ಸೋಮವಾರ, ಜೂನ್ 14, 2021
27 °C

ರಾಷ್ಟ್ರೀಯ ಚಳವಳಿ: ಪ್ರಾದೇಶಿಕ ವಿಶ್ಲೇಷಣೆ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ವಸಾಹತುಶಾಹಿ ವಿರುದ್ಧ ನಡೆದ ರಾಷ್ಟ್ರೀಯ ಚಳವಳಿಯನ್ನು ಪ್ರಾದೇಶಿಕ ನೆಲೆಗಟ್ಟಿನಲ್ಲಿ ವಿಶ್ಲೇಷಿಸುವ ಅಗತ್ಯವಿದೆ ಎಂದು ಪ್ರೊ.ಬಿ.ಸುರೇಂದ್ರರಾವ್ ಅಭಿಪ್ರಾಯಪಟ್ಟರು.ಬಾಸುದೇವ ಸೋಮಾನಿ ಕಾಲೇಜಿನಲ್ಲಿ ಬುಧವಾರ ನಡೆದ `ಮೈಸೂರು ಸಂಸ್ಥಾನದಲ್ಲಿ ನಡೆದ ರಾಷ್ಟ್ರೀಯ ಚಳವಳಿ-ಒಂದು ಪುನರ್ ಮೌಲ್ಯೀಕರಣ~ ವಿಚಾರ ಸಂಕಿರಣದಲ್ಲಿ ಮಾತನಾಡಿದರು.ಬ್ರಿಟಿಷರ ವಿರುದ್ಧ ಹುಟ್ಟಿಕೊಂಡ ಹೋರಾಟ ದೇಶವನ್ನು ಒಗ್ಗೂಡಿಸಿತು. ಹಲವು ಮಂದಿ ಸ್ವಾತಂತ್ರ್ಯ ಚಳವಳಿಗಾರರು ಜನ್ಮ ತಾಳಿದರು. ಗಾಂಧೀಜಿ ಅವರಂತೆ ಪ್ರಾದೇಶಿಕ ನಾಯಕರು ಹೋರಾಟಕ್ಕೆ ನೇತೃತ್ವ ನೀಡಿದರು. ಜಲಿಯನ್ ವಾಲಾಬಾಗ್ ರೀತಿಯಲ್ಲೇ ಈಸೂರು ದುರಂತ ಕೂಡ ನಡೆಯಿತು. ವಿವಿಧ ಪ್ರಾಂತ್ಯಗಳಲ್ಲಿ ನಡೆದ ಹೋರಾಟಗಳೇ ರಾಷ್ಟ್ರೀಯ ಚಳವಳಿಯಾಗಿ ರೂಪುಗೊಂಡಿತು. ಹೀಗಾಗಿ ಈ ಚಳವಳಿಯನ್ನು ಪ್ರಾದೇಶಿಕ ನೆಲೆಗಟ್ಟಿನಲ್ಲಿ ವ್ಯಾಖ್ಯಾನಿಸಬೇಕು ಎಂದು ಪ್ರತಿಪಾದಿಸಿದರು.ರಾಷ್ಟ್ರೀಯ ಚಳವಳಿಯ ಭಾಗವಾಗಿ ಮೈಸೂರಿನಲ್ಲಿ ವಿಭಿನ್ನ ಸತ್ಯಾಗ್ರಹಗಳು ನಡೆದವು. 1942ರ ಕ್ವಿಟ್ ಇಂಡಿಯಾ ಚಳವಳಿ ದೇಶವ್ಯಾಪಿ ಹಬ್ಬಿರಲಿಲ್ಲ. ಆಯಾ ಪ್ರಾಂತ್ಯಗಳಲ್ಲಿ ಹುಟ್ಟಿಕೊಂಡ ಪ್ರಾದೇಶಿಕ ಹೋರಾಟಗಳನ್ನೇ ಈ ಚಳವಳಿ ಯೊಂದಿಗೆ ತಳುಕು ಹಾಕಲಾಗಿದೆ. ಆ ಸಂದರ್ಭದಲ್ಲಿ ನಡೆದ ದ್ರಾವಿಡರ ಹೋರಾಟ, ಎಡ ಪಂಥೀಯ ಸತ್ಯಾಗ್ರಹ, ಜಾತಿ ವಿರೋಧಿ ಚಳವಳಿಗಳು ಯಾವುದೇ ರಾಷ್ಟ್ರೀಯ ಹೋರಾಟಕ್ಕಿಂತಲು ಕಡಿಮೆ ಇರಲಿಲ್ಲ ಎಂದರು.ಮೈಸೂರು ವಿವಿ ಸಿಡಿಸಿ ನಿರ್ದೇಶಕ ಡಾ.ಲಿಂಗರಾಜ ಗಾಂಧಿ ಮಾತನಾಡಿ, ರಾಜಕೀಯ ಬದಲಾವಣೆಗಾಗಿ ನಡೆದ ಚಾರಿತ್ರಿಕ ಹೋರಾಟ ವನ್ನೇ ರಾಷ್ಟ್ರೀಯ ಚಳವಳಿ ಎಂಬಂತೆ ವಿಶ್ಲೇಷಣೆ ಮಾಡಲಾಗಿದೆ. ಪಾಶ್ಚಿಮಾತ್ಯ ಸಾಹಿತ್ಯ, ಹೋರಾಟ ಗಳು ಅವರ ಮೇಲೆ ಪ್ರಭಾವ ಬೀರಿದ್ದವು ಎಂದರು.ಪ್ರಾಂಶುಪಾಲ ಪ್ರೊ.ಎಸ್.ಆರ್.ರಮೇಶ್, ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಎಚ್.ಎನ್. ನಾಗರಾಜ್, ಕಾರ್ಯಕ್ರಮ ಸಂಯೋಜಕ ಎಸ್. ಎಸ್.ರಾಜೇ ಅರಸ್ ಹಾಜರಿದ್ದರು.ಪತ್ರಿಕೆಗಳ ಪಾತ್ರ ಪ್ರಮುಖ

19ನೇ ಶತಮಾನದ ಮೊದಲ ಎರಡು ದಶಕಗಳಲ್ಲಿ ಮೈಸೂರಿನಲ್ಲಿ ಹುಟ್ಟಿಕೊಂಡ ಪತ್ರಿಕೆಗಳು ರಾಷ್ಟ್ರೀಯ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದವು. ಸ್ವಾತಂತ್ರ್ಯ ಚಳವಳಿಯ ಭಾಗವಾಗಿ ಪತ್ರಿಕೆಗಳು ರಾಷ್ಟ್ರೀಯ ಭಾವನೆ ಬಿತ್ತಿ, ಸಾರ್ವಜನಿಕ ಅಭಿಪ್ರಾಯ ಹುಟ್ಟು ಹಾಕಿದವು. ವಿದೇಶಿ ವಸ್ತುಗಳನ್ನು ತಿರಸ್ಕರಿಸಲು ಜನರಿಗೆ ಕರೆ ನೀಡಿ, ಬಾಲ್ಯ ವಿವಾಹ ನಿಷೇಧ, ಮೀಸಲಾತಿಯಂತಹ ಸುಧಾರಣಾ ನೀತಿಯನ್ನು ಬೆಂಬಲಿಸಿದವು. ಹೀಗಾಗಿ ಬ್ರಿಟಿಷರು ಪತ್ರಿಕಾ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಲು ಪ್ರಯತ್ನಿಸಿದರು.

-ಕೃಷ್ಣವಟ್ಟಂ, ಹಿರಿಯ ಪತ್ರಕರ್ತಚಳವಳಿಯ ತೀವ್ರತೆ ಕಡಿಮೆ

ಪರಕೀಯತೆಗೆ ಹೆಚ್ಚು ಬಲಿಯಾದವರು ಉತ್ತರ ಕರ್ನಾಟಕದ ಜನ. ಒಂದೆಡೆ ಬ್ರಿಟಿಷರು, ಮತ್ತೊಂದೆಡೆ ಮುಂಬೈ, ಹೈದರಾಬಾದ್ ನಿಜಾಮರ ಆಡಳಿತ. ಹೀಗಾಗಿ ಅಲ್ಲಿನ ಜನ ಸ್ವಾತಂತ್ರ್ಯವನ್ನು ಬಯಸುತ್ತಿದ್ದರು. ಆದರೆ ಮೈಸೂರು ಮಾದರಿ ಪ್ರಾಂತ್ಯವಾಗಿತ್ತು. ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವ ಕಾರಣಕ್ಕಾಗಿ ಇಲ್ಲಿ ಚಳವಳಿ ಹುಟ್ಟಿಕೊಂಡವು. ಹೀಗಾಗಿ ಅದರ ತೀವ್ರತೆ ಕೂಡ ಕಡಿಮೆಯಾಗಿತ್ತು.

-ಡಾ.ಎಂ.ಶಶಿಧರ್, ಸಹ ಪ್ರಾಧ್ಯಾಪಕತಿಲಕ್ ಮಾದರಿ ಚಳವಳಿ

ಬಾಲಗಂಗಾಧರನಾಥ್ ತಿಲಕ್ ಅವರ ಉತ್ಸವ ರೂಪದ ಚಳವಳಿಗಳು ಮೈಸೂರನ್ನು ಪ್ರಭಾವಿಸಿದ್ದವು. ಪತ್ರಕರ್ತ ತಾತಯ್ಯರೂ ತಿಲಕ್ ಅನುಯಾಯಿಗಳಾಗಿದ್ದರು. ತಿಲಕ್ ಅವರನ್ನು ಬೆಂಬಲಿಸುವ ದೊಡ್ಡ ಯುವ- ವಿದ್ಯಾರ್ಥಿ ಪಡೆಯೇ ಇಲ್ಲಿತ್ತು. ಹಿಂದೂ ಧರ್ಮದ ಆಚರಣೆಗಳಲ್ಲಿ ಬ್ರಿಟಿಷರು ಹಸ್ತಕ್ಷೇಪ ಮಾಡಿದಾಗ ಇಲ್ಲಿ ದೊಡ್ಡ ಮಟ್ಟದ ಚಳವಳಿಗಳು ನಡೆದವು. `ಮರಾಠ~ ಮಾದರಿ ಪತ್ರಿಕೆಗಳು ಕೂಡ ಹುಟ್ಟಿಕೊಂಡವು.

-ಡಾ.ಆರ್.ಡಿ.ಪವಮಾನ, ಪ್ರಾಧ್ಯಾಪಕಕನ್ನಡ ಪ್ರಭಾವಿಸಿದ ರಾಷ್ಟ್ರೀಯತೆ

ರಾಷ್ಟ್ರೀಯ ಚಳವಳಿ ಕನ್ನಡಕ್ಕಿಂತ ಮರಾಠಿಯ ಮೇಲೆ ಹೆಚ್ಚು ಪ್ರಭಾವ ಬೀರಿತ್ತು. ಆದರೂ ಕನ್ನಡದಲ್ಲಿ ಬ್ರಿಟಿಷ್ ವಿರೋಧಿ ತಾತ್ವಿಕ ಸಾಹಿತ್ಯ ರಚನೆಯಾಗಿದೆ. ಕಾವ್ಯ, ಕಥೆ, ಕಾದಂಬರಿ, ನಾಟಕಗಳಲ್ಲೂ ರಾಷ್ಟ್ರೀಯ ವಿಚಾರಧಾರೆ ಪ್ರತಿಪಾದನೆಯಾಗಿದೆ. `ಒಂದೇ ಮಾತರಂ~ ಗೀತೆ ಸೇರಿದಂತೆ ದೇಶಭಕ್ತಿ ಕೆರಳಿಸುವ ಅನೇಕ ಕೃತಿಗಳು ಕನ್ನಡಕ್ಕೆ ಅನುವಾದಗೊಂಡಿವೆ. `ಮಲೆಗಳಲ್ಲಿ ಮದುಮಗಳು~ ಕಾದಂಬರಿಯಲ್ಲಿ ಕುವೆಂಪು ದೇಸಿ ರಾಜರನ್ನು ನಾಯಿಗೆ ಹೋಲಿಸಿ ಚಿತ್ರಿಸಿದ್ದಾರೆ. ಬೇಂದ್ರೆ, ಪುತೀನ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಸೇರಿದಂತೆ ಅನೇಕರ ಕಾವ್ಯಗಳಲ್ಲಿ ರಾಷ್ಟ್ರ ಪ್ರಜ್ಞೆ ಇದೆ.

-ಡಾ.ಎಂ.ಜಿ.ಮಂಜುನಾಥ್, ಪ್ರಾಧ್ಯಾಪಕಪುರಾತತ್ವ ಸಂಶೋಧನೆ ಕುಂಠಿತ

ಸ್ವಾತಂತ್ರ್ಯ ಪಡೆದ ಬಳಿಕ ಮೈಸೂರು ಭಾಗದಲ್ಲಿ ಪುರಾತತ್ವ ಸಂಶೋಧನೆ ಕುಂಠಿತಗೊಂಡಿದೆ. ಉತ್ತರ ಕರ್ನಾಟಕದ ತುಂಗ-ಭದ್ರಾ, ಕೃಷ್ಣಾ ನದಿ ತೀರದಲ್ಲಿ ಮಾತ್ರ ಹೆಚ್ಚು ಸಂಶೋಧನೆಗಳು ನಡೆದಿವೆ. ಇದರಿಂದ ಕೆಆರ್‌ಎಸ್ ನಿರ್ಮಾಣವಾದ ಬಳಿಕ ಕೃಷಿ ಆಧಾರಿತ ನಾಗರಿಕತೆಯನ್ನು ಹೆಚ್ಚು ಅರಿಯಬೇಕಿದೆ. ಹೀಗಾಗಿ ಸಂಶೋಧನೆಗಳನ್ನು ಪ್ರೋತ್ಸಾಹಿಸಬೇಕು.

-ಡಾ.ಎಸ್.ಕೆ.ಅರುಣಿ, ಐಸಿಎಚ್‌ಆರ್ ಉಪ ನಿರ್ದೇಶಕ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.