ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಯುವಪಡೆಗೆ ಸಂತೋಷ ಹೆಗ್ಡೆ ಸಲಹೆ

7

ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಯುವಪಡೆಗೆ ಸಂತೋಷ ಹೆಗ್ಡೆ ಸಲಹೆ

Published:
Updated:
ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಯುವಪಡೆಗೆ ಸಂತೋಷ ಹೆಗ್ಡೆ ಸಲಹೆ

ಬೆಳಗಾವಿ: `ಮಾನವ ಹಕ್ಕನ್ನು ಉಲ್ಲಂಘಿಸುವ, ಇತರರಿಗೆ ತೊಂದರೆ ಕೊಡುವ ಭ್ರಷ್ಟಾಚಾರ ನಿರ್ಮೂಲನೆಗೆ ಯುವಪಡೆ ಮುಂದಾಗಬೇಕು~ ಎಂದು ಮಾಜಿ ಲೋಕಾಯುಕ್ತ ಸಂತೋಷ ಹೆಗ್ಡೆ ಕರೆ ನೀಡಿದರು.ನಗರದ ಎಸ್.ಕೆ.ಇ ಸಂಸ್ಥೆಯ ಆರ್‌ಪಿಡಿ ಕಾಲೇಜಿನಲ್ಲಿ `ಭ್ರಷ್ಟಾಚಾರದಿಂದ ಮಾನವ ಹಕ್ಕುಗಳ ಉಲ್ಲಂಘನೆ~ ಕುರಿತು ಗುರುವಾರ ಆರಂಭವಾದ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.`ಮನುಷ್ಯನಾಗಿ ಹುಟ್ಟುತ್ತೇವೆ. ಆದರೆ ಮಾನವನಾಗಬೇಕೆಂದರೆ ಮಾನವೀಯತೆ ಹೊಂದಿರಬೇಕು. ಇದ್ದುದರಲ್ಲಿಯೇ ಸಂತೃಪ್ತಿ ಪಡುವ ಗುಣ ಬೆಳೆಸಿಕೊಳ್ಳಬೇಕು. ಅಂದಾಗ ಮಾತ್ರ ದೇಶದ ಅಭಿವೃದ್ಧಿಯಾಗುತ್ತದೆ~ ಎಂದು ಅವರು ಹೇಳಿದರು.`ಭ್ರಷ್ಟಾಚಾರದ ವಿರುದ್ಧ ಹೋರಾಡಲು ಇದು ಸೂಕ್ತ ಸಮಯವಾಗಿದೆ. ಲಂಚ ನೀಡಬೇಡಿ. ಲಂಚ ತೆಗೆದುಕೊಳ್ಳಲೂ ಬಿಡಬೇಡಿ. ಭ್ರಷ್ಟಾಚಾರದ ಹೋರಾಟ ಕುರಿತು ಜನರಲ್ಲಿ ಜಾಗೃತಿ ಮೂಡಿಸಿರಿ~ ಎಂದು ಅವರು ಸಲಹೆ ಮಾಡಿದರು.`ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಜನರಿಗೆ ಕುಡಿಯುವ ನೀರು ಪೂರೈಸಲು ಸಾಧ್ಯವಾಗದಿರುವುದೂ  ಮಾನವ ಹಕ್ಕು ಉಲ್ಲಂಘಿಸಿದಂತೆ. ಇದಕ್ಕೆ ಸರ್ಕಾರವೇ ಹೊಣೆಯಾಗುತ್ತದೆ. ಸರ್ಕಾರದ ಕೆಲಸ ದೇವರ ಕೆಲಸ ಎನ್ನಲಾಗುತ್ತದೆ. ಇತ್ತೀಚೆಗೆ ಅಧಿವೇಶನದಲ್ಲಿ ಸಚಿವರು ಮಾಡಿದ್ದೂ ದೇವರ ಕೆಲಸವೇ~ ಎಂದು ವ್ಯಂಗ್ಯವಾಡಿದರು.`ಜನರು ತಮ್ಮ ಹಕ್ಕು ಪಡೆಯಲಿ; ಸ್ವಾತಂತ್ರ್ಯ ಅನುಭವಿಸಲಿ ಎಂದು ಸಂವಿಧಾನ ರಚಿಸಲಾಗಿದೆ. ಆದರೆ ಇಂದಿನ ಜನಪ್ರತಿನಿಧಿಗಳು ಅದನ್ನು ಮರೆತಿದ್ದಾರೆ. ಜನಪ್ರತಿನಿಧಿಗಳು ತಾವೇ ಯಜಮಾನರು ಎಂಬಂತೆ ವರ್ತಿಸುತ್ತಿದ್ದಾರೆ. ಅವರು ತಾವು ಜನ ಸೇವಕರು~ ಎಂಬುದನ್ನು ಮರೆತಿದ್ದಾರೆ~ ಎಂದರು.ಅಧ್ಯಕ್ಷತೆ ವಹಿಸಿದ್ದ ಎಸ್.ಕೆ.ಇ. ಸಂಸ್ಥೆಯ ಅಧ್ಯಕ್ಷ ಶೇವಂತಿಲಾಲ್ ಶಹಾ ಮಾತನಾಡಿ, ಸಂತೋಷ ಹೆಗಡೆಯವಂತವರು ನಮ್ಮ ದೇಶಕ್ಕೆ ಬೇಕು. ಅವರನ್ನು ಆದರ್ಶವಾಗಿಸಿಕೊಂಡು ಯುವ ಶಕ್ತಿ ಹೋರಾಟಕ್ಕೆ ಇಳಿಯಬೇಕು ಎಂದರು.ಪ್ರಾಚಾರ್ಯ ಡಾ.ಎಸ್.ಎಲ್. ಕುಲಕರ್ಣಿ ಸ್ವಾಗತಿಸಿದರು. ವಿಚಾರ ಡಾ.ಎಸ್. ಎಚ್. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಎಸ್.ಪಿ. ಸುರೇಬಾನಕರ ಪರಿಚಯಿಸಿದರು. ಪ್ರೊ.ಎಸ್.ಎಸ್. ಶಿಂಧೆ ವಂದಿಸಿದರು. ಪ್ರೊ.ಪಿ.ಬಿ. ಜೋಶಿ ಹಾಗೂ ಅರ್ಪಣಾ ದಳವಿ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry