ರಾಷ್ಟ್ರೀಯ ಕ್ರೀಡಾಕೂಟಕ್ಕೆ ಇಂದು ಚಾಲನೆ: ಪ್ರಧಾನಿ, ರಾಷ್ಟ್ರಪತಿ ಗೈರು

7

ರಾಷ್ಟ್ರೀಯ ಕ್ರೀಡಾಕೂಟಕ್ಕೆ ಇಂದು ಚಾಲನೆ: ಪ್ರಧಾನಿ, ರಾಷ್ಟ್ರಪತಿ ಗೈರು

Published:
Updated:

ರಾಂಚಿ: ವಿವಿಧ ಕಾರಣಗಳಿಂದಾಗಿ ಆರು ಬಾರಿ ಮುಂದೂಡಲಾಗಿದ್ದ 34ನೇ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಶನಿವಾರ ಚಾಲನೆ ಲಭಿಸಲಿದೆ. 8,500 ಕ್ಕೂ ಅಧಿಕ ಸ್ಪರ್ಧಿಗಳು ದೇಶದ ಅತಿದೊಡ್ಡ ಕೂಟದಲ್ಲಿ ಪದಕಕ್ಕಾಗಿ ಪೈಪೋಟಿ ನಡೆಸಲಿದ್ದಾರೆ.ರಾಂಚಿಯ ಹೊರವಲಯದಲ್ಲಿ ನಿರ್ಮಿಸಿರುವ ಅತ್ಯಾಧುನಿಕ ಕ್ರೀಡಾ ಸಂಕೀರ್ಣದಲ್ಲಿ ಸ್ಪರ್ಧೆಗಳು ನಡೆಯಲಿವೆ. ಶನಿವಾರ ನಡೆಯಲಿರುವ ವರ್ಣರಂಜಿತ ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್ ತಾರೆಯರು ಒಳಗೊಂಡಂತೆ ಕಲಾವಿದರು ಪ್ರದರ್ಶನ ನೀಡಲಿದ್ದಾರೆ.ಆದರೆ ಪ್ರಧಾನಿ ಮನಮೋಹನ್ ಸಿಂಗ್, ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಮತ್ತು ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ಕೂಟದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿಲ್ಲ. ಈ ಕಾರಣ ಜಾರ್ಖಂಡ್ ರಾಜ್ಯಪಾಲ ಎಂಒ ಹಸನ್ ಫರೂಕ್ ಅವರು ಕೂಟವನ್ನು ಉದ್ಘಾಟಿಸಲಿದ್ದಾರೆ.

ಜಾರ್ಖಂಡ್ ಮುಖ್ಯಮಂತ್ರಿ ಅರ್ಜುನ್ ಮುಂಡಾ ಅವರು ಕೂಟಕ್ಕೆ ಪ್ರಧಾನಿ, ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿ ಅವರನ್ನು ಆಹ್ವಾನಿಸಿದ್ದರು. ಆದರೆ ನಿಬಿಡ ಕಾರ್ಯಕ್ರಮಗಳಿಂದಾಗಿ ಮೂವರಿಗೂ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಗುತ್ತಿಲ್ಲ. ರಾಂಚಿ ಅಲ್ಲದೆ ಧನ್‌ಬಾದ್ ಮತ್ತು ಜಮ್ಶೆಡ್‌ಪುರದ ಕ್ರೀಡಾಂಗಣಗಳು ಕೂಟದ ಕೆಲವು ಸ್ಪರ್ಧೆಗಳಿಗೆ ಆತಿಥ್ಯ ವಹಿಸಲಿವೆ. ಅಥ್ಲೆಟಿಕ್ಸ್ ಒಳಗೊಂಡಂತೆ 33 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದ್ದು, ತಲಾ 800 ಚಿನ್ನ ಮತ್ತು ಬೆಳ್ಳಿ ಹಾಗೂ 900 ಕಂಚಿನ ಪದಕಗಳನ್ನು ಪಣಕ್ಕಿಡಲಾಗಿದೆ.ಕಳೆದ ಬಾರಿಯ ಕೂಟದಲ್ಲಿ ಸರ್ವಿಸಸ್ ತಂಡ ಪದಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿತ್ತು. ಕರ್ನಾಟಕ 10ನೇ ಸ್ಥಾನ ಗಳಿಸಿತ್ತು. ರಾಜ್ಯದ ಸ್ಪರ್ಧಿಗಳು ಈ ಬಾರಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ. ಕೂಟವು 26ರ ವರೆಗೆ ನಡೆಯಲಿದೆ. 33ನೇ ರಾಷ್ಟ್ರೀಯ ಕೂಟ ಗುವಾಹಟಿಯಲ್ಲಿ 2007 ರಲ್ಲಿ ನಡೆದಿತ್ತು. 34ನೇ ಕೂಟ 2009 ರಲ್ಲಿ ನಡೆಯಬೇಕಿತ್ತು. ಆದರೆ ವಿವಿಧ ಕಾರಣಗಳಿಂದ ಹಲವು ಬಾರಿ ಮುಂದೂಡಲಾಯಿತು. 2010 ರಲ್ಲೂ ಕೂಟ ನಡೆಸಲು ಆಗಲಿಲ್ಲ. ಇದೀಗ ಕೂಟದ ಬಗ್ಗೆ ಎದ್ದಿದ್ದ ಎಲ್ಲ ಅನಿಶ್ಚಿತತೆಗಳಿಗೆ ಶನಿವಾರ ತೆರೆಬೀಳಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry