣೆಗೆ ಈ ಅಟ್ಟಣಿಗೆ ರೈತರಿಗೆ ಬಹಳಷ್ಟು ಸಹಾಯಕಾರಿ. ಈ ಅಟ್ಟಣಿಗೆ ಬೆಲೆ ಒಂದು ಲಕ್ಷ ರೂಪಾಯಿ.ಇನ್ನು ಟ್ರ್ಯಾಕ್ಟರ್ ಚಾಲಿತ ಈರುಳ್ಳಿ ಬೀಜ ಬಿತ್ತುವ ಹಾಗೂ ಗೊಬ್ಬರ ಹಾಕುವ ಯಂತ್ರ, ಟ್ರ್ಯಾಕ್ಟರ್ ಚಾಲಿತ ರಾಗಿ ಬಿತ್ತುವ ಯಂತ್ರ, ಸೌರಶಕ್ತಿಯಿಂದ ನೀರೆತ್ತುವ ಸಾಧನ, ಧಾನ್ಯ ತೂರುವ, ಸಣ್ಣ ಪ್ರಮಾಣದ ಬೀಜ ಬಿಡಿಸುವ ಯಂತ್ರಗಳು ಕೂಡ ರೈತರನ್ನು ಆಕರ್ಷಿಸಿದವು.ಇದಲ್ಲದೆ, ಬತ್ತದ ಕಟಾವು, ಕಳೆ ಕೀಳುವ ಯಂತ್ರ, ಮೇವು ಕಟಾವು ಯಂತ್ರ, ನಾಟಿ ಯಂತ್ರ, ಅಡಿಕೆ ಸುಲಿಯುವ ಯಂತ್ರಗಳು ಮೇಳದಲ್ಲಿ ಎದ್ದು ಕಂಡವು. ರೈತರು ತಮ್ಮ ಆರ್ಥಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಟ್ರ್ಯಾಕ್ಟರ್‌ನಿಂದ ಹಿಡಿದು ಸಣ್ಣ ಯಂತ್ರಗಳವರೆಗೆ ಮಾಹಿತಿ ಪಡೆದು ಖರೀದಿಸಲು ಸಂಬಂಧಪಟ್ಟ ಕಂಪೆನಿಗಳ ವಿವರ ಪಡೆಯುತ್ತಿದ್ದುದು ಮೇಳದಲ್ಲಿ ಕಂಡು ಬಂದಿತು. ಸೌರ ಶಕ್ತಿಯಿಂದ ವಿದ್ಯುತ್ ಉತ್ಪಾದಿಸುವ ಕೊಟ್ಯಾಕ್ ಕಂಪೆನಿಯ `ಸೌರ ಕುಟೀರ~ ಕೂಡ ಮೇಳದಲ್ಲಿ ಗಮನಸೆಳೆಯಿತು.ಶುಕ್ರವಾರ  ಮೈಸೂರು, ಚಾಮರಾಜನಗರ, ಚಿತ್ರದುರ್ಗ ಹಾಗೂ ಉತ್ತರ ಕರ್ನಾಟಕದ ಜಿಲ್ಲೆಗಳ ರೈತರ ಭೇಟಿಗೆ ಅವಕಾಶ ಕಲ್ಪಿಸಲಾಗಿತ್ತು. ಶನಿವಾರ ಶಿವಮೊಗ್ಗ, ಚಿಕ್ಕಮಗಳೂರು, ರಾಮನಗರ, ಉತ್ತರ ಕರ್ನಾಟಕದ ಜಿಲ್ಲೆಗಳ ರೈತರು ಮೇಳದಲ್ಲಿ ಭಾಗವಹಿಸಲಿದ್ದಾರೆ. ಶನಿವಾರ ಹಾಗೂ ಭಾನುವಾರ ಅಧಿಕ ಸಂಖ್ಯೆಯಲ್ಲಿ ಜನರು ಮೇಳಕ್ಕೆ ಲಗ್ಗೆಯಿಡಬಹುದು ಎಂದು ಕೃಷಿ ವಿವಿ ಅಂದಾಜಿಸಿದೆ.ಪ್ರಶಸ್ತಿಯ ಗೌರವ ಪಡೆದವರು...

`ಡಾ.ಆರ್. ದ್ವಾರಕಿನಾಥ್ ಅತ್ಯುತ್ತಮ ರೈತ ಪ್ರಶಸ್ತಿ~ ಪಡೆದ ಸಾಧಕರ ಹೆಸರು ಇಲ್ಲಿದೆ: ಡಾ.ಡಿ.ಆರ್. ಪ್ರಫುಲ್ಲಚಂದ್ರ, ದೇವಂಗಿ, ತೀರ್ಥಗಳ್ಳಿ ತಾಲ್ಲೂಕು; ಎನ್.ಸಿ. ಪಟೇಲ್, ರಾಜಾನುಕುಂಟೆ, ಬೆಂಗಳೂರು ಉತ್ತರ ತಾಲ್ಲೂಕು; ಎಲ್. ನಾರಾಯಣ ರೆಡ್ಡಿ, ಅಣಬೆ ಅಂಚೆ, ದೊಡ್ಡಬಳ್ಳಾಪುರ ತಾಲ್ಲೂಕು.`ಡಾ.ಆರ್. ದ್ವಾರಕಿನಾಥ್ ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿ~ಗೆ ಪಾತ್ರರಾದವರು ಇವರು: ಎಚ್.ಎಸ್. ಸಿದ್ಧಯ್ಯ, ಕುವೆಂಪು ನಗರ, ಚನ್ನಪಟ್ಟಣ; ಟಿ. ಗೋಪಾಲರಾವ್, ಹಿರಿಯಣ್ಣನಹಳ್ಳಿ, ಚಿಕ್ಕಬಳ್ಳಾಪುರ ತಾಲ್ಲೂಕು; ಕೆ. ತಿಮ್ಮರಾಯಪ್ಪ, ಶ್ರೀನಗರ, ಬೆಂಗಳೂರು. ಈ ಪ್ರಶಸ್ತಿಗಳು ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿವೆ.ಕೃಷಿಯಲ್ಲಿ ವಿಶಿಷ್ಟ ಸಾಧನೆಗಾಗಿ ಜಿಲ್ಲಾ ಮಟ್ಟದ ಪ್ರಶಸ್ತಿ ಪಡೆದ ರೈತರು ಇವರು: ಅಪ್ಪೂಗೌಡ, ಸಿಂಗಮಾರನಹಳ್ಳಿ, ಹುಣಸೂರು ತಾಲ್ಲೂಕು; ರತ್ನಮ್ಮ, ಬದನವಾಳು, ನಂಜನಗೂಡು ತಾಲ್ಲೂಕು; ಎನ್. ಮಂಜುನಾಥ್, ಹರದನಹಳ್ಳಿ, ಚಾಮರಾಜನಗರ ತಾಲ್ಲೂಕು; ಮಹದೇವಮ್ಮ, ಅಂಕನಶೆಟ್ಟಿಪುರ, ಚಾಮರಾಜನಗರ ತಾಲ್ಲೂಕು; ಎಂ. ಗೋವಿಂದಪ್ಪ, ತುರುವನೂರು, ಚಿತ್ರದುರ್ಗ; ಜೆ.ಪಿ. ಲತಾ, ಹರಿಯಬ್ಬೆ, ಹಿರಿಯೂರು ತಾಲ್ಲೂಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry