ಭಾನುವಾರ, ಮಾರ್ಚ್ 7, 2021
32 °C
ಹಿರಿಯ ಆಟಗಾರರಿಗೆ ವಿಶ್ರಾಂತಿ

ರಾಷ್ಟ್ರೀಯ ತಂಡಕ್ಕೆ ಭಜ್ಜಿ, ಉತ್ತಪ್ಪ; ರಹಾನೆಗೆ ಹೊಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಷ್ಟ್ರೀಯ ತಂಡಕ್ಕೆ ಭಜ್ಜಿ, ಉತ್ತಪ್ಪ; ರಹಾನೆಗೆ ಹೊಣೆ

ನವದೆಹಲಿ (ಪಿಟಿಐ): ಜಿಂಬಾಬ್ವೆ ಎದುರಿನ ಏಕದಿನ ಕ್ರಿಕೆಟ್ ಸರಣಿಗೆ ಸೋಮವಾರ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಕರ್ನಾಟಕದ ಆಟಗಾರ ರಾಬಿನ್ ಉತ್ತಪ್ಪ ಹಾಗೂ ಹರಭಜನ್ ಸಿಂಗ್ ಅವರು ರಾಷ್ಟ್ರೀಯ ತಂಡಕ್ಕೆ ಮರಳಿದ್ದು, ಹಲವು ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ.

15 ಆಟಗಾರರ ತಂಡವನ್ನು ಯುವ ಆಟಗಾರ ಅಜಿಂಕ್ಯ ರಹಾನೆ ಮುನ್ನಡೆಸಲಿದ್ದು, ವೇಗಿ ಸಂದೀಪ್ ಶರ್ಮಾ ಹಾಗೂ ಲೆಗ್ ಸ್ಪಿನ್ನರ್ ಕರಣ್ ಶರ್ಮಾ ಅವರೂ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಆಯ್ಕೆ ಸಮಿತಿ ಸಭೆಯ ಬಳಿಕ ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಅವರು ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು.

ಆರಂಭಿಕ ಆಟಗಾರ ಮುರಳಿ ವಿಜಯ್, ಅಂಬಟಿ ರಾಯುಡು ಹಾಗೂ ಭುವನೇಶ್ವರ್ ಕುಮಾರ್ ತಂಡದಲ್ಲಿದ್ದಾರೆ. ಹಿರಿಯ ಆಟಗಾರರ ವಿಶ್ರಾಂತಿಯಿಂದಾಗಿ ಗಾಯಗಳಿಂದಾಗಿ ರಾಷ್ಟ್ರೀಯ ತಂಡದಿಂದ ಹೊರಗುಳಿದಿದ್ದ ಮನೋಜ್ ತಿವಾರಿ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

‘ದೇಶಿಯ ಕ್ರಿಕೆಟ್‌ನಲ್ಲಿನ ತೋರುತ್ತಿರುವ ಪ್ರದರ್ಶನವನ್ನು ಪರಿಗಣಿಸಿ ಹಾಗೂ 2016ರಲ್ಲಿ ನಡೆಯಲಿರುವ ಟ್ವೆಂಟಿ–20 ವಿಶ್ವಕಪ್‌ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಈ ನಾವು ತಂಡವನ್ನು ಆಯ್ಕೆ ಮಾಡಿದ್ದೇವೆ’ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಇದೇ ತಿಂಗಳ ನಡೆದ ಬಾಂಗ್ಲಾದೇಶ ಎದುರಿನ ಸರಣಿಯನ್ನು ಭಾರತವು 1–2ರಲ್ಲಿ ಸೋತಿತ್ತು.

ಏಕದಿನ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ, ವಿರಾಟ್‌ ಕೊಹ್ಲಿ, ಸುರೇಶ್ ರೈನಾ, ರೋಹಿತ್ ಶರ್ಮಾ ಹಾಗೂ ಆರ್. ಅಶ್ವಿನ್ ಅವರಿಗೆ ವಿಶ್ರಾಂತಿ ನೀಡಲಾಗಿದೆ.

ತಂಡ ಇಂತಿದೆ: ಅಜಿಂಕ್ಯ ರಹಾನೆ (ನಾಯಕ), ಮುರಳಿ ವಿಜಯ್, ಅಂಬಟಿ ರಾಯುಡು, ಮನೋಜ್ ತಿವಾರಿ, ಕೇದಾರ್ ಜಾದವ್, ರಾಬಿನ್ ಉತ್ತಪ್ಪ, ಮನೀಶ್ ಪಾಂಡೆ, ಹರಭಜನ್ ಸಿಂಗ್, ಅಕ್ಷರ್ ಪಟೇಲ್, ಕರಣ್ ಶರ್ಮಾ, ಧವಳ ಕುಲಕರ್ಣಿ, ಸ್ಟುವರ್ಟ್ ಬಿನ್ನಿ, ಭುವನೇಶ್ವರ ಕುಮಾರ್, ಮೋಹಿತ್ ಶರ್ಮಾ ಹಾಗೂ ಸಂದೀಪ್ ಶರ್ಮಾ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.