ರಾಷ್ಟ್ರೀಯ ಗ್ರಾಹಕರ ಹಕ್ಕುಗಳ ದಿನಾಚರಣೆ

7

ರಾಷ್ಟ್ರೀಯ ಗ್ರಾಹಕರ ಹಕ್ಕುಗಳ ದಿನಾಚರಣೆ

Published:
Updated:

ಯಾದಗಿರಿ: ವ್ಯಾಪಾರಿಗಳಿಂದ ಸೇವೆ­ಯಲ್ಲಿ ಅಸಮರ್ಪಕತೆ ಮತ್ತು ದೋಷ ಪೂರ್ಣ ನಿರ್ವಹಣೆ ಆಗಿದ್ದಲ್ಲಿ ಅಂತಹ ವ್ಯಕ್ತಿ ಮತ್ತು ಸಂಸ್ಥೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಪರಿಹಾರ ಪಡೆಯುವ ಹಕ್ಕು ಗ್ರಾಹಕ­ರಿಗೆ ಇದೆ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷೆನ್ಸ್‌ ನ್ಯಾಯಾಧೀಶರಾದ ವಿದ್ಯಾವತಿ ಅಕ್ಕಿ ತಿಳಿಸಿದರು.ನಗರದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಸೋಮವಾರ ಆಯೋ­ಜಿ­ಸಿದ್ದ ರಾಷ್ಟ್ರೀಯ ಗ್ರಾಹಕರ ಹಕ್ಕುಗಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕೇಂದ್ರ ಸರ್ಕಾರ 1986ರಲ್ಲಿ ಗ್ರಾಹಕರ ಹಿತರಕ್ಷಣೆಗಾಗಿ ಗ್ರಾಹಕರ ಹಿತರಕ್ಷಣಾ ಕಾಯ್ದೆ ಜಾರಿಗೊಳಿಸಿದೆ. ಈ ಹಿಂದೆ ವಸ್ತುಗಳ ಖರೀದಿಯಲ್ಲಿ ಆಗುವ ಮೋಸಕ್ಕೆ ಮಾತ್ರ ಗ್ರಾಹಕರು ಪರಿಹಾರ ಪಡೆಯಬಹುದಾಗಿತ್ತು. ಈಗ ವೈದ್ಯಕೀಯ ಸೇವೆಯಲ್ಲಿ ರೋಗಿಗಳಿಗೆ ಮತ್ತು ನ್ಯಾಯ ಕೋರಿ ವಕೀಲರಿಂದ ಅನ್ಯಾಯಕ್ಕೆ ಒಳಗಾಗುವ ಕಕ್ಷಿದಾರರು ಸಹ ಪರಿಹಾರ ಪಡೆಯ­ಬಹುದಾಗಿದೆ ಎಂದು ವಿವರಿಸಿದರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಎಫ್.ಆರ್.ಜಮಾದಾರ್ ಮಾತನಾಡಿ, ₨1 ಲಕ್ಷ ರಿಂದ ₨20 ಲಕ್ಷ ವರೆಗಿನ ವಸ್ತುಗಳ ಖರೀದಿಯಲ್ಲಿ ಮೋಸಕ್ಕೆ ಒಳಗಾದವರು ಜಿಲ್ಲಾ ಗ್ರಾಹಕರ ವೇದಿಕೆಗೆ, ₨20 ಲಕ್ಷ ದಿಂದ ₨1 ಕೋಟಿವರೆಗಿನ ವಸ್ತು ಖರೀದಿ­ಯಲ್ಲಿ ಮೋಸಕ್ಕೆ ಒಳಗಾದವರು ರಾಜ್ಯ ಗ್ರಾಹಕರ ವೇದಿಕೆಗೆ ಮತ್ತು ₨1 ಕೋಟಿಗಿಂತ ಹೆಚ್ಚಿನ ಮೌಲ್ಯದ ವಸ್ತುಗಳ ಖರೀದಿಯಲ್ಲಿ ಮೋಸಕ್ಕೆ ಒಳಗಾದವರು ರಾಷ್ಟ್ರೀಯ ಗ್ರಾಹಕರ ಆಯೋಗಗಳಿಗೆ ದೂರು ನೀಡಿ ಪರಿ­ಹಾರ ಪಡೆಯಬಹುದು. ಗ್ರಾಹ­ಕರು ವಸ್ತುಗಳನ್ನು ಖರೀದಿಸಿದಾಗ ಕಡ್ಡಾಯ­ವಾಗಿ ನೋಂದಾಯಿತ ರಸೀದಿ­ಗಳನ್ನು ಪಡೆಯ­ಬೇಕು ಎಂದರು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎ.­ಜಿಲಾನಿ, ಗಂಜ್ ವರ್ತಕರ ಸಂಘದ ಅಧ್ಯಕ್ಷ ಬಾಬು ದೋಖಾ ವೇದಿಕೆಯಲ್ಲಿದ್ದರು. ಡಿಡಿಪಿಐ ಕಛೇರಿ ವಿಷಯ ಪರಿವಿಕ್ಷಕ ಬಿ.ವೆಂಕೋಬ ಉಪನ್ಯಾಸ ನೀಡಿದರು. ಸಾಹೇಬಗೌಡ ಬಿರಾದಾರ ನಿರೂಪಿಸಿದರು. ಮಲ್ಲಿಕಾರ್ಜುನ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry