ರಾಷ್ಟ್ರೀಯ ದಾಖಲೆ ನಿರ್ಮಿಸಿದ ಸೌರಭ್

7

ರಾಷ್ಟ್ರೀಯ ದಾಖಲೆ ನಿರ್ಮಿಸಿದ ಸೌರಭ್

Published:
Updated:

ಪುಣೆ: ಕರ್ನಾಟಕದ ಸೌರಭ್ ಸಾಂಗ್ವೇಕರ್ ಇಲ್ಲಿ ನಡೆಯುತ್ತಿರುವ 66ನೇ ರಾಷ್ಟ್ರೀಯ ಸೀನಿಯರ್ ಈಜು ಚಾಂಪಿಯನ್‌ಷಿಪ್‌ನ ಮೂರನೇ ದಿನ ನೂತನ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ.ಶಿವ ಛತ್ರಪತಿ ಕ್ರೀಡಾ ಸಂಕೀರ್ಣದ ಈಜುಕೊಳದಲ್ಲಿ ಬುಧವಾರ ನಡೆದ ಪುರುಷರ 400 ಮೀಟರ್ಸ್‌ ಫ್ರೀಸ್ಟೈಲ್ ವಿಭಾಗದಲ್ಲಿ ಈ ಸಾಧನೆ ಮಾಡಿದರು. ಅವರು ಈ ದೂರವನ್ನು 3 ನಿಮಿಷ 58.62 ಸೆಕೆಂಡ್‌ಗಳಲ್ಲಿ ಕ್ರಮಿಸಿದರು.ಮೂರು ವರ್ಷಗಳ ಹಿಂದೆ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಮಂದಾರ್ ಎ.ದಿವಸೆ (3: 59.72 ಸೆ.) ನಿರ್ಮಿಸಿದ್ದ ದಾಖಲೆ ಅಳಿಸಿ ಹೋಯಿತು. ಈ ಚಾಂಪಿಯನ್‌ಷಿಪ್‌ನಲ್ಲಿ ಸೌರಭ್‌ಗೆ ಲಭಿಸಿದ ಎರಡನೇ ಚಿನ್ನದ ಪದಕವಿದು. ಒಲಿಂಪಿಯನ್ ಎ.ಪಿ.ಗಗನ್ (4:00.76 ಸೆ.) ಈ ವಿಭಾಗದಲ್ಲಿ ಎರಡನೇ ಸ್ಥಾನ ಪಡೆದರು.

ಮಹಿಳೆಯರ ವಿಭಾಗದ 100 ಮೀ. ಬಟರ್‌ಫ್ಲೈನಲ್ಲಿ ಕರ್ನಾಟಕದ ಪೂಜಾ. ಆರ್.ಆಳ್ವಾ ಚಿನ್ನದ ಪದಕ ಜಯಿಸಿದರು.ಪೂಜಾ (1:04.62 ಸೆ.) ಮಹಾರಾಷ್ಟ್ರದ ಅದಿತಿ ಅವರನ್ನು ಹಿಂದಿಕ್ಕಿ ಈ ಸಾಧನೆ ಮಾಡಿದರು.

ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಿರುವ ಸುರಭಿ ತಿಪ್ರೆ 400 ಮೀ.ಫ್ರೀಸ್ಟೈಲ್‌ನಲ್ಲಿ ನಿರಾಸೆ ಅನುಭವಿಸಿದರು. ಸುರಭಿ (ಬೆಳ್ಳಿ ಪದಕ) ಅವರನ್ನು ಹಿಂದಿಕ್ಕಿದ ಪೊಲೀಸ್ ತಂಡದ ರಿಚಾ ಮಿಶ್ರಾ ಮೊದಲ ಸ್ಥಾನ ಗಳಿಸಿದರು. ರಿಚಾಗೆ ಲಭಿಸಿದ ನಾಲ್ಕನೇ ಚಿನ್ನದ ಪದಕವಿದು.ಪುರುಷರ 50 ಮೀ.ಬ್ಯಾಕ್‌ಸ್ಟ್ರೋಕ್‌ನಲ್ಲಿ ಆ್ಯರನ್ ಡಿಸೋಜಾ ಹಾಗೂ ರೋಹಿತ್ ಹವಾಲ್ದಾರ್ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಜಯಿಸಿದರು. ಕರ್ನಾಟಕ ಪುರುಷರ ತಂಡ 4್ಡ200 ಮೀ.ಫ್ರೀಸ್ಟೈಲ್ ರಿಲೇನಲ್ಲಿ ನೂತನ ಕೂಟ ದಾಖಲೆಯೊಂದಿಗೆ ಚಿನ್ನ ಜಯಿಸಿತು. ಈ ತಂಡದಲ್ಲಿ ಗಗನ್, ರೋಹಿತ್, ಸೌರಭ್ ಹಾಗೂ ಆ್ಯರನ್ ಇದ್ದರು. ಮಹಿಳೆಯರ ವಿಭಾಗದ 4್ಡ200 ಮೀ.ಫ್ರೀಸ್ಟೈಲ್ ರಿಲೇನಲ್ಲಿ ಕರ್ನಾಟಕ (ಮಾಳವಿಕಾ, ಕ್ಷಿಪ್ರಾ ಮಹಾಜನ್, ಪ್ರತಿಮಾ, ಸುರಭಿ) ಎರಡನೇ ಸ್ಥಾನ ಪಡೆಯಿತು.ಆತಿಥೇಯ ಮಹಾರಾಷ್ಟ್ರ ತಂಡದವರು (8 ಚಿನ್ನ, 4 ಬೆಳ್ಳಿ ಹಾಗೂ 7 ಕಂಚು) ಕೂಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಕರ್ನಾಟಕ (7 ಚಿನ್ನ, 8 ಬೆಳ್ಳಿ, 6 ಕಂಚು) ನಂತರದ ಸ್ಥಾನದಲ್ಲಿದೆ.ವಾಟರ್ ಪೋಲೊದಲ್ಲಿ ನಿರಾಸೆ: ಆದರೆ ಕರ್ನಾಟಕ ಪುರುಷ ಹಾಗೂ ಮಹಿಳಾ ತಂಡದವರು ವಾಟರ್ ಪೋಲೊ ಸ್ಪರ್ಧೆಯಲ್ಲಿ ನಿರಾಸೆ ಅನುಭವಿಸಿದರು.

ಪುರುಷ ತಂಡದವರು 2-6ರಿಂದ ಎಸ್‌ಎಸ್‌ಸಿಬಿ ಎದುರೂ, ಮಹಿಳಾ ತಂಡದವರು 1-2ರಲ್ಲಿ ಮಹಾರಾಷ್ಟ್ರ ವಿರುದ್ಧವೂ ಸೋಲು ಕಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry