ರಾಷ್ಟ್ರೀಯ ಸೀನಿಯರ್ ಈಜು: ಗಗನ್, ಸುರಭಿಗೆ ಬಂಗಾರದ ಪದಕ

7

ರಾಷ್ಟ್ರೀಯ ಸೀನಿಯರ್ ಈಜು: ಗಗನ್, ಸುರಭಿಗೆ ಬಂಗಾರದ ಪದಕ

Published:
Updated:
ರಾಷ್ಟ್ರೀಯ ಸೀನಿಯರ್ ಈಜು: ಗಗನ್, ಸುರಭಿಗೆ ಬಂಗಾರದ ಪದಕ

ಪುಣೆ: ಎ.ಪಿ. ಗಗನ್ ಮತ್ತು ಸುರಭಿ ತಿಪ್ರೆ ಅವರು ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸೀನಿಯರ್ ಈಜು ಚಾಂಪಿಯನ್‌ಷಿಪ್‌ನ ಎರಡನೇ ದಿನ ಕರ್ನಾಟಕಕ್ಕೆ ಚಿನ್ನದ ಪದಕ ತಂದಿತ್ತರು.ಶಿವ ಛತ್ರಪತಿ ಕ್ರೀಡಾ ಸಂಕೀರ್ಣದ ಈಜುಕೊಳದಲ್ಲಿ ಮಂಗಳವಾರ ನಡೆದ ಪುರುಷರ 400 ಮೀ. ವೈಯಕ್ತಿಕ ಮೆಡ್ಲೆ ಸ್ಪರ್ಧೆಯಲ್ಲಿ ಗಗನ್ ಮೊದಲಿಗರಾಗಿ ಗುರಿಮುಟ್ಟಿದರು. ಲಂಡನ್ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಗಗನ್ 4 ನಿಮಿಷ 36.45 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು.ಸುರಭಿ ತಿಪ್ರೆ ಮಹಿಳೆಯರ 200 ಮೀ. ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಬಂಗಾರ ಜಯಿಸಿದರು. ಅವರು 2:07.94 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ಮಹಾರಾಷ್ಟ್ರದ ಅದಿತಿ ಹಾಗೂ ಆರತಿ ಘೋರ್ಪಡೆ ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ತಮ್ಮದಾಗಿಸಿಕೊಂಡರು.ಮಿಂಚಿದ ಖಾಡೆ: ಮಹಾರಾಷ್ಟ್ರದ ವೀರ್‌ಧವಳ್ ಖಾಡೆ ಪುರುಷರ 200 ಮೀ. ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಬಂಗಾರ ತಮ್ಮದಾಗಿಸಿಕೊಂಡರು. ಅವರು ಒಂದು ನಿಮಿಷ 52.10 ಸೆಕೆಂಡ್‌ಗಳಲ್ಲಿ ಗುರಿ ಕ್ರಮಿಸಿದರು. ಖಾಡೆಗೆ ಪ್ರಬಲ ಪೈಪೋಟಿ ನೀಡಿದ ಕರ್ನಾಟಕದ ಆ್ಯರನ್ ಡಿ ಸೋಜಾ (1:52.53) ಬೆಳ್ಳಿ ಜಯಿಸಿದರು. ಕರ್ನಾಟಕದವರೇ ಆದ ಸೌರಭ್ ಸಾಂಗ್ವೇಕರ್ (1:54.40) ಮೂರನೇ ಸ್ಥಾನ ಪಡೆದರು.ರಿಚಾಗೆ ಬಂಗಾರ: ಪೊಲೀಸ್ ತಂಡದ ರಿಚಾ ಮಿಶ್ರಾ ಚಾಂಪಿಯನ್‌ಷಿಪ್‌ನಲ್ಲಿ ತಮ್ಮ ಎರಡನೇ ಬಂಗಾರ ಜಯಿಸಿದರು. ಮಂಗಳವಾರ ನಡೆದ ಮಹಿಳೆಯರ 800 ಮೀ. ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಅವರು ಅಗ್ರಸ್ಥಾನ ಪಡೆದರು. 9 ನಿಮಿಷ 12.06 ಸೆಕೆಂಡ್‌ಗಳಲ್ಲಿ ಅವರು ನಿಗದಿತ ಗುರಿ ಕ್ರಮಿಸಿದರು. ರಿಚಾ ಮೊದಲ ದಿನ 200 ಮೀ. ಬ್ಯಾಕ್‌ಸ್ಟ್ರೋಕ್ ವಿಭಾಗದಲ್ಲಿ ಚಿನ್ನ ಜಯಿಸಿದ್ದರು.ಕರ್ನಾಟಕದ ಸುರಭಿ ತಿಪ್ರೆ ಈ ವಿಭಾಗದಲ್ಲಿ ಬೆಳ್ಳಿ ಜಯಿಸಿದರು. ಅವರು 9:12.95 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ಕಂಚು ಮಹಾರಾಷ್ಟ್ರದ ಅಕಾಂಕ್ಷಾ ವೋರಾ  ಪಾಲಾಯಿತು.ಮಹಾರಾಷ್ಟ್ರ ತಂಡ ಐದು ಚಿನ್ನ, ಮೂರು ಬೆಳ್ಳಿ ಮತ್ತು ನಾಲ್ಕು ಕಂಚಿನ ಪದಕಗಳೊಂದಿಗೆ ಅಗ್ರಸ್ಥಾನಲ್ಲಿದೆ. ಕರ್ನಾಟಕ ನಾಲ್ಕು ಬಂಗಾರ, ನಾಲ್ಕು ರಜತ ಹಾಗೂ ಮೂರು ಕಂಚುಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.ವಾಟರ್ ಪೋಲೊದಲ್ಲಿ ಕರ್ನಾಟಕಕ್ಕೆ ಜಯ: ಮಹಿಳೆಯರ ವಿಭಾಗದ ವಾಟರ್ ಪೋಲೊ ಸ್ಪರ್ಧೆಯಲ್ಲಿ ಕರ್ನಾಟಕ 13-0 ರಲ್ಲಿ ಮಣಿಪುರ ವಿರುದ್ಧ ಸುಲಭ ಗೆಲುವು ಪಡೆಯಿತು. ವರ್ಷಿಣಿ ಗುಬ್ಬಿ (5), ಮಾಳವಿಕಾ ಗುಬ್ಬಿ (4) ಮತ್ತು ಆರ್.ಟಿ. ರೇಣು (2) ರಾಜ್ಯ ತಂಡದ ಪರ ಉತ್ತಮ ಪ್ರದರ್ಶನ ನೀಡಿದರು.ಇತರ ಪಂದ್ಯಗಳಲ್ಲಿ ಪೊಲೀಸ್ ತಂಡ 2-1 ರಲ್ಲಿ ಮಹಾರಾಷ್ಟ್ರ ಎದುರೂ, ಕೇರಳ 3-0 ರಲ್ಲಿ ಬಂಗಾಳ ಮೇಲೂ ಗೆಲುವು ಪಡೆದವು. ಪುರುಷರ ವಿಭಾಗದ ಪಂದ್ಯಗಳಲ್ಲಿ ಮಹಾರಾಷ್ಟ್ರ 8-3 ರಲ್ಲಿ ಕೇರಳ ಎದುರೂ, ರೈಲ್ವೇಸ್ 3-1 ರಲ್ಲಿ ಬಂಗಾಳ ಮೇಲೂ, ಸರ್ವಿಸಸ್ 9-2 ರಲ್ಲಿ          ಪಂಜಾಬ್ ವಿರುದ್ಧವೂ ಗೆಲುವು ಪಡೆದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry