ಸೋಮವಾರ, ಮೇ 23, 2022
30 °C

ರಾಷ್ಟ್ರೀಯ ಕೊರತೆ ಅಪಾಯಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ರಾಷ್ಟ್ರೀಯ ಪ್ರಜ್ಞೆಯ ಕೊರತೆ ಬಹಳ ಅಪಾಯಕಾರಿ. ಇಂದಿನ ಹಲವು ಸಮಸ್ಯೆಗಳಿಗೆ ರಾಷ್ಟ್ರೀಯ ಪ್ರಜ್ಞೆ ಇಲ್ಲದಿರುವುದೇ ಕಾರಣ~ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.ವಿಶ್ವ ಹಿಂದು ಪರಿಷತ್ ನಗರದ ಚಾಮರಾಜೀಟೆಯಲ್ಲಿರುವ ಕೇಶವಶಿಲ್ಪ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ `ಸದಾನಂದ~ (ವಿಶ್ವ ಹಿಂದು ಪರಿಷತ್‌ನ ಕೇಂದ್ರೀಯ ಕಾರ್ಯದರ್ಶಿಯಾಗಿದ್ದ ಸದಾನಂದ ಕಾಕಡೆ ಅವರ ಸ್ಮೃತಿ ಸಂಚಿಕೆ) ಸ್ಮರಣ ಸಂಚಿಕೆ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.`ಭಾರತೀಯ ಸಂಸ್ಕೃತಿ, ಮೌಲ್ಯಗಳ ಬಗ್ಗೆ ಬಹಳಷ್ಟು ಜನರಲ್ಲಿ ಸರಿಯಾದ ಅರಿವಿಲ್ಲ. ಪ್ರಾದೇಶಿಕ ಭಾವ, ಭಾಷಾವಾರು ಪ್ರಾಂತ್ಯಗಳ ರಚನೆಯ ಪ್ರಭಾವ ಹಾಗೂ ರಾಜಕೀಯ ಒತ್ತಡಗಳಿಂದ ರಾಷ್ಟ್ರೀಯ ಚಿಂತನೆ ನಡೆಯುತ್ತಿಲ್ಲ. ಇನ್ನಾದರೂ ರಾಷ್ಟ್ರೀಯ ಪ್ರಜ್ಞೆ ಬೆಳೆಸಿಕೊಳ್ಳಲು ಮುಂದಾಗಬೇಕು~ ಎಂದರು.`ಸದಾನಂದ ಕಾಕಡೆ ಅವರು ರಾಷ್ಟ್ರೀಯ ಪ್ರಜ್ಞೆ ಮೂಡಿಸಲು ಪ್ರಯತ್ನಿಸುತ್ತಿದ್ದರು. ದೇಶದ ಏಕತೆ, ಹಿಂದೂ ಧರ್ಮದ ಅಖಂಡತೆ ಹೊರತುಪಡಿಸಿ ಬೇರೆ ಯಾವುದೇ ವಿಷಯಕ್ಕೂ ಅವರು ಗಮನ ನೀಡುತ್ತಿರಲಿಲ್ಲ. ಅವರಲ್ಲಿ ದೇಶ, ಧರ್ಮ, ಸಂಸ್ಕೃತಿ ಪ್ರೇಮ ಅಪಾರವಾಗಿತ್ತು. ಇದು ಯುವ ಜನತೆಗೆ ಮಾದರಿಯಾಗಿದೆ~ ಎಂದು ಹೇಳಿದರು.`ಹಿಂದು ಧರ್ಮವನ್ನು ಉಳಿಸಿ, ಬೆಳೆಸುವುದು ಹಾಗೂ ಮುಂದಿನ ಪೀಳಿಗೆಯವರಿಗೆ ತಲುಪುವಂತೆ ಮಾಡುವ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಅವರ ಕಾರ್ಯವೈಖರಿ ಹಾಗೂ ವಿಚಾರಗಳು ಸದಾ ನೆನಪಿಗೆ ಬರುತ್ತದೆ~ ಎಂದು ಸ್ಮರಿಸಿದರು.ರಾಜ್ಯಸಭಾ ಸದಸ್ಯ ಎಂ. ರಾಮಾಜೋಯಿಸ್, `ಸಮಾಜ ಸೇವೆಗೆ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದವರನ್ನು ಸ್ಮರಿಸಿ, ಕೃತಜ್ಞತೆ ಸಲ್ಲಿಸುವುದು ಶ್ರೇಷ್ಠ ಕಾರ್ಯ. ವಿಶ್ವ ಹಿಂದು ಪರಿಷತ್‌ನ ಅಸಾಧಾರಣ ಸಂಘಟಕ ಸದಾನಂದ ಕಾಕಡೆ ಅವರ ಕುರಿತು ಸ್ಮರಣ ಸಂಚಿಕೆ ಹೊರತಂದಿರುವುದು ಉತ್ತಮವಾಗಿದೆ~ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.`ಸದಾನಂದ ಕಾಕಡೆ ಅವರು ಯಾವುದೇ ವಿಘ್ನಗಳು ಎದುರಾದರೂ ಎದೆಗುಂದುತ್ತಿರಲಿಲ್ಲ. ಧೈರ್ಯವಾಗಿ ಮುನ್ನಡೆದು ಅಂದುಕೊಂಡದ್ದನ್ನು ಸಾಧಿಸುತ್ತಿದ್ದರು. ಹಣಕಾಸು ವ್ಯವಹಾರಗಳನ್ನು ಸಮರ್ಪಕವಾಗಿ ನಡೆಸುತ್ತಿದ್ದ ಅವರ ಕಾರ್ಯವೈಖರಿ ಅನುಕರಣೀಯ~ ಎಂದರು.ಸಂಚಿಕೆಯ ಗೌರವ ಸಂಪಾದಕ ಡಾ.ಎಂ. ಶಿವಕುಮಾರಸ್ವಾಮಿ, `ಸದಾನಂದ ಕಾಕಡೆ ಅವರ ಧ್ಯೇಯ ಕುರಿತು ಹಲವು ಲೇಖನಗಳು ಸಂಚಿಕೆಯಲ್ಲಿವೆ. ಅವರು ಪ್ರತಿ ಸಂದರ್ಭದಲ್ಲೂ ಹಿಂದು ಸಂಘಟನೆಯ ಪ್ರಗತಿಯನ್ನು ಗಮನಿಸುತ್ತಿದ್ದರು. ಹಿಂದು ಸಂಘಟನೆಯು ಸಮಾಜದ ಎಲ್ಲ ಶಕ್ತಿಯನ್ನು ಒಳಗೊಂಡಿರಬೇಕು ಎಂಬುದು ಅವರ ಆಶಯವಾಗಿತ್ತು~ ಎಂದು ಹೇಳಿದರು.  ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರ ಪ್ರಮುಖ ಚಂದ್ರಶೇಖರ ಭಂಡಾರಿ, ವಿಶ್ವ ಹಿಂದು ಪರಿಷತ್‌ನ ಕೇಂದ್ರೀಯ ಸಲಹಾ ಮಂಡಳಿ ಸದಸ್ಯ ಬಾಬುರಾವ್ ದೇಸಾಯಿ, ಕೇಂದ್ರೀಯ ಕೋಶಾಧ್ಯಕ್ಷ ರಾಘವ ರೆಡ್ಡಿ ಇತರರು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.