`ರಾಷ್ಟ್ರೀಯ ಜಲ ನೀತಿ: ಸಿಂಗ್ ಭರವಸೆ'

7

`ರಾಷ್ಟ್ರೀಯ ಜಲ ನೀತಿ: ಸಿಂಗ್ ಭರವಸೆ'

Published:
Updated:

ಬೆಂಗಳೂರು: `ರಾಷ್ಟ್ರೀಯ ಜಲ ನೀತಿ ರೂಪಿಸುವ ಸಂಬಂಧ ಶೀಘ್ರದಲ್ಲೇ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಸರ್ವಪಕ್ಷಗಳ ಸಭೆ ಕರೆಯುವುದಾಗಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಭರವಸೆ ನೀಡಿದ್ದಾರೆ' ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ `ಮುಖ್ಯಮಂತ್ರಿ' ಚಂದ್ರು ಮಂಗಳವಾರ ಇಲ್ಲಿ ತಿಳಿಸಿದರು.ನೀರು ಹಂಚಿಕೆ, ಉದ್ಯೋಗ ಮತ್ತು ಶಿಕ್ಷಣ ಮಾಧ್ಯಮಕ್ಕೆ ಸಂಬಂಧಿಸಿದಂತೆ ಬೇರೆ ಬೇರೆ ಬಗೆಯ ಸಮಸ್ಯೆಗಳು ರಾಷ್ಟ್ರವನ್ನು ಕಾಡುತ್ತಿವೆ. ಅವುಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರಾಷ್ಟ್ರೀಯ ನೀತಿ ರೂಪಿಸುವಂತೆ ತಮ್ಮ ನೇತೃತ್ವದ 15 ಜನರ ನಿಯೋಗ ಕಳೆದ ವಾರ ಪ್ರಧಾನಿ ಹಾಗೂ ಕೇಂದ್ರದ ವಿವಿಧ ಖಾತೆಗಳ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಚಂದ್ರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.ರಾಷ್ಟ್ರೀಯ ಶಿಕ್ಷಣ ನೀತಿ ಪ್ರಸ್ತಾವವನ್ನು ಪ್ರಧಾನಿಗಳು ತಾತ್ವಿಕವಾಗಿ ಒಪ್ಪಿದ್ದಾರೆ. ಉದ್ಯೋಗ ನೀತಿ ಕುರಿತು ಪರಿಶೀಲಿಸಲು ಸಂಬಂಧಪಟ್ಟ ಸಚಿವರಿಗೆ ಸೂಚಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.ರಾಷ್ಟ್ರೀಯ ಜಲ ನೀತಿಯ ಕರಡು ಸಿದ್ಧವಾಗುತ್ತಿದೆ. ಎಲ್ಲ ರಾಜ್ಯಗಳ ಪ್ರತಿಕ್ರಿಯೆ ಪಡೆದು ಅದನ್ನು ಅಂತಿಮಗೊಳಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ಹರೀಶ್ ರಾವತ್ ತಿಳಿಸಿದರು. ರಾಷ್ಟ್ರೀಯ ಉದ್ಯೋಗ ನೀತಿ ಸಿದ್ಧವಾಗಿದ್ದು, ಅಭಿಪ್ರಾಯ ಸಂಗ್ರಹಿಸಲು ಕೇಂದ್ರದ ಎಲ್ಲ ಇಲಾಖೆಗಳಿಗೆ ಕಳುಹಿಸಿಕೊಡಲಾಗಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ರಾಜ್ಯಗಳಿಗೆ ಕಳುಹಿಸಿಕೊಟ್ಟು, ರಾಜ್ಯ ಸರ್ಕಾರಗಳ ಅಭಿಪ್ರಾಯವನ್ನೂ ಪಡೆಯಲಾಗುವುದು ಎಂದು ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು. `ಸಿ' ವರ್ಗದ ಹುದ್ದೆಗಳಿಗೆ ಆಯಾ ಪ್ರಾದೇಶಿಕ ಭಾಷೆಗಳಲ್ಲೇ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಅವಕಾಶವನ್ನು ಕಾರ್ಮಿಕ ಇಲಾಖೆ ಒದಗಿಸಿದೆ ಎಂದರು.ಮಾತೃಭಾಷಾ ನೀತಿಗೆ ಸಂಬಂಧಿಸಿದ ವಿವಾದ ಸುಪ್ರೀಂ ಕೋರ್ಟ್‌ನಲ್ಲಿ ಇತ್ಯರ್ಥವಾದ ಬಳಿಕ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಲಿದೆ ಎಂದು ಮಾನವ ಸಂಪನ್ಮೂಲ ಸಚಿವ ಎಂ.ಎಂ. ಪಲ್ಲಂ ರಾಜು ಭರವಸೆ ನೀಡಿದ್ದಾರೆ ಎಂದು ಹೇಳಿದರು.ನಿಯೋಗದಲ್ಲಿ ಸಾಹಿತಿಗಳಾದ ಹಂಪ ನಾಗರಾಜಯ್ಯ, ಎಂ.ಎಚ್.ಕೃಷ್ಣಯ್ಯ, ರಂಗಾರೆಡ್ಡಿ ಕೋಡಿರಾಂಪುರ, ಕಾರ್ಮಿಕ ಮುಖಂಡ ಸಿದ್ದಯ್ಯ, ಕನ್ನಡ ಹೋರಾಟಗಾರ ರಾ.ನಂ.ಚಂದ್ರಶೇಖರ್ ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry